Literature (ಸಾಹಿತ್ಯ)

ಹೆಸರುಗಳ ಕುತೂಹಲ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

ಪ್ರತಿಯೊಬ್ಬ ವ್ಯಕ್ತಿಯ ಪ್ರಮುಖ ಹಾಗೂ ಪ್ರಧಾನವಾದ ಗುರುತು ಹೆಸರು. ಮನುಷ್ಯ ಭಾಷೆಯನ್ನು ಕಲಿತಂದಿನಿಂದ ತನ್ನ ದೈನಂದಿನ ಬದುಕಿಗೆ ಉಪಯುಕ್ತವೆನಿಸಿದ ಎಲ್ಲ ವಸ್ತುಗಳಿಗೂ ಹೆಸರಿಡಲು ಆರಂಭಿಸಿದ. ಲೌಕಿಕ ವ್ಯವಹಾರದ ದೃಷ್ಟಿಯಿಂದ ಮಾನವನಿಗಂತೂ ಒಂದು ಹೆಸರು ತೀರ ಅನಿವಾರ್ಯ. ಹುಟ್ಟಿದ ಪ್ರತಿಯೊಂದು ಮಗುವಿಗೂ ಒಂದೊಂದು ಹೆಸರಿಡುವ ಪದ್ಧತಿ ರೂಢಿಯಲ್ಲಿದೆ. ಅಷ್ಟೆ ಅಲ್ಲದೆ ನಾಮಕರಣವನ್ನು ಷೋಡಶ ಸಂಸ್ಕಾರಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ. ನಾಮಕರಣದ ಮಹತ್ವದ ಕುರಿತು ಶಾಸ್ತ್ರಗ್ರಂಥವೊಂದರಲ್ಲಿ “ಹೆಸರು ಎಲ್ಲಾ ವ್ಯವಹಾರಗಳಿಗೂ ತೀರ ಅಗತ್ಯ. ಶುಭದ ಸಂಕೇತ ಮತ್ತು ಭಾಗ್ಯದ ಬಾಗಿಲು ತೆರೆಸುವ ಸಾಮಥ್ರ್ಯವೂ ಅಡಗಿದೆ” ಎನ್ನಲಾಗಿದೆ.
ಕರೆಯುವುದಕ್ಕೆ ಮತ್ತು ಗುರುತಿಸುವುದಕ್ಕೆ ಹೆಸರು ಬೇಕೆ ಹೊರತು ಹೆಸರಿಗಾಗಿ ಹರಸಾಹಸ ಯಾಕೆ? ಹೆಸರು ಗಳಿಸುವುದೋ ಪಡೆಯುವುದೋ? ಒಟ್ಟಿನಲ್ಲಿ ಹೆಸರಿನ ಮೂಲ ಕೂಡ ಕುತೂಹಲಕಾರಿ. ಪ್ರಸಿದ್ಧಿ ಯಾರಿಗೆ ತಾನೆ ಬೇಡ. ಪ್ರತಿಯೊಬ್ಬರ ಮನ ಬಯಸಿವುದು ಏನಾದರಾಗಲಿ, ಹೇಗಾದರೂ ಹೆಸರು ಗಳಿಸಿಯೇ ತೀರಬೇಕಂಬ ಹಂಬಲ ಸಹಜವಾಗಿರುತ್ತದೆ. ಹೆಸರಿಗಾಗಿ ಎಷ್ಟೆಲ್ಲಾ ಕಸರತ್ತು ನಡೆಯುತ್ತಿರುತ್ತದೆ. ಆದರೆ “ಯಥಾನಾಮ ತಥಾಗುಣ” ಎಂಬಂತೆ ಸಾಮಾನ್ಯವಾಗಿ ಹೆಸರಿನಂತೆ ಸ್ವಭಾವ. ವ್ಯಕ್ತಿಯನ್ನು ಗುರುತಿಸುವುದು ಅವರವರ ಗುಣ. ವ್ಯಕ್ತಿತ್ವ, ಯೋಗ್ಯತೆ ಮತ್ತು ಸಾಧನೆಗನುಸಾರವಾಗಿ ತಮ್ಮ ಉತ್ತಮ ಸೇವೆ ಕಾರ್ಯ ವೈಖರಿಯಿಂದ ತನ್ನ ತಾನೆ ಹೆಸರುವಾಸಿಯಾಗುತ್ತಾರೆ. ಕಾಯ ಅಳಿಯುತ್ತದೆ. ಕಾರ್ಯ ಉಳಿಯುತ್ತದೆ.


ಯಾವತ್ತು ಉಳಿಯುವಂತೆ ಉತ್ತಮ ಕಾರ್ಯವೆಸಗಿದರೆ ಹೆಸರು ತಾನೆ ತಾನಾಗಿ ಉಳಿಯುತ್ತದೆ. ನಮ್ಮ ಹೆಸರಿನಲ್ಲಿ ಏನೋ ಒಂದು ನಂಬಿಕೆ, ಬಾಂಧವ್ಯ, ಮಮತೆ, ಒಲವು, ಪ್ರೀತಿ ಎಲ್ಲವೂ ಸೇರಿಕೊಂಡಿದೆ. ಯಶಸ್ಸಿನ ದಾರಿಗೆ ಹೆಸರು ಬದಲಾವಣೆಯ ಅಗತ್ಯವನ್ನು ಅನುಸರಿಸುವವರು ಅನೇಕರು ತಮ್ಮ ಹೆಸರಿನಲ್ಲಿ ಇಂತಿಷ್ಟೇ ಅಕ್ಷರಗಳಿದ್ದರೆ ಅಭಿವೃದ್ದಿ ಸಾಧ್ಯ ಎಂಬ ಊಹೆಯವರು ಅನೇಕರು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಇದ್ದ ಹೆಸರನ್ನು ಬದಲಾಯಿಸುವವರ ಬಗ್ಗೆ ಕೇಳಿದ್ದೇವೆ. ಹೆಸರು ಬದಲಾಯಿಸಬೇಕೆಂಬ ಆಸೆಯಿದ್ದರೆ ಕಾನೂನು ರೀತಿಯಲಿ ಮಾರ್ಗವಿದೆ. ಅಫಿಡವಿಟ್ ಮಾಡಿಸಿ ವಕೀಲರಲ್ಲಿ ಮ್ಯಾಜಿಸ್ಟ್ರೇಟರ್ ಮುಂದೆ ಪ್ರಮಾಣ ಆದ ನಂತರ ಛಾಪಾಕಾಗದದಲ್ಲಿ ಹೆಸರು ಬದಲಾಯಿಸಿರುವ ಹೇಳಿಕೆಗೆ ಸಹಿ ಹಾಕಿ ಸ್ಥಳೀಯ ಪತ್ರಿಕೆಯಲ್ಲಿ ಹೆಸರಿನ ಬದಲಾವಣೆಯ ಪ್ರಕಟಣೆ ನೀಡಬೇಕು. ಹಳೆಯ ಕಾಲದ ಹೆಸರು ಇಡಲಾಗಿದೆ ಎಂದು ಬೇಸರ ಪಡುವವರು ಇದ್ದಾರೆ. ಸಂಪ್ರದಾಯಸ್ಥ ಕುಟುಂಬದಲ್ಲಿ ಮಕ್ಕಳಿಗೆ ದೇವರ, ಅಜ್ಜ-ಅಜ್ಜಿಯ ಹೆಸರು ಇಡುವುದು ಮಾಮೂಲು. ಇನ್ನು ಕೆಲವರನ್ನು ಅವರವರ ಸಾಧನಾ ಕ್ಷೇತ್ರದ ಹೆಸರುಗಳು ಅನುಸರಿಸುವುದು ಉಂಟು. ಮತ್ತೆ ಕೆಲವರು ಊರಿನ ಹೆಸರನ್ನು ತಮ್ಮ ಹೆಸರ ಮೊದಲು ಅಥವಾ ನಂತರ ಸೇರಿಸಿಕೊಂಡು ಊರಿನ ಹೆಸರನ್ನು ಪ್ರಸಿದ್ಧಗೊಳಿಸಿದವರು ಅನೇಕರಿದ್ದಾರೆ ಉಪನಾಮ ಅರಿವಾಗದಷ್ಟು ಊರಿನ ಹೆಸರು ವ್ಯಕ್ತಿಗೆ ಸರಿಹೊಂದುತ್ತದೆ.


ಜಗತ್ತಿನ ಅತ್ಯಂತ ಪ್ರತಿಷ್ಠೆಯ ಗೌರವ ನೋಬಲ್ ಶಾಂತಿ ಪುರಸ್ಕಾರ ಪಡೆದ ಕೈಲಾಶ್ ಸತ್ಯಾರ್ಥಿ ಇವರ ನಿಜನಾಮಧೇಯ ಕೈಲಾಶ್ ಶರ್ಮಾ, ಸತ್ಯಾನ್ವೇಷಣೆಯ ದಾರಿಯಲ್ಲಿ ಹೆಸರು ಸತ್ಯಾರ್ಥಿ ಎಂದು ಬದಲಾಯಿಸಿಕೊಂಡಿದ್ದರು. ಹಿಂದಿ ಸಿನಿಮಾ ನಿರ್ದೇಶಕರಾದ ಸಂಜಯ್ ಲೀಲಾ ಬನ್ಸಾಲಿ ತನ್ನ ಹೆಸರಿನೊಂದಿಗೆ ತಾಯಿ ಹೆಸರನ್ನು ಬಳಸಿಕೊಂಡ ಅಮ್ಮನ ಮಗ. ಸಿಂಧಿಗಳಲ್ಲಿ ತಮ್ಮ ಪೂರ್ವಜರ ಹೆಸರುಗಳನ್ನು ಅಡ್ಡಹೆಸರುಗಳನ್ನಾಗಿ ಬಳಸುತ್ತಾರೆ. ಖ್ಯಾತನಟ ರಜನಿಕಾಂತ್ ತನ್ನ ಹೆಸರನ್ನು ಬಳಸಿಕೊಳ್ಳುವುದಕ್ಕೆ ಯಾರಿಗೂ ಅವಕಾಶ ನೀಡಬಾರದೆಂಬ ವಿಷಯದಲ್ಲಿ ‘ಮೈ ಹೂಂ ರಜನಿಕಾಂತ್’ ಎಂಬ ಹೆಸರಿನ ಹಿಂದಿ ಚಲನಚಿತ್ರದ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದು ಇದೆ.
ಉತ್ತರ ಭಾರತದ ಬ್ರಾಹ್ಮಣರಲ್ಲಿ ಅವರ ವಂಶಜರು ಎಷ್ಟು ವೇದಗಳಲ್ಲಿ ಪಾರಂಗತರೋ ಅದಕ್ಕನುಸಾರ ಅಡ್ಡನಾಮ ಬಳಸುತ್ತಾರೆ. 2 ವೇದಗಳಲ್ಲಿ ಪಾರಂಗತರಾದವರು ದ್ವಿವೇದಿ, 3 ವೇದಗಳಲ್ಲಿ ಪಾರಂಗತರಾದವರು ತ್ರಿವೇದಿ, 4 ವೇದಗಳನ್ನು ಬಲ್ಲವರು ಚತುರ್ವೇದಿ ಎನ್ನುವ ಅಡ್ಡನಾಮಗಳ ಪರಂಪರೆಯ ಬಳಕೆ ಇದೆ. ಬ್ರಾಹ್ಮಣನ ಹೆಸರು ಮಂಗಳಸೂಚಕವಾಗಿಯು, ಕ್ಷತ್ರಿಯನದು ಬಲಸೂಚಕವೂ, ವೈಶ್ಯನದು ಐಶ್ವರ್ಯಸೂಚಕವೂ ಆಗಿರಬೇಕು ಎನ್ನುತ್ತಾರೆ. ಆದರೆ ಇತ್ತೀಚೆಗೆ ಹೆಚ್ಚಿನ ಹೆಸರಿನ ಅಕ್ಷರಗಳ ಜೋಡಣೆಯಾಗಿ ಯಾರು ಏನು ಎಂಬುದನ್ನು ತಿಳಿಯುವ ಅವಕಾಶವೇ ತಪ್ಪಿ ಹೋಗಿದೆ. ವಿಷ್ಣು ದೇವರಿಗೆ ಸಾವಿರ ಹೆಸರುಗಳಿವೆಯಂತೆ. ದೇವರ ನಾಮ ಸ್ಮರಣೆಯಿಂದ ದೇವರ ಹೆಸರು ಇಡುವುದು ರೂಢಿ. ಹೆಣ್ಣುಮಕ್ಕಳಿಗೆ ನದಿಯ ಹೆಸರಿಡುತ್ತಾರಲ್ಲ ಯಾಕೆ ಗೊತ್ತೇ ನದಿಗಳು ಎರಡೂ ದಡವನ್ನು ತಂಪು ಹಾಗೂ ಹಸಿರಾಗಿರಿಸುತ್ತವೆ ಎಂಬ ಕಾರಣದಿಂದ. ಅಂದರೆ ಹೆಣ್ಣು ಮಗಳೊಬ್ಬಳು ಹುಟ್ಟಿದ ಮನೆ, ಗಂಡನ ಮನೆ ಎರಡೂ ಕಡೆಯನ್ನು ಸಂವೃದ್ಧಿಗೊಳಿಸುತ್ತಾಳೆ ಎಂಬ ಭರವಸೆ ಹಾಗೂ ಭಾವನೆಯೊಂದಿಗೆ ನದಿಗಳ ಹೆಸರು ಇಡಲಾಗುತ್ತದೆ. ನಾನು ಕೆಲವೊಮ್ಮೆ ಯೋಚಿಸುತ್ತಾ ಗೊಣಗಿದ್ದು ಉಂಟು ಮಕ್ಕಳಿಗೆ ಲತಾ ಅಂತಾ ಗಿಡ ಬಳ್ಳಿಗಳ ಹೆಸರು ಯಾಕೆ ಇಡುತ್ತಾರೆ, ಬೇರೆ ಹೆಸರೇ ಸಿಗಲಿಲ್ಲವೇ ಎಂದೂ ಆದರೆ ಇತ್ತೀಚೆಗೆ ಹಿರಿಯರೊಬ್ಬರಿಗೆ ಲತಾ ಎಂಬ ಹೆಸರಿನ ವಿಶ್ಲೇಷಣೆ ಮಾಡಿದಾಗ ಅರ್ಥವಾಯಿತು. ಹೂವೊಂದಕ್ಕೆ ಹಲವಾರು ದೇವಾಸ್ಥಾನಕ್ಕೆ ಇರುವಷ್ಟು ಪವಿತ್ರತೆ ಇರುವುದರಿಂದ ಸುಂದರವಾದ, ಸುಗಂಧ ಭರಿತ ಹೂವನ್ನು ತನ್ನ ಮಡಿಲಿನಲ್ಲಿ ಅರಳಿಸುವ ನಿಸ್ವಾರ್ಥ ಸೇವೆಯ ಪ್ರತಿರೂಪವೇ ಲತೆಗಳು ಎಂಬ ಕಾರಣವೇ ಹೆಣ್ಣಿನ ಲತಾ ಎನ್ನುವ ಹೆಸರು ಇಡಲಾಗುತ್ತದೆಯಂತೆ, ಹಿರಿಯರ ಹಿಂದಿನ ಸಂಪ್ರದಾಯಗಳಲ್ಲಿ ಆರೋಗ್ಯಕರವಾದ ಉತ್ತಮ ಮೌಲ್ಯವಿದ್ದೆ ಇರುತ್ತದೆ.


ಹೆಸರಿನ ಕುರಿತಾದ ಕುತೂಹಲ ಕೇವಲ ಮನುಷ್ಯನಿಗೆ ಮಾತ್ರವಲ್ಲ ಊರಿಗೂ ಉಂಟು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಅಕ್ಕಪಕ್ಕದಲ್ಲಿ 3 ಊರುಗಳಿವೆ ಈ 3 ಊರುಗಳ ಹೆಸರು “ಬಾರೆ” “ಸೀರೆ” ಮತ್ತು “ಕಳಚೆ”. ಬಿಜಾಪುರ ಸನಿಹದಲ್ಲಿ “ಹುಡುಗಿ” ಎಂಬ ಊರಿದೆ. 51 ಶಕ್ತಿ ಪೀಠಗಳ ಪೈಕಿ ಕೋಲ್ಕತ್ತಾದ ಕಾಳಿಘಾಟ್ ಕೂಡ ಒಂದು ಈ ಪುಣ್ಯಸ್ಥಳವನ್ನು ಬ್ರಿಟೀಷರು ಕಲಕತ್ತ ಎಂದು ಕರೆದರು. 2001 ರಲ್ಲಿ ಸರ್ಕಾರ ಕಲಕತ್ತಾ ಎಂಬ ಹೆಸರನ್ನು ಕೋಲ್ಕತ್ತಾ ಆಗಿಸಿತು. ಗಂಗಾ, ಯಮುನಾ, ಸರಸ್ವತಿ ಈ ಮೂರು ಪವಿತ್ರ ನದಿಗಳ ಸಂಗಮ ಸ್ಥಾನವೇ ತೀರ್ಥರಾಜ ಪ್ರಯಾಗ್. ಮೊಘಲರು ಆಕ್ರಮಣ ನಡೆಸಿ ತೀರ್ಥರಾಜ ಪ್ರಯಾಗ್ ಹೆಸರನ್ನು ಅಲಹಾಬಾದ್ ಎಂದು ಬದಲಿಸಿದ್ದು ಈಗಲೂ ಅದೇ ಹೆಸರು ಪ್ರಚಲಿತದಲ್ಲಿದೆ. ಹಾಗೆ ಸಂಭಾಜಿನಗರ ಹೆಸರನ್ನು ಔರಂಗಬಾದ್ ಎಂದು ಬದಲಿಸಲಾಯಿತು. ದೆಹಲಿಯ ಮೂಲನಾಮ ಇಂದ್ರ ಪ್ರಸ್ಥ ಹೆಸರುಗಳ ಬದಲಾವಣೆ, ಮರುನಾಮಕಣದಲ್ಲಿ ರಾಜಕೀಯ ಹೊಗೆಯಾಡುವ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗುವ ನಿದರ್ಶನಗಳೂ ಹಲವು. ಭಾರತದ ಹವಾಮಾನ ಇಲಾಖೆಯ ಜನಸಾಮಾನ್ಯರಿಗೆ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಲು, ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಚಂಡಮಾರುತಗಳಿಗೂ ಹೆಸರಿನ ಬಳಕೆ ಅಗತ್ಯ ಎನ್ನುತ್ತಾರೆ. ಅನಾಹುತಕ್ಕೆ ಆಹ್ವಾನವಾಗಿರುವ ಚಂಡಮಾರುತಕ್ಕೆ ಸೊಗಸಾದ ಹೆಸರುಗಳ ಸರಮಾಲೆ, ಇನ್ನು ಕುತೂಹಲದ ಸಂಗತಿ ಎಂದರೆ ಸ್ತ್ರೀ ನಾಮಗಳನ್ನು ಹೆಚ್ಚಾಗಿ ಚಂಡಮಾರುತಗಳಿಗೆ ಇಡಲಾಗುವುದರ ರಹಸ್ಯವೇನು? ಎಂಬ ಕೇಳಿ ಬಂದ ಪ್ರಶ್ನೆಗೆ ರಗಳೆಯೇ ಬೇಡ ಅಂತ ಕಳೆದ ಸಲದ ಚಂಡಮಾರುತಕ್ಕೆ ಪಕ್ಷಿಯ ಹೆಸರಾದ ಹುಡ್ ಹುಡ್ ಹೆಸರು ಇಡಲಾಗಿದೆ.


ಷೇಕ್ಸ್‍ಪಿಯರ್ ಅಂದಂತೆ ಹೆಸರಿನಲ್ಲೇನಿದೆ. ಯಾವ ಹೆಸರು ಚಂದ ಶ್ರೇಷ್ಠ ಅನ್ನುವ ಪ್ರಶ್ನೆಗಿಂತ ಜೀವನ ಸುಂದರವಾಗಿದ್ದರೆ ಅದೇ ಶ್ರೇಷ್ಠ ತಾನೆ. ಆಧುನಿಕತೆ ಎಷ್ಟೇ ಮುಂದುವರೆದರು ಹೆಸರಿನ ಮಹತ್ವದ ಬಗ್ಗೆ ಜನರಿಗೆ ಒಳ್ಳೆಯ ಭಾವನೆ ಇದ್ದೇ ಇರುತ್ತದೆ. ಮನದೊಳಗೊಂದು ಸಂಪ್ರದಾಯ ಅವಿತಿರುತ್ತದೆ. ಇಂದಿಗೂ ಮಕ್ಕಳಿಗೆ ಯಾರೂ ರಾವಣ, ಶೂರ್ಪನಕ ಅಂತ ಹೆಸರಿಡುವುದಿಲ್ಲ. ಹೆಸರಿನ ಜೊತೆ ಇಷ್ಟೆಲ್ಲಾ ಮಿಡಿತಗಳಿದ್ದರೂ ಸತ್ತಾಗ ಹೆಸರು ಹೇಳಿ ಎಲ್ಲಿದೆ ಎಂದು ಕೇಳುವುದಿಲ್ಲ ಬಾಡಿ ಎಲ್ಲಿದೆ ಅಂತಲೇ ಕೇಳುತ್ತಾರೆ.
ರಾಜಸ್ತಾನಿ ಪಂಡಿತ ವರ್ಗದವದರ ಮಗುವಿನ ನಾಮಕರಣದಲ್ಲಿ 5 ಹೆಸರಿಡುವುದನ್ನು ನೋಡಿದ ನನಗೆ ಆಶ್ಚರ್ಯವಾಗಿ 5 ಹೆಸರು ಯಾಕೆ ಅಂತ ಕೇಳಿದ್ದಕ್ಕೆ ಮಗುವಿನ ರಕ್ಷಣೆಗೆ ದೇವರ ಹೆಸರು, ನಕ್ಷತ್ರನಾಮ, ಮಾಸನಾಮ, ಹಿರಿಯರ ನೆನಪಿಗಾಗಿ ಮತ್ತು ರೂಢಿಯಲ್ಲಿ ಕರೆಯಲು ಒಟ್ಟಿಗೆ 5 ಹೆಸರಿಡುವುದು ಸಂಪ್ರದಾಯವಂತೆ. ಹೆಸರಿನ ಪ್ರಮೇಯ ಹೇಗೆ ಇದ್ದರು ವ್ಯವಹರಿಸಲು, ಗುರುತಿಸಲು, ಅನುಕೂಲವಾಗಲು ಹೆಸರು ಒಂದು ರೀತಿಯ ವ್ಯವಸ್ಥೆ ಅಷ್ಟೆ.

Leave a Reply

Your email address will not be published. Required fields are marked *