ಸಿನಿಮಾ ವಿಮರ್ಶೆ : ಕಥಾ ಸಂಗಮ : heggaddesamachar.com

ಸಂದೀಪ್ ಶೆಟ್ಟಿ ಹೆಗ್ಗದ್ದೆ
ಅಂದು ಪುಟ್ಟಣ್ಣ ಕಣಗಾಲ್, ಇಂದು ರಿಷಬ್ ಶೆಟ್ಟಿ, ಅದು 1976, ಇದು 2019, ಅಲ್ಲಿ 5 ಕಥೆ, ಇಲ್ಲಿ 7 ಕಥೆ, ಎಸ್… ದ್ಯಾಟ್ಸ್ ಕಥಾ ಸಂಗಮ…

ಕೆಲ ಕಥೆಗಳನ್ನು ಒಟ್ಟಾಗಿಸಿ ಸಂಗಮ ಮಾಡಿ, ವಿಭಿನ್ನ ಸಂಸ್ಖøತಿಯ, ನೆಲದ ಸೊಗಡಿನ ಕಥೆಯನ್ನ ಬೇರೆ ಬೇರೆ ನಿರ್ದೇಶಕರು ಅವರವರ ಶೈಲಿಯಲ್ಲಿ ಹೊರತೆಗೆದು ಸಣ್ಣ ಕಥೆಗಳ ತಾತ್ಪರ್ಯ ನೀಡಿ ಶುಭಂ ಹಾಡುವ ಸೋಜಿಗವೇ ಈ ಕಥಾ ಸಂಗಮವೆನ್ನಬಹುದು.
ಒಬ್ಬೊಬ್ಬ ನಿರ್ದೇಶಕನಿಗೆ ಇಲ್ಲಿ 20 ನಿಮಿಷಗಳ ಕಾಲ ಸಮಯವಿದ್ದು, ಸಣ್ಣ ಕಥೆಯನ್ನ ದೊಡ್ಡ ಪರದೆಯಲ್ಲಿ ಸಿನಿರಸಿಕರನ್ನ ಸೆಳೆಯುವಂತೆ ಹೊಸ ಆಶಾಭಾವದ ಭರವಸೆ ಇತ್ತು, ವಿಭಿನ್ನ ಪಯತ್ನ ಪಟ್ಟ ರಿಷಬ್ ಶೆಟ್ಟಿಯವರಿಗೆ ನಾವಿಲ್ಲಿ ಧನ್ಯವಾದ ಹೇಳಬೇಕು.
ಚಿತ್ರದ ಮೊದಲ ಕಥೆ, ಮಧ್ಯ ಕಥೆ ಮತ್ತು ಕೊನೆಯಲ್ಲಿ ಬರುವ ಲಚ್ಚವ್ವನ ಕಥೆ ಬಹಳ ಅದ್ಭುತವಾದ ಸಹಜಾಭಿನಯದ, ಸಿನಿಮಾ ಆದ ನಂತರವೂ ಕಾಡುವ ಕಥೆಗಳು ಎನ್ನಬಹುದು.

ಇಡೀ ಕಥಾ ಸಂಗಮ ಒಂದು ಬಗೆಯಲ್ಲಿ ಹೊಸ ಬಗೆಯ ಕ್ರಿಯೇಟಿವಿಟಿಗೆ ತೆರೆದುಕೊಂಡಿದೆ ಎನ್ನಬಹುದು. ಕಥೆ ಚಿತ್ರಗಳಿಗೆ ಹೇಗೆ ಪ್ಲಸ್ ಆಗಿದೆಯೋ ಅದೇ ರೀತಿ ಸಂಗೀತ, ಡಿ.ಓ.ಪಿ, ಬ್ಯಾಗ್ರೌಂಡ್ ಸ್ಕೋರ್, ಲೊಕೆಷನ್ಸ್ಗಳೂ ಕೂಡ ಇಲ್ಲಿನ ಕಥೆಗಳಿಗೆ ಪ್ಲಸ್ ಆಗಿವೆ.
7 ಅಧ್ಯಾಯಗಳಲ್ಲಿ ನನ್ನ ಅತೀ ಹೆಚ್ಚು ಕಾಡಿದ್ದು ಲಚ್ಚಮ್ಮ ಕ್ಯಾರೆಕ್ಟರ್. ಈ ಒಂದು ಅಧ್ಯಾಯಕ್ಕೆ ಇಡೀ ಸಿನಿಮಾನೇ ಚೆನ್ನಾಗಿದೆ ಎಂದು ಹೇಳಬಹುದಾದಷ್ಟು ಶಕ್ತಿ ಇದೆ ಎನಿಸಿತು. ಮಾಮೂಲಾದ ಶೂಟ್, ಕ್ಯಾಷವಲ್ಸ್ ಆ್ಯಕ್ಟ್ನಿಂದ ಲಚ್ಚಮ್ಮ ಅಲಿಯಾಸ್ ಪಾರವ್ವ ಪ್ರತಿಯೊಬ್ಬಳಿಗೂ ಹತ್ತಿರ ಎನಿಸುತ್ತಾಳೆ.

ಸಪ್ತ ಕಥೆಯೂ ಕೂಡ ಬೇರೆ ಬೇರೆ ಊರಿನ, ಬಾಷೆಯ ಸೊಗಡಿನಲ್ಲಿ ಮೂಡಿಬಂದಿದ್ದು, ಕೆಲವೊಂದು ಕಥೆ ಫುಲ್ಲಿ ಕನ್ ಫ್ಯೂಷನ್ ಮಾಡಿದರೆ ಇನ್ನೊಂದೆರಡು ಕತೆಗಳು ತಲೆ ಕೆರೆದುಕೊಳ್ಳುವಂತೆಯೂ ಮಾಡುತ್ತವೆ. ನಿಮಗೆ ಸಣ್ಣ ಕಥೆಗಳ ಅಂತ್ಯದ ಗಮಕ ಗೊತ್ತಿದ್ದರೆ ಇದು ಅರ್ಥವಾಗುತ್ತೆ. ಇಲ್ಲವೆಂದರೆ ಇನ್ನೊಮ್ಮೆ ನೋಡಬೇಕು ಎನಿಸುತ್ತದೆ.
ಮನುಷ್ಯನೊಬ್ಬನ ಎದೆಯೊಳಗಿನ ತಲ್ಲಣ, ಅಮಾಯಕತೆ, ಸಹಜ ತವಕಗಳ ಮಿಶ್ರಣ ಕಥಾ ಸಂಗಮವಾಗಿದ್ದು, ನಿಧಾನವಾಗಿಯೂ, ವೇಗವಾಗಿಯೂ, ಅಲ್ಲಲ್ಲಿ ರಿಪಿಟೇಟಿವ್ ದೃಶ್ಯಗಳಾಗಿಯೂ ಕಾಣಿಸತೊಡಗಿದರೂ, ಒಂದು ಸಿನಿಮಾ ದುಡ್ಡಲ್ಲಿ 7 ಸಿನಿಮಾ ಇನ್ಯಾರು ತೋರಿಸುತ್ತಾರೆ ಸಾಧ್ಯಾನಾ? ಸಾಧ್ಯವೇ ಇಲ್ಲ… ಸುಮ್ಮನೇ ನೋಡಿ ಬನ್ನಿ. ಅಲ್ಲಿರುವ ಒಂದಾದರೂ ಕಥೆ ನಿಮಗೆ ಮನೋರಂಜನೆಯನ್ನೋ, ಕಾಡುವಿಕೆಯನ್ನೋ ನೀಡೇ ನೀಡುತ್ತೆ…
