ಕಚಗುಳಿ ಅಂಕಣ

‘ಸುಮ್ಮನೆ ಪ್ರಯಾಣಿಸುವ ಸುಖಕ್ಕೊಂದು ಶರಣು’ : heggaddesamachar

Spread the love

“ನುಜ್ಜು ಗುಜ್ಜಾಗುವ ಮನದ ರಂಧ್ರಗಳಿಗೂ
ಸೆಕೆಯಾಗುತ್ತದೆ ಬೆವರಿಲ್ಲದೆ,
ಬರಿಯ ಕೆಲಸಗಳಲ್ಲಿ..!
ಬಿಡಬೇಕು, ನಿರ್ಮಲದಿ-ನೀಲಿಭಾವದಿ
ಹೀಗೆ…- ಹಾಗೇ.., ತಂಪಾದ ವಾತಾವರಣದಲ್ಲಿ
ಧ್ಯಾನಸ್ಥನಾಗುವ ಸ್ಥಳಗಳಲ್ಲಿ..!”

ಸದ್ಯಕ್ಕೆ ಎಲ್ಲೂ ಹೊರಡುವ ಪ್ಲ್ಯಾನ್ ಇರಲಿಲ್ಲ… ನಿಮಗೆ ಗೊತ್ತಲ್ಲಾ!!, ಇತ್ತೀಚೆಗೆ ಪ್ರಯಾಣ ಅನ್ನೋದು ಒಂಥರಾ ಪ್ರಯಾಸವಾಗಿ ಬಿಟ್ಟಿದೆ. ಕೊರೋನಾ ಎನ್ನುವ ಕರ್ಮ ಹಿಡಿದು ಹಿಂಡಿ ಹಿಪ್ಪೆ ಮಾಡುತ್ತದೆ ಎನ್ನುವ ಭಯಕ್ಕೆ ನಾನೂ ಕೂಡ ಹೊರತಾಗದೆ, ಮನೆ-ಆಫೀಸು ಅಂತಲೇ ಕೆಲಸ ಮಾಡಿಕೊಂಡು ಬಸವಳಿದು ಬೆಂಡಾಗಿ ಬಿಟ್ಟಿದ್ದೆ.
‘ಬ್ರೇಕ್ ಕೇ ಬಾದ್ ಕ್ಯಾ ಹೈ’ ಎಂಬಂತೆ ಕುಂತಿರುವ ಸಂಜೆಯಲ್ಲಿ ಮಿತ್ರ ನಾಗರಾಜ್ ಸಂಗಡಿಗರು ಚಿಕ್ಕಮಗಳೂರಿನ ಕಡೆ ಹೋಗಿ ಬರೋಣವೆಂದು ಕರೆದಾಗ, ಒತ್ತಡದಲ್ಲೇ ‘ಆಯ್ತು ಬರ‍್ತೀನಿ’ ಅಂದೆ.

No description available.


ಬಗಲಲ್ಲಿ ಎರಡೇ ದಿನ ಫ್ರೀ ಎಂಬಂತೆ ಬ್ಯಾಗ್ ಕಟ್ಟಿಕೊಂಡು ಆದಿತ್ಯವಾರ ದಸರಾ ಟ್ರಿಪ್ ಎನ್ನುವ ಮೂಡಿನಲ್ಲಿ ಹೊರಟ ನನಗೆ ಚಿಕ್ಕಮಗಳೂರಿನ ಹೋಮ್ ಸ್ಟೇ, ಅಲ್ಲಿರುವ ಕಾಣದ ಧಾಮಗಳೆಲ್ಲ ಹೊಸತೇ ಆಗಿತ್ತು.
ಒಂದಿಷ್ಟು ಮೋಜು, ಮಸ್ತಿಯಲ್ಲಿ ಶುರುವಾದ ಮುಂಜಾನೆಯ ಪ್ರಯಾಣ, ಮಧ್ಯಾಹ್ನ ತಲುಪುವಾಗ ದಾರಿ ಮಧ್ಯೆ ಸಿಕ್ಕ ಶ್ರವಣಬೆಳಗೊಳವನ್ನೂ ನೋಡಿ ಹೋಗುವ ಇರಾದೆಗೆ ಒಳಪಡಿಸಿಕೊಂಡು ಬೆಟ್ಟ ಹತ್ತಿ ಬಾಹುಬಲಿಯನ್ನ ಕಂಡಾಗ, ಅದೇನೋ ಗೊತ್ತಿಲ್ಲ, ವಿರಾಗಿಯಾಗಿ ನಿಂತ ಬಾಹುಬಲಿಯನ್ನು ಕಂಡು, ‘ನಾನ್ಯಾಕೆ ನಿನ್ನಂತಾಗಬಾರದು ಎಲ್ಲಾ ತೊರೆದು ಬದುಕಬಾರದು’ ಎನ್ನುವ ಹೃದಯಭಾರದಲ್ಲಿ ಕಲ್ಲಿನ ಕೆತ್ತನೆಗೆ ಮತ್ತೆ ಶರಣಾಗಿ ಆತ್ಮಾವಲೋಕನಕ್ಕೆ ಒಳಗಾಗುವಂತೆ ಆ ಮೂರ್ತಿ ಸೆಳೆಯಿತು. ಮುಂದೆ ದಾರಿ ಮಧ್ಯೆ ಸಿಗುವ ಹಳೆ ಬೀಡನ್ನೂ ದರ್ಶಿಸೋಣವೆಂದು ಅಲ್ಲಿಗೂ ಭೇಟಿಕೊಟ್ಟು, ಕಲ್ಲಿನ ಕಣ-ಕಣವನ್ನೂ ಸ್ಥಳೀಯ ಗೈಡ್‌ನಿಂದ ಅರಿತು ಗುಡಿಯೊಳಗಿರುವ ಶಿವನನ್ನು ದರ್ಶಿಸಿ ಚಿಕ್ಕಮಗಳೂರಿನಲ್ಲಿ ನಮಗೆ ಮೊದಲೇ ನಿಗಧಿಯಾದ ‘ಸಿರಿ ಕಾಫೀ ನಾಡು ರೆಸಾರ್ಟ್’ನತ್ತ ಕಾರ್ ಚಲಿಸಿದೆವು. ಸಹ ಪ್ರವಾಸಿಗರಾಗಿ ನಾವು ಏಳು ಜನ ಮಾತು-ಮಂಥನ-ಹರಟೆಯಲ್ಲೇ ಸರಿಸುಮಾರು ೨೭೦ ಕಿ.ಮೀ ಕ್ರಮಿಸಿದ್ದು ಎಳನೀರು ಕುಡಿದಷ್ಟು ಸಿಹಿ ಮತ್ತು ಸರಾಗವಾಗಿತ್ತು.

No description available.

ರಾತ್ರಿ ಹೋಮ್ ಸ್ಟೇನಲ್ಲೇ ಉಳಿದು, ಅವರು ನಮಗಾಗಿ ಮಾಡಿ ಕೊಟ್ಟ ಆಹಾರವನ್ನೆಲ್ಲ ತಿಂದು, ಕುಣಿದು-ಕುಪ್ಪಳಿಸಿ ಮಲಗಿದ್ದ ನಮಗೆ ಪ್ರಕೃತಿಯ ಬಣ್ಣ ಸರಿಯಾಗಿ ಕಾಣಿಸಿದ್ದು ಮುಂಜಾನೆಯ ಸೂರ್ಯ.

ಚಿಲ್ಡ್ ಗಾಳಿ, ಸುತ್ತಲೂ ಹಸಿರು, ಯಾವುದೋ ಗುಡ್ಡದ ಮೇಲೆ ಮನೆಯೊಂದರಲ್ಲಿ, ಪ್ರಕೃತಿಯ ಮಡಿಲಲ್ಲಿ ಮಲಗಿ ನಿದ್ರಿಸುವ ಸುಖ, ಯಾವ ಸಿಟಿಯ ಏ.ಸಿ ರೂಮು ಕೊಡುವುದಿಲ್ಲ ಎನ್ನುವ ಸತ್ಯ ಅರಿವಾಗಿದ್ದು ಅಲ್ಲೇ ಎಂದರೆ ತಪ್ಪಿಲ್ಲ. ನಾನು ಪ್ರಾರಂಭದಲ್ಲೇ ಹೇಳಿರುವ ಹಾಗೆ ಈ ಸಿಟಿ ಬದುಕಿನ ಯಂತ್ರದ ಜೀವನದ ನಡುವೆ ನುಜ್ಜು ಗುಜ್ಜಾಗುವ ಮನಸ್ಸಿಗೆ ಇಂತಹ ತಣ್ಣನೆಯ ಪ್ರಯಾಣಗಳೆಲ್ಲ ಸಿಕ್ಕಾಗ ಮಿಸ್ ಮಾಡಿಕೊಳ್ಳದೆ ಚಲಿಸಬೇಕು-ಸುಖಿಸಬೇಕು. ಸಮಯ ಸಿಕ್ಕರೇ ಒಂದೆರಡು ದಿನ ಅಲ್ಲೇ ಧ್ಯಾನಸ್ಥರಾಗಬೇಕು. ಕೇವಲ ಇದಿಷ್ಟೇ ಅಲ್ಲ, ಜೀವನದ ಸುಂದರ ಅನುಭವಗಳನ್ನು ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಪಡೆಯಬೇಕೆಂದರೆ ಜಗತ್ತಿನ ಮೂಲೆ ಮೂಲೆಗೂ ಪ್ರಯಾಣಿಸಬೇಕಂತೆ. ಅಲ್ಲಿ ಕಲಿಯೋದಿರುತ್ತೆ, ಹೊಸ ಯೋಚನೆಗಳಿಗೆ ದಾರಿಯಿರುತ್ತೆ, ಅದು ನಿಮಗೆ ಹೊಸ ರಿಪ್ರೆಶ್ ಅಂತೂ ಕೊಟ್ಟೇ ಕೊಡುತ್ತೆ.

No description available.

ಯಾರ್ಯಾರೋ, ಎಲ್ಲೆಲ್ಲಿಗೋ ಹೋದರೆ ನಾವು ಮಾತ್ರಾ ಹೋಗಿದ್ದು ನಮ್ಮಯ ಪಾಕೃತಿಕ ಮಡಿಲಿಗೆ, ಚಿಕ್ಕಮಗಳೂರು ಎನ್ನುವ ಗೂಡಿಗೆ. ಸಮಯದ ಅಭಾವ ಒಂದಿನಕ್ಕೆ ನಮ್ಮನ್ನ ಸೀಮಿತ ಮಾಡಿದ್ದರೂ, ನಾವಲ್ಲಿ ಸಿಕ್ಕ ಸಮಯ, ಮಣಿಕಧಾರೆ, ದತ್ತಪೀಠ, ದಬೆ ದಬೆ ಜರಿ ಫಾಲ್ಸ್, ಮುಳ್ಳಯ್ಯನಗಿರಿ ಹೀಗೆ ಎಲ್ಲವನ್ನೂ ಕ್ರಮಿಸಿ ನೋಡಿ ಆನಂದಿಸಿದೆವು. ಒಂದು ಎತ್ತರದ ಪ್ರದೇಶದಲ್ಲಿ ನಿಂತು ನೋಡಿದಾಗ, ಕಿರು ಜಲಪಾತಗಳ ಕೆಳಗೆ ನಿಂತು ಹನಿಯೊಂದನ್ನೇ ದೃಷ್ಟಿಸಿ ನೋಡಿ ಮೈಮರೆತಾಗ, ಒಟ್ಟಿಗೆ ಗೊತ್ತಿಲ್ಲದ ಅದೆಷ್ಟೋ ಹೊಸ ವಿಚಾರಗಳನ್ನ ಬಾಚಿ ತಬ್ಬಿಕೊಂಡು ಗೊತ್ತು ಪಡಿಸಿಕೊಂಡಾಗ ಸಿಗುವ ಆನಂದ ನನಗೆ ಮತ್ತೆಲ್ಲೂ ಸಿಗಲ್ಲ ಅನ್ನೋದಕ್ಕೆ ಈ ಪ್ರಯಾಣ ಸಾಕ್ಷಿ ಎನಿಸಿತು.

No description available.

‘ಇಲ್ಲೇನೋ ತುಡಿತವಿದೆ, ಅಲ್ಲೇನೋ ಇರಿತವಿದೆ’ ಎಂದುಕೊಳ್ಳುವ ಕಟ್ಟಕಡೆಯ ವಿಲಾಸಿ ಮನಸಿಗೂ ರಿಲ್ಯಾಕ್ಸ್ ಸಿಗುವ ಸಮಯ ಮತ್ತೆ ನಾವೆಲ್ಲ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದ್ದು ಹೊಸ ದಿನಗಳನ್ನ ಮತ್ತೆ ಕರುಣಿಸಿದಂತಾಗಿತ್ತು…
‘ಥ್ಯಾಂಕ್ಸ್ ಟು ಮೈ ಫ್ರೆಂಡ್ಸ್’

-ಸಂದೀಪ್ ಶೆಟ್ಟಿ ಹೆಗ್ಗದ್ದೆ

Leave a Reply

Your email address will not be published. Required fields are marked *