ಸಾವು : heggaddesamachar

ಉಸಿರಾಟ ನಿಲ್ಲಲಿಲ್ಲ
ಮನೆ ಮುಂದೆ ಹೊಗೆ ಇಲ್ಲ,ಗಂಧದ ಕಡ್ಡಿ,ಹೂ ಹಾರ,ಹೊಸ ಬಟ್ಟೆ,ಚಟ್ಟ ಕಟ್ಟಲಿಲ್ಲ,
ಅತ್ತು ಕರೆಯುವರಿಲ್ಲ,
ಹೊತ್ತು ಹೋಗುವವರಿಲ್ಲ
ಆದರೂ ಸಾವೊಂದು ನಡೆದಿದೆ ಇಲ್ಲಿ,ಅಂತರಂಗದ ಮೌನ ಹೋರಾಟದಲ್ಲಿ,
ಮಧ್ಯಮ ವರ್ಗದಿ ಹುಟ್ಟಿದ್ದೆ ತಪ್ಪಾಯ್ತು ನಾನು,
ಬದುಕುವ ಅರ್ಹತೆ ಕಳೆದುಹೋದಂತಿದೆ,
ಸಾವಾಗಿದೆ ನನ್ನ ಮೌನದಲಡಗಿದ ಮಾತುಗಳಿಗೆ,
ದುಡಿದು ತಿನ್ನುವ ಕೈಗಳೀಗ ,
ಹಗ್ಗವಿಲ್ಲದೆ ಬಂಧಿಸಲ್ಪಟ್ಟಿದೆ,
ಕರೋನಾದ ಹೊಡೆತಕ್ಕೆ ಮನೆಯವರ ಮನದ ಆಸೆಗಳು, ಯಜಮಾನನಾದ ನನ್ನೆದುರೇ ಸಾವನ್ನಪ್ಪಿವೆ,
ಗುಂಪಾಗಿ ಮಾಡಿದ ಪರೀಕ್ಷೆಯಲಿ ನನಗೆ ಕಾಯಿಲೆ ಇದೆ ಎಂದ ಕ್ಷಣದಲ್ಲೇ ನನ್ನ ಮನೆಯವರು ಅನಾಥರಾದಂತೆನಿಸಿತು,
ಹದಿನೈದು ದಿನದಲ್ಲಿ ಅನುಭವಿಸಿದೆ ಆ ನರಕಯಾತನೆ,
ಅಂದೇ ಸತ್ತಿರುವೆ ನಾ ಹೊತ್ತು ಕೂಳಿನ ಪರದಾಟದಲ್ಲಿ,
ಎಳೆ ಮಗುವಿಗೆ ಹಾಲಿನ ಪ್ಯಾಕೆಟ್ ಗಾಗಿ ಗೇಟಿನ ಮುಂದೆ ಕಾದಿದ್ದು,
ಅಮ್ಮನ ಔಷಧಿ ತರಲು ನೆರೆಹೊರೆಯವರ ಕಾಡಿ ಬೇಡಿದ್ದು,ಹಣವಿಲ್ಲದೆ ಯಾರೋ ಕನಿಕರದಿ ಕೊಟ್ಟ ದಿನಸಿ ತೆಗೆದುಕೊಂಡಾಗಲೇ,
ನನ್ನ ಸ್ವಾಭಿಮಾನ ನೇಣಿಗೆ ಶರಣಾದಂತೆನಿಸಿತು,
ಬಂಧನ ಮುಗಿದು ಹೊರಗೆ ಕಾಲಿಟ್ಟಾಗಲೂ,ಅನುಮಾನದ ಕಂಗಳು ನನ್ನ ಹಿಂಬಾಲಿಸುತಿರುವಾಗ,
ಇದ್ದ ಕೆಲಸಕ್ಕೂ ಸಂಚಕಾರ ಬಂದಾಗ,
ಮನೆಯ ವೃದ್ದ ತಾಯ್ತಂದೆ,ಹೆಂಡತಿ,ಮಗುವಿಗಾಗಿ ಅಲೆದಲೆದು ಕೆಲಸ ಮಾಡಿ ಒಂದಷ್ಟು ಪುಡಿಗಾಸಲ್ಲಿ ತಂದ ದಿನಸಿ ಸಾಮಾನುಗಳು ನನ್ನ ನೋಡಿ ನಕ್ಕಂತೆ ಭಾಸವಾಗುತಿತ್ತು,
ಕ್ಯಾಲೆಂಡರ್ನಲ್ಲಿ ಬಡ್ಡಿ ಸಾಲದ ದಿನಾಂಕ ಕೆಂಗಣ್ಣು ಬಿಟ್ಟು ನೋಡುತಿತ್ತು,
ನನ್ನ ಆತ್ಮ ಸ್ಥೈರ್ಯ ನಿಧನಗೊಂಡಿತ್ತು,
ಎಲ್ಲ ತೊರೆದು ಹೋಗಬೇಕೆಂದು ಹುಚ್ಚು ಮನಸು ಚುಚ್ಚುತ್ತಲೇ ಇತ್ತು,
ಮೃದು ಮನಸು ಮುಂದಿನ ಜವಾಬ್ದಾರಿ ನೆನಪಿಸುತ್ತಲಿತ್ತು,
ಮತ್ತೆ ಕೆಲಸದ ಹಾದಿ ಹಿಡಿದು ನಡೆಯುತಿರುವಾಗ ಹರಿದ ಚಪ್ಪಲಿಗೂ ಕೊನೆಗಾಲ ಬಂದಿತ್ತು,
ಬರಿಗಾಲ ಪಯಣದಲಿ ಕಲ್ಲು,ಮುಳ್ಳುಗಳು ಕಾಲಡಿ ಸಿಕ್ಕಿ ಮರಣ ಹೊಂದುತಿತ್ತು,
ಜೀವನದ ಪಯಣದಲಿ ಉಸಿರಾಡುತ್ತಲೇ ಸತ್ತಿರುವೆ,
ಸತ್ತಂತೆ ಬದುಕುತಿರುವೆ.