Literature (ಸಾಹಿತ್ಯ)

ಮೇ ಫ್ಲವರ್‌ನ ಸೊಬಗು : heggaddesamachar.com

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

ಒಂದರೊಳು ಒಂದಿಲ್ಲ, ಒಂದರೊಳು ಕುಂದಿಲ್ಲ ಒಂದೊ0ದು ಅಂದವೂ ತನಗೆ ತಾನೇ ಚಂದ ಎಂದು ವರಕವಿ ದ.ರಾ ಬೇಂದ್ರೆ ಯವರು ಹೂ ಕವನದ ಸಾಲುಗಳು ನೆನಪಾದದ್ದು ಕೆಲದಿನಗಳ ಹಿಂದೆ ಮುಂಬಯಿ ಪ್ರಭಾದೇವಿ ಸಿದ್ದಿವಿನಾಯಕ ದೇವಸ್ಥಾನದಿಂದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಮಾರ್ಗದ ಬದಿಯಲ್ಲಿ ಬಲಯುತವಾಗಿ ಬೆಳೆದು ನಿಂತ ಗುಲ್ ಮೊಹರ್ ಮರವೊಂದು ಮೈ ತುಂಬಾ ಕೇಸರಿ, ಹಳದಿ, ಕೆಂಪು ಮಿಶ್ರಿತ ಹೂವನ್ನು ಅವರಿಸಿಕೊಂಡು ಸೊಬಗಿನಿಂದ ಕಂಗೊಳಿಸುತ್ತಾ ಹೆಮ್ಮೆಯಿಂದ ಇಗೋ ಮೇ ತಿಂಗಳು ಬಂತು ನಿಮಗೆಲ್ಲಾ ಹೂವಿನ ಸ್ವಾಗತ ಕೋರುತ್ತಿದ್ದೇನೆ ಎಂದು ನಕ್ಕಂತೆ ಆಯ್ತು ಸೃಷ್ಠಿಯ ಸೌಂದರ್ಯಕ್ಕೆ ಇನ್ನೊಂದು ಮೆರಗು ಹೂವು.
ಏಪ್ರಿಲ್ ತಿಂಗಳು ಕಳೆಯುತ್ತಿದ್ದಂತೆ ಮೇ ತಿಂಗಳ ಆರಂಭದ ದಿನಗಳಲ್ಲಿ ಮೇ ಫ್ಲವರ್‌ನ ಮರ ಹೂವನ್ನು ಧರಿಸಿ ರಸಿಕರೆದೆ ತಣಿಸುವುದು. ಗುಲ್ ಮೊಹರ್ ಬೆರಗು, ಚಿತ್ತಾಕರ್ಷಕ ಸೌಂದರ್ಯ ಎಲ್ಲರ ಗಮನ ಸೆಳೆಯುತ್ತದೆ. ಚೆಲುವಿಗೆ, ಕೋಮಲತೆಗೆ, ಮೃದುತನಕ್ಕೆ ಮತ್ತು ಸಂಭ್ರಮ ಸಂತೋಷಗಳ ಪ್ರತೀಕವಾದ ಈ ಹೂವುಗಳು ಅಲ್ಪಾಯುಷಿಯಾದರೂ ಸಾರ್ಥಕದ ಖಣಜ. ಕಣ್ಣಿಗೆ ತಂಪು ನೀಡುವ ಪುಷ್ಪಗಳ ದೃಶ್ಯ ವೈಭವ. ಅತ್ಯಂತ ವಿಭಿನ್ನವಾದ ವರ್ಣ ವೈಭವ ನೋಡುಗರ ಹೃದಯ ತನ್ನಡೆ ಸೆಳೆಯುವ ಪುಷ್ಪವಿದು. ಮೇ ಫ್ಲವರ್‌ನ ಮರವೊಂದು ಎಲೆ ಉದುರಿಸಿ ಸುಂದರ ಹೂವಿನೊಂದಿಗೆ ಬಣ್ಣದ ಉಡುಪು ತೊಟ್ಟಂತೆ ನಿಂತ ಪರಿ ನೋಡುವುದೇ ಸೊಗಸು. ಇಡಿ, ಇಡಿಯಾಗಿ ಬಿಡಿ, ಬಿಡಿಯಾಗಿ ಬಣ್ಣಿಸಬಹುದಾದ ಈ ಹೂವು ಮತ್ತೊಂದು ಜಗತ್ತನ್ನೇ ನಮ್ಮಲ್ಲಿ ತೆರೆಸುತ್ತದೆ. ಪ್ರಕೃತಿ ಸೊಬಗಿಗೆ ಮನಸ್ಸು ಮುಗ್ದಗೊಳ್ಳುತ್ತದೆ. ಎಂಥಹ ಅರಸಿಕನಾದರೂ ಅದರತ್ತ ಒಂದು ಕ್ಷಣ ನಿಂತು ಕಣ್ಣು ಹಾಯಿಸಿ ಎಂಥಾ ಸೊಬಗಿನ ಹೂ ಎಂದು ಕಣ್ಣರಳಿಸಿ ನೋಡಿಯೇ ನೋಡುತ್ತಾನೆ. ಮೇ ಫ್ಲವರ್‌ನ ಸೌಂದರ್ಯ ವೀಕ್ಷಿಸಲು ಎರಡು ಕಣ್ಣು ಸಾಲದು ಎಂದರೆ ತಪ್ಪಗಲಾರದು.


ಹೂ ಪ್ರಕೃತಿಯ ಸುಂದರ ಕಾವ್ಯ. ಅದರಲ್ಲೂ ಪ್ರಕೃತಿ ನಿರ್ಮಿಸುವ ನೂರಾರು ಮನೋಹರವಾದ ದೃಶ್ಯ ವರ್ಣ ವಿನ್ಯಾಸಗಳು, ಮೇ ಫ್ಲವರ್ ಮರದ ಮೇಲೆ ಬಣ್ಣದ ಓಕುಳಿ ಆಡಿದಂತೆಯೇ ಹೂ ಮಳೆಗೆರದಂತೆ ಹಾಗೂ ಮರದ ಕೆಳಗೆ ಹೂವಿನ ಎಸಳು ಉದುರಿ ರಂಗೋಲಿ ಹಾಕಿದಂತೆ ರಾರಾಜಿಸುವ ಮೇ ಫ್ಲವರ್‌ನ ಪ್ರಕೃತಿಯ ಸನ್ನಿವೇಶವೊಂದರಲ್ಲಿ ತನ್ನ ಅದ್ಭುತ ದೃಶ್ಯಾವಳಿ ತೋರಿಸಿ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಾ, ಈ ಮರವು ಮೇ ತಿಂಗಳಿಡೀ ಪುಷ್ಪಭರಿತವಾದಾಗ ಬಹುದೂರದಿಂದಲೇ ತನ್ನ ಇರುವಿಕೆಯ ಚೆಲುವನ್ನು ತೋರುತ್ತದೆ. ಹೂವಿನ ಸೌಂದರ್ಯ ದರ್ಶನದಿಂದ ಸೃಷ್ಠಿಕರ್ತನಿಗಾದ ಆನಂದದ ಹುಂಕಾರವೇ ಹೂ ಆಗಿ ಭೂಮಿಯ ಮೇಲೆ ಆರಳಿತು ಎಂದು ಅಂಬಿಕಾತನದತ್ತರ ಕವನ ಸಾಲುಗಳ ಎಷ್ಟು ನಿಜವಲ್ಲವೇ..?
ಇಂಗ್ಲೀಷ್‌ನಲ್ಲಿ ಮೇ ಫ್ಲವರ್, ಹಿಂದಿಯಲ್ಲಿ ಗುಲ್ ಮೊಹರ್ ಎಂದು ಕರೆಯುವ ಈ ಮರ ಹುಣಸೆ ಮರದ ಜಾತಿಗೆ ಸೇರಿದ ಮರದ ಪರಿಚಯ ಭಾರತೀಯರಿಗೆ ಇಂದು ನಿನ್ನೆಯದಲ್ಲ. ಈ ಗಿಡದ ತಳಿಗಳನ್ನು ಭಾರತಕ್ಕೆ ತಂದವರು ಬ್ರಿಟೀಷರು. ಭಾರತದಲ್ಲಿ ಹೆಚ್ಚಿನ ರಾಜ್ಯಗಳು ಈ ಮರವನ್ನು ಸಾಲು ಮರಗಳಾಗಿ ಹಾಗೂ ಅಲಂಕಾರಿಕಾ ಮರವಾಗಿ ಬೆಳೆಸುತ್ತಿದ್ದಾರೆ. ಎಲ್ಲಾ ಬಗೆಯ ಮಣ್ಣಿನಲ್ಲೂ ಪ್ರಾಕೃತಿಕವಾಗಿ ಬೆಳೆಯುವ ವಿವಿಧ ರಾಜ್ಯಗಳಲ್ಲಿ ಕೆಲವೆಡೆ ಸೀಮೆ ಸಂಕೇಶ್ವರ, ಕೆಂಪು ತುರಾಯಿ, ರಾಯಲ್ ಫಿಕಾಕ್ ಫ್ಲವರ್ ಎಂಬ ಹೆಸರು ಇದೆ. ಬಂಗಾಳಿಗಳು ಈ ಹೂವನ್ನು ಕೃಷ್ಣಚುರ ಎಂದು ಕರೆಯುತ್ತಾರೆ. ದೂರಕ್ಕೆ ಕೆಂಡ ಹಾಸಿದಂತೆ ಕಾಣುವ ಈ ಮರವನ್ನು ಬೆಂಕಿಮರ ಅಥವಾ ಫ್ಲವರ್ ಟ್ರೀ ಅಂತಲೂ ಕರೆಯುತ್ತಾರೆ.


ಕೆಂಬಣ್ಣದ ಹೂವನ್ನು ಮುಡಿ ತುಂಬಾ ಹೊತ್ತಾ ಈ ಮರ ನೇರವಾಗಿ ಬೆಳೆವ ಮರವಾದ ಕಾರಣ ಹೂವಿನ ಸುಂದರತೆಯನ್ನು ಮರದ ಕೆಳಗೆ ನಿಂತು ಅಥವಾ ದೂರದಿಂದಲೇ ನೋಡ ಸಿಗುವುದೇ ಹೊರತು ಹತ್ತಿರದಿಂದ ನೋಡ ಸಿಗುವುದು ಅಪರೂಪ. ನನ್ನ ಸುದೈವದಿಂದ ಮೇ ಫ್ಲವರ್ ಅತ್ಯಾಕರ್ಷಕ ಹೂಗಳು ನಾನು ೨ ಅಂತಸ್ತಿನ ಬಸ್ಸಿನಲ್ಲಿ ಪ್ರಯಾಣಿಸುವಾಗ ನನ್ನ ಸಮಾನ ನೇರಕ್ಕೆ ರಸ್ತೆಯ ಹೊರ ಬದಿಯಲ್ಲಿ ನೋಟ ಕಾಣಿಸಿತು. ಹಾಗಾಗಿ ಈ ಹೂವಿನ ಸುಂದರತೆ ನನ್ನ ಗಮನಕ್ಕೆ ಬಂತು. ಗುಂಪು ಗುಂಪಾಗಿ ಅರಳುವ ಮೇ ಫ್ಲವರಿನಲ್ಲಿ ಸ್ವರ್ಗವನ್ನು ಕಂಡAತೆ ಕಂಗೊಳಿಸುವ ಪ್ರಕೃತಿಯ ಕುಂಚಕಲೆಗೆ ನಾ ಬೆರಗಾದೆ. ಈ ಹೂಗಳನ್ನು ನೋಡಿ ಸಂತೋಷದಿ0ದ ನನ್ನಷ್ಟಕ್ಕೆ ನಾನು ನಕ್ಕು ಸಂತಸಗೊ0ಡೆ. ಅದನ್ನೇ ಓದುಗರೆದುರು ಸಂಭ್ರಮದಿ0ದ ಹರವಿಟ್ಟು ಹಂಚಿಕೊ0ಡೆ. ಹಂಚಿಕೊ0ಡ ಖುಷಿ ಅಕ್ಷಯವಾಯಿತು. ಹೆಣ್ಣಿಗೂ ಹೂವಿಗೂ ಅವಿನಾಭಾವ ನಂಟು ಅಂತಾರಲ್ಲ ಹಾಗೆ ನನ್ನ ಹೆಣ್ ಮನಸ್ಸು ಹಲವು ವರ್ಣದ ಸುಂದರ ಕೋಮಲ ಮೇ ಫ್ಲವರ್‌ಗೆ ಮನಸೋತಿತು. ಎಂಥವರನ್ನು ಬಾವುಕರನ್ನಾಗಿ ಮಾಡುವುದೇ ಹೂವಿನ ವಿಶೇಷತೆ, ಸೌಂದರ್ಯ ಸುಂದರತೆಗೆ, ಪ್ರೀತಿಗೆ ಇನ್ನೊಂದು ಹೆಸರೇ ಹೂ ಅದನ್ನು ವರ್ಣಿಸದೇ ಇರಲಾರದು.


ಮೇ ಫ್ಲವರ್‌ನ ಮರದ ಎಲೆಗಳೇ ಕಾಣದಷ್ಟು ದಟ್ಟವಾಗಿ ಕಿತ್ತಲೆ ಮಿಶ್ರಿತ ಕೆಂಪು ಬಣ್ಣದಿಂದ ಹಿಡಿದು ಕಡು ಕೆಂಪು ಬಣ್ಣದ ಹೂಗಳು ರಾರಾಜಿಸುತ್ತಿದ್ದವು. ಈ ಪುಷ್ಪಮಂಜರಿಯಲ್ಲಿ ಗಂಡು ಹೂ ಹಾಗೂ ಹೆಣ್ಣು ಹೂಗಳೆರಡು ತುಂಬಿರುತ್ತದೆ. ಹೆಣ್ಣು ಹೂ ಉದುರಿದ ನಂತರ ಚಪ್ಪಟೆ ಆಕಾರದ ಉದ್ದನೆಯ ಕೋಡು ಬೆಳೆಯುತ್ತದೆ. ಕೋಡಿನ ಒಳಗೆ ಧೃಡಕವಚದ ಬೀಜಗಳಿರುತ್ತದೆ. ಬಲಿತ ಕೋಡುಗಳು ಒಡೆದು ಉದುರುವ ಬೀಜಗಳು ಮೊಳಕೆ ಒಡೆದು ಗಿಡವಾಗುತ್ತದೆ. ಇದು ವಾಣಿಜ್ಯ ಹೂ ಬೆಲೆ ಅಲ್ಲದಿದ್ದರೂ ವರ್ಷಕ್ಕೊಮ್ಮೆ ಅರಳಿ ತನ್ನ ಹಿರಿಮೆಯನ್ನು ತೋರುವುದನ್ನು ನಾವು ಕಣ್ ತುಂಬಿಸಿಕೊಳ್ಳಬಹುದು. ಗಾಳಿ ಬೀಸುವ ಸಮಯದಲ್ಲಿ ಮರದ ಕೆಳಗೆ ನಿಂತರೆ ಹೂಗಳ ಸಿಂಚನ ನಮ್ಮ ಮೇಲಾಗುತ್ತದೆ. ಮೇ ತಿಂಗಳಲ್ಲಿ ಗುಲ್ ಮೊಹರ್ ಹೂಗಳ ಸುಗ್ಗಿ. ಚೈತ್ರಮಾಸ ಭೂತಾಯಿ ರಮಣಿಯತೆಗೆ ಸಿದ್ಧಗೊಳ್ಳುವ ಕಾಲ. ರಂಗುರ0ಗಿನ ಹೂವಿನ ಬಣ್ಣ ಕಣ್ಣಿಗೆ ಹಬ್ಬವನ್ನುಂಟು ಮಾಡಲಿದೆ. ಗಿಡ, ಮರ, ಕಾಡು ಪ್ರಕೃತಿಯ ಸಮತೋಲನಕ್ಕೆ ಮಾನವ ಬದುಕಿಗೆ ಪೂರಕ ಹಾಗೂ ಸಹಾಯಕ ಪ್ರತಿಯೊಬ್ಬರು ಸಾಧ್ಯವಾದಷ್ಟು ಗಿಡ ನೆಡೋಣ. ಇಂದಿಗೂ ಅರಣ್ಯ ಮತ್ತು ತೋಟಗಾರಿಕಾ ಇಲಾಖೆಯವರು ರಸ್ತೆ ಬದಿಯಲ್ಲಿ ಮೇ ಫ್ಲವರ್ ಮರವನ್ನು ನೆಡುತ್ತಾರೆ. ಒಮ್ಮೆ ಯೋಚಿಸಿ ನೋಡಿ ಈ ಹಿಂದೆ ನೀವೆಂದು ಗಿಡ ನೆಟ್ಟು ಬೆಳೆಸಿದ್ದೀರಿ ಎಂದು ನೆನಪಾಗುತ್ತಿಲ್ಲವೇ ? ಹೂವಿನ ಗಿಡವನ್ನು ಬೆಳೆಸುವುದರಿಂದ ಸುತ್ತಲಿನ ಪರಿಸರದ ಅಂದ ಹೆಚ್ಚುವುದರ ಜೊತೆಗೆ ಪರಿಶುದ್ಧ ವಾತಾವರಣ ನಿರ್ಮಾಣವಾಗುವುದು. ಬನ್ನಿ ಪ್ರಕೃತಿಯನ್ನು ಪ್ರೀತಿಸೋಣ… ಗಿಡ ಮರ ಉಳಿಸಿ ಬೆಳೆಸೋಣ…

Leave a Reply

Your email address will not be published. Required fields are marked *