Uncategorized

ಸ್ಲೇಟಲ್ವಾ ಇದು!… : heggaddesamachar.com

Spread the love
  • ಸಂದೀಪ್ ಶೆಟ್ಟಿ ಹೆಗ್ಗದ್ದೆ ( ಕಚಗುಳಿ ಅಂಕಣ ಬರಹ)

ಸ್ಲೇಟಲ್ವಾ ಇದು!…
…ಇಲ್ಲ ಇವತ್ ಪಕ್ಕಾ ಒದೆ ಬಿದ್ದೆ ಬೀಳುತ್ತೆ…
…ಅಯ್ಯೋ ಅಮ್ಮ ಬ್ಯಾಗ್ ಓಪನ್ ಮಾಡಿ ನೋಡ್ತಿದ್ದಾಳೆ..!
..,ಓಪನ್ ಮಾಡೇ ಬಿಟ್ಲು, ಅಯ್ಯೋ ಕೈಗೆ ಸಿಕ್ತು..!
ಅರೇ ಏನೂ ಆಗಿಲ್ವಲ್ಲಾ..! ನಿನ್ನೆ ಕೈ ಜಾರಿ ಬಿದ್ದಾಗ ಮಧ್ಯೆ ಒಡೆದಿತ್ತಲ್ಲಾ! ಬಹುಶಃ ದೇವರೇ ಬಂದು ಸರಿ ಮಾಡಿರಬೇಕು, ಇಲ್ಲಾ ಬಿದ್ದಿದ್ದು ನನ್ನ ಬ್ರಮೆ ಇರಬಹುದು. ಸ್ಲೇಟ್ ಸರಿ ಹೋಗಿದ್ಯಲ್ಲಾ!!, ಯಾವ ಒಡೆದ ಮಾರ್ಕು ಇಲ್ವಲ್ಲಾ..! ಥ್ಯಾಂಕ್ಸ್ ಗಾಡ್!!, ದೇವ್ರ್ ಇವತ್ ಬಚಾವ್ ಮಾಡಿದ..!
ಹೀಗೊಂದು ಕನಸು!, ಕಂಡು ಮೇಲೆದ್ದು ನೋಡಿದರೆ ಒಡೆದಿರುವ ಸ್ಲೇಟು ಒಡೆದ ಹಾಗೆಯೇ ಬ್ಯಾಗಲ್ಲಿತ್ತು. ಮತ್ತೆ ಟೆನ್ಷನ್..! ಛೇ! ನಾನು ಹೊಸ ಸ್ಲೇಟನ್ನ ತೆಗೆದುಕೊಳ್ಳಲೇ ಬಾರದಿತ್ತೇನೋ, ಹಳೆತೆ ಇದಕ್ಕಿಂತ ಬೆಟರ್ ಆಗಿತ್ತು. ಛೇ ಒಡೆದು ಹೋಗಿದ್ಯಲ್ಲ. ಇನ್ನಿದನ್ನ ಮನೆಯಲ್ಲಿ ಕಂಡರೆ ನನ್ ಕಥೆ ಅಷ್ಟೆ. ಹೇಗಾದರೂ ಮುಚ್ಚಿಟ್ಕೊಂಡ್ ಬಿಡೋಣ, ಹೋಮ್ ವರ್ಕ್ನ್ನ ಬೆಳಿಗ್ಗೆ ಬೇಗ ಹೋಗಿ ಶಾಲೆಯಲ್ಲೇ ಬರೆಯೋಣ ಎಂದುಕೊಳ್ಳುತ್ತಿದ್ದ ಬಾಲ್ಯದ ಶಾಲಾ ದಿನಗಳ ಮೆಲುಕು ಮೊನ್ನೆ ಮೊನ್ನೆ ಹಳೆ ಕಾಲದ ಈ ಒಡೆದ ಬಳಪದ ಚಿತ್ರವನ್ನು ನೋಡಿದಾಗ ಮತ್ತೆ ಮನದೊಳಗೆ ಮೊಳಗಿತು.


ಬಾಲ್ಯವೇ ಹಾಗೆ ಅಲ್ಲವಾ!, ಅಲ್ಲಿ ಎಲ್ಲವೂ ಶುದ್ಧ ಸುಂದರ. ಅದೊಂದು ಐತಿಹ್ಯ ಆಗಿ ಜೀವಮಾನ ಪೂರ್ತಿ ಮನಪಟಲದ ಸಮುದ್ರದಲ್ಲಿ ತೆೆರೆಯಂತೆ ಉಕ್ಕುತ್ತಲೇ ಇರುತ್ತದೆ. ಹರಿದ ಚಡ್ಡಿ, ತೂತು ಬಿದ್ದಿರುವ ಅಂಗಿ ಹಾಕಿದರೂ ನಮಗೆ ನಾಚಿಕೆಯಾಗಲಿ, ಬೇಧ-ಭಾವವಾಗಲಿ ಇದ್ದಿರಲೇ ಇಲ್ಲ. ಶಾಲೆಗೆ ಹೋಗೋದು, ಓದೋದು ಇವೆಲ್ಲ ಒಂದು ಮನರಂಜನೆಯಾಗಿತ್ತೇ ಹೊರತು, ಯಾವ ಒತ್ತಡವೂ ಆಗಿರಲಿಲ್ಲ.
ಇನ್ನೂ ಈ ಬಳಪದ ಚಿತ್ರವನ್ನ ನೋಡಿದಾಗಲಂತೂ ನನ್ನ ಇಮ್ಮಡಿಯ ಭಾವುಕತೆಗೆ ಕೆಳಗಿಳಿಯಲು ಭೂಮಿಯೇ ಸಿಗಲಿಲ್ಲ. ವಾವ್!! ಮರದ ಹಲಗೆಯ ರೀಪು, ಮಧ್ಯೆ ಕಪ್ಪು ತುಂಬಿದ ಇದ್ದಿಲ ಮೂಲದ ಆ ಕಲ್ಲಿನ ಸೆಳೆತಕ್ಕೆ ಸೋಲದರ‍್ಯಾರಿದ್ದಾರೆ ಹೇಳಿ.
ಅದೊಂದು ಬಂಧುತ್ವ. ಇಂದಿನ ಈ ಬರವಣಿಗೆಗೂ ಕೂಡ ಅದರಲ್ಲೇ ಕಲಿತಿರುವ ಅಕ್ಷರಗಳೇ ಕಾರಣ ಎಂದರೆ ತಪ್ಪಿಲ್ಲ ಬಿಡಿ. ದೂರದ ಕೊರ್ಗಿ ಅಂಗಡಿಯಲ್ಲೋ, ಸಂತೆಯ ದಾರಿಯಲ್ಲೋ ಅಪ್ಪ ಕುಡಿಟ್ಟಿದ್ದ ಹಣದಿಂದ ತೆಗೆದುಕೊಡುತ್ತಿದ್ದ ಆ ಬಳಪಕ್ಕೆ ಇಂತಿಷ್ಟು ವರ್ಷ ಜೀವಂತವಾಗಿ ಇರಬೇಕು. ಅದಾಗ್ಯೂ ಕೈ ತಪ್ಪಿ ಬಿದ್ದರೆ ಒಡೆದು ಹೋದರೆ ಹೃದಯಕ್ಕಾಗುವ ಬೇನೆಗಿಂತ ಮನೆಯಲ್ಲಿ ಬೀಳುತ್ತಿದ್ದ ಬಡಿಗೆಗೆ ಬೆನ್ನಿಗಾಗುತ್ತಿದ್ದ ನೋವೇ ಜಾಸ್ತಿಯಾಗಿರುತ್ತಿತ್ತು.
ಬಿಳಿ ಕಡ್ಡಿ, ಕಡಿಮೆ ರೇಟಿನ ಕಪ್ಪು ಕಟ್ಟಿಯಲ್ಲಿ ಬರೆದು ಅಳಿಸಲು ಒಂದು ಸಣ್ಣ ಬಟ್ಟೆ ತುಂಡು, ಅದೂ ಇಲ್ಲದಿದ್ದರೆ ದಾರಿಯಲ್ಲಿ ಸಿಗುತ್ತಿದ್ದ ಅಜ್ಜಿ ಗಿಡದ ಎಸಳು ಇವೆಲ್ಲಾ ಬಳಪದ ಅಕ್ಷರ ಅಳಿಸಿರಬಹುದು ಆದರೆ ಮನದಲ್ಲಿರೋ ನೆನಪುಗಳನ್ನಲ್ಲ..! ಹೇಗೆ ಮರೆಯೋದು ಹೇಳಿ!..


ಮನೆಯಲ್ಲಿ ಬರೆದ ಅಕ್ಷರ ಶಾಲೆಗೆ ಹೋಗುವವರೆಗೂ ಅಳಿಸದಂತೆ ಕಾಪಿಟ್ಟುಕೊಳ್ಳುವ ಪರಿ, ಬಿಡಿಸಿದ ಲೆಕ್ಕ ಉತ್ತರ ಸಿಗದೇ ಒದ್ದಾಡಿದಾಗ, ದಾರಿ ಮಧ್ಯೆ ಜೊತೆಗೆ ಸಿಗುವ ಗೆಳೆಯನ ಬಳಿ ಕೇಳಿ ನಡೆದುಕೊಂಡೆ ಬರೆದುಕೊಂಡು ಹೋಗುತ್ತಿದ್ದ ಬಿಸಿ ಎಷ್ಟೋರುಷ ಹೋದರು ಸೋಜಿಗವೇ ಅಲ್ವಾ!. ಮಳೆ ಬಂದಾಗ ಹೆಂಚಿನ ಮಾಡ ಮಳೆ ನೀರಿಗೆ ಕೈಯೊಡ್ಡಿ ಏನೋ ದೊಡ್ಡ ಶಿಲೆಯ ಕೆತ್ತನೆ ಬೀರಿ ಅದರ ಮೇಲಿನ ಧೂಳನ್ನ ತೊಳೆಯೋ ಹಾಗೆ ತರಗತಿಯಿಂದ ಹೊರಗೋಡಿ ತೊಳೆದು ಬರುತ್ತಿದ್ದ ಆ ಬಳಪಕ್ಕಿದ್ದ ತಾಕತ್ತೇ ಇಂದಿನ ನಾವು ನೀವೆಲ್ಲ ಬರೆಯುತ್ತಿರುವ ನಾಲ್ಕಕ್ಷರ ಅಲ್ವಾ!?
ಸುಣ್ಣದ ಚಾಕ್ ಪೀಸೋ, ಅಂಗಡಿಯಲ್ಲಿ ಸಿಗುತ್ತಿದ್ದ ಚಾಕ್ ಪೀಸೋ ಒಟ್ಟಿನಲ್ಲಿ ಎಲ್ಲಾ ಬಗೆಯ ಅಕ್ಷರ ರೇಖಾಚಿತ್ರ, ಕೈ ಬರಹಗಳ ಆಟ, ಕದ್ದು ಮುಚ್ಚಿ ಬರೆಯುತ್ತಿದ್ದ ಕೈ ಅಲ್ಲಾಡಿಸದೇ ಗೆಲ್ಲುವ ಅಕ್ಷರ ಮಾಲಿಕೆಯ ಮಾಟ ಇವೆಲ್ಲಕ್ಕೂ ಸಾರಥ್ಯ ಈ ಬಳಪ…


ಇದು ಕೇವಲ ಒಂದಿಷ್ಟು ಅಷ್ಟೇ, ಇನ್ನೂ ಬರೆಯುತ್ತಾ ಕುಳಿತರೆ ಅದೆಷ್ಟೋ ನೆನಪು ಬಳಪದ ಬಂಧುತ್ವದ ಹೊಳಪು ಅನೇಕವಿವೆ. ಸದ್ಯಕ್ಕೆ ಇದು ಕೂಡ ಮರೆಯಾದ ವಸ್ತುಗಳ ಸಾಲಿಗೆ ಸೇರಲು ಸಾಲಲ್ಲಿ ನಿಂತಿದೆ, ಕೆಲವು ಭಾಗಗಳಲ್ಲಿ ಸೇರಿಯೂ ಆಗಿದೆ. ಮಣ್ಣಿನ ಬಳಪದ ಸ್ಥಾನಕ್ಕೆ ಪ್ಲಾಸ್ಟಿಕ್‌ನ ಹಗುರಾತಿ ಹಗುರ, ಅಗಲಾತಿ ಅಗಲ ಎಂಬAತಹ ಬಳಪಗಳು ಯಂಗ್ ಸ್ಟೂಡೆಂಟ್ಸ್ ಕೈಗಳಿಗೆ ದೊರಕಿವೆ. ಕಾಲ ಉರುಳಿದರೂ ಅಂದಿನ ಒಡೆದು ಹೋದ ಬಳಪದ ನೋವು, ಆ ರಾತ್ರಿ ಭಾರವಾದ ನೋವಲ್ಲಿ ಕನವರಿಸಿಕೊಂಡು ಮಲಗಿದ್ದ ಬಳಪದ ತೆಕ್ಕೆಯ ಹಳೇ ಕನಸು ಇಂದಿಗೂ ಮಾಸಿಲ್ಲ ನೋಡಿ…
ಮತ್ತೆ ಗೀಚೋಣ,
ಅದರೊಲವ ಕರೆಯೋಣ,
ಸ್ಲೇಟಿಗೆ ಶರಣು ನಮಿಸೋಣ…

  • ಸಂದೀಪ್ ಶೆಟ್ಟಿ ಹೆಗ್ಗದ್ದೆ

Leave a Reply

Your email address will not be published. Required fields are marked *