Literature (ಸಾಹಿತ್ಯ)

ವಿಶ್ವ ಪ್ರಸಿದ್ಧ ಚನ್ನಪಟ್ಟಣದ ಬೊಂಬೆಗಳು : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

ಸ್ವಾವಲಂಬಿ ಭಾರತ ನಿರ್ಮಾಣ ಸಂಕಲ್ಪವನ್ನು ಸಾಕಾರಗೊಳಿಸಿ ದೇಶಿಯ‌ ಉದ್ಯಮವನ್ನು ಪುನರುಜ್ಜೀವನ ಗೊಳಿಸುವ ಉದ್ದೇಶದಿಂದ ಮಕ್ಕಳ ಆಟಿಕೆ ಉದ್ಯಮಕ್ಕೆ ಹೊಸ ರೂಪ‌ ನೀಡುವ ಮಹತ್ವದ ವಿಚಾರವನ್ನು ಮನಕೀ ಬಾತ್ ಬಾನುಲಿ ಕಾರ್ಯಕ್ರಮ ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿ ವಿಶ್ವಕ್ಕೆ ಆಟಿಕೆಗಳನ್ನು ಪೂರೈಸುವ ಶಕ್ತಿ ಭಾರತಕ್ಕೆ ಇದ್ದು ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಸ್ವದೇಶೀ ಆಟಿಕೆ ತಯಾರಿಕೆ ಪಾಲು ಹೆಚ್ಚಿಸಿಕೊಳ್ಳಲು ಕರೆ ನೀಡಿದ್ದರು. ಆಟಿಕೆ ಉದ್ಯಮದಲ್ಲಿ ಆತ್ಮನಿರ್ಭರ ಮಂತ್ರ ಘೋಷಿಸಿದ ಮೋದಿ ಭಾರತದಲ್ಲಿ ತಯಾರಿಸಿದ ಆಟಿಕೆ‌ ಮಾರಾಟ ಮತ್ತು ಖರೀದಿ ಸುಲಭಗೊಳಿಸುವುದು ಉದ್ದೇಶವಾಗಿದೆ. ಭಾರತವನ್ನು ಜಾಗತಿಕ ಬೊಂಬೆ ಮತ್ತು ಆಟಿಕೆಗಳ ತಯಾರಿಕ ಕೇಂದ್ರವನ್ನಾಗಿ ರೂಪಿಸುವ ಕನಸು‌ ಮೋದಿಯವರ ಮನದ ಮಾತು ತಿಂಗಳ ಬಾನುಲಿ ಕಾರ್ಯ ಕ್ರಮದಲ್ಲಿ ಚನ್ನಪಟ್ಟಣದ ಬೊಂಬೆ ತಯಾರಿಕೆಯ ಬಗ್ಗೆಯು ಉಲ್ಲೇಖಿಸಿದ್ದರು. ತನ್ನಿಮಿತ್ತ ಈ ಲೇಖನ.

ಬೆಂಗಳೂರು, ಮೈಸೂರು ಪ್ರವಾಸದ ಯೋಜನೆಯಲ್ಲಿದ್ದಾಗ ಬೊಂಬೆಗಳ ತವರು ಚನ್ನಪಟ್ಟಣದ ಬೊಂಬೆಗಳನ್ನು ನೋಡಲು ತುಂಬಾ ಉತ್ಸಾಹದಿಂದ ಹೊರಟಿದ್ದೆ. ಬೊಂಬೆಗಳಿಗೂ ಮಕ್ಕಳಿಗೂ ಬಿಡಿಸಲಾರದ ನಂಟು. ಆದರೆ, ಚನ್ನಪಟ್ಟಣದ ಬೊಂಬೆಗಳು ಅಂದರೆ ಎಲ್ಲ ವಯಸ್ಸಿನವರೂ ಮಾರುಹೋಗುತ್ತಾರೆ. ಕಲಾವಿದನ ಕೈಚಳಕಕ್ಕೆ ನಿಲುಕದ್ದು ಏನೂ ಇಲ್ಲ ಎನ್ನುವುದಕ್ಕೆ ತಾಜಾ ಉದಾಹರಣೆ ಚನ್ನಪಟ್ಟಣದ ಬೊಂಬೆಗಳು. ಬೊಂಬೆಗಳು ಎಂದಾಕ್ಷಣ ನೆನಪಾಗುವುದು ಚನ್ನಪಟ್ಟಣ. ಇಲ್ಲಿನ ಬೊಂಬೆಗಳ ನಯ, ನಾಜೂಕಿಗೆ ಮರುಳಾಗದವರೇ ಇಲ್ಲ. ಅಮೇರಿಕಾ, ಬ್ರಿಟನ್, ಶ್ರೀಲಂಕಾ ದೇಶಗಳ ಪ್ರಧಾನಿಗಳು ಚನ್ನಪಟ್ಟಣದ ಬೊಂಬೆಗಳಿಗೆ ಮನಸೋತಿದ್ದಾರೆ.
ಬೆಂಗಳೂರು ಸಮೀಪದ ರಾಮನಗರದ ಚನ್ನಪಟ್ಟಣದ ವಾಸಿಗಳು ಬೊಂಬೆಯನ್ನು ತಯಾರಿಸುವ ಕಲೆಯನ್ನು ಅರಿತಿದ್ದು ಇಂದಿಗೂ ಪರಂಪರಾಗತವಾಗಿ ತಯಾರಿಸುತ್ತಿದ್ದಾರೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪರಿಚಯಿಸಿದ ಆ ಕಲೆ ಪರ್ಷಿಯಾ ದೇಶದ ಕುಶಲ ಕರ್ಮಿಗಳನ್ನು ಭಾರತಕ್ಕೆ ಕರೆಯಿಸಿ ಕಲೆಯ ಒಳ ತಿರುಳುಗಳನ್ನು ಕಲಿತು ಬೊಂಬೆ ತಯಾರಿಯಲ್ಲಿ ಹೊಸ ಆವಿಷ್ಕಾರ ಪ್ರಾರಂಭಿಸಿದರು. 200 ವರ್ಷಗಳ ಇತಿಹಾಸವಿರುವ ವಿಶ್ವ ವಿಖ್ಯಾತ ಬೊಂಬೆಗಳು ತಯಾರಾಗುವುದು ಕರ್ನಾಟಕದ ಚನ್ನಪಟ್ಟಣದಲ್ಲಿ ಎಂಬುದು ಹೆಮ್ಮೆಯ ವಿಚಾರ. ಬಿದ್ದರೂ ಒಡೆಯದ ನೋಡುವುದಕ್ಕೂ ಆಕರ್ಷಕವಾಗಿರುವ ಚನ್ನಪಟ್ಟಣದ ಬೊಂಬೆಗಳು ಹೊರ ರಾಷ್ಟ್ರಗಳಿಗೂ ರಫ್ತಾಗುತ್ತಿವೆ. ಸಣ್ಣ ಬೊಂಬೆಯಿಂದ ಹಿಡಿದು ಭಾರೀ ಗಾತ್ರದ ಬೊಂಬೆಗಳು ಲಭ್ಯ.
ಆದರೆ, ವಿಶ್ವ ವಿಖ್ಯಾತ ಚನ್ನಪಟ್ಟಣದ ಬೊಂಬೆಗಳು ಈಗ ಸಂಕಷ್ಟದಲ್ಲಿವೆ. ಚೀನಾ ದೇಶದ ಅಗ್ಗದ ಬೊಂಬೆಗಳ ಅಬ್ಬರದ ನಡುವೆ ದೇಶೀ-ವಿದೇಶೀ ಮಾರುಕಟ್ಟೆಯಲ್ಲಿ ತನ್ನ ಹೊಳಪು ಕಳೆದುಕೊಳ್ಳದೆ ಚನ್ನಪಟ್ಟಣದ ಬೊಂಬೆಗಳ ಬೇಡಿಕೆ ಕುಗ್ಗದಂತೆ ಹರಸಾಹಸ ಪಡಬೇಕಾಗಿದೆ.

ಚೀನೀ ಬೊಂಬೆಗಳ ಹಾವಳಿ:
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದ ಮಳಿಗೆಗಳು ತಲೆ ಎತ್ತಿದ್ದು ಎಲ್ಲಾ ಕಡೆ ಚೀನಾ ದೇಶದ ನಕಲಿ ಬೊಂಬೆಗಳ ಮಾರಾಟ ನಡೆಯುತ್ತಿದೆ. ಗ್ರಾಹಕರು ಇದು ಚನ್ನಪಟ್ಟಣದ ಬೊಂಬೆ ಎನ್ನುವ ಭ್ರಮೆಯಲ್ಲಿಯೇ ಖರೀದಿಸುತ್ತಾರೆ. ಇದಕ್ಕೆ ಕಾರಣ ಚನ್ನಪಟ್ಟಣದ ಬೊಂಬೆಗಳು ಮತ್ತು ಚೀನಾದ ಬೊಂಬೆಗಳಲ್ಲಿನ ಭಿನ್ನತೆ ಗುರುತಿಸಲು ಸಾಧ್ಯವಾಗದಿರುವುದು, ಮೇಲ್ನೋಟಕ್ಕೆ ಈ ಎರಡು ಬೊಂಬೆಗಳು ಒಂದೇ ರೀತಿ ಕಾಣುತ್ತವೆ. ಆದರೂ ಚನ್ನಪಟ್ಟಣದ ಬೊಂಬೆಗೆ ಕಲಾವಿದರ ಕೈಯಿಂದಲೇ ಬಣ್ಣ ಹಚ್ಚುವ ಜೊತೆಗೆ ಅರಗಿನ ಲೇಪನ ಮಾಡಲಾಗುತ್ತದೆ. ಆದರೆ, ಚೀನಾ ಬೊಂಬೆಗಳಿಗೆ ಯಂತ್ರದ ಮೂಲಕ ರಾಸಾಯನಿಕ ವಿಷಯುಕ್ತ ಬಣ್ಣ ಬಳಿಯಲಾಗುತ್ತದೆ. ಅದರಲ್ಲಿ ವಿಷಕಾರಿ ಅಂಶಗಳು ಮಕ್ಕಳ ದೇಹ ಸೇರಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಗುಣಮಟ್ಟದಲ್ಲಿ ಚೀನಾದ ಬೊಂಬೆಗಳು ಚನ್ನಪಟ್ಟಣದ ಬೊಂಬೆಗಳಿಗೆ ಸರಿಸಾಟಿಯಾಗಿರುವುದಿಲ್ಲ. ಕಡಿಮೆ ದರದ ಹಾನಿಕಾರಕ ವಸ್ತುಗಳನ್ನು ಚೀನಾ ಭಾರತೀಯ ಮಾರುಕಟ್ಟೆಗೆ ಹರಿಯಬಿಟ್ಟು ನಮ್ಮ ದೇಶದ ಗುಡಿ ಕೈಗಾರಿಕಾ ವಸ್ತುಗಳ ಮೇಲೆ ತೀವ್ರ ಪರಿಣಾಮ ಬೀರಿದೆ.
ದೀರ್ಘ ಬಾಳಿಕೆಯ ಕಣ್ಮನ ಸೆಳೆಯುತ್ತಿರುವ ಅಪರೂಪದ ಗೊಂಬೆಗಳ ಕಲಾ ವೈಭವ ಚೀನಾ ಬೊಂಬೆಗಳ ಎದುರು ಕಳೆಗುಂದಬಾರದು. ಕಡಿಮೆ ಬೆಲೆಗೆ ಸಿಗುವ ಚೀನಾ ಬೊಂಬೆಗಳಿಂದ ವ್ಯಾಪಾರಿಗಳಿಗೆ ಲಾಭದ ಪ್ರಮಾಣ ಸಹಜವಾಗಿಯೇ ಅಧಿಕವಾಗಿರುತ್ತದೆ. ಆದ್ದರಿಂದ ಸಾಮಾನ್ಯವಾಗಿ ಗ್ರಾಹಕರು ಯಾವುದೇ ಬೊಂಬೆಗಳನ್ನು ಅಂಗಡಿಯಲ್ಲಿ ಕಡಿಮೆ ಬೆಲೆಗೆ ಕೇಳಿದಾಗ ಮೊದಲು ಚೀನಾ ಬೊಂಬೆಗಳನ್ನು ಕೊಡುತ್ತಾರೆ. ಆದರೆ, ಜನಸಾಮಾನ್ಯರು ಚೀನಾ ವಸ್ತು ಖರೀದಿಸದಿರುವ ಸಂಕಲ್ಪ ಕೈಗೊಂಡಲ್ಲಿ ಚನ್ನಪಟ್ಟಣದ ಬೊಂಬೆಗಳನ್ನೇ ನೀಡಿ ಎಂದಾಗ ಅಂಗಡಿಯಾತ ಅನಿವಾರ್ಯವಾಗಿ ಚನ್ನಪಟ್ಟಣದ ಬೊಂಬೆಗಳನ್ನೇ ನೀಡಬೇಕಾಗುತ್ತದೆ.


ಚನ್ನಪಟ್ಟಣದ ಬೊಂಬೆಗಳ ಬೆಲೆ ಚೀನಾ ಬೊಂಬೆಗಳಿಗಿಂತ ಅಧಿಕವಾಗಿದ್ದರೂ ಗುಣಮಟ್ಟದಲ್ಲಿ ಅತ್ಯುತ್ತಮವಾಗಿರುತ್ತದೆ. ಅಷ್ಟೇ ಅಲ್ಲದೆ ಚೀನಾ ಬೊಂಬೆಗಳನ್ನು ಖರೀದಿಸುವುದರಿಂದ ದೇಶೀ ಉದ್ಯಮ ನೆಲಕಚ್ಚಿದೆ. ಚನ್ನಪಟ್ಟಣದ ಬೊಂಬೆಗಳ ತಯಾರಕರು ಹಾಗೂ ವ್ಯಾಪಾರಿಗಳನ್ನು ಪ್ರೋತ್ಸಾಹಿಸಬೇಕು. ಚೀನಾದ ನಕಲಿ ಬೊಂಬೆಗಳ ಹಾವಳಿಯಿಂದ ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಚೀನಾದಿಂದ ಹರಿದುಬರುತ್ತಿರುವ ಅಗ್ಗದ ಆಟಿಕೆ ಹಾಗೂ ಬೊಂಬೆಗಳನ್ನು ತಡೆಯಲು ಸರಕಾರ ಹಾಗೂ ಜನಸಾಮಾನ್ಯರು ಸನ್ನದ್ಧರಾಗಬೇಕು. ಚೀನಾ ಉತ್ಪನ್ನ ಬಹಿಷ್ಕರಿಸದಿದ್ದರೆ ನಮ್ಮ ನಾಡಿನ ಕಲಾ ವೈಭವಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಚನ್ನಪಟ್ಟಣದ ಬೊಂಬೆ ಹಾಗೂ ಮಕ್ಕಳ ಆಟಿಕೆಗಳ ದೇಶೀ ಉದ್ಯಮ ಅಪಾಯದ ಅಂಚಿನಲ್ಲಿದೆ. ಚೀನಾ ಬೊಂಬೆಗಳ ಅಬ್ಬರಕ್ಕೆ ಚನ್ನಪಟ್ಟಣದ ಬೊಂಬೆಗಳು ನಲುಗಿವೆ. ಲಕ್ಷಾಂತರ ಕುಶಲ ಕರ್ಮಿ ಕುಟುಂಬಗಳು ಹೊಸ ಉದ್ಯೋಗ ಹಾಗೂ ಉದ್ಯಮದೆಡೆಗೆ ಮುಖ ಮಾಡುತ್ತಿವೆ. ಚನ್ನಪಟ್ಟಣದ ಗೃಹ ಕೈಗಾರಿಕೆಗಳು ಅವಸಾನದ ಹಾದಿ ಹಿಡಿದಿವೆ. ಕೇವಲ ವ್ಯಾಪಾರ ಉದ್ಯಮದ ವಿಷಯ ಮಾತ್ರವಲ್ಲದೆ ನಮ್ಮ ನಾಡಿನ ಮೂಲ ಕಲಾ ಸಂಸ್ಕತಿಗೆ ಹೊಡೆತ ಬಿದ್ದಿದೆ. ಚೀನಾ ಆಟಿಕೆಗಳ ಹಾವಳಿಗೆ ನಲುಗಿದ ವಿಶ್ವ ಪ್ರಸಿದ್ಧ ಬೊಂಬೆ ಉದ್ಯಮಕ್ಕೆ ಬೇಕಿದೆ ಸರಕಾರದ ಆರ್ಥಿಕ ನೆರವು.
ಹಲವು ದಶಕಗಳಿಂದಲೂ ಚನ್ನಪಟ್ಟಣದ ಪರಿಣಿತ ನೂರಾರು ಕುಟುಂಬಗಳು ಬೊಂಬೆ ತಯಾರಿಕೆ ಉದ್ಯಮದಲಿ ತೊಡಗಿಕೊಂಡಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಬೊಂಬೆ ತಯಾರಿಕೆ ಕಾರ್ಯದಿಂದ ಹಿಂದೆ ಸರಿಯುತ್ತ್ತಿದ್ದಾರೆ. ಆದ್ದರಿಂದ ಈ ಉದ್ಯಮ ಕುಶಲಕರ್ಮಿಗಳ ಕೊರತೆ ಎದುರಿಸುತ್ತಿದೆ. ಸದ್ಯ ವಯಸ್ಸಾದವರೇ ಬೊಂಬೆ ತಯಾರಿಕೆಯ ಜೀವಾಳ. ಚನ್ನಪಟ್ಟಣದ ಬೊಂಬೆಗಳಿಗೆ ದೇಶ-ವಿದೇಶಗಳಲ್ಲಿ ಅಪಾರ ಬೇಡಿಕೆ ಇದ್ದರೂ ಪೂರೈಕೆಗೆ ಮಾನವ ಸಂಪನ್ಮೂಲ ಕೊರತೆ ಕಾಡುತ್ತಿದೆ. ಇದು ಚನ್ನಪಟ್ಟಣದ ಬೊಂಬೆಗಳಿಗೆ ಬಡಿದ ಇನ್ನೊಂದು ಹೊಡೆತ. ಪ್ರತಿ ವರ್ಷ 50-75 ಕೋಟಿ ರೂಪಾಯಿಗೂ ಹೆಚ್ಚು ವ್ಯವಹಾರ ನಡೆಸುವ ಚನ್ನಪಟ್ಟಣದ ಬೊಂಬೆ ಉದ್ಯಮ ನೆಲಕಚ್ಚದಂತೆ ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ. ಬೊಂಬೆಗಳು ಮಕ್ಕಳ ಪಾಲಿನ ವಿಸ್ಮಯ. ದೀರ್ಘ ಬಾಳಿಕೆಯ ಮರದ ಬೊಂಬೆಗಳು ಸಾಕಷ್ಟು ಬೇಡಿಕೆ ಕುದುರಿಸಿಕೊಂಡಿವೆ.


ನಾಡಿನ ಸಾಂಸ್ಕತಿಕ ಹಿರಿಮೆ ಸಾರುವ ಬೊಂಬೆಗಳು:
ನಮ್ಮ ನಾಡಿನ ಸಂಸ್ಕತಿಯನ್ನು ಬಿಂಬಿಸುವ ಮನಮೋಹಕ ಚನ್ನಪಟ್ಟಣದ ಬೊಂಬೆಗಳ ರೂಪದಲ್ಲಿ ಅರಳಿ ನಿಂತ ಕಲಾಕೃತಿಗೆ ಭಾರತೀಯ ಕಲಾ ಸಂಸ್ಕøತಿಗೆ ಇಡೀ ವಿಶ್ವವೇ ಬೆರಗಾಗಿ, ಅತ್ಯಂತ ಕಲಾತ್ಮಕವಾಗಿ ಕೆತ್ತಲ್ಪಡುವ ಚನ್ನಪಟ್ಟಣದ ಬೊಂಬೆಗಳು ಆಧುನಿಕತೆಯ ಭರಾಟೆಗೆ ಸಿಲುಕಿ ಕೃತಕ ಆಟಿಕೆ ವಸ್ತುಗಳಿಗೆ ಮಾರುಹೋಗಿ ನೈಜ ಕಲಾ ಪ್ರಕಾರಗಳು ಮರೆಯಾಗದಿರಲಿ. ನಾಡಿನ ಸಾಂಸ್ಕøತಿಕ ಹಿರಿಮೆ ಸಾರುವ ಈ ಪರಂಪರೆಗೆ ದ್ಯೋತಕವಾಗಿ ಆಕರ್ಷಕ ಚನ್ನಪಟ್ಟಣದ ಬೊಂಬೆಗಳು ಮೈಸೂರಿನ ವಿವಿಧ ಅಂಗಡಿಗಳಲ್ಲಿ ಬಗೆಬಗೆಯ ವಿನ್ಯಾಸ ಹಾಗು ಗಾತ್ರ ಆಕಾರಗಳಲ್ಲಿ ದೊರೆಯುತ್ತವೆ. ಇಲ್ಲಿನ ಬೊಂಬೆಗಳು ಕಲಾಸಕ್ತರ ಮನತಣಿಸುತ್ತಿವೆ. ದೆಹಲಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಚನ್ನಪಟ್ಟಣದ ಬೊಂಬೆಗಳ ಸತ್ಪಾದನಾ ಘಟಕದ ಸ್ತಬ್ಧ ಚಿತ್ರ ಸಾಕಷ್ಟು ಗಮನ ಸೆಳೆದಿತ್ತು. ಚಿತ್ತಾಕರ್ಷಕ ಹಾಗೂ ಪುರಾಣದ ಸಂದೇಶ ಸಾರುವ ಬೊಂಬೆಗಳು ಕಲಾರಸಿಕರನ್ನು ಕೈಬೀಸಿ ಕರೆಯುತ್ತಿವೆ. ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ಪ್ರಾಧಿಕಾರ ಚನ್ನಪಟ್ಟಣದ ಬೊಂಬೆಗಳ ಮಾರಾಟಕ್ಕೆ ತನ್ನದೇ ಆದ ಆನ್‍ಲೈನ್ ಜಾಲತಾಣವನ್ನು ಪ್ರಾರಂಭಿಸಿದೆ. ಮೈಸೂರು ಹಾಗೂ ಚನ್ನಪಟ್ಟಣದಲ್ಲಿ ಬೊಂಬೆಗಳ ಕುಶಲಕರ್ಮಿ ತರಬೇತಿ ಕೇಂದ್ರಗಳಿವೆ.
ಅಂದ ಚೆಂದದ ಚನ್ನಪಟ್ಟಣದ ಬೊಂಬೆಗಳನ್ನು ಕಡಿಮೆ ಬೆಲೆಗೆ ನೀಡಲಾಗದು. ಅದಕ್ಕೆ ಬಳಸುವ ಕಚ್ಚಾವಸ್ತುಗಳು ಉತ್ತಮ ಗುಣಮಟ್ಟದ್ದಾಗಿರುತ್ತದೆ. ಚನ್ನಪಟ್ಟಣದ ಬೊಂಬೆಗೆ ಅದರದ್ದೇ ಆದ ಅನನ್ಯತೆ, ಶ್ರೀಮಂತಿಕೆ ಮತ್ತು ಶ್ರೇಷ್ಠತೆ ಇದೆ. ಭಾರತೀಯ ಕಲಾ ಪ್ರಕಾರಗಳಲ್ಲಿ ಚನ್ನಪಟ್ಟಣದ ಬೊಂಬೆಗಳ ತಯಾರಿಕಾ ಕಲೆಗೆ ವಿಶಿಷ್ಟ ಸ್ಥಾನವಿದೆ. ರಾಮಾಯಣ, ಸೀತಾ ಸ್ವಯಂವರಕ್ಕೆ ಸಂಬಂಧಪಟ್ಟ ಬೊಂಬೆಗಳ ಕಲಾಕೃತಿ ದಶಾವತಾರವನ್ನು ಸೂಚಿಸುವ ಮತ್ಸ್ಯ, ಕೂರ್ಮ, ವರಾಹ ಮೂರ್ತಿಗಳ ಬೊಂಬೆಗಳು ಅಲಂಕೃತ ಆನೆಗಳು, ಕುದುರೆಗಳಲ್ಲಿ ಹಲವಾರು ಕಥೆ, ಕಥಾನಕವನ್ನು ಕಟ್ಟಿ ಕೊಡುವ ಗೊಂಬೆಗಳ ಕಲಾಕೃತಿಯಲ್ಲಿದೆ. ಟಿಪ್ಪು ಸುಲ್ತಾನ್ ಪರಿಚಯಸಿದ ಬೊಂಬೆಗಳ ನವರಾತ್ರಿಗಳಲ್ಲಿ ಗೊಂಬೆ ಕೂರಿಸುವಾಗ ವಿಶೇಷ ಬೇಡಿಕೆ ಇರುತ್ತದೆ. ಈ ಬೊಂಬೆಗಳ ತಯಾರಿಕೆಯಲ್ಲಿ ಪರಂಪರೆಯಿಂದ ಬಂದ ಜ್ಞಾನ, ಕಾರ್ಯಾನುಭವ, ವೈವಿಧ್ಯಮಯ ರಚನೆಗಳಿಂದ ಒಂದೊಂದು ಬೊಂಬೆಯಲ್ಲೂ ಗಾಢ ಅರ್ಥವನ್ನು ತುಂಬುವ ಕಲಾ ಶೈಲಿಯನ್ನು ಒಳಗೊಂಡಿದೆ. ಅಪರೂಪದ ಬಣ್ಣ ಕಳೆದುಕೊಳ್ಳದ ಚನ್ನಪಟ್ಟಣದ ವೈವಿಧ್ಯಮಯ ಬೊಂಬೆಗಳ ಕಲಾಕೃತಿಗಳನ್ನು ಬೊಂಬೆ ಪ್ರಿಯರು ತಮ್ಮ ಇಚ್ಚೆಗೆ ಅನುಗುಣವಾಗಿ ಖರೀದಿಸುತ್ತಾರೆ.
ಚನ್ನಪಟ್ಟಣದ ಬೊಂಬೆ ತಯಾರಿಕೆಯಲ್ಲಿ ಕಾಲ ಬದಲಾದಂತೆ ಬದಲಾವಣೆ ತರಲಾಗಿದೆ, ಆನೆದಂತ ಮತ್ತು ಗಂಧದ ಮರಗಳನ್ನು ಬಳಸಿ ಸಾಂಪ್ರದಾಯಿಕ ಬೊಂಬೆಗಳನ್ನು ತಯಾರಿಸುವ ಕಲೆಯನ್ನು ಇದೀಗ ರಬ್ಬರ್ ಮರ, ತೆಂಗಿನ ನಾರು, ತೇಗದ ಮರಗಳನ್ನು ಬೊಂಬೆ ತಯಾರಿಕೆಗೆ ಹೆಚ್ಚಾಗಿ ಬಳಸಲಾಗುತ್ತದೆ. ಪುರಾಣದ ಪಾತ್ರದ ಬೊಂಬೆಗಳು, ಕಾರ್ಟೂನು ಪಾತ್ರದ ಬೊಂಬೆಗಳು, ಪಾಮಾಯಣ ದೃಶ್ಯ ಬಿಂಬಿಸುವ ಬೊಂಬೆಗಳು, ಗಾಂಭೀರ್ಯ ಧಿರಿಸು ರಾಜ, ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟ ರಾಣಿ ಗೊಂಬೆಗಳು ಸೃಷ್ಟಿಕರ್ತ ಬ್ರಹ್ಮ, ಈಶ್ವರ, ಕುದುರೆ, ಆನೆ, ಅಂಬಾರಿಗಳು ಕಲಾಪ್ರೇಮಿಗಳ ಮನತಣಿಸುವ ಗೊಂಬೆಗಳ ಮೋಡಿ ಅಲ್ಲದೆ ದೇವಾದಿ ದೇವತೆಗಳು ಹೀಗೆ ಪುರಾಣದ ಧಾರ್ಮಿಕ ಸಾಮಾಜಿಕ ದೃಶ್ಯಗಳನ್ನೊಳಗೊಂಡ ಮನಸೆಳೆಯುವ ಗೊಂಬೆಗಳು ಅಪಾರ ಬೇಡಿಕೆಯಲ್ಲಿವೆ.


ಚನ್ನಪಟ್ಟಣದ ಬೊಂಬೆಗಳ ಕಾರ್ಮಿಕರ, ಉದ್ಯಮಿಗಳ ನೋವು, ನಿಟ್ಟುಸಿರಿನೊಂದಿಗೆ ನಡೆಸುತ್ತಿರುವ ಉದ್ಯಮದ ಸೋಲಿನಿಂದಾಗಿ ನಿರಾಶೆಯನ್ನು ಹೇಗೆ ಎದುರಿಸಬೇಕೆಂಬುದು ಅರ್ಥವಾಗುತ್ತಿಲ್ಲ ಎಂಬ ಅಳಲು ಚನ್ನಪಟ್ಟಣದ ಬೊಂಬೆಗಳ ತಯಾರಕರ ಎದುರು ನಿಂತ ಸವಾಲುಗಳಿಗೆ ಯಾರು ಸ್ಪಂದಿಸಬೇಕು. ಯಾರು ಸ್ಪಂದಿಸಿಯಾರು? ಹಲವು ಬಾರಿ ಕೇಳುವುದಕ್ಕಿಂತ ಪ್ರತ್ಯಕ್ಷವಾಗಿ ಒಮ್ಮೆ ನೊಡುವುದು ಲೇಸು ಇದು ಚೀನೀ ಗಾದೆ. ಅದೇ ಚೀನಾದವರು ನಮ್ಮ ದೇಶದ ಚನ್ನಪಟ್ಟಣದ ಬೊಂಬೆ ಹಾಗೂ ವಿಷಯುಕ್ತ ಚೀನಾ ಆಟಿಕೆಯನ್ನು ಒಟ್ಟಿಗೆ ಹಿಡಿದು ನೋಡಿದರೆ ವಾಸ್ತವ ಅರಿವಾಗಬಹುದು. ಚನ್ನಪಟ್ಟಣದ ಬೊಂಬೆಗಳ ಸೌಂದರ್ಯ ನೋಡಿದ ಸಂತಸದಲ್ಲಿದ್ದ ನನಗೆ ಚನ್ನಪಟ್ಟಣದ ಬೊಂಬೆಗಳ ಉದ್ಯಮದ ಇಂದಿನ ಪರಿಸ್ಥಿತಿಯ ಅರಿವಾಗಿ ನಿಟ್ಟುಸಿರಿನೊಂದಿಗೆ ಚನ್ನಪಟ್ಟಣದಿಂದ ಹೊರಟಿದ್ದೆ. ಭಾರತೀಯ ಕಲಾ ವೈಭವವನ್ನು ಪ್ರೀತಿಸುವ ಮನಸ್ಸು ಚನ್ನಪಟ್ಟಣದ ಬೊಂಬೆಗಳ ಸಂಕಷ್ಟದ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಯಲ್ಲಿದೆ.

Leave a Reply

Your email address will not be published. Required fields are marked *