ಸೂರಾಲು ಅರಮನೆಯ ಕಿಂಡಿ ಒಳಗಿಂದ ಕಂಡಿದ್ದು: heggaddesamachar

ನನಗೆ ಹಿರಿಯರ “ದೇಶ ಸುತ್ತಿ ನೋಡು, ಕೋಶ ಓದಿ ನೋಡು” ಎನ್ನುವ ನುಡಿ ಬಹಳ ಇಷ್ಟ. ಸುತ್ತೋದಕ್ಕೆ, ಹೊಸ ಜಾಗ, ಹೊಸ ಪ್ರದೇಶಗಳನ್ನ ಹಡುಕುತ್ತಾ ಇರುತ್ತೇನೆ. ಕೇವಲ ಅಷ್ಟೇ ಅಲ್ಲ ಕಾಣದ್ದನ್ನೂ ತುಂಬು ಕಣ್ಗಳಲ್ಲಿ ಕಾಣೋಕೆ, ಹಳೆಕಾಲದ ಬೀಡುಗಳ ಬಗ್ಗೆ ತಿಳಿಯೋಕೆ ತುಂಬಾ ಇಷ್ಟ…
ಮೊನ್ನೆ ಮೊನ್ನೆ ನಮ್ಮೂರಿಗೆ ಹೋಗಿದ್ದೆ. ಪ್ರತಿ ಬಾರಿ ಊರಿಗೆ ಹೋದಾಗಲೂ ಯಾರಾದರೊಬ್ಬರ ಸಂಗಡಿಗರ ಜೊತೆ ಎಲ್ಲಾದರೂ ಒಂದಿನ ತಿರುಗಾಟ ಮಾಡುವುದು ವಾಡಿಕೆ. ಅಂತೆಯೇ ಈ ಬಾರಿ ಗೆಳೆಯ ರಾಮ್ ಶೆಟ್ಟಿ ಅತ್ತಿಕಾರ್, ನನಗೆ “ಸೂರಾಲು ಅರಮನೆ” ತೋರಿಸಬೇಕೆಂದು ಫಿಕ್ಸ್ ಮಾಡಿಕೊಂಡು ಮುಂಜಾನೆಯೇ ನಮ್ಮನೆಗೆ ಬಂದಿದ್ದ…
ಸರಿ ಹೊರಡೋಣವೆಂದು ಇಬ್ಬರೂ, ನಮ್ಮ ಮನೆಯಿಂದ ಸರಿಸುಮಾರು 60 ರಿಂದ 70 ಕಿಮೀ ದೂರದಲ್ಲಿರುವ ಉಡುಪಿ ತಾಲೂಕಿನ ಕೊಕ್ಕರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸೂರಾಲಿನ ಕಡೆಗೆ ಪ್ರಯಾಣ ಬೆಳೆಸಿದೆವು.
ನಾವು ಬರುವ ವಿಷಯ ಮೊದಲೇ ತಿಳಿದಿದ್ದ ಆ ಪ್ರದೇಶಕ್ಕೆ ಸಮೀಪದಲ್ಲೇ ವಾಸವಿದ್ದ ಗೆಳೆಯ ಸೃಷ್ಟಿತ್ ಶೆಟ್ಟಿಯೂ ನಮಗಾಗಿ ಬಿಡುವು ಮಾಡಿಕೊಂಡು ಜೊತೆಯಾಗಲು ಅಲ್ಲಿಗೆ ಆಗಮಿಸಿದರು.
ಸುತ್ತಲೂ ಬಯಲು..! ಮಧ್ಯೆ ಅರಮನೆ, ಬಳಿಯಲ್ಲಿ ಸೂರಾಲು ಮಹಾಲಿಂಗೇಶ್ವರನ ಸನ್ನಿಧಿ… ಒಮ್ಮೆ ಇಲ್ಲಿಗೆ ಬಂದರೆ ಸರಿಸುಮಾರು ಅರ್ಧ ದಿನವಾದರೂ ಇಲ್ಲೇ ಇರೋಣ ಎಂಬಂತೆ ಮನಸು ಮೆಚ್ಚುವ ಸ್ಥಳ.
ಪ್ರಾರಂಭದಲ್ಲಿ ನಾವು ಸಾವಿರ ವರ್ಷದಷ್ಟು ಹಳೆಯದಾಗಿರಬಹುದಾದ ಮಹಾಲಿಂಗೇಶ್ವರನ ಸನ್ನಿಧಿಯ ಒಳಗೆ ಅಡಿ ಇಟ್ಟೆವು.
ವಾವ್!… ಹಳೆಯ ಕಾಲದ ಆರತಿ, ಜಾಗಟೆ, ಡೋಲು, ಪತ್ತಾಸ್, ಗಡಿಗೆ, ಶಿವನ ವಿಗ್ರಹ, ನಂದಿ ಪ್ರತಿಮೆ, ವಿವಿಧಾಕೃತಿಯ ಶಿಲ್ಪಕಲೆಯ ಕಲ್ಲುಗಳು, ದೊಡ್ಡ ದೊಡ್ಡ ಶಿಲಾಕಂಬಗಳು ಹೀಗೆ ಅನೇಕವನ್ನ ಇಂದಿಗೂ ಅಲ್ಲಿ ಜಾಗ್ರತೆಯಲ್ಲಿ ಕಾಪಿಟ್ಟುಕೊಂಡು ಬಂದಿದ್ದು, ಅವನ್ನೆಲ್ಲಾ ಮುಟ್ಟಿ ನೋಡುವ ಸೌಭಾಗ್ಯವೂ ಎದುರಾಯಿತು.

ದೇವಳ ನೋಡಿದ ಆನಂತರ ಇದಿರಾಗುವುದೇ ಸೂರಾಲು ಅರಮನೆ. ಈ ಅರಮನೆ ಅನೇಕ ವಿಶೇಷತೆಗಳನ್ನ ಹೊಂದಿದೆ. ಒಂದು ಅಂದಾಜಿನ ಪ್ರಕಾರ ಸುಮಾರು 500 ರಿಂದ 600 ವರ್ಷಗಳಷ್ಟು ಹಳೆಯದಾಗಿರುವ ಇದು ಸಂಪೂರ್ಣ ಮಣ್ಣಿನಿಂದಲೇ ಕಟ್ಟಿರುವ ಮತ್ತು ಪಂಚಾಂಗವೇ ಇಲ್ಲದೆ ನಿರ್ಮಾಣವಾದ ಕಟ್ಟಡ. ಇಲ್ಲಿನ ಒಂದೊಂದು ಬಾಗಿಲು ಕೂಡ ಇಡೀ ಮರದಿಂದಲೇ ಮಾಡಿರುವುದಕ್ಕೆ ಅದರ ಭಾರವೇ ಸಾಕ್ಷಿ ಎನ್ನಬಹುದು. ಅಂದಿನ ಸಮಯ ಇಡೀ ಊರಿಗೆ ರಾಜಮನೆತನವಾಗಿ ನಿಂತಿದ್ದ ಈ ಮನೆ, ಸದ್ಯಕ್ಕೆ ಯಾರೂ ನೆಲೆಸದ ಬೀಡಾಗಿ, ಕೇವಲ ನಮ್ಮಂತ ಪ್ರವಾಸಿಗರ ಆಕರ್ಷಣಿಯ ತಾಣವಾಗಿ ಮಾತ್ರಾ ನಿಂತಿದೆ.
ತೋಳ್ವಾಹ ಜೈನ ಅರಸರು ಇದನ್ನು ಕಟ್ಟಿದ್ದಾರೆ ಎನ್ನಲಾಗಿದ್ದು, ಮನೆಕಾಯುವ ಒಂದಿಬ್ಬರನ್ನ ಬಿಟ್ಟರೆ ಪೂರ್ಣ ಮಾಹಿತಿ ಯಾರಿಗೂ ಇಲ್ಲ. ಆ ಮನೆಯಲ್ಲಿ ವಾಸವಿದ್ದ ಅಂದಿನ ಅರಸರ ಆಳ್ವಿಕೆ ಸೂರಾಲಿನಿಂದ ಶಿರಿಯಾರ, ಶಂಕರನಾರಾಯಣ, ಬಸ್ರೂರು, ಬೈಂದೂರಿನ ತನಕ ವಿಸ್ತರಿಸಿತ್ತು ಎನ್ನಲಾಗಿದೆ.

ದೂರಿಂದ ನೋಡಲು ಮನಮೋಹಕವಾಗಿ ಕಾಣುವ ಈ ಅರಮನೆ ಒಳಗಡೆಯಲ್ಲಿ ದುರಸ್ತಿ ಕಾಣದೆ ಪಾಳುಬೀಳುವ ದಾರಿಗೆ ಸಾಗುತ್ತಿದ್ದು, ಅನೇಕ ವರ್ಷಗಳ ಹಿಂದೆ ಈ ಕಟ್ಟಡವನ್ನು ದುರಸ್ತಿ ಮಾಡುವ ಕೆಲಸ ನಡೆದರೂ ಅದು ಪೂರ್ಣ ಪ್ರಮಾಣದಲ್ಲಿ ನಡೆಯದೇ ಮತ್ತೆ ಸ್ಥಗಿತಗೊಂಡು ಅರ್ಧಂಬರ್ಧವಾದಂತೆ ನೆಲೆನಿಂತಿದೆ.
ವರ್ತಮಾನದಲ್ಲಿ ಈ ಅರಮನೆಯ ಉಸ್ತುವಾರಿಯನ್ನು ಜೈನ ಜನಾಂಗದ, ನಿವೃತ್ತ ಕೆನರಾ ಬ್ಯಾಂಕ್ ಡಿವಿಶನಲ್ ಮ್ಯಾನೇಜರ್ ಶ್ರೀ ಸುದರ್ಶನ್ ಶೆಟ್ಟಿ ಹೊಂದಿದ್ದು, ಇಂದು ಅವರು ಮತ್ತು ಅವರ ಕುಟುಂಬ ಬೇರೆ ಕಡೆಯಲ್ಲಿ ವಾಸವಾಗಿದ್ದರೂ, ಅರಮನೆ ವರ್ಷಪೂರ್ತಿ ಖಾಲಿಯಿದ್ದರೂ, ನವರಾತ್ರಿಯ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಇಲ್ಲಿಗೆ ಬಂದು ಹಬ್ಬದಾಚರಣೆ ಮಾಡುತ್ತಾರೆ ಎನ್ನುತ್ತಾರೆ ಸ್ಥಳೀಯರು.

ಪುರಾತನ ವಸ್ತುಗಳಾಗಲಿ, ಮನೆಗಳಾಗಲಿ ಇದೆಲ್ಲ ಮುಂದಿನ ತಲೆಮಾರಿಗೆ ಇರಬೇಕೆಂದರೆ ನಾವು- ನೀವು ಜೊತೆಗೆ ಸರ್ಕಾರ ಇದನ್ನ ಉಳಿಸಿಕೊಳ್ಳಲು ಪಣತೊಡಬೇಕು. ಇಲ್ಲಿರುವ ಮರದ ಕೆತ್ತನೆ, ವಾಸ್ತುಶಿಲ್ಪ ಇವೆಲ್ಲಕ್ಕೆ ಪುನರುಜ್ಜೀವನ ನೀಡಬೇಕು. ಇಲ್ಲಿ ಅದ್ಯಾವುದು ಆಗುವ ಲಕ್ಷಣ ಕಂಡು ಬಂದಿಲ್ಲ. ಸಣ್ಣ ಪುಟ್ಟ ಕೆಲಸ ಉಳಿವಿಕೆಗೆ ನಡೆದರೂ ಎಲ್ಲೋ ಒಂದು ಕಡೆ ಅವನತಿಯ ಹಾದಿಗೆ ಸೂರಾಲು ಅರಮನೆ ಸಾಗುತ್ತಿದೆಯೇನೋ ಅನ್ನುವ ಭಯ ಕಾಡುತ್ತೆ.
ಅರಮನೆಯ ಒಳಗಡೆ, ಅಕ್ಕಿ ಮುಡಿ ಇಡುವ ಕೋಣೆ, ದೇವರ ಮನೆ, ಜಗುಲಿ, ಹಳೆಯ ಕಾಲದ ಖುರ್ಚಿಗಳು, ನ್ಯಾಯ ತೀರ್ಮಾನದ ಕಟ್ಟೆ, ಮೂಡಲಮನೆಯಂತಿರುವ ಅಂಗಳ, ಮರದ ಉಪ್ಪರಿಗೆ, ಹೊರಗಡೆ ಬಾವಿ, ಸುತ್ತಲೂ ತೆಂಗಿನ ಮರ ಹೀಗೆ ಅನೇಕವನ್ನ ನೋಡಿ ಕಣ್ತುಂಬಿಕೊಳ್ಳಲು ಇಂದಿಗೂ ಸಾಧ್ಯವಿದೆ. ಒಂದು ಮಾಹಿತಿಯ ಪ್ರಕಾರ ಬರೀ ಅರಮನೆ ಕಟ್ಟಡ ಇರುವ ಜಾಗದ ವಿಸ್ತೀರ್ಣವೇ ಒಂದು ಎಕರೆ ಇದೆಯಂತೆ.
ಈ ಹಿಂದೆ ಈ ಮನೆಯಲ್ಲಿ ಹಲವಾರು ಸಿನಿಮಾಗಳು, ಧಾರಾವಾಹಿಗಳು ಚಿತ್ರೀಕರಣಗೊಂಡಿದ್ದು, ದಿ| ಜಿ.ವಿ.ಅಯ್ಯರ್ ರವರ “ಮಧ್ವಾಚಾರ್ಯ” ಇಲ್ಲೇ ಚಿತ್ರೀಕರಣವಾಗಿದೆ.

ಒಟ್ಟಿನಲ್ಲಿ ಕರ್ನಾಟಕದಲ್ಲಿ ಮಣ್ಣಿನ ಅರಮನೆಯೊಂದು ಇದೆಯಂತಾದರೆ, ಇಂದಿಗೂ ಪ್ರವಾಸಿಗರಿಗೆ ತನ್ನ ಸೌಂದರ್ಯವನ್ನ ಪ್ರದರ್ಶಿಸುತ್ತಿದೆಯಂತಾದರೆ ಅದು ಈ ಸೂರಾಲು ಅರಮನೆ ಮಾತ್ರಾ.
ನನಗಂತು ಇಲ್ಲಿಗೆ ಭೇಟಿಯಾಗಿದ್ದಕ್ಕೆ ಒಂದಿಷ್ಟು ಮನಸ್ಸು ಪ್ರಸನ್ನವಾದಂತೆ, ಧ್ಯಾನಸ್ಥ ಕೆಲಸಕ್ಕೆ ಸ್ಪೂರ್ತಿಯಾದಂತೆ, ಮಹಾಲಿಂಗೇಶ್ವರ ದೇವರ ಅನುಗ್ರಹದ ಧನಾತ್ಮಕ ಆಶೀರ್ವಾದ ಲಭಿಸಿದಂತೆ ಭಾಸವಾಯಿತು..
ನೀವೂ ಒಮ್ಮೆ ಉಡುಪಿ-ಕುಂದಾಪುರ-ಹಾಲಾಡಿ ಈ ಭಾಗಕ್ಕೆ ಪ್ರವಾಸ ಕಂಡರೆ ಈ ಸ್ಥಳಕ್ಕೆ ತಪ್ಪದೇ ಭೇಟಿಕೊಡಿ…