Literature (ಸಾಹಿತ್ಯ)

ಸಣ್ಣ ಕಥೆ : ಆಶ್ಲೇಷ… heggaddesamachar.com

Spread the love
  • ಪ್ರಮಿತಾ ಶಂಕರ್.

ಶಂಕರ ಮತ್ತು ಗಿರಿಜಾ ಮದುವೆಯಾಗಿ ವರ್ಷಗಳೇ ಉರುಳಿದರೂ ಅವರಿಗೆ ಮಕ್ಕಳ ಭಾಗ್ಯ ಕರುಣಿಸಿರಲಿಲ್ಲ ದೇವರು. ದೇವರೆಡೆಗೆ ಅತೀವ ಒಲುಮೆ ಹೊಂದಿದ್ದ ಅವರಿಗೆ ಭಕ್ತಿಯ ಹೊರತಾಗಿ ಬೇರೆ ವಿಧಾನಗಳು ತಿಳಿದಿರಲಿಲ್ಲ ದೇವರೊಲುಮೆ ಗಳಿಸಿಕೊಳ್ಳಲು. ಯಾರದೋ ಪರಿಚಯಸ್ಥರ ಮಾತಿಗೆ ಬೆಲೆ ಕೊಟ್ಟು ಕೊನೆಗೆ ಸುಬ್ರಹ್ಮಣ್ಯ ಸ್ವಾಮಿಯ ಮೊರೆ ಹೋಗುತ್ತಾರೆ ದಂಪತಿಗಳು.

ಕಾಕತಾಳೀಯವೆಂಬಂತೆ ಒಂದು ವರ್ಷದ ಒಳಗೆ ಗಿರಿಜಾರವರು ಗರ್ಭ ಧರಿಸುತ್ತಾರೆ. ದಂಪತಿಗಳಿಗೆ ಇದು ಸುಬ್ರಹ್ಮಣ್ಯ ಸ್ವಾಮಿಯ ಪ್ರಸಾದವಾಗಿರುತ್ತದೆ. ಶಂಕರನಿಗೆ ಹೆಂಡತಿಯನ್ನು ಎಷ್ಟು ಚೆಂದ ನೋಡಿಕೊಂಡರೂ ಸಾಲದು. ದೇವರ ದಯೆಯಿಂದ ಸ್ವಲ್ಪ ಧನಿಕರಾಗಿದ್ದರು ಆ ದಂಪತಿಗಳು. ಹಾಲು ಹಣ್ಣು ತುಪ್ಪಗಳಲ್ಲೇ ಕೈ ತೊಳೆಸುತ್ತಿದ್ದ ಶಂಕರ ತನ್ನ ಮುದ್ದಿನ ಮಡದಿಯನ್ನು.

ಕಾಲಗಳುರುಳಿದಂತೆ ಗಿರಿಜಾರವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ. ಹುಟ್ಟಿದ ಸುಂದರ ಮಗುವಿಗೆ ಒಂದು ಶುಭ ಮುಹೂರ್ತದಲ್ಲಿ ಪಂಚಮಿ ಎಂದು ನಾಮಕರಣ ಮಾಡುತ್ತಾರೆ. ಪಂಚಮಿಯು ದಿನದಿಂದ ದಿನಕ್ಕೆ ಆರೋಗ್ಯವಂತಳಾಗಿ ಬೆಳೆಯುತ್ತಾಳೆ. ಪಂಚಮಿಗೆ ಆರು ವರ್ಷ ತಲುಪಿದಾಗ ಒಂದು ಕಾರಿನ ಅಪಘಾತ, ಕಾರಿನ ಜೊತೆಗೆ ಗಿರಿಜಾ ಮತ್ತು ಶಂಕರ ಇಬ್ಬರನ್ನೂ ನುಜ್ಜುಗುಜ್ಜಾಗಿಸುತ್ತದೆ.

ಪುಟಾಣಿ ಪಂಚಮಿಯು ಈಗ ತಂದೆ ತಾಯಿಯರನ್ನು ಕಳೆದುಕೊಂಡು ಅವಳ ಅಜ್ಜಿಯ ಆಶ್ರಯದಲ್ಲಿ ಬೆಳೆಯಬೇಕಾಗುತ್ತದೆ. ಅಜ್ಜಿ ಸಾವಿತ್ರಿಯು ಮೊಮ್ಮಗಳಿಗೆ ಆಕೆಯ ಹುಟ್ಟಿನ ಬಗ್ಗೆ ವಿವರಿಸಿದಾಗೆಲ್ಲಾ ಪಂಚಮಿಗೆ ಹಾವುಗಳ ಮೇಲೆ ಇನ್ನಿಲ್ಲದಂತೆ ಒಲವು. ಮನೆಯ ಹತ್ತಿರವಿದ್ದ ನಾಗರ ಬನಕ್ಕೆ ಹೋಗಿ, ಹುತ್ತಗಳ ಬಳಿ ಸ್ವಲ್ಪ ಹೊತ್ತು ಕುಳಿತು ಬರುತ್ತಿದ್ದಳು ಪಂಚಮಿ. ಪಂಚಮಿಗೆ ಹೀಗೆ ಕುಳಿತು ಬರುವುದರಿಂದ ಏನೋ ಒಂದು ರೀತಿಯ ಅವ್ಯಕ್ತ ನೆಮ್ಮದಿಯಾಗುತ್ತಿತ್ತು.

ಪಂಚಮಿಯ ದಿನಚರಿಯಲ್ಲಿ ಈ ಹವ್ಯಾಸ ಹಾಸುಹೊಕ್ಕಾಗಿತ್ತು. ಪಂಚಮಿಯ ಏಳನೆಯ ವರ್ಷದ ಹುಟ್ಟು ಹಬ್ಬದ ದಿನ ಪಂಚಮಿಗೆ ಸಾವಿತ್ರಿಯವರು, ಗಿರಿಜಾ ಮಗಳಿಗೆಂದು ತೆಗೆದಿಟ್ಟಿದ್ದ ಸುಂದರವಾದ ಲಾಕೆಟ್ ಇರುವ ಸರವೊಂದನ್ನು ಉಡುಗೊರೆಯಾಗಿ ನೀಡುತ್ತಾರೆ.

ಸರದ ಅಂದಕ್ಕೆ ಮಾರುಹೋಗಿದ್ದ ಪಂಚಮಿ ದಿನಾಲೂ ಆ ಸರವನ್ನು ಧರಿಸುತ್ತಾ ಇರುತ್ತಾಳೆ. ಹೀಗಿರುವಾಗಲೇ ಒಂದು ದಿನ ನಾಗರ ಪಂಚಮಿಯ ದಿನ ಬಂದೇ ಬಿಟ್ಟಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಪಂಚಮಿ ಹುತ್ತಗಳಿಗೆ ಹಾಲೆರೆಯಲು ತನ್ನ ಓರಗೆಯ ಹೆಣ್ಣುಮಕ್ಕಳೊಂದಿಗೆ ಮನೆಯ ಹತ್ತಿರವಿದ್ದ ನಾಗರ ಬನಕ್ಕೆ ಹೋಗುತ್ತಾಳೆ.

ಹೆಣ್ಣು ಮಕ್ಕಳೆಂದರೆ ಕೇಳಬೇಕೇ? ಸಡಗರ ಸಂಭ್ರಮದ ಜೊತೆಜೊತೆಗೆ ಹೊಸಹೊಸ ಬಟ್ಟೆಗಳು, ಅಂದದ ಬಳೆಗಳು, ಚೆಂದನೆಯ ಕಾಲ್ಗೆಜ್ಜೆ, ಮಾತಿನ ರಸದೌತಣ ಹೀಗೆ ಪೂರ್ತಿ ಬೀದಿಯನ್ನೇ ಸದ್ದು ಮಾಡುತ್ತಾ ನಾಗರಬನದೊಳಕ್ಕೆ ಕಾಲಿಟ್ಟರು.

ಸಣ್ಣ ಮಕ್ಕಳ ಜೊತೆಯಲ್ಲಿ ದೊಡ್ಡವರೂ ಬಂದಿದ್ದರಿಂದ ಮಕ್ಕಳಿಗೆ ಪೂಜೆಯ ರೀತಿ ರಿವಾಜುಗಳನ್ನು ತಿಳಿಸಿ ಮಕ್ಕಳಿಂದ ಹುತ್ತಕ್ಕೆ ಹಾಲೆರೆಯುವಂತೆ ಮಾಡುತ್ತಿದ್ದರು. ಮಕ್ಕಳು ಒಬ್ಬೊಬ್ಬರಾಗಿ ಪೂಜೆಯನ್ನು ಮುಗಿಸಿದ ನಂತರ ಕೊನೆಗುಳಿದವಳು ಪಂಚಮಿ.

ಪಂಚಮಿ ಎಲ್ಲರಂತೆಯೇ ಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಇನ್ನೇನು ಅಲ್ಲಿಂದ ಹೊರಡಬೇಕು ಎನ್ನುವಷ್ಟರಲ್ಲಿ, ಹುತ್ತದಿಂದ ಹಾವು ಹೊರಬಂದು ತನ್ನ ತಲೆಯನ್ನು ಮಾತ್ರ ಹೊರಹಾಕಿ ಹೆಡೆಯಾಡಿಸಿದಾಗ ಪುಟ್ಟ ಪಂಚಮಿ ಹೆದರಿ ವಾಪಾಸ್ಸು ಹೊರಟುಹೋದಳು ತನ್ನ ಸಹಚರರೊಂದಿಗೆ. ಆದರೆ ಹಾವು ಮಾತ್ರ ಪಂಚಮಿಯ ಲಾಕೆಟ್ ಅನ್ನೇ ದೃಷ್ಟಿಸುತ್ತಿತ್ತು.

ಹಾವುಗಳ ಬಗ್ಗೆ ಅತೀವ ಪ್ರೀತಿ ಹೊಂದಿದ್ದ ಪಂಚಮಿಗೆ ತಾನು ಹಾವು ನೋಡಿದ ವಿಷಯ ಬೇರೆಯವರಲ್ಲಿ ಹೇಳಿಕೊಳ್ಳಲು ಮನಸ್ಸಾಗಲಿಲ್ಲ, ಕಾರಣ ಯಾರಾದರೂ ಆ ಹಾವನ್ನು ಹೊಡೆದು ಸಾಯಿಸಿದರೆ ಎಂಬ ಭಯ. ತನ್ನ ಗೆಳತಿಯರ ಬಳಿ ನೀವು ಹಾವನ್ನು ನೋಡಿದಿರಾ ಎಂದು ಕೇಳುತ್ತಾಳೆ ಪುಟಾಣಿ ಪಂಚಮಿ. ಗೆಳತಿಯರು ಇಲ್ಲಪ್ಪ ನಾವು ನೋಡಿಲ್ಲ ನೀನು ನೋಡಿದೆಯಾ ಎಂದು ಮರಳಿ ಪಂಚಮಿಗೆ ಪ್ರಶ್ನೆ ಕೇಳುತ್ತಾರೆ ಪಂಚಮಿಯ ಪುಟ್ಟ ಗೆಳತಿಯರು. ಎಲ್ಲಿ ಅವರಿಗೆ ವಿಷಯ ತಿಳಿಯುತ್ತದೋ ಎಂಬ ಭಯದಿಂದ ಇಲ್ಲಪ್ಪ ನಾನು ನೋಡಿಲ್ಲ ಎಂದುತ್ತರಿಸುತ್ತಾಳೆ ಚಾಲಾಕಿ ಪಂಚಮಿ.

ದಿನಗಳು ಉರುಳುತ್ತಿರುತ್ತದೆ. ಪಂಚಮಿ ತನ್ನ ಶಾಲೆಯಲ್ಲಿ ಎಲ್ಲರಂತೆಯೇ ಓದಿಕೊಳ್ಳುತ್ತಿರುತ್ತಾಳೆ. ಮನದಲ್ಲಿ ಆ ಹಾವಿನ ಚಿತ್ರವೇ ಕಾಣಿಸತೊಡಗುತ್ತದೆ. ಮುಂದಿನ ವರ್ಷದ ನಾಗರಪಂಚಮಿಯ ದಿನಕ್ಕೆ ಕಾಯುತ್ತಿರುತ್ತಾಳೆ ಅವಳು. ಒಮ್ಮೆ ಶಾಲೆಯಲ್ಲಿ ತನ್ನ ಪಠ್ಯದಲ್ಲಿ ಹಾವುಗಳ ಬಗ್ಗೆ ಬಂದಾಗ ಪಂಚಮಿ ಮೈಯೆಲ್ಲಾ ಕಣ್ಣಾಗಿ ಕೇಳಿಸಿಕೊಳ್ಳುತ್ತಿರುತ್ತಾಳೆ. ಶಿಕ್ಷಕಿಯು ವಿವರಿಸುತ್ತಾ ಆಶ್ಲೇಷ ಎಂಬುದೂ ಹಾವಿಗಿರುವ ಇನ್ನೊಂದು ಹೆಸರು ಎಂದಾಗ ಪಂಚಮಿಗೆ ಆ ಹೆಸರು ಹಾಗೆಯೇ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ತಾನು ನೋಡಿದ್ದ ಹಾವಿಗೆ ಆಶ್ಲೇಷವೆಂದು ನಾಮಕರಣ ಮಾಡಿಬಿಡುತ್ತಾಳವಳು.

ಮತ್ತೊಂದು ನಾಗರಪಂಚಮಿಯು ಹತ್ತಿರ ಬರುತ್ತದೆ. ಪಂಚಮಿಗೆ ಈ ಬಾರಿ ಎಲ್ಲಿಲ್ಲದ ಉತ್ಸಾಹ. ಲಘುಬಗೆಯಲ್ಲಿಯೇ ತಯಾರಿ ನಡೆಸುತ್ತಾಳೆ. ಸಾವಿತ್ರಿಯವರಿಗೂ ಆಶ್ಚರ್ಯ ಪಂಚಮಿಯ ಉಲ್ಲಾಸದ ಬಗ್ಗೆ. ಏನೋ ದೇವರ ಮೇಲಿನ ಅತೀವ ಭಕ್ತಿ ಎಂದು ಸುಮ್ಮನಾಗುತ್ತಾರವರು.

ಹಿಂದಿನ ವರ್ಷದಂತೆಯೇ ಪಂಚಮಿ ತನ್ನ ಗೆಳತಿಯರು ಹಾಗೂ ಅವರ ಅಮ್ಮಂದಿರೊಡನೆ ನಾಗರ ಬನಕ್ಕೆ ಪೂಜೆ ಸಲ್ಲಿಸಲು ಬರುತ್ತಾಳೆ. ಎಂದಿನಂತೆಯೇ ಕೊನೆಯಲ್ಲಿ ಪೂಜೆ ಸಲ್ಲಿಸಲು ಪಂಚಮಿ ನಿಂತಾಗ ಈ ಬಾರಿ ಆ ಹಾವು ಅವಳು ಹಾಲೆರೆಯುವ ಮೊದಲೇ ಹುತ್ತದಿಂದ ಹೊರಬಂದಿರುತ್ತದೆ. ಪಂಚಮಿಗೆ ಭಯ ಖುಷಿಯ ಸಮ್ಮಿಳಿತ. ಗೆಳತಿಯರ ಮುಖ ನೋಡಿದಾಗ ಬೇಗ ಪೂಜೆ ಮಾಡು ಎನ್ನುತ್ತಾರೆ. ತಡವಾಗುತ್ತಿದೆಯೆಂಬ ಕಾಳಜಿಯವರಲ್ಲಿ. ಪ್ರಶ್ನಾರ್ಥಕ ಮುಖ ಮಾಡಿಕೊಂಡು ಪಂಚಮಿ ನಿಮಗೆ ಹಾವು ಕಾಣಿಸ್ತಿದೆಯಾ ಕೇಳಿದಾಗ ನಿನಗೆಲ್ಲೋ ಭ್ರಮೆ ಬೇಗ ಪೂಜೆ ಮುಗಿಸಿ ಬಾ ನಾವು ಅಲ್ಲಿ ಹೋಗ್ತೀವಿ ಎನ್ನುತ್ತಲೇ ಅವರು ಹೊರಡುತ್ತಾರೆ. ಸ್ವಲ್ಪ ಸಮಯದಲ್ಲಿ ಅವರೆಲ್ಲಾ ಅಲ್ಲಲ್ಲಿ ಹರಟೆ ಹೊಡೆಯುತ್ತಿರುವ ದೊಡ್ಡವರ ಬಳಿ ಸೇರಿಕೊಳ್ಳುತ್ತಾರೆ.

ಪಂಚಮಿಯು ತನ್ನ ಪೂಜೆಯನ್ನು ಮುಂದುವರೆಸುತ್ತಾಳೆ. ಅಲ್ಲಿದ್ದ ಹಾವು ಆ ಪೂಜೆಯನ್ನು ಗಮನವಿಟ್ಟು ನೋಡುತ್ತಿರುವಂತೆ ಪಂಚಮಿಗೆ ಭಾಸವಾಗುತ್ತದೆ. ಯಾರೊಡನೆಯಾದರೂ ಹೇಳಿಕೊಳ್ಳಲು ಭಯ ಪಂಚಮಿಗೆ.

ಪೂಜೆ ಮುಗಿಸುತ್ತಾಳೆ ಪಂಚಮಿ. ಕೊನೆಯಲ್ಲಿ ಹಾಲೆರೆಯುವ ಸಮಯ, ಅದಕ್ಕಾಗಿ ಕಾದು ಕುಳಿತಿರುವಂತೆ ಆ ಸರ್ಪ ತನ್ನ ಬಾಯಗಲಿಸಿ ಪಂಚಮಿಯು ಸುರಿಯುತ್ತಿದ್ದ ಹಾಲಿನ ಚೊಂಬಿಗೆ ತನ್ನ ಮುಖವೊಡ್ಡುತ್ತದೆ. ಪಂಚಮಿಗೂ ಆ ಹಾವಿನ ಮೇಲೆ ಕರುಣೆಯುಕ್ಕಿ ಹಾಲನ್ನು ಪೂರ್ತಿ ಆ ಸರ್ಪಕ್ಕೆ ನೀಡಿ ಹೊರಡಲು ಅನುವಾಗುತ್ತಾಳೆ.

ಹೊರಡುವ ಮೊದಲು ಹಾವಿನತ್ತ ತಿರುಗಿ, ನೀನು ಯಾಕೆ ನನಗೆ ಮಾತ್ರ ಕಾಣಿಸ್ತೀಯಾ ಅಂತ ನನಗೆ ಗೊತ್ತಿಲ್ಲ. ಆದರೆ ನೀನು ನನಗೆ ಯಾವುದೇ ರೀತಿಯ ತೊಂದರೆ ಮಾಡುವುದಿಲ್ಲ ಅಂತ ನನಗೆ ಗೊತ್ತಾಯಿತು. ನಿನ್ನ ನೋಡಿದರೆ ನೀನು ಯಾವುದೋ ಜನ್ಮದಲ್ಲಿ ನನಗೆ ತುಂಬಾ ಬೇಕಾದವನು ಇರಬೇಕೆಂದು ಅನ್ನಿಸುತ್ತದೆ. ತುಂಬಾ ಥ್ಯಾಂಕ್ಸ್ ನಿನಗೆ. ಅಂದ ಹಾಗೆ ನಿನಗೆ ಹೊಸ ಹೆಸರು ಇಟ್ಟಿದೀನಿ ಆಶ್ಲೇಷ ಎಂದು. ನಿನಗೆ ಇಷ್ಟ ಆಯ್ತು ಅಲ್ವಾ?.. ಹೀಗೆ ಮುಂದುವರೆಸುತ್ತಿದ್ದಳು ಅಷ್ಟರಲ್ಲಿ ಯಾರೋ ಪಂಚಮಿ ಬೇಗ ಬಾ ಎಂದು ಕೂಗುತ್ತಾರೆ.

ಪಂಚಮಿಯು ಸರಿ ನಾನಿನ್ನೂ ಹೊರಡುತ್ತೇನೆ. ಆಮೇಲೆ ಈ ಭಾನುವಾರ ಸಂಜೆ ಬರ್ತೀನಿ ನೀನಿಲ್ಲೇ ಇರು. ಇನ್ಮೇಲೆ ನಾವಿಬ್ರೂ ಫ್ರೆಂಡ್ಸ್ ಆಯ್ತಾ ಎನ್ನುತ್ತಾ ಹೊರಡುತ್ತಾಳೆ. ಪಂಚಮಿ ತಿರುಗಿ ನೋಡಿದಾಗ ಆ ಹಾವು ಅವಳತ್ತ ನೋಡುತ್ತಲೇ ಮುಗುಳ್ನಕ್ಕಂತೆ ಅವಳಿಗನಿಸುತ್ತದೆ.

ವಾರಪೂರ್ತಿ ಪಂಚಮಿ ಆಶ್ಲೇಷನ ಜೊತೆಗಿನ ಭೇಟಿಯನ್ನು ಎದುರು ನೋಡುತ್ತಿದ್ದಳು. ಅಂತೂ ಭಾನುವಾರ ಬಂದೇ ಬಿಟ್ಟಿತ್ತು. ಪಂಚಮಿಯು ಆಶ್ಲೇಷನಿಗೆ ಪ್ರಿಯವಾದ ಹಾಲು, ಸ್ವಲ್ಪ ಉಡುಗೊರೆ ಹಾಗೂ ಅರಶಿನವನ್ನು ತೆಗೆದುಕೊಂಡು ಅಜ್ಜಿಯ ಬಳಿ ಬನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಡುತ್ತಾಳೆ.

ನೇರವಾಗಿ ನಾಗರ ಬನಕ್ಕೆ ಬಂದ ಪಂಚಮಿ ಆಶ್ಲೇಷನನ್ನು ಹುಡುಕುತ್ತಾಳೆ. ಎಲ್ಲಿಯೂ ಆಶ್ಲೇಷ ಕಾಣಸಿಗದಿದ್ದಾಗ, ಹುತ್ತದ ಬಳಿಯಿದ್ದ ನಾಗರ ಕಲ್ಲಿಗೆ ಅರಶಿನವನ್ನು ಹಚ್ಚುತ್ತಾಳೆ. ಮತ್ತೆ ಸ್ವಲ್ಪ ಸಮಯ ಅಲ್ಲಿಯೇ ನಿಂತು ಆಶ್ಲೇಷನಿಗಾಗಿ ಕಾಯುತ್ತಾಳೆ. ಎಲ್ಲಿಯೂ ಹಾವಿನ ಸುಳಿವು ಸಿಗದಿದ್ದಾಗ, ಅದೊಂದು ಪ್ರಾಣಿ, ನಾನು ಮಾತನಾಡಿರೋದು ಅದಕ್ಕೆ ಹೇಗೆ ಅರ್ಥ ಆಗಬೇಕು, ಪಾಪ… ಈ ಹಾಲನ್ನು ಏನು ಮಾಡಲಿ ಎನ್ನುತ್ತಾ ಪುಟಾಣಿ ಕೈಗಳಿಂದ ಹಾಲನ್ನು ನಾಗರ ಕಲ್ಲಿಗೆ ಎರೆಯುವಷ್ಟರಲ್ಲಿ, ಅದಕ್ಕಾಗಿಯೇ ಕಾಯುತ್ತಿರುವಂತೆ ಆಶ್ಲೇಷ ಎದುರಿಗೆ ಬಂದಿತ್ತು. ತುಸು ಕೋಪಗೊಂಡ ಪುಟಾಣಿ, ಎಷ್ಟು ಕಾಯ್ತಿದ್ದೆ ಗೊತ್ತಾ… ನೀನು ನೋಡಿದರೆ ಹಾಲು ಕುಡಿಯೋಕೆ ಮಾತ್ರ ಬೇಗ ಬರ್ತೀಯಾ ಹೋಗು ನಿನ್ನ ಬಳಿ ನಾನು ಮಾತನಾಡೋದಿಲ್ಲ.. ಎನ್ನುತ್ತಾ ಮುಖ ಊದಿಸಿಕೊಂಡು ಪಕ್ಕಕ್ಕೆ ತಿರುಗುತ್ತಾಳೆ ಮುದ್ದು ಪಂಚಮಿ.

ತನ್ನ ತಪ್ಪಿನ ಅರಿವಾದಂತೆ ಆಶ್ಲೇಷನು ಪಂಚಮಿಯ ಮುಖಕ್ಕೆದುರಾಗಿ ತನ್ನ ಹೆಡೆ ಬಿಚ್ಚಿ ನಿಂತಾಗ, ಚೂಟಿ ಪಂಚಮಿ ತನ್ನ ಮುಖವನ್ನು ಇನ್ನೊಂದು ಪಕ್ಕಕ್ಕೆ ಸರಿಸುತ್ತಾಳೆ. ಆಶ್ಲೇಷ ಬಿಡುವನೇನು? ಮತ್ತೆ ಪಂಚಮಿಗೆದುರಾಗಿ ನಿಲ್ಲುತ್ತಾನೆ. ಅಷ್ಟಾದರೂ ಪಂಚಮಿಯ ಕೋಪ ಕಡಿಮೆಯಾಗದಿದ್ದಾಗ, ಆಶ್ಲೇಷ ಬೇಸರಗೊಂಡು, ತನ್ನ ಮನೆ ಅಂದರೆ ಹುತ್ತದ ಹಾದಿ ಹಿಡಿಯುತ್ತಾನೆ. ಪಂಚಮಿಗೆ ಆಗ ಪಶ್ಚಾತ್ತಾಪ… ಓಡಿ ಹೋಗಿ ಹುತ್ತದೆದುರು ಕುಳಿತು ಆಶ್ಲೇಷನಿಗೆ ಹಾಲನ್ನು ನೀಡುತ್ತಾಳೆ. ಅಲ್ಲಿಗೆ ಇಬ್ಬರ ಕೋಪವೂ ನದಿಯಂತೆ ಹರಿದು ಹೋಗುತ್ತದೆ.

ಪಂಚಮಿ ತನಗೆ ತೋಚಿದ ವಿಷಯಗಳನ್ನೆಲ್ಲಾ ಆಶ್ಲೇಷನಲ್ಲಿ ಹೇಳುತ್ತಾಳೆ. ಇನ್ನೂ ಶಾಲೆಯಲ್ಲಿ ಕಲಿಯುತ್ತಿರುವ ಪಂಚಮಿಗೆ ಹಾವಿನ ಜೀವನ ಶೈಲಿಯ ಸಂಪೂರ್ಣ ಮಾಹಿತಿ ಇರಲಿಲ್ಲ. ಆದುದರಿಂದಲೇ ಪಂಚಮಿ ಆಶ್ಲೇಷನಿಗಾಗಿ ತನ್ನ ಪೆನ್ಸಿಲ್, ಬುಕ್ ಎಲ್ಲವನ್ನೂ ತೆಗೆದುಕೊಂಡು ಬಂದಿದ್ದಳು. ನೋಡು ಇದು ನಿನಗೆ, ಚೆನ್ನಾಗಿ ಬರಿ. ನಿನಗೆ ಶಾಲೇಲಿ ಜಾಸ್ತಿ ಹೋಮ್ ವರ್ಕ್ ಕೊಡ್ತಾರಾ? ನನಗೆ ಜಾಸ್ತಿ ಕೊಡ್ತಾರೆ. ನೀನು ಇದೇ ಬುಕ್ ಅಲ್ಲಿ ಬರಿ ಆಯ್ತಾ? ನಿಮ್ಮ ಶಾಲೆಗೆ ಯಾರು ಫಸ್ಟ್ ಬರೋದು? ನಮ್ಮ ಶಾಲೇಲಿ ನಾನೇ ಫಸ್ಟ್ ಗೊತ್ತಾ? ಹೀಗೆ ಪಂಚಮಿಯ ಮಾತುಕತೆ ಮುಂದುವರಿದಿತ್ತು. ಆಶ್ಲೇಷನಿಂದ ಹೆಡೆಯಾಡಿಸುವ ಉತ್ತರವೊಂದೇ. ಸ್ವಲ್ಪ ಸಮಯ ಕಳೆದ ನಂತರ ಪಂಚಮಿಗೆ ಕತ್ತಲಾದ ಅರಿವಾಗುತ್ತದೆ. ನನಗೆ ತಡವಾಗುತ್ತದೆ ನಾನು ಹೋಗ್ತೀನಿ ಮತ್ತೆ ಮುಂದಿನ ಭಾನುವಾರ ಬರ್ತೇನೆ ಎನ್ನುತ್ತಾ ಪಂಚಮಿ ತನ್ನ ಮನೆಯ ಕಡೆಗೆ ಹೊರಡುತ್ತಾಳೆ. ಆಶ್ಲೇಷನಿಗೆ ಏನನ್ನಿಸಿತೋ ಏನೋ ಅದು ಕೂಡ ಪಂಚಮಿಯನ್ನು ಹಿಂಬಾಲಿಸಿಕೊಂಡು ಮನೆಗಳು ಸಿಗುವ ತನಕ ಪಂಚಮಿಯೊಂದಿಗೆ ಹೋಗಿರುತ್ತದೆ, ಪಂಚಮಿಗೆ ತಿಳಿಯದೇನೆ…

ಸಾವಿತ್ರಿಯವರು ಮನೆಗೆ ಬಂದ ಮೊಮ್ಮಗಳಿಗೆ ಯಾಕೆ ತಡವಾಯಿತು ಪುಟ್ಟಾ ಎಂದು ಕೇಳುತ್ತಾರೆ. ಪಂಚಮಿಯು ಬನದಲ್ಲಿ ಕುಳಿತುಕೊಳ್ಳೋಕೆ ನನಗೆ ಇಷ್ಟ ಆಯ್ತು ಅಜ್ಜಿ ಎಂದು ಹೇಳುತ್ತಾಳೆ. ಹೌದಾ ಸರಿ ಪುಟ್ಟಿ, ನಿಂಗೆ ಸಂತೋಷ ಅಲ್ಲಿ ಸಿಗುತ್ತೆ ಅಂದ್ರೆ ಹೋಗು ಮರಿ ಎನ್ನುತ್ತಾರೆ ಸಾವಿತ್ರಿ. ತಬ್ಬಲಿ ಮಗುವಿನ ಸಂತೋಷವೇ ಮುಖ್ಯವಾಗಿತ್ತು ವಯಸ್ಸಾದ ಸಾವಿತ್ರಿಯವರಿಗೆ.

ನಿಧಾನವಾಗಿ ಪಂಚಮಿ ಆಶ್ಲೇಷನ ಭಾವಗಳನ್ನು ಓದಲು ಅರಿತಿದ್ದಳು. ಹೆಡೆಯಾಡಿಸುತ್ತಾ ಅವಳೆದುರಿದ್ದರೆ ಖುಷಿಯಾಗಿದೆಯೆಂದೂ, ಹೆಡೆ ಬಗ್ಗಿಸಿ ಸುಮ್ಮನಿದ್ದರೆ ಬೇಸರವೆಂದೂ ಅರಿತುಕೊಂಡಿದ್ದಳು. ಪಂಚಮಿಗೆ ಯಾವುದಾದರೂ ವಿಷಯದಲ್ಲಿ ಗೊಂದಲವಿದ್ದರೆ ಅದನ್ನು ನಿವಾರಿಸುವವನೂ ಆಶ್ಲೇಷನೇ… ಅವರ ಗೆಳೆತನ ಹೈ ಫೈ ಕೊಡುವ ಮಟ್ಟಿಗೆ ಬೆಳೆದಿತ್ತು. ಆಶ್ಲೇಷನಿಗೆ ಅದನ್ನು ಕಲಿಸುವ ವೇಳೆಗೆ ಪಂಚಮಿಗೆ ಸಾಕು ಸಾಕಾಗಿತ್ತು. ಪಂಚಮಿ ತನ್ನ ಕೈ ಎತ್ತಿ ನಿಧಾನವಾಗಿ ಆಶ್ಲೇಷನ ತಲೆಯ ಬಳಿ ಹಿಡಿದರೆ ಸಾಕು ಆಶ್ಲೇಷ ಹೆದರಿಕೊಳ್ಳುತ್ತಿದ್ದ. ಕೊನೆಕೊನೆಯಲ್ಲಿ ಅದನ್ನು ಆಶ್ಲೇಷ ರೂಢಿ ಮಾಡಿಕೊಂಡಿದ್ದ.

ಪಂಚಮಿಯ ಪ್ರತಿ ಭಾನುವಾರ ಹೀಗೆಯೇ ಕಳೆಯುತ್ತಿತ್ತು. ವರ್ಷಗಳು ಉರುಳಿದವು, ಹಲವು ನಾಗರ ಪಂಚಮಿಗಳು ಕಳೆಯಿತು, ಪಂಚಮಿಯು ಬೆಳೆದು ದೊಡ್ಡವಳಾದಳು. ಎಷ್ಟೇ ಕಷ್ಟ ಬಂದರೂ ಪಂಚಮಿಯು ಭಾನುವಾರ ನಾಗರ ಬನಕ್ಕೆ ಹೋಗಿ ಬರುವುದು ನಿಲ್ಲಿಸಲಿಲ್ಲ. ಮೊದಲಿಗೆಲ್ಲಾ ಪಂಚಮಿಯು ಹೋಗುವಾಗ ಒಬ್ಬಳೇ ಹೋಗುತ್ತಿದ್ದಳು. ಇತ್ತೀಚೆಗೆ ಅವಳು ಬರುವ ಸಪ್ಪಳವನ್ನರಿತೋ ಏನೋ, ಪಂಚಮಿ ಬರುವ ಸಮಯಕ್ಕೆ ಆಶ್ಲೇಷ ಬನದ ತುದಿಗೆ ಬಂದು ನಿಂತಿರುತ್ತಿದ್ದ, ಇದೂ ಕೂಡ ಪಂಚಮಿಯ ಅರಿವಿಗೆ ಬರದೇನೇ…

ಪಂಚಮಿಗೀಗ ಹದಿನೇಳರ ಹರಯ. ಹೀಗಿರುವಾಗಲೊಂದು ದಿನ ಭಾನುವಾರ ಪಂಚಮಿಯು ಎಂದಿನಂತೆಯೇ ಅಜ್ಜಿಗೆ ಹೇಳಿ ತಾನಿನ್ನು ಬನಕ್ಕೆ ಹೋಗಿ ಬರುತ್ತೇನೆ ಎಂದು ನಾಗರ ಬನದೆಡೆ ಹೊರಡುತ್ತಾಳೆ. ಪಂಚಮಿಯ ಪ್ರತಿ ಭಾನುವಾರದ ಈ ರೂಢಿಯನ್ನು ತಿಳಿದು ಯಾರೋ ಇಬ್ಬರು ಕಿಡಿಗೇಡಿಗಳು ಪಂಚಮಿಯನ್ನು ಹಿಂಬಾಲಿಸಿ ಹೊರಡುತ್ತಾರೆ. ಪಂಚಮಿಗೆ ಇದಾವುದರ ಅರಿವಿಲ್ಲ, ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿರುತ್ತಾಳೆ. ಪಂಚಮಿಗೆ ಆಶ್ಲೇಷನ ಕಾವಲಿದೆ ಎನ್ನುವುದು ಆ ಕಿಡಿಗೇಡಿಗಳಿಗೆ ತಿಳಿದಿರಲಿಲ್ಲ. ಆ ನಾಗರ ಬನದ ಮಧ್ಯ ಭಾಗಕ್ಕೆ ಪಂಚಮಿಯು ಬರುವಷ್ಟರಲ್ಲಿ, ಅವಳನ್ನು ಹಿಂಬಾಲಿಸಿ ಬಂದಿದ್ದ ಇಬ್ಬರು ಅವಳ ಮೇಲೆ ಆಕ್ರಮಣಕ್ಕೆ ಮುಂದಾಗುತ್ತಾರೆ. ಪಂಚಮಿಯ ನೆರಳಿನಂತೆ ಕಾವಲಿರುತ್ತಿದ್ದ ಆಶ್ಲೇಷನು ತಕ್ಷಣ ಅವರ ಮುಂದೆ ಪ್ರತ್ಯಕ್ಷನಾಗುತ್ತಾನೆ. ಕಿಡಿಗೇಡಿಗಳಲ್ಲೊಬ್ಬ ಆಶ್ಲೇಷನಿಗೆ ತಾನು ತಂದಿದ್ದ ಚಾಕುವಿನಿಂದ ತಿವಿಯುತ್ತಾನೆ. ಸ್ವಲ್ಪ ದೊಡ್ಡ ಗಾಯವೇ ಆಗಿರುವುದರಿಂದ ಆಶ್ಲೇಷನಿಗೆ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗಿರುತ್ತದೆ. ಆದರೆ ಕಿಡಿಗೇಡಿಗಳು ಪಂಚಮಿಯನ್ನು ಹಿಡಿದು ಎಳೆಯುವುದನ್ನು ಕಂಡ ಆಶ್ಲೇಷ ಬುಸುಗುಟ್ಟುತ್ತಾ ಹೋಗಿ ಒಬ್ಬನ ಕುತ್ತಿಗೆಗೆ ಬಲವಾಗಿ ಕಚ್ಚುತ್ತಾನೆ. ಅದನ್ನು ಕಂಡ ಇನ್ನೊಬ್ಬ ಅವಾಕ್ಕಾಗುತ್ತಾನೆ. ಅವನು ಸುಧಾರಿಸುವಷ್ಟರಲ್ಲಿ ಆಶ್ಲೇಷ ಅವನ ಹಣೆಗೆ ಕಚ್ಚುತ್ತಾನೆ. ಅತೀ ವಿಷ ಅವರಿಬ್ಬರ ದೇಹಕ್ಕೆ ಸೇರಿದ ಪರಿಣಾಮ ಆ ಇಬ್ಬರು ಕಿಡಿಗೇಡಿಗಳು ಸ್ಥಳದಲ್ಲೇ ಮರಣಿಸುತ್ತಾರೆ. ಆಶ್ಲೇಷನಿಗೆ ಆದ ಅತೀವ ರಕ್ತಸ್ರಾವದಿಂದ ಆಶ್ಲೇಷನು ಒದ್ದಾಡುತ್ತಾ ಸ್ವಲ್ಪ ಸಮಯದಲ್ಲಿ ತನ್ನ ಪ್ರಾಣ ಕಳೆದುಕೊಳ್ಳುತ್ತಾನೆ. ಪಂಚಮಿಗೆ ಎಲ್ಲವನ್ನು ಅರ್ಥೈಸಿಕೊಳ್ಳಲು ಕೊಂಚ ಸಮಯ ಬೇಕಾಗಿರುತ್ತದೆ. ನಿಧಾನವಾಗಿ ಅರ್ಥ ಮಾಡಿಕೊಂಡ ಪಂಚಮಿಯ ಮನದಲ್ಲಿ ಹೇಳಲಾಗದ ವೇದನೆ. ಹೃದಯದ ಬಡಿತ ಏರುಪೇರಾದ ಅನುಭವ. ಇಡೀ ದೇಹವೇ ಯಾವುದೋ ಒಂದು ನೋವಲ್ಲಿರುವಂತಹ ಭಾವ. ಏನಾಗುತ್ತಿದೆ ತನಗೆ? ಆಶ್ಲೇಷನ ಸಾವು ಅರಗಿಸಿಕೊಳ್ಳಲಾಗುತ್ತಿಲ್ಲವೇ ನನಗೆ? ಅಷ್ಟು ಮುಖ್ಯನೇ ಇವನು ನನಗೆ? ಅಮ್ಮ ಅಪ್ಪನ ಸಾವಿನ ಸಮಯದಲ್ಲೂ ಹೀಗೆ ಆಗಿತ್ತಾ? ಎಂದುಕೊಳ್ಳುತ್ತಾ ಪಂಚಮಿಯು ಆಶ್ಲೇಷನನ್ನು ತನ್ನ ಮಡಿಲಲ್ಲಿ ಮಲಗಿಸಿಕೊಳ್ಳುತ್ತಾಳೆ. ಸ್ವಲ್ಪ ಸಮಯದಲ್ಲಿ ಪಂಚಮಿಗೆ ಇಡೀ ಭೂಮಿ ತಿರುಗಿದಂತಾಗಿ ಅಲ್ಲೇ ತಲೆ ತಿರುಗಿ ಬೀಳುತ್ತಾಳೆ.

ಸಂಜೆಯ ತನಕವೂ ಪಂಚಮಿಯ ಸುಳಿವಿಲ್ಲದಾಗ ಸಾವಿತ್ರಿಯವರು ಭಯಗೊಂಡು ನಾಗರ ಬನದ ಕಡೆಗೆ ಹೊರಡುತ್ತಾರೆ. ಬನದ ಬಳಿ ಬಂದು ನೋಡುತ್ತಾರೆ ಅಲ್ಲಿ ಪಂಚಮಿ ಅಲ್ಲಿ ಪ್ರಜ್ಞೆಯಿಲ್ಲದೆ ಬಿದ್ದಿದ್ದು, ಹಾವೊಂದು ಅವಳ ಮಡಿಲಲ್ಲಿ ಸತ್ತು ಬಿದ್ದಿರುವುದನ್ನು ನೋಡುತ್ತಾರೆ. ಪಂಚಮೀ… ಪುಟ್ಟಿ ಎನ್ನುತ್ತಾ ಪಂಚಮಿಯನ್ನು ಎಬ್ಬಿಸಲು ನೋಡುತ್ತಾರೆ ಪಂಚಮಿಯ ದೇಹ ನಿಶ್ಚೇತನವಾಗಿರುತ್ತದೆ. ಜೀವ ಹೋಗಿ ಯಾವುದೋ ಕಾಲವಾಗಿರುತ್ತದೆ. ಸಾವಿತ್ರಿಯವರು ಭಯಗೊಂಡು ಊರಿನವರನ್ನೆಲ್ಲಾ ಕರೆತರುತ್ತಾರೆ ಜೊತೆಗೆ ಡಾಕ್ಟರ್ ಅನ್ನು ಕೂಡ. ಯಾರೂ ಬಂದರೂನೂ ಸತ್ಯವನ್ನು ಸುಳ್ಳು ಮಾಡಲಾಗುವುದಿಲ್ಲ. ಪಂಚಮಿಯ ಆತ್ಮ ದೇಹದಿಂದ ದೂರಾಗಿ ಪಂಚಭೂತಗಳಲ್ಲಿ ಲೀನಾಗಿ ಅದೆಷ್ಟೋ ಸಮಯವಾಗಿದೆಯೆಂಬ ಸತ್ಯ ಬಲು ಕಠಿಣವಾಗಿರುತ್ತದೆ ಎಲ್ಲರಿಗೂ. ಸಾವಿತ್ರಿಯವರೂ ಅಂತ ದುಃಖದ ಸಮಯದಲ್ಲೂ ತಮ್ಮ ಸಮಯ ಪ್ರಜ್ಞೆ ಮರೆಯಲಿಲ್ಲ. ಅದೇನನ್ನಿಸಿತೋ ಅವರಿಗೆ, ಮೊಮ್ಮಗಳನ್ನು ಆ ಹಾವಿನ ಜೊತೆಯಲ್ಲಿ ಸುಟ್ಟು ಬಿಡಲು ಹೇಳಿದರು. ಊರಿನವರು ಹಾಗೆಯೇ ಸಾವಿತ್ರಿಯವರ ಮಾತನ್ನು ನಡೆಸಿದರು ಕೂಡ. ಅವ್ಯಕ್ತ ಬಂಧದಲ್ಲಿ ವಿವಿಧ ಮಜಲಿನಲ್ಲಿ ಜೊತೆಯಾಗಿದ್ದ ಎರಡು ಜೀವಗಳು ಸಾವಿನಲ್ಲಿ ಅಂತ್ಯವಾಗಿತ್ತು.

Leave a Reply

Your email address will not be published. Required fields are marked *