ಸಂಪ್ರದಾಯ ಬದ್ದವಾಗಿ ಮೇಳೈಸುವ ವಿಶಿಷ್ಟ ಆಚರಣೆಯ  ಹೋಳಿಹಬ್ಬ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ


      ವಸಂತ ಋತುವಿನ ಆಗಮನವನ್ನು ಸಂಭ್ರಮೋಲ್ಲಾಸದಿಂದ ಸಾಂಕೇತಿಕವಾಗಿ ಸ್ವಾಗತಿಸುತ್ತಾ ವಿಶಿಷ್ಟವಾಗಿ ಕುಡುಬಿ ಜನಾಂಗ ನಡೆಸುವ ವಾರ್ಷಿಕ ವೈಶಿಷ್ಟ್ಯ ಪೂರ್ಣವಾದ  ಹೋಳಿಉತ್ಸವ,  ಹೋಳಿಹಬ್ಬ ಅಥವಾ ಹೋಳಿಕುಣಿತ.  ಇಂದಿಗೂ ಸಂಪ್ರದಾಯ ಬದ್ದವಾಗಿ‌ ಮೇಳೈಸುತ್ತಾ ತಮ್ಮ ಮೂಲ ಸಂಸ್ಕೃತಿ ಹಾಗೂ ಏಕತೆಯನ್ನು ‌ಗಟ್ಟಿ‌ಗೊಳಿಸುವ ಭಾವೈಕ್ಯದ ಹೋಳಿ ಆಚರಣೆಯನ್ನು ಚಾಚು ತಪ್ಪದೆ ಭಯ ಭಕ್ತಿಯಿಂದ  ಕುಡುಬಿ ಸಮಾಜದ ಜನರು ಆಚರಿಸಿಕೊಂಡು‌ ಬರುತ್ತಿ ದ್ದಾರೆ.  ಗೋವಾದಿಂದ ವಲಸೆ‌ಬಂದು  ಕರಾವಳಿ ಕರ್ನಾಟಕದ ಉಡುಪಿ, ಕುಂದಾಪುರ, ಕಾರ್ಕಳ, ಮಂರ್ದಾತಿ, ಶಿರಿಯಾರ, ಹಿಲಿಯಾಣ,ಗೋಳಿಅಂಗಡಿ, ಹಾಲಾಡಿ, ಹುಣ್ಸಮಕ್ಕಿ, ಹೆಬ್ರಿ, ಮುದ್ರಾಡಿ ಹಾಗೂ  ಆಸುಪಾಸಿನ ಊರುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುಡುಬಿಯವರು ನೆಲೆಸಿದ್ದಾರೆ.

     ಐದು ದಿನಗಳು ಸಂಭ್ರಮದಿಂದ ಹೋಳಿ ಹಬ್ಬದ ಆಚರಣೆ ನಡೆಯಲಿದ್ದು ಕುಡುಬಿ ಸಮುದಾಯದವರು ತಮ್ಮ ದಿನ ನಿತ್ಯದ  ಕೆಲಸ ಕಾರ್ಯ ಗಳಿಂದ ಬಿಡುವು ಮಾಡಿಕೊಂಡು ಹೋಳಿ ಕುಣಿತದಲ್ಲಿ ಪಾಲ್ಗೋಳ್ಳಲು ಸಿದ್ದತೆ ನಡೆಸುತ್ತಿದ್ದಾರೆ. ಈ ಹಬ್ಬ ಪಾಲ್ಗುಣ ಮಾಸದ ಏಕಾದಶಿಯಿಂದ ಹುಣ್ಣುಮೆವರೆಗೆ ಇರುತ್ತದೆ. ಕುಡುಬಿಯವರಲ್ಲಿ  ಕೂಡುಕಟ್ಟು ಅಥವಾ ಕೂಡಳಿಕೆ ಎಂಬ ಸಂಘಟನೆಯಿದ್ದು. ಕೂಡುಕಟ್ಟಿಗೆ  ಒಬ್ಬ ಯಜಮಾನ  ಅಥವಾ ಗುರಿಕಾರ ಇರುತ್ತಾರೆ. ಹೋಳಿ ಹಬ್ಬದ ಆಚರಣೆಯಲ್ಲಿ  ಕೂಡುವಳಿಕೆಯ ಯಜಮಾನ  ತನ್ನ ಸಮುದಾಯದ ಮನೆಗೆ ಪಂಚಾಯತಿ ಹೇಳಿಕೆಯನ್ನು ನೀಡಿ ಗುರಿಕಾರ ನಿಗದಿ ಪಡಿಸಿದ  ಸ್ಥಳದಲ್ಲಿ ಹೋಳಿ ಹಬ್ಬವನ್ನು ಕ್ರಮಬದ್ಧವಾಗಿ ವ್ಯವಸ್ಥಿತ ರೀತಿಯಲ್ಲಿ ಆಚರಿಸಲಾಗುತ್ತದೆ. ಕುಟುಂಬದೊಳಗೆ  ಏನಾದರೂ ವಾದ ವಿವಾದ ಸಮಸ್ಯೆಯಿದ್ದರೆ ಬಗೆಹರಿಸಿ ಕೊಂಡು ತೀರ್ಮಾನಕ್ಕೆ ಬಂದು ಗುರಿಕಾರ ಪರಂಪರೆ ಯೊಂದಿಗೆ ಪ್ರಕೃತಿ ಸಹಜ ಬದುಕಿನಲ್ಲಿ‌ ನಿಸರ್ಗದೊಂದಿಗೆ ‌ಕೃಷಿ, ಕೂಲಿ, ವ್ಯವಸಾಯ‌ ಮಾಡಿ ಬದುಕುವ‌ ಈ ಜನಾಂಗ ಹೋಳಿ ಉತ್ಸವವನ್ನು ಸಂಭ್ರಮದಿಂದ ಆಚರಿಸಿ ಹಾಡಿ‌ ಕುಣಿದು ನೃತೋಲ್ಲಾಸದಿಂದ ಪ್ರಕೃತಿಯ ಆರಾಧನೆ, ಓಲೈಕೆಯ ಹೋಳಿ ಹಬ್ಬಕ್ಕೂ ಆದಿಶಕ್ತಿಯ  ಆರಾಧನೆಗೂ ಸಂಬಂಧವಿದ್ದು ಧಾರ್ಮಿಕತೆಯ ಹೆಸರಿನಲ್ಲಿ ಆಚರಿಸಿಕೊಂಡು ಬರುತ್ತಿರುವ ಈ ಹೋಳಿ ಹಬ್ಬ ಕುಡುಬಿಯವರ ಪ್ರಧಾನ ಹಬ್ಬ.

ಹಬ್ಬದ ಆಚರಣಾಕ್ರಮ

     ಫಾಲ್ಗುಣ ಏಕಾದಶಿಯಂದು ನಿಯಮಿತ ಸಮಯಕ್ಕೆ ಒಂದೆಡೆ ಸೇರುವಂತೆ ತಮ್ಮ ಸಮುದಾಯದ‌ ಕೂಡು ಕಟ್ಟಿನ ಪ್ರತಿ ಮನೆಯವರಿಗೂ ಗುರಿಕಾರ ತಿಳಿಸಿದಂತೆ  ತುಳಸಿಕಟ್ಟೆಯಲ್ಲಿ  ತೆಂಗಿನ ಕಾಯಿ , ಕೋಲಾಟದ ಕೋಲು, ಮತ್ತು ಗುಮ್ಮಟೆಯನ್ನಿರಿಸಿ ದೇವರಿಗೆ ದೀಪ ಹಚ್ಚಿ ಅಬ್ಬಲಿಗೆ , ಸುರಗಿಹೂ, ಬಾಗಳ ಹೂವುಗಳನ್ನು ಅರ್ಪಿಸಿ ಗುರಿಕಾರರ ಮಾರ್ಗ ದರ್ಶನದಲ್ಲಿ ಹಬ್ಬದ ತಯಾರಿ ಪ್ರಾರಂಭವಾಗುತ್ತದೆ.


     ಹತ್ತು ಸಮಸ್ತರು ಸೇರಿದ ಅನಂತರ ದರ್ಶನ ಪಾತ್ರಿ ಮಡಿಯುಟ್ಟು ತುಳಸಿಕಟ್ಟೆಯ ಹತ್ತಿರ ಪೂಜೆಗೆ  ಸಿದ್ದ ಗೊಳ್ಳುತ್ತಾರೆ. ಸಿಪ್ಪೆ ಹೊಂದಿದ ತೆಂಗಿನ ಕಾಯಿಯನ್ನು ಹೂಗಳಿಂದ ಶೃಂಗರಿಸಿ ಧೂಪ, ದೀಪ, ಆರತಿಗಳಿಂದ ಪೂಜಿಸಿ ಆ ತೆಂಗಿನ ಕಾಯಿಯನ್ನು ತುಳಸಿ ಕಟ್ಟೆಯಲ್ಲಿ ಇಡುವಾಗ  ಅಲ್ಲಿ ನೆರೆದ  ಹತ್ತು ಸಮಸ್ತರು ಆ ಕಾಯಿ ಯನ್ನು ಮುಟ್ಟಿದ ನಂತರ ಪಾತ್ರಿ ಕಾಯಿಯನ್ನು ತುಳಸಿ ಕಟ್ಟೆಗೆ ಎರಿಸುವಾಗ  ಕುಲದೇವರು, ಗ್ರಾಮದೇವತೆ, ಊರ ದೈವ ದೇವರುಗಳನ್ನು ಸ್ಮರಿಸಿ 5 ದಿನಗಳ ಪರ್ಯಂತ ನಡೆಯುವ  ಹೋಳಿ ಹಬ್ಬವು  ಸುಗಮವಾಗಿ ಸಾಗಲು  ನಡೆಸಿಕೊಡುವಂತೆ ಶ್ರೀ ದೇವರಲ್ಲಿ ಗುರಿಕಾರರೊಂದಿಗೆ ಎಲ್ಲರು  ಪ್ರಾರ್ಥನೆ ಸಲ್ಲಿಸುತ್ತಾರೆ. ಗುರಿಕಾರರ ಮನೆಯಲ್ಲಿ ಹೋಳಿ ವೇಷಧಾರಿಗಳು ತುಳಸಿ ಕಟ್ಟೆಯಲ್ಲಿ ತಮ್ಮ ದೇವರನ್ನು ಪ್ರತಿಷ್ಠಾಪಿಸಿ  ಹಾಡುಗಳನ್ನು ಹಾಡುವ  ಮೂಲಕವೇ ಓಲೈಸಿಕೊಳ್ಳುತ್ತಾರೆ. ತಾಳ,ಜಾಗಟೆ, ಕೋಲಾಟ ಗುಮ್ಮಟೆಯನ್ನು ಹಿಡಿದು  ಬಾರಿಸುತ್ತಾ ಹಾಡುತ್ತಾ, ಕುಣಿಯುತ್ತಾ ತುಳಸಿಕಟ್ಟೆಗೆ  ಮೂರು ಬಾರಿ ಪ್ರದಕ್ಷಿಣೆ ಬರುವ ಸಂಪ್ರದಾಯವಿದೆ. ಆದೇಶ ಬರಿತ ದರ್ಶನ ಪಾತ್ರಿಯಿಂದ ತೀರ್ಮಾನಗಳನ್ನು ಪಡೆದ ನಂತರ ಹೋಳಿ ವೇಷಧಾರಿಗಳು  ಗುಮ್ಮಟೆ ನೃತ್ಯ ‌ಕೋಲಾಟ ಆರಂಬಿಸಿ ವಿಶೇಷವಾದ ತಿಲಕ ಧರಿಸಿ ಗ್ರಾಮ ದೇವರ ಸನ್ನಿಧಿಗೆ ಬಂದು ಸೇವೆಯನ್ನು ಆರಂಬಿಸಲು ತಂಡಗಳನ್ನು ರಚಿಸಿ ಊರ ಹೊರಗೆ ಹೊರಡುತ್ತಾರೆ. 2 ದಿನ ಊರ ಹೊರಗಿನ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಿ ನಂತರ ಸ್ವಜಾತಿ ಬಾಂದವರ ಮನೆ , ಊರಿನ ಕೆಲ ಪ್ರಮುಖ ಮನೆಗಳಿಗೆ ತೆರಳಿ ಹೋಳಿ ವಿಶೇಷ ನೃತ್ಯ  ಹಾಡುಗಳ ಪ್ರದರ್ಶಿಸಿ ಅವರು  ಗೌರವದಿಂದ ನೀಡಿದ ತೆಂಗಿನ ಕಾಯಿ , ಅಕ್ಕಿ, ಕಾಣಿಕೆ ಪಡೆದು ಆ ಮನೆಯ ಸದಸ್ಯರ ಬಾಳು, ಭವಿಷ್ಯ ಉಜ್ವಲವಾಗಲಿ, ಎಲ್ಲರ ಬದುಕು ಸುಖ ಶಾಂತಿ ನೆಮ್ಮದಿಯಿಂದ ತುಂಬಿರಲಿ ಎಂದು ಹರಸುವ ವಾಡಿಕೆ.

      ಹೋಳಿ ಕುಣಿತಗಳಲ್ಲಿ ಭಾಗವಹಿಸುವ ತಂಡಗಳ ಸದಸ್ಯರು ಹಬ್ಬಕ್ಕೆ ಒಂದು ತಿಂಗಳ  ಮೊದಲೆ  ಹೋಳಿಕುಣಿತದ ಪ್ರಮುಖ ಆಕರ್ಷಣೆ ಹಾಗೂ ಸಂಪ್ರದಾಯ ಬದ್ದವಾಗಿ ಬಳಸುವ  ಗುಮ್ಮಟೆಯನ್ನು ಕೂಡುವಳಿಕೆ ಮನೆಯಲ್ಲಿ ಹೊರತೆಗೆಯುವ ಶಾಸ್ತ್ರ ನಡೆಯುತ್ತದೆ. ಗುಮ್ಮಟೆ ಬಡಿತದ ತಾಳವನ್ನು ಸಂಯೋಜಿಸುವ ತರಬೇತಿ ನಡೆಯುತ್ತದೆ. ಮಣ್ಣಿನಿಂದ ತಯಾರಿಸಿದ ಗುಮ್ಮಟೆಗೆ ಒಂದು ಕಡೆ ವಿಶಾಲವಾದ ಬಾಯಿ ಇದ್ದರೆ. ಇನ್ನೊಂದು ಕಡೆ ಸಣ್ಣ ರಂದ್ರವಿರುತ್ತದೆ.  ಅಗಲ ಬಾಯಿಗೆ  ಉಡದ ಚರ್ಮವನ್ನು  ಹದಮಾಡಿ ಬಿಗಿಯಲಾಗುತ್ತದೆ. ಗುಮ್ಮಟೆ ಬಾರಿಸುವಿಕೆ  ತಲಸ್ಪರ್ಶಿಯಾದ ಪೂರ್ಣ ಸಿದ್ದತೆ ಹಾಗೂ ತನ್ಮಯತೆ ಯಿಂದ ಒಂದು ತಿಂಗಳ ಮೊದಲು ಪ್ರಾರಂಭವಾಗುತ್ತದೆ.  ಅಷ್ಟೇ ಅಲ್ಲದೇ ವೃತಾಕಾರದಲ್ಲಿ ಗೂಟ ಹೊಡೆದು ಗೂಟದೊಂದಿಗೆ ಕೋಲಾಟವಾಡುತ್ತಾ  ಹೆಜ್ಜೆಗಳ ತರಬೇತಿ ಪಡೆಯುತ್ತಾರೆ. ಧಾರ್ಮಿಕತೆಯ ಹೆಸರಿನಲ್ಲಿ ಆಚರಿಸಿಕೊಂಡು ಬರುತ್ತಿರುವ ಈ ಹಬ್ಬ ಆರಾಧನೆ ಹಾಗೂ ಮನರಂಜನೆಯ ಹಿನ್ನೆಲೆಯಲ್ಲಿ ಜನಮನ ತಣಿಸುವ ಹೋಳಿ ಕುಣಿತದ ಹಾಡುಗಳು ಜನಪದ ಹಿನ್ನೆಲೆಯಿಂದ ಕೂಡಿದ್ದು ತಲಾಂತರಗಳಿಂದ ಬಾಯಿಯಿಂದ ಬಾಯಿಗೆ ಹರಿದು ಬಂದಿರುವ,  ಸಮಾಜದಲ್ಲಿ ತಾನು‌ ಕಂಡುಂಡದ್ದನ್ನು ಕೇಳಿ ತಿಳಿದದ್ದನ್ನು ಹಿಂದೆ ಅನಕ್ಷರಸ್ಥರು ಕೇವಲ ಮೌಖಿಕವಾಗಿ ಹರಿದು ಬಂದ ಕಂಠಸ್ಥ ಸಂಪ್ರದಾಯದ ಮೂಲಕ ತಲೆಮಾರಿನಿಂ ದ  ಬಂದಿರುವ ಹಾಡುಗಳನ್ನು ಕಲಿಯುತ್ತಾ, ಕಲಿಸುತ್ತಾ ಕೇಳುಗರನ್ನು ಮಂತ್ರ ಮುಗ್ದಗೊಳಿಸುವ ಚಮತ್ಕಾರಿಕೆಯನ್ನು‌ ಹೊಂದಿದೆ. ಆಯಾ ಪ್ರದೇಶದ ಸಾಂಸ್ಕೃತಿಕ ಆಶೋತ್ತರಗಳನ್ನು ಬಿಂಬಿಸುತ್ತಾ ಭಕ್ತಿ ಪೂರ ಕವಾಗಿ ದೈವ ದೇವರನ್ನು ಓಲೈಸುತ್ತಾ ಹಾಡುವ ಹಾಡುಗಳು ಕುಡುಬಿಯರ  ವಿಶಿಷ್ಟ ಭಾಷೆಯಲ್ಲಿ ರಾಮಾಯಣ, ಮಹಾಭಾರತ, ಪುರಾಣ‌ ಕಥೆಗಳನ್ನು ಹಾಗೂ ಕೃಷ್ಣ ಲೀಲೇ, ದೇವಿಸ್ತುತಿಯನ್ನು ಒಳಗೊಂಡಿ ರುತ್ತದೆ. ಹೀಗೆ ಸಂಪ್ರದಾಯವಾಗಿ ಸಂಭ್ರಮದಿಂದ ಮೇಳೈಸುವ ‌ಕುಡುಬಿ ಜನಾಂಗಗಳಲ್ಲಿ ಹೋಳಿ ಹಬ್ಬ ಅಭಿವ್ಯಕ್ತಿಗೋಳುತ್ತದೆ. ಗುಮ್ಮಟೆ ಬಡಿತದೊಂದಿಗೆ ಹೆಜ್ಜೆ ಹಾಕುವ ಶೈಲಿ ಸಂಗೀತ ಹಾಗೂ ನೃತ್ಯದಲ್ಲಿ ತನ್ಮಯರಾಗಿ  ಹಾಡಿನಲಿವ  ದೃಶ್ಯ ಅವಿಸ್ಮರಣೀಯ. 


     ಭಾವ ಪರವಶರಾಗಿ ನೃತ್ಯ ಗೈದ ಹೋಳಿ ತಂಡಗಳು ಸಂಪ್ರದಾಯಿಕ ಹಾಡುಗಳಿಗೆ ಹೆಜ್ಜೆಗಾರಿಕೆ ಯೊಂದಿಗೆ ಮಣ್ಣಿನಿಂದ ತಯಾರಿಸಿದ ವಿಶೇಷವಾದ್ಯ ಗುಮ್ಮಟೆಯನ್ನು ಬಡಿಯುತ್ತಾರೆ. ಮನ ತಟ್ಟುವ ಗಾಯನ , ನೈಜ ಸಂಪ್ರದಾಯದ  ಚೌಕಟ್ಟಿನೊಳಗೆ ನೃತ್ಯ ಭಂದದಲ್ಲಿ ಖಚಿತತೆ, ಪರಿಪಕ್ವತೆಗಳಿಂದ ಹೋಳಿ ಕುಣಿತ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಗುಮ್ಮಟೆ ಯ ನಾದಕ್ಕೆ ಗೊಂದಲಗಳಿಲ್ಲದೆ  ಮನೋಜ್ಞವಾಗಿ ಹೆಜ್ಜೆ ಹಾಕುತ್ತಾ ಪ್ರಸ್ತುತ ಪಡಿಸುವ ಕೋಲಾಟದಲ್ಲಿ ಶ್ರೀ ರಾಮ ಸೀತಾ ಸ್ವಯಂವರ ಮತ್ತು ಲಂಕೆಗೆ ಸೇತುವೆ ಕಟ್ಟುವ ಹಾಡು ವಿಶಿಷ್ಟವಾಗಿರುತ್ತದೆ.


    ಸಂಪ್ರದಾಯ ಬದ್ದ ಹೋಳಿ ಹಬ್ಬದ ಆಚರಣೆ ಯಲ್ಲಿ ಉಡುಗೆ ತೊಡುಗೆ , ವೇಷ – ಭೂಷಣಗಳಲ್ಲಿ ವಿಭಿನ್ನತೆಯನ್ನು ಕಾಣಬಹುದು. ಕುಡುಬಿಯವರು ತಲೆಗೆ  ರುಮಾಲು ಸುತ್ತಿ ಘಮ ಘಮಿಸುವ ಸುರಗಿ ಹೂ ಹಾಗೂ ಅಬ್ಬಲಿಗೆ  ಹೂ ಮುಡಿದು ಹೂವಿನ ಕೆಳ ಭಾಗದಿಂದ ಜರಿಸುತ್ತಿ ಹಣೆಯ ಮುಂಬಾಗದಲ್ಲಿ  ಹಟ್ಟಿಮುದ್ದ ಎಂಬ ಪಕ್ಷಿಯ ಬಾಲಸಿಕ್ಕಿಸಿ ತಯಾರದ ಮುಂಡಾಸಿನಿಂದ ಅಲಂಕರಿಸಿ ಕೊಳ್ಳುತ್ತಾರೆ. ಸೀರೆಯನ್ನು ದೇವಿಗೆ‌ ಉಡಿಸಿದಂತೆ ಉಟ್ಟು ಮೇಲ್ಬಾಗದಲ್ಲಿ ನೆರಿಗೆಯ ಅಂಗಿಯನ್ನು ಹಾಕಿ ಜರಿ ಶಾಲುಗಳನ್ನು ಎರಡು ‌ಭುಜದ ಮೇಲಿಂದ ಇಳಿ ಬಿಟ್ಟು ಸೊಂಟಕ್ಕೆ ಪಟ್ಟಿಯನ್ನು ಬಿಗಿದು ಅರ್ಧನಾರಿಶ್ವರನಂತೆ ಕಾಣುವ ಈ ವೇಷ ಧಾರಿಗಳ ವೇಷ  ಭೂಷಣ ಕುಣಿತ ನೋಡಲು ‌ಬಲುಸೊಗಸು. ಕಾಲಿಗೆ ಗೆಜ್ಜೆ ‌ಕಟ್ಟಿ ಕುಣಿಯುವ ಹೋಳಿ ವೇಷ ಧಾರಿಗಳಿಗೆ ಈ 5 ದಿನಗಳಲ್ಲಿ ಮಾಂಸ , ಮದ್ಯನಿಷೇಧವಿದ್ದು, ವೃತಾದಾರಿಗಳಾಗಿರಬೇಕೆಂದು ಕಟ್ಟುಪಾಡಿದೆ. ಕಾಲಿಗೆ ಪಾದರಕ್ಷೆ ಧರಿಸದೆ  ಬರಿಕಾಲಲ್ಲಿ  ನಡೆಯುವುದು ವಾಡಿಕೆ . ಕುಡುಬಿಯರು  ಹೋಳಿ ಕುಣಿತದಲ್ಲಿ ಪಾಲ್ಗೊಂಡವರು ಮತ್ತೆ ಮನೆ ಸೇರುವುದು. ಹೋಳಿ ಹಬ್ಬ ಮುಗಿದ ನಂತರ. ಗರ್ಭಿಣಿ ಸ್ತ್ರೀಯ ಗಂಡ ಹೋಳಿ ಹಬ್ಬ ಕ್ಕೆ ತರಳುವಂತಿಲ್ಲ ಎಂಬ ನಿಯಮವಿದೆ. ಹೋಳಿ ಮೇಳದವರಿಗೆ ಹರಕೆ ರೂಪದಲ್ಲಿ ಊಟ ಹಾಕುವ ಕ್ರಮವೂ ಇದೆ.


     ಹೋಳಿ ಹಬ್ಬದ ವೇಷಧಾರಿಗಳು  ಇತ್ತೀಚೆಗೆ ಅಬ್ಬಲಿಗೆ ಹೂವಿನ ಬದಲಾಗಿ ಬಣ್ಣ ಬಣ್ಣದ ಕಾಗದದ ಹೂಗಳನ್ನು ಬಳಸುತ್ತಾರೆ. ಆದರೆ ಇದು ವಿಷಾದನೀಯ. ಬಣ್ಣದ ಕಾಗದದ  ಹೂವಿನ ಬದಲಿಗೆ  ಅಬ್ಬಲಿಗೆ ನೆಟ್ಟು  ಬೆಳಸಿ ಅದರಿಂದಲೇ ಹೋಳಿ ವೇಷಧಾರಿಗಳು  ಶ್ರಂಗಾರ ಹೆಚ್ಚಿಸಿಕೊಂಡರೆ .ನೋಡಲು ಬಲು ಸೊಗಸು. ನಿಜ ಹೂವಿಗಿರುವ  ಪಾವಿತ್ರ್ಯತೆ ಕಾಗದದ ಹೂವಿಗೆಲ್ಲಿದೆ. ಈ ನಿಟ್ಟಿನಲ್ಲಿ  ಕುಡುಬಿ ಸಮಾಜೋದ್ಧಾರಕ ಸಂಘ ಹಾಗೂ ಕುಡುಬಿ ಕೂಡುಕಟ್ಟುಗಳ ಒಕ್ಕೂಟ, ಕುಡುಬಿ ಪರಿಶಿಷ್ಟ ಪಂಗಡದ ಹೋರಾಟ ಸಮಿತಿ ಹಾಗೂ ಕುಡುಬಿ ಯುವಸಂಘಟನೆಗಳು ಮತ್ತು ಸ್ವತಃ ಹೋಳಿ ವೇಷ ಧಾರಿಗಳು ಹೋಳಿ ಹಬ್ಬದ ಆಚರಣೆಯ ಮೂಲ ಸ್ವರೂಪದಲ್ಲಿ ಯಾವುದೇ ವ್ಯತ್ಯಾಸಗಳನ್ನು ತರದೆ ಸಂಪ್ರದಾಯಿಕ ಕಲೆಗೆ ಚ್ಯುತಿಬಾರದಂತೆ ಆಚರಿಸಿ ಕೊಳ್ಳುತ್ತಾ, ಪರಂಪರಾಗತವಾದ ಜನಪದ ಕಲೆಗಳು ತಮ್ಮ ಜೀವಂತಿಕೆಯನ್ನು ಉಳಿಸಿಕೊಳ್ಳುವ ಅನಿವಾರ್ಯ ತೆ ಇದೆ ಎಂಬುದು ಮನಗಾಣುವ ಅಗತ್ಯವಿದೆ.  ಪ್ರಕೃತಿ ಆರಾಧಕರಾದ  ಈ ಜನಾಂಗ ಶ್ರಮ ಜೀವಿಗಳು ತಮಗೆ ಬೇಕಾದ ಆಹಾರ ವಸ್ತು, ಬೇಳೆ, ತರಕಾರಿ, ಹೂ, ಹಣ್ಣು ಗಳನ್ನು ತಾವೇ ಬೆಳಸಿ, ತಿಂದುಂಡು ಬದುಕುವ ಸ್ವತಂತ್ರರು .  ಮೂಲತಃ ಗೋವಾದಿಂದ  ಪೋರ್ಚಗೀಸರ ದಬ್ಬಾಳಿಕೆಯಿಂದ ವಲಸೆ ಬಂದವರಾದರು  ತನ್ನತನವನ್ನು ಬಿಟ್ಟು ಕೊಡದೆ  ಶ್ರಮವಹಿಸಿ ತಮ್ಮ ಆಚಾರ ವಿಚಾರ ಧರ್ಮಪಾಲನೆಯಲ್ಲಿ ಪ್ರವೀಣರಿವರು.  ಊರನ್ನಾದರು ಬಿಟ್ಟೇವು ಸಂಸ್ಕೃತಿಯನ್ನು ಬಿಡಲಾರೆವು ಎನ್ನುವ ಮನೋಧರ್ಮವನ್ನು ಹೊಂದಿದವರು. ಪಾಮಾಣಿಕತೆ, ನಿಷ್ಠೆಗೆ ಹೆಸರಾದವರು, ಇಂದಿಗೂ ಅತೀ ಮುಗ್ದತೆಯಿಂದ  ವರ್ತಿಸುವವರನ್ನು ಏನು‌ ಕುಡುಬಿ‌ಯವರ ತರಹ ವರ್ತಿಸುತಿಯಲ್ಲ  ಎನ್ನುವ ಆಡು ಮಾತಿದೆ.

     ಕರ್ನಾಟಕ ರಾಜ್ಯ ಕುಡುಬಿ ಸಮಾಜದ ನಾರಾಯಣ ನಾಯ್ಕ ಗೋಳಿ ಅಂಗಡಿಯವರು ಹೋಳಿ ಆಚರಣೆಯ ಪುರಾಣದ‌ ಕಥೆಗಳಲ್ಲಿ ಹೇಳಲ್ಪಡುವುದನ್ನು‌ ಹೀಗೆ ವಿವರಿಸುತ್ತಾರೆ. ಪರಶಿವನು ತನ್ನ ವೃತಭಂಗಕ್ಕೆ ಕಾರಣನಾದ ಮನ್ಮಥನನ್ನು ತನ್ನ ಮೂರನೇ ಕಣ್ಣನ್ನು ತೆರೆಯುವುದರ ಮೂಲಕ ಸುಟ್ಟು ಹಾಕುತ್ತಾನೆ. ಅತೀವ ಕ್ರೋಧದಿಂದ ಕುದಿಯುತ್ತಿರುವ ಶಿವನನ್ನು ಶಾಂತಗೊಳಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಅಂತಿಮವಾಗಿ  ಗುಡ್ಡ ಹಾಡಿನಲ್ಲಿ ‌ನೆಲೆಯಾಗಿರುವ  ಕುಡುಬಿ ಬಾಂಧವರು  ಹಾಡು, ನೃತ್ಯಗಳನ್ನು ಮಾಡುತ್ತಾ ಶಿವನನ್ನು ಆರಾದಿಸಿದರಂತೆ. ಇದರಿಂದ ಪ್ರಸನ್ನ ಗೊಂಡ ಶಿವನು ಶಾಂತನಾದನು  ಎನ್ನುವ ಪ್ರತೀತಿ ಈ ಹೋಳಿ ಕುಣಿತದ ಹಿನ್ನೆಲೆಯಾಗಿದೆ. ಈ ಹೋಳಿ ಆಚರಣೆ ನಿಲ್ಲಿಸಿದರೆ ಶಿವನು ಕೋಪಗೊಂಡು ಜೀವ ಸಂಕುಲಕ್ಕೆ ಹಾನಿ ಆಗುತ್ತದೆ ಎಂಬ ನಂಬಿಕೆ ಯಿಂದ ಪ್ರತಿ ವರ್ಷ ಕಡ್ಡಾಯವಾಗಿ ಆಚರಿಸುತ್ತಾರೆ.

     ಹೋಳಿ ಹಬ್ಬದ ಕೊನೆಯ ದಿನದಂದು ಗುರಿಕಾರ  ಮನೆಯಲ್ಲಿ ಒಟ್ಟು ಗುಡಿ ಹಾಡುಗಳ ಮೂಲಕ ಹಬ್ಬಕ್ಕೆ  ಬಳಸಿದ ಪರಿಕರಗಳನ್ನು ಇರಿಸಿ ಪೂಜಿಸಲಾಗುತ್ತದೆ. ಹುಣ್ಣುಮೆಯ ಚಂದ್ರನ ದರ್ಶನಕ್ಕೆ ಮೊದಲು ಹಬ್ಬ ಮುಗಿಸಿ ವೇಷ ಕಳುಹಿಸಿ  ದೇವರಿಗೆ ನಮಸ್ಕರಿಸಿ ತುಳಸಿ ಕಟ್ಟೆಯಲ್ಲಿ  ಹೋಳಿ ತಿರುಗಾಟಕ್ಕೆ  ಹೊರಡುವ ಮುನ್ನ ಏರಿಸಿಟ್ಟ ತೆಂಗಿನ ‌ಕಾಯಿಯನ್ನು ಪಾತ್ರಿಯ  ಮುಖಾಂತರ ಇಳಿಸಿ ದೇವರಿಗೆ ನೈವೇದ್ಯ ಇಡಲಾಗುತ್ತದೆ. ಗೆಂಡ ಸೇವೆ ಯ ತರದಲ್ಲಿ ಬೆಂಕಿಕೆಂಡವನ್ನು  ಹಾಕುತ್ತಾರೆ . ನಂತರ ಸಾಮೂಹಿಕ ಭೋಜನ ಸ್ವಿಕರಿಸಿ ತಮ್ಮ ತಮ್ಮ ಮನೆಗೆ ತೆರಳುತ್ತಾರೆ. ಹುಣ್ಣುಮೆ ನಂತರ ಒಂದೆರಡು ದಿನಗಳಲ್ಲಿ ಸಂಪ್ರದಾಯದಂತೆ ಮೊಲದ ಭೇಟಿಯಾಡುವುದರೊಂದಿ ಗೆ ಹೋಳಿ ಹಬ್ಬ ಮುಕ್ತಾಯ ಹಂತ ತಲುಪುತ್ತದೆ. ಓಕುಳಿ,‌ಅಗ್ನಿ ಸೇವೆಯೊಂದಿಗೆ ಧಾರ್ಮಿಕ ಹಿನ್ನೆಲೆಯ ಜಾನಪದ ಕಲೆಯಾದ ಹೋಳಿ ಕುಣಿತಕ್ಕೆ ‌ಮಂಗಳ‌ ಜರಗುತ್ತದೆ. 


        (ವಿ.ಸೂ-  ಕುಡುಬಿಯವರಂತೆ ಮರಾಠಿ ಸಮೂಹದವರು ವಿಶಿಷ್ಟ ರೀತಿಯಲ್ಲಿ ಹೋಳಿ ಹಬ್ಬ ಆಚರಿಸಿಕೋಳ್ಳುತ್ತಾರೆ. ವೇಷ ಭೂಷಣದಲ್ಲಿ ಹಾಗೂ ಆಚರಣೆಯಲ್ಲಿ  ಈ ಎರಡು ಸಮೂಹಗಳ‌ನಡುವೆ ಸ್ವಲ್ಪ ಮಟ್ಟಿನ ವ್ಯತ್ಯಾಸಗಳಿವೆ)

Leave a Reply

Your email address will not be published. Required fields are marked *