ಹೋಟೆಲ್ ಉದ್ಯಮದ ಈ ಸೋಲಿಗೆ ಹೊಣೆ ಯಾರು!? : heggaddesamachar.com

ಸಂದೀಪ್ ಶೆಟ್ಟಿ ಹೆಗ್ಗದ್ದೆ
ಸಂಪಾದಕರು
ಹೆಗ್ಗದ್ದೆ ಸಮಾಚಾರ್.ಕಾಮ್
ಪ್ರಾಬ್ಲಂ..! ಪ್ರಾಬ್ಲಂ..! ಸೋ ಮೆನಿ ಪ್ರಾಬ್ಲಂ…
ಕೊರೋನಾ ರುದ್ರತಾಂಡವ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ… ಇಂದು ಕೈಗಾರಿಕೆಗಳಿಂದ ಹಿಡಿದು ಕಾರ್ಮಿಕವರೆಗಿನ ಸ್ಥಿತಿ ಅಧೋಗತಿ ಎನ್ನಬಹುದು. ಈ ನಡುವೆ ಸರ್ಕಾರದಿಂದ ಅನೇಕರಿಗೆ, ಅನೇಕ ವಲಯಗಳಿಗೆ, ಅನೇಕ ಬಗೆಯಲ್ಲಿ ಸಹಾಯ ಹಸ್ತ ಎನ್ನುವ ಶೀರ್ಷಿಕೆ ಅಡಿಯಲ್ಲಿ ನೆರವಿನ ನೆರಳು ಸಿಕ್ಕಿತು ಆದರೆ ವರ್ಷಪೂರ್ತಿ ತನ್ನೊಳಗೆ ಅದೆಷ್ಟೋ ಕಷ್ಟಗಳನ್ನ ಒತ್ತೆ ಇಟ್ಟುಕೊಂಡು, ಅನ್ನ ನೀಡಿ ಹಸಿವು ತಣಿಸಿದ್ದ ಹೋಟೆಲ್ ಮಾಲೀಕ ಮತ್ತು ಕಾರ್ಮಿಕನಿಗೆ ಯಾರೇನು ಕೊಟ್ಟರು!??
ಇದುವೆ ಸದ್ಯಕ್ಕಿರುವ ಪ್ರಶ್ನೆ!!?…
ಈ ಲಾಕ್ ಡೌನ್ ಹೊಡೆತಕ್ಕೆ ಎರಡು ತಿಂಗಳಿನ ಹಿಂದೆ ಎಳೆದಿದ್ದ ಹೋಟೆಲ್ ಬಾಗಿಲುಗಳು ಈವರೆಗೆ ತೆರೆದುಕೊಂಡಿಲ್ಲ. ಮಾಲೀಕನ ಬವಣೆ ಬಾಡಿಗೆ ಎಂಬ ಭೂತಕ್ಕೆ ಮಾತ್ರಾ ಸಿಲುಕಿ ಹಾಕಿಕೊಂಡಿಲ್ಲ, ಲಾಕ್ ಡೌನ್ ಸಂದರ್ಭ ಊರು ಸೇರಿಕೊಂಡಿರುವ ಅನೇಕ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಕರೆತರಲು ಸಾಧ್ಯವಾ ಎನ್ನುವ ಚಿಂತನೆಗೂ ಹಚ್ಚಿಕೊಂಡಿರುವುದು ಶೋಚನೀಯ. ಇನ್ನೂ ಹೋಟೆಲ್ ಕೆಲಸವನ್ನೇ ನಂಬಿಕೊಂಡು ಮನೆ-ಮಕ್ಕಳನ್ನು ಹೊರೆಯುತ್ತಿದ್ದ ಅದೆಷ್ಟೋ ಕೆಲಸಗಾರರ ಬದುಕು ಸಂಬಳವೂ ಇಲ್ಲದೆ, ಕೆಲಸವೂ ಇಲ್ಲದೆ ಮುಚ್ಚಿದ ಜೀವನ ತಟ್ಟುವ ಖಾಲಿ ತಟ್ಟೆಯ ಸಪ್ಪಳದಂತಾಗಿದೆ…
ಇವರಿಬ್ಬರನ್ನ ಬಿಟ್ಟು ನೋಡಿದರೂ, ಹೋಟೆಲ್ ಉದ್ಯಮ ಮುಚ್ಚಿರೋದರಿಂದ ಇನ್ನೂ ಅನೇಕರಿಗೆ ತುಂಬಲಾರದ ನಷ್ಟವಾಗಿದೆ… ಮುಖ್ಯವಾಗಿ ಹೋಟೆಲ್ ಗಳನ್ನೇ ಆಶ್ರಯಿಸಿಕೊಂಡಿದ್ದ ಕಿರಾಣಿ ವ್ಯಾಪಾರಿಗಳು, ಹಾಲು ಪೂರೈಕೆದಾರರು, ಕಾಯಿಪಲ್ಲೆ ಮಾರಾಟಗಾರರು ಹೀಗೆ ಅನೇಕರು ನಷ್ಟ ಅನುಭವಿಸುವಂತಾಗಿದೆ.
“ಈಗಲೂ ಮಹಾನಗರಗಳಿಗೆ ಕೆಲಸವೆಂದುಕೊಂಡು ಬಂದಿರುವ ಅದೆಷ್ಟೋ ಜನರಿಗೆ ಊಟವೇ ಸಿಗುತ್ತಿಲ್ಲ. ಯಾರಾದರೂ ಇಂತಹ ಕಷ್ಟದ ನಡುವೆ ಊಟಕೊಟ್ಟು ಮಾನವೀಯತೆ ಮೆರೆದರೆ ಸಂಘ ಸಂಸ್ಥೆಯವರ ಎಡಬಿಡಂಗಿ ಕಟ್ಟಳೆಗಳು ಮಾಲೀಕರನ್ನು ಸುಮ್ಮನೆ ಬಿಡುತ್ತಿಲ್ಲ. ಕೇವಲ ಪಾರ್ಸೆಲ್ ಎನ್ನುವ ಇರಾದೆಯಲ್ಲೂ ಬದುಕೋಣವೆಂದುಕೊಂಡರೂ ಅದಕ್ಕೂ ಕೆಲವೊಂದು ಅನಾಮಧೇಯ ವ್ಯಕ್ತಿಗಳ ಪೌರುಷ ಅಡ್ಡಿಯಾಗುತ್ತಿದೆ. ಈ ನಡುವೆ ನಮಗೂ ಕೊರೋನ ಬಂದರೆ ಗತಿಯೇನು ಎನ್ನುವ ಭಯದಿಂದ ಕೆಲಸಗಾರರು ಮತ್ತೆ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ” ಎನ್ನುತ್ತಾರೆ ಸಣ್ಣ ಹೋಟೆಲ್ ಉದ್ಯಮಿಯೊಬ್ಬರು.
ನೀವೇ ಹೇಳಿ; ಈಗ ಹೋಟೆಲ್ ಉದ್ಯಮದ ನೆರವಿಗೆ ಧಾವಿಸಬೇಕಾದವರು ಯಾರು!?
ಬಹುಶಃ ಸರ್ಕಾರದ ಬೊಕ್ಕಸದಲ್ಲಿರುವ ಹಣ ಈ ಉದ್ಯಮದವರ ನೆರವಿಗೆ ಕೈಚಾಚಲು ಸಾಧ್ಯವಾಗುತ್ತಿಲ್ಲವೇನೋ ಎನ್ನುವ ಪ್ರಶ್ನೆಯೊಂದನ್ನ ಬಿಟ್ಟರೆ ಬೇರೇನು ಇಲ್ಲ ಎನ್ನಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಸದ್ಯಕ್ಕೆ ಮೌನವೃತದ ನಡುವೆ ತಟಸ್ಥವಾಗಿವೆ. ಸಹಾಯ ಸಿಗುತ್ತೋ ಇಲ್ಲವೋ ಗೊತ್ತಿಲ್ಲ ಜೊತೆಗೆ ಹೋಟೆಲ್ ಉದ್ಯಮದ ಪ್ರಗತಿಗಾಗಿಯೇ ಮಾಡಿಕೊಂಡಿರುವ ಹೋಟೆಲ್ ಸಂಘಗಳು ಕೂಡ ನಿದ್ರಾವಸ್ತೆಯಲ್ಲಿವೆ…
ಇದು ದುರಂತ!!.
ಹೌದು! ಊರಿಗೂರೇ ಕೈ ಬಿಟ್ಟರು ನಮಗೊಂದು ಸಂಘವಿದೆ ಅದು ಕೈ ಹಿಡಿಯುತ್ತೆ ಅಂದುಕೊಂಡಿದ್ದ ಹೋಟೆಲ್ ಮಾಲೀಕ ಮತ್ತು ಕಾರ್ಮಿಕರ ನೋವಿನ ಅಳಲನ್ನ ಇಂದು ಉನ್ನತ ಸ್ಥರದಲ್ಲಿ ಮಿಂಚಿ ಸಂಭ್ರಮದ ಹಬ್ಬವನ್ನೆಲ್ಲಾ ಆಚರಿಸಿಕೊಂಡು, ಪಟಾಕಿ ಸುಟ್ಟು ಅಸೋಸಿಯೇಷನ್ ಅಂತ ಕರೆಸಿಕೊಂಡಿದ್ದ ಗುಂಪೇ ಇಂದು ತಮ್ಮವರ ಸಮಸ್ಯೆ ಆಲಿಸಲು ಹಿಂದೇಟು ಹಾಕುತ್ತಿದೆ. ಈ ಅಳಲನ್ನ ಅನೇಕರು ಅನೇಕ ಬಗೆಯಲ್ಲಿ ತೋಡಿಕೊಂಡರೂ, ನೋಡೋಣ, ಮಾಡೋಣ ಎಂಬಲ್ಲಿಗೆ ತಮ್ಮ ಇರಾದೆ ಮೂಡಿಸಿ ತಟಸ್ಥಗೊಂಡಿದೆ.
ಕೇವಲ ಕೊರೋನಾ ಹೊಡೆತ ಮಾತ್ರಾ ಈ ಉದ್ಯಮದ ಸಮಸ್ಯೆಯಲ್ಲ!!
ಇದು ಜಸ್ಟ್ ಫಾರ್ ದಿಸ್ ಟೈಮ್ ಪ್ರಾಬ್ಲಂ..! ಬಟ್ ಈ ಹೋಟೆಲ್ ಉದ್ಯಮದಲ್ಲಿ ಫುಲ್ ಟೈಮ್ ಪ್ರಾಬ್ಲಮ್ ಇನ್ನೂ ಸುಮಾರಿದೆ. ಹೋಟೆಲ್ ಉದ್ಯಮದವರ ಸೋಲಿಗೆ ಕಾರಣ ಹುಡುಕಿದವರಿಲ್ಲ, ಕಾರ್ಮಿಕರಿಗೆ ಗುರುತಿನ ಚೀಟಿಯಿಲ್ಲ, ಮಾಲೀಕರಿಗೆ ಪ್ರೌಢಿಮೆ ಭರಿತ ಸ್ಥಾನವಿಲ್ಲ, ಏಕ್ಸ್ ಫೀರಿಯನ್ಸ್ ಲೆಟರ್ ಇಲ್ಲ, ಪಿ.ಏಪ್, ಈ. ಎಸ್.ಐ ಗಳ ಸೆಕ್ಯೂರ್ ಇಲ್ಲ… ಇದನ್ನೆಲ್ಲಾ ಕೇಳೋಕೆ ಅನೇಕರಿಗೆ ಮನಸ್ಸೂ ಇಲ್ಲ.
ದಲ್ಲಾಳಿತನದಲ್ಲಿ ನಡೆಯುತ್ತೆ ಗೋಲ್ ಮಾಲ್!!
ಇತ್ತೀಚೆಗೆ ಕೆಲಸಗಾರರ ನೇಮಕ ಮತ್ತು ಕೆಲಸ ಇವು ಹೆಚ್ಚಾಗಿ ದಲ್ಲಾಳಿತನದಲ್ಲಿ ನಡೆಯುತ್ತಿದೆ. ಕೆಲಸಗಾರರನ್ನ ಓದಗಿಸುವ ಒಬ್ಬ ಅಸಾಮಿ, ಆತನಿಗೊಂದಿಷ್ಟು ಕಮಿಷನ್, ಇಲ್ಲಿಗಿಂತ ಅಲ್ಲಿ ಹೆಚ್ಚು ಕಮಿಷನ್ ಕೊಟ್ಟರೆ ಅವರಿಗೆ ಬೇರೆ ರೀತಿಯ ಜನ, ಇವರಿಗೆ ಬೇರೆ ರೀತಿಯ ಜನ, ಹಾಗೆ ಹೀಗೆ…
ಯಾವುದಕ್ಕೂ ಒಂದು ಬೇಲಿಯಿಲ್ಲ, ಇಂದಿದೆ!; ನಾಳೆ ಇರುತ್ತೋ ಇಲ್ಲವೋ ಗೊತ್ತಿಲ್ಲ ಎನ್ನುವ ಅತಂತ್ರತೆ..!
ಈ ಹೋಟೆಲ್ ಉದ್ಯಮದಲ್ಲಿ ಕೋಟಿ ಕೋಟಿ ಆದಾಯವಿದೆ ನಿಜ. ಆದರೆ ಇಂದದಿಲ್ಲದ್ದಕ್ಕೆ ಎಲ್ಲರ ಬದುಕು ಡೋಲಾಯಮಾನವಾಗಿದೆ. ಬ್ಯುಸಿನೆಸ್ ರಂಗದಲ್ಲೇ ವೈಟ್ ಮನಿಯನ್ನು ವೈಟ್ ಆಗೇ ಖರ್ಚು ಮಾಡುವ ಏಕೈಕ ಉದ್ಯಮವಿದ್ದರೆ ಅದು ಹೋಟೆಲ್ ಉದ್ಯಮ ಮಾತ್ರಾ. ಇಂತಹ ಉದ್ಯಮ ಸಂಕಷ್ಟಕ್ಕೆ ಸಿಲುಕಿ ಸೋತು ಎಳೆದ ಬಾಗಿಲು ಮತ್ತೆ ತೆರೆಯದೇ ಹೋದರೆ ದೇಶದ ಪ್ರಗತಿಗೆ ಮಾರಕ… ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ, ಮಾಲೀಕರ, ಕಾರ್ಮಿಕರಿಗೆ ಸಣ್ಣ ನೆರವಿನ ಜೊತೆಗೆ ಹೊಸ ಯೋಜನೆಯನ್ನ ರೂಪಿಸಲಿ, ಹೋಟೆಲ್ ಸಂಘ ಪರಿವಾರದವರು ನಿದ್ರೆಯಿಂದ ಬೇಗ ಎದ್ದೇಳಲಿ…