News (ಸುದ್ದಿ)

ಸಮುದಾಯ ರೇಡಿಯೋಗಳಲ್ಲಿ ಜಾಹೀರಾತು ಬಿತ್ತರ ಸಮಯವನ್ನು ಪ್ರತಿ ಗಂಟೆಗೆ 12 ನಿಮಿಷಗಳಿಗೆ ಹೆಚ್ಚಿಸುವ ಕುರಿತು ಸಮಾಲೋಚನೆ ನಡೆಯುತ್ತಿದೆ: ಶ್ರೀ ಪ್ರಕಾಶ್ ಜಾವಡೇಕರ್ : heggaddesamachar

Spread the love
  • ಸಮುದಾಯ ರೇಡಿಯೋಗಳಲ್ಲಿ ಜಾಹೀರಾತು ಬಿತ್ತರ ಸಮಯವನ್ನು ಪ್ರತಿ ಗಂಟೆಗೆ 12 ನಿಮಿಷಗಳಿಗೆ ಹೆಚ್ಚಿಸುವ ಕುರಿತು ಸಮಾಲೋಚನೆ ನಡೆಯುತ್ತಿದೆ: ಶ್ರೀ ಪ್ರಕಾಶ್ ಜಾವಡೇಕರ್
  • ಸಮುದಾಯ ರೇಡಿಯೋಗಳಲ್ಲಿ ಸುದ್ದಿ ಪ್ರಸಾರ ಮಾಡುವ ಪ್ರಸ್ತಾವವನ್ನು ಪರಿಗಣಿಸಲಾಗುವುದು;
  • ಸದ್ಯದಲ್ಲೇ ಸಮುದಾಯ ರೇಡಿಯೋಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು: ಶ್ರೀ ಜಾವಡೇಕರ್

ಸಮುದಾಯ ರೇಡಿಯೋಗಳಲ್ಲಿ ಜಾಹೀರಾತು ಸಮಯವನ್ನು ಪ್ರಸ್ತುತ ಇರುವ 7 ನಿಮಿಷದಿಂದ ಟಿವಿ ಚಾನೆಲ್‌ಗಳಿಗೆ ಸಮನಾಗಿ 12 ನಿಮಿಷಗಳಿಗೆ ಹೆಚ್ಚಿಸಲು ಉತ್ಸುಕನಾಗಿದ್ದೇನೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಎಲ್ಲಾ ಸಮುದಾಯ ರೇಡಿಯೋ ಕೇಂದ್ರಗಳ ಕೇಳುಗರನ್ನು ಏಕಕಾಲದಲ್ಲಿ ಉದ್ದೇಶಿಸಿ ಸಚಿವರು ಮಾತನಾಡುತ್ತಿದ್ದರು. ಇಂದು ಸಂಜೆ 7 ರಿಂದ ಸಂಜೆ 7: 30 ರ ನಡುವೆ ಎರಡು ಸಮಾನ ಸ್ಲಾಟ್‌ಗಳಲ್ಲಿ ಇದು ಪ್ರಸಾರವಾಯಿತು.

ಸಮುದಾಯ ರೇಡಿಯೊ ಕೇಂದ್ರಗಳನ್ನು ಸ್ಥಾಪಿಸುವಾಗ ಶೇ.75 ರಷ್ಟು ವೆಚ್ಚವನ್ನು ಸಚಿವಾಲಯವೇ ಭರಿಸುತ್ತದೆ. ಇದರಲ್ಲಿ ಪ್ರಮುಖ ವೆಚ್ಚ ಒಳಗೊಂಡಿರುತ್ತದೆ, ದೈನಂದಿನ ಕಾರ್ಯಾಚರಣೆಗಳ ವೆಚ್ಚವನ್ನು ರೇಡಿಯೋ ಕೇಂದ್ರವೇ ಭರಿಸುತ್ತದೆ ಎಂದು ಜಾವಡೇಕರ್ ಹೇಳಿದರು. ಪ್ರಸ್ತುತ ಸಮುದಾಯ ರೇಡಿಯೋ ಕೇಂದ್ರಗಳ ಜಾಹೀರಾತು ಪ್ರಸಾರ ಸಮಯ ಗಂಟೆಗೆ 7 ನಿಮಿಷಗಳಾಗಿದ್ದರೆ, ಟಿವಿ ಚಾನೆಲ್‌ಗಳಿಗೆ 12 ನಿಮಿಷಗಳಾಗಿವೆ ಎಂದು ಸಚಿವರು ಹೇಳಿದರು. ಎಲ್ಲಾ ರೇಡಿಯೊ ಕೇಂದ್ರಗಳಿಗೆ ಸಮಾನ ಜಾಹೀರಾತು ಸಮಯವನ್ನು ನೀಡಲು ತಾವು ಉತ್ಸುಕರಾಗಿದ್ದು, ಇದರಿಂದ ಅವರು ಹಣಕಾಸು ನೆರವಿಗಾಗಿ ಮೊರೆ ಇಡುವ ಅಗತ್ಯವಿರುವುದಿಲ್ಲ ಮತ್ತು ಸಮುದಾಯ ರೇಡಿಯೋ ಕೇಂದ್ರಗಳಲ್ಲಿ ಸ್ಥಳೀಯ ಜಾಹೀರಾತುಗಳನ್ನು ಹೆಚ್ಚು ಪ್ರಸಾರ ಮಾಡಬಹುದು ಎಂದು ಅವರು ಹೇಳಿದರು.

ಸಮುದಾಯ ರೇಡಿಯೋ ಸ್ವತಃ ಒಂದು ಸಮುದಾಯವಾಗಿದೆ ಎಂದ ಸಚಿವರು, ಅವುಗಳನ್ನು ‘ಬದಲಾವಣೆಯ ಏಜೆಂಟರು’ ಎಂದು ಬಣ್ಣಿಸಿದರು. ಈ ರೇಡಿಯೋ ಕೇಂದ್ರಗಳು ಪ್ರತಿದಿನ ಲಕ್ಷಾಂತರ ಜನರನ್ನು ತಲುಪುತ್ತಿವೆ, ಶೀಘ್ರದಲ್ಲೇ ಇಂತಹ ರೇಡಿಯೋ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆಯನ್ನು ಸಚಿವಾಲಯವು ಹೊಂದಿದೆ ಎಂದು ಹೇಳಿದರು.

ಕೊರೊನಾವೈರಸ್ ವಿರುದ್ಧದ ಹೋರಾಟವನ್ನು ಮುಂದುವರಿಸುವಂತೆ ಜನರನ್ನು ಪ್ರೋತ್ಸಾಹಿಸಿದ ಸಚಿವರು, ನಾವು ಇತರ ಕಾಯಿಲೆಗಳನ್ನು ಓಡಿಸಿದ ರೀತಿಯಲ್ಲೇ ಇದನ್ನೂ ಓಡಿಸುತ್ತೇವೆ ಎಂದು ಹೇಳಿದರು. ಹೇಗಿದ್ದರೂ ಈಗ ನಾವು, ನಾಲ್ಕು ಹಂತಗಳ ಹೊಸ ಕ್ರಮವನ್ನು ಹೊಂದಿದ್ದೇವೆ, ಅದೆಂದರೆ, ಸಾಧ್ಯವಾದಷ್ಟು ಮನೆಯಲ್ಲೇ ಇರುವುದು, ಆಗಾಗ್ಗೆ ಕೈ ತೊಳೆಯುವುದು, ಹೊರಗೆ ಬಂದಾಗ ಮುಖಗವಸು ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಎಂದು ಸಚಿವರು ತಿಳಿಸಿದರು.

ಸಾಮಾಜಿಕ ಅಂತರ ಮತ್ತು ಆರ್ಥಿಕ ಚಟುವಟಿಕೆಯ ಸವಾಲುಗಳ ನಡುವಿನ ಸಂದಿಗ್ಧತೆ ಕುರಿತು ಮಾತನಾಡಿದ ಸಚಿವರು, “ಜಾನ್ ಭೀ ಜಹಾನ್ ಭಿ”ಮಂತ್ರವನ್ನು ಪುನರುಚ್ಚರಿಸಿದರು. ಕಂಟೈನ್‌ಮೆಂಟ್ ವಲಯಗಳಲ್ಲಿ ನಿರ್ಬಂಧಗಳು ಮುಂದುವರಿದರೆ, ಹಸಿರು ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗುತ್ತಿವೆ ಎಂದು ಹೇಳಿದರು.

ಸಮುದಾಯ ರೇಡಿಯೋಗಳಲ್ಲಿ ಸುದ್ದಿ ಪ್ರಸಾರ ಮಾಡುವ ಪ್ರಮುಖ ಬೇಡಿಕೆಯ ಬಗ್ಗೆ ಸಚಿವರು ಮಾತನಾಡಿ, ಎಫ್‌ಎಂ ಚಾನೆಲ್‌ಗಳಲ್ಲಿರುವ ಹಾಗೆ ಸಮುದಾಯ ರೇಡಿಯೋದಲ್ಲೂ ಸುದ್ದಿ ಪ್ರಸಾರಕ್ಕೆ ಅನುಮತಿ ನೀಡುವ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು. ಚಲಾವಣೆಯಲ್ಲಿರುವ ಸುದ್ದಿಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳ ಸ್ಥಳೀಯ ಮೂಲಗಳನ್ನು ಪರಿಶೀಲಿಸುವ ಮೂಲಕ ಸುಳ್ಳು ಸುದ್ದಿಯ ಭೀತಿಯನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಅವರು ರೇಡಿಯೋ ಕೇಂದ್ರಗಳಿಗೆ ಒತ್ತಾಯಿಸಿದರು. ಇದನ್ನು ಆಕಾಶವಾಣಿಯೊದೊಂದಿಗೆ ಹಂಚಿಕೊಳ್ಳುವುದರಿಂದ ಸತ್ಯದ ವ್ಯಾಪ್ತಿಯನ್ನು ಹೆಚ್ಚಿಸಬಹುದು ಎಂದರು. ಸಚಿವಾಲಯವು ಪಿಐಬಿಯಲ್ಲಿ ಫ್ಯಾಕ್ಟ್ ಚೆಕ್ ಘಟಕವನ್ನು ಸ್ಥಾಪಿಸಿದೆ. ಹಾಗೆಯೇ ಸಮುದಾಯ ರೇಡಿಯೋ ಸಹ ಫ್ಯಾಕ್ಟ್ ಚೆಕ್ ಘಟಕದ ಪಾತ್ರವನ್ನು ವಹಿಸಬಹುದಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು ಇತ್ತೀಚೆಗೆ ಅನಾವರಣಗೊಳಿಸಿದ ಆತ್ಮನಿರ್ಭರ ಭಾರತ್ ಪ್ಯಾಕೇಜ್ ಕುರಿತು ಮಾತನಾಡಿದ ಶ್ರೀ ಜಾವಡೇಕರ್ ಅವರು, ಇದು ಕೃಷಿ ಮತ್ತು ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಸುಧಾರಣೆಗಳನ್ನು ಒಳಗೊಂಡಿರುವ ಸಮಗ್ರ ಪ್ಯಾಕೇಜ್ ಆಗಿದೆ ಮತ್ತು ಈ ಪ್ಯಾಕೇಜ್ ಆಮದನ್ನು ಕಡಿಮೆ ಮಾಡುವ ಮತ್ತು ರಫ್ತು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಪ್ಯಾಕೇಜ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಈ ಉತ್ತೇಜನದ ಬಗ್ಗೆ ಜನರು ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.

ಹಿನ್ನೆಲೆ:

ಸಮುದಾಯ ರೇಡಿಯೋ ಸಾರ್ವಜನಿಕ ರೇಡಿಯೋ (ಆಕಾಶವಾಣಿ) ಮತ್ತು ಖಾಸಗಿ ರೇಡಿಯೋ (ಎಫ್‌ಎಂ) ಜೊತೆಗೆ ರೇಡಿಯೊ ಪ್ರಸಾರದ ಮೂರನೇ ಹಂತವಾಗಿದೆ. ಇದು ಕಡಿಮೆ ಶಕ್ತಿಯ ಎಫ್‌ಎಂ ರೇಡಿಯೊ ಕೇಂದ್ರವಾಗಿದ್ದು, ಸ್ಥಳೀಯ ಹಿತಾಸಕ್ತಿಗಳ ಬಗ್ಗೆ ಗಮನ ಕೇಂದ್ರೀಕರಿಸುತ್ತದೆ. ಸಮುದಾಯದ ಮಾಲೀಕತ್ವದಲ್ಲಿ ಮತ್ತು ಸಮುದಾಯದ ಹಿತದೃಷ್ಟಿಯಿಂದ, 10-15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಮುದಾಯ ರೇಡಿಯೋ ಪ್ರಸಾರವಾಗುತ್ತದೆ.
ಸಮುದಾಯ ರೇಡಿಯೋಗಳಿಗಾಗಿ 2002 ರಲ್ಲಿ ಮೊದಲ ನೀತಿಯನ್ನು ರೂಪಿಸಿದ ನಂತರ ಭಾರತದಲ್ಲಿ ಸಮುದಾಯ ರೇಡಿಯೊಗಳು ಪ್ರಾರಂಭವಾದವು. ಈ ನೀತಿಯು ಸಮುದಾಯ ರೇಡಿಯೋಗಳನ್ನು ಸ್ಥಾಪಿಸಲು ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅವಕಾಶ ಕಲ್ಪಿಸಿತು. ಈ ನೀತಿಯು 2006 ರಲ್ಲಿ ವಿಶಾಲವಾಗಿಸಲಾಯಿತು. ತಳಮಟ್ಟದ ಸಂಸ್ಥೆಗಳಾದ ಎನ್‌ಜಿಒಗಳು, ಕೆವಿಕೆಗಳು ಮತ್ತು ಲಾಭರಹಿತ ಸಂಸ್ಥೆಗಳಿಗೆ ಭಾರತದಲ್ಲಿ ಸಮುದಾಯ ರೇಡಿಯೊಗಳನ್ನು ಸ್ಥಾಪಿಸಲು ಅವಕಾಶ ನೀಡಲಾಯಿತು. ಇಂದು, ಭಾರತವು 290 ಕಾರ್ಯಾನಿರತ ಸಮುದಾಯ ರೇಡಿಯೋ ಕೇಂದ್ರಗಳನ್ನು ಹೊಂದಿದೆ. ಈ ಸಮುದಾಯ ರೇಡಿಯೋ ಕೇಂದ್ರಗಳು ಇತರ ಮಾಧ್ಯಮಗಳ ಉಪಸ್ಥಿತಿ ಸೀಮಿತವಾಗಿರುವ ಕಡೆ ದೇಶದ ಸುಮಾರು 90 ಮಿಲಿಯನ್ ಜನರನ್ನು ತಲುಪುತ್ತಿವೆ. ಈ ಸಮುದಾಯ ರೇಡಿಯೋ ಕೇಂದ್ರಗಳ ಪ್ರಸಾರವು ಸ್ಥಳೀಯ ಭಾಷೆ ಮತ್ತು ಉಪಭಾಷೆಯಲ್ಲಿರುತ್ತದೆ, ಆದ್ದರಿಂದ ಇದು ಸಮುದಾಯದ ಮೇಲೆ ಬೀರುವ ಪರಿಣಾಮ ಹೆಚ್ಚಾಗಿರುತ್ತದೆ.

ಸಮುದಾಯ ರೇಡಿಯೋ ಕೇಂದ್ರಗಳನ್ನು ಹೊಂದಿರುವ ಸಂಸ್ಥೆಗಳ ವಿವರ ಹೀಗಿದೆ:

ಕ್ರ.ಸಂ.       ಸಂಸ್ಥೆಯ ಸ್ವರೂಪ          ಸಮುದಾಯ ರೇಡಿಯೋ ಕೇಂದ್ರಗಳ ಸಂಖ್ಯೆ

1             ಶೈಕ್ಷಣಿಕ ಸಂಸ್ಥೆಗಳು                        130

2             ಎನ್‌ಜಿಒಗಳು                                143

3             ಕೆವಿಕೆಗಳು                                    17

ಒಟ್ಟು      290

ಸಮುದಾಯ ರೇಡಿಯೋವನ್ನು ಬೆಂಬಲಿಸಲು, ಸರ್ಕಾರವು 25 ಕೋಟಿ ರೂ.ಗಳ ಅನುದಾನದೊಂದಿಗೆ “ಭಾರತದಲ್ಲಿ ಸಮುದಾಯ ರೇಡಿಯೋ ಆಂದೋಲನಕ್ಕೆ ಬೆಂಬಲ” ಎಂಬ ಯೋಜನೆಯನ್ನು ಹೊಂದಿದೆ. ಈ ಯೋಜನೆಗೆ ಪ್ರಸಕ್ತ ವರ್ಷದ ಹಂಚಿಕೆ 4.50 ಕೋಟಿ ರೂ.ಗಳಾಗಿವೆ.

Leave a Reply

Your email address will not be published. Required fields are marked *