ರೈತರ ಮೊಗದಲ್ಲಿ ಹರುಷ ತಂದ ಕಲ್ಲಂಗಡಿ ಬೆಲ್ಲ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ        

ಎಲ್ಲರಿಗೂ ಕಬ್ಬಿನಿಂದ ಮಾಡಿದ ಬೆಲ್ಲ ತಿಂದು  ನೋಡಿಯು ಗೊತ್ತು ಹಾಗೆ ತೆಂಗಿನ ಬೆಲ್ಲ ,ತಾಳೆ ಬೆಲ್ಲ , ಈಚಲು ಮರದ ಬೆಲ್ಲದ ರುಚಿಯ ಅನುಭವವಿದೆ. ಅರಬ್ ದೇಶಗಳಲ್ಲಿ ಖರ್ಜೂರ ಮರದ ನೀರು ಇಳಿಸಿ ಬೆಲ್ಲ ತೆಗೆಯುವುದು ರೂಢಿ. ಬೆಲ್ಲ ಅಂದ ತಕ್ಷಣ ನೆನಪಾಗುವುದು ಸಾಮಾನ್ಯವಾಗಿ ‌ಕಬ್ಬಿನ ಬೆಲ್ಲವೇ ಆದರೆ ಕೆಲ ದಿನಗಳಿಂದ ರೈತರ ಮೊಗದಲ್ಲಿ ಹರುಷ ತಂದ ಕಲ್ಲಂಗಡಿ ಬೆಲ್ಲದ್ದೆ  ಸುದ್ದಿ . ಹೆಚ್ಚಿನೆಲ್ಲಾ ಅಂತಾರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ದಿನ ಪತ್ರಿಕೆ, ಮಾಸ ಪತ್ರಿಕೆಯು ಅಲ್ಲದೇ ಚಂದನ ವಾಹಿನಿ ಸೇರಿದಂತೆ ಟಿವಿ ವಾಹಿನಿ ಗಳಲ್ಲಿ ಕಲ್ಲಂಗಡಿ ಬೆಲ್ಲ ಸಂಶೋಧಕ ಜಯರಾಮ ಶೆಟ್ಟಿ ಯವರ ನೂತನ ಆವಿಷ್ಕಾರ ಹೊಸ ಪ್ರಯೋಗದ ಕಲ್ಲಂಗಡಿ ಬೆಲ್ಲ ತಯಾರಿಕೆ ಅನೇಕರಲ್ಲಿ ಭರವಸೆ ‌ಮೂಡಿಸಿದ ಸುದ್ದಿ ಬಿತ್ತರವಾಗಿದೆ. ಮನುಷ್ಯ ತನ್ನ ಪ್ರಯತ್ನ, ಪರಿಶ್ರಮದಲ್ಲಿ ತೊಡಗದಿದ್ದರೆ ಯಾರು ಕೂಡ ಸಹಾಯ ಮಾಡರು. ಮಾನವ ಪ್ರಯತ್ನ ವಿದ್ದರೆ ಮಾತ್ರ ಎಲ್ಲರ ಸಹಕಾರ ಪ್ರೋತ್ಸಾಹ ಇರುತ್ತದೆ ಅನ್ನುವುದಕ್ಕೆ ಕಲ್ಲಂಗಡಿ ಬೆಲ್ಲಕ್ಕೆ ಸಿಕ್ಕ ಪ್ರಚಾರವೇ ಸಾಕ್ಷಿ. 

ಮುಂಬಯಿ ‌ನಿವಾಸಿ ಹೊಟೆಲ್ ಉದ್ಯಮಿ  ಯಶಸ್ವಿ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರು, ಮಾಲಕರು ಹಾಗೂ ಕನ್ನಡಿಗ ಪತ್ರ ಕರ್ತರ ಸಂಘ ಮಹಾರಾಷ್ಟ್ರ ಇದರ ಜೊತೆ ಕಾರ್ಯ ದರ್ಶಿ   ಶಿವಮೊಗ್ಗ ಸಮೀಪದ ನಿಟ್ಟೂರು ಸಂಪದ‌ಮನೆ ಜಯರಾಮ ಶೆಟ್ಟಿಯವರು ಕರೋನ ಸಂಕಟ ಕಾಲದಲ್ಲಿ ಅನಿವಾರ್ಯ ವಾಗಿ ಹುಟ್ಟೂರಿಗೆ‌ ಸೇರಬೇಕಾದ ಸಮಯದಲ್ಲಿ ದೃತಿಗೆಡದೆ  ಕೃಷಿ ಹಾಗೂ ಹೋಟೆಲ್ ಉದ್ಯಮದಲ್ಲಿ ತೊಡಗಿದರು.  ಮನುಷ್ಯ ಜೀವನವೇ  ನಂಬಿಕೆಯ ಮೇಲೆ  ನಿಂತಿದೆ ನಾಳೆ ಉಜ್ವಲವಾಗಿರುತ್ತದೆಂಬ  ನಂಬಿಕೆ ಮನುಷ್ಯ ಬದುಕು ಮುನ್ನಡೆಸುತ್ತದೆ.ನಂಬಿಕೆ ಇಲ್ಲ ಅಂದರೆ ಬದುಕು ಸೂನ್ಯವಾಗುತ್ತದೆ ಎಂಬಂತೆ ಬೆಳೆ ಕೈಗೆಟುಕುತ್ತದೆ ಅನ್ನುವಾಗಲೇ ಲಾಕ್ ಡೌನ್ ಘೋಷಣೆಯಾಗಿ ಬೆಳೆದ ಕಲ್ಲಂಗಡಿ ಮಾರಾಟ ಮಾಡಲಾಗದೆ ನೊಂದಿದ್ದ ಜಯರಾಮ  ಶೆಟ್ಟಿಯವರ  ಸೂಕ್ಷ್ಮಮತೆ  ಹಾಗೂ  ಶಾಂತವಾಗಿ ಯೋಚಿಸುವ ಅವರ ಸ್ವಭಾವವೇ ಇಲ್ಲಿ ಅವರಿಗೆ ‌ನೆರವಾಯಿತು. ತನ್ನ ಹೋಟೆಲ್ ಸಿಬ್ಬಂದಿಗಳನ್ನು ಸೇರಿಸಿ ಕೊಂಡು ಒಂದು ಟನ್ ಕಲ್ಲಂಗಡಿ ಹಣ್ಣಿನಿಂದ  ದೊರೆತ 700 ಲೀಟರ್ ಜ್ಯೂಸ್ ನ್ನು ಸೋಸಿ ಕೊಪ್ಪರಿಗೆಯಲ್ಲಿ 5 ರಿಂದ 6 ಗಂಟೆ ಕುದಿಸಿ 65 ಕೆಜಿ  ಕಲ್ಲಂಗಡಿ ಬೆಲ್ಲ  ಪ್ರಾಯೋಗಿಕವಾಗಿ ಉತ್ಪಾದಿಸಿದ್ದರು.ಈ ಬೆಲ್ಲವನ್ನು ಹೋಟೆಲ್ ಅಡುಗೆಗೆ ಬೆಲ್ಲದ ಪರ್ಯಾಯವಾಗಿ ಉಪಯೋಗಿಸಿ ರುಚಿ ಹಾಗೂ ಬಣ್ಣ ದಲ್ಲಿ ವ್ಯತ್ಯಾಸವಾಗಿಲ್ಲದ ಕಾರಣ ಎರಡನೆ ಅಲೆಯ  ಕೊರೊನಾ ಕಾಲಘಟ್ಟದಲ್ಲಿ ಗಿರಾಕಿಗಳಿಲ್ಲದೆ ಮಾರಾಟವಾಗದೆ ಉಳಿದ ಕಲ್ಲಂಗಡಿ ಹಣ್ಣಿನಿಂದ ಬೆಲ್ಲ ತಯಾರಿಸುವ ಸಾಹಸಕ್ಕೆ ಇಳಿದು  ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಕಲ್ಲಂಗಡಿ ಬೆಲ್ಲ ತಯಾರಿಸುವ ಕ್ರಮ = ಕಬ್ಬು ಅರೆದು ಅದರ ಹಾಲಿನಿಂದ ತಯಾರಿಸುವ ಬೆಲ್ಲದಂತೆ‌.ಕಲ್ಲಂಗಡಿ ಯ ಸಿಪ್ಪೆ ಹಾಗೂ ಬೀಜಗಳನ್ನು ತೆಗೆದು ಜ್ಯೂಸ್ ಮಾಡಿ ಸೋಸಿ ಈ ರಸವನ್ನು ಒಂದು ‌ಗಂಟೆಯೊಳಗೆ ಕೊಪ್ಪರಿಗೆಗೆ ಆಲಿ ಒಲೆಯಲ್ಲಿ ಸಮತೋಲನದ ಉರಿಯಲ್ಲಿ 5 ರಿಂದ 6 ಗಂಟೆ ಅಂಟುಪಾಕ ಬರುವವರೆಗೆ  ಕುದಿಸ ಬೇಕು. ಅಪ್ಪಿ ತಪ್ಪಿಯು ಬೆಲ್ಲ ತಯಾರಿಕಾ ಕಲ್ಲಂಗಡಿ ಜ್ಯೂಸ್ ನಲ್ಲಿ ಬೀಜ ಉಳಿಯಬಾರದು. ಬೀಜದ ಕಹಿ ಅಂಶ ಬರುವ ಸಾದ್ಯತೆ ಇದೆ. ಸಂಪೂರ್ಣ ‌ನೀರಿನಂಶ ಆವಿ ಆದ ಮೇಲೆ ಬೆಲ್ಲದ ಪಾಕ ಉಳಿಯುತ್ತದೆ.ಆಧುನಿಕ ತಂತ್ರಜ್ಞಾನ ಬಳಸಿದರೆ  ಬೆಲ್ಲ ಹಾಳಾಗುವ ಅಂಶ‌ ಕಡಿಮೆ ಮಾಡಿ ದೀರ್ಘ ಬಾಳಿಕೆ ಬರಲು ಸಹಕಾರಿ ಆಗುತ್ತದೆ. ಕಲ್ಲಂಗಡಿ ‌ಬೆಲ್ಲ ವರ್ಷ ವಿಡಿ ಇಟ್ಟರು ಹಾಳಾಗದಂತೆ ಹದಕ್ಕೆ ತರಲು ಇವರಿಗೆ ಆಹಾರ  ತಜ್ಞರ ಮಾರ್ಗ ದರ್ಶನವೂ ಅಗತ್ಯ. ಯಾವ ಪ್ರಮಾಣದ ಶಾಖದಲ್ಲಿ ಇದು ಬಿಸಿಯಾಗಬೇಕು ಎನ್ನುವುದು ಇಲ್ಲಿ ಮುಖ್ಯವಾಗಿದ್ದು ಪಾಕ‌ಮಾಡಿದ‌ ನಂತರ ಬೆಲ್ಲ ಎಷ್ಟು ಅಂಟಾಗಿದೆ ಅದರ ಮೇಲೆ ಇದರ ಆಯಷ್ಯ ಅವಲಂಬಿತವಾಗುತ್ತದೆ.

ವಿಶಿಷ್ಟವಾದ ನಾರಿನಾಂಶ ಕಲ್ಲಂಗಡಿಯಲ್ಲಿದ್ದು ಎಲ್ಲಾ ತರದ ದೇಹ ಸ್ಥಿತಿಯವರಿಗೆ ಆರೋಗ್ಯಕ್ಕೂ ಉತ್ತಮ. ತೂಕ ಇಳಿಸುವ ಕಾಳಜಿ ಹೊಂದಿರುವವರಿಗೆ ಬೆಲ್ಲ ಸಂಪೂರ್ಣ ತ್ಯಜಿಸುವ ಬದಲು ಈ ಬೆಲ್ಲ ಬಳಸ ಬಹುದು. ದೇಹಕ್ಕೆ ಹಾನಿಕಾರಕವಾದ ಯಾವುದೇ ರಾಸಾಯನಿಕ ಬಳಸದೆ ಬೆಲ್ಲ ತಯಾರಿಸಲಾಗಿದೆ ಎನ್ನುತ್ತಾರೆ ಜಯರಾಮ ಶೆಟ್ಟಿಯವರು.

 ಕಲ್ಲಂಗಡಿ ಬೆಲ್ಲದ ಸವಿ ನೋಡಿದವರು  ರುಚಿ ಚೆನ್ನಾಗಿದೆ  ಎಂಬ ಪ್ರಶಂಸೆ ನೀಡಿದ್ದು ಒಂದು ತರದ ವಿಶೇಷ ವೆನಿಸುತ್ತದೆ.  ರೈತರು ಹೊಲದಲ್ಲಿ ಬೆಳೆದ  ಕಲ್ಲಂಗಡಿ ಅಲ್ಲೆ ಕೊಳೆತು  ಹೋಗುವ ಬದಲು ಹೊಸ ಪ್ರಯೋಗಕ್ಕೆ ಒಡ್ಡಿರುವುದು ಇಲ್ಲಿ ಮೆಚ್ಚುಗೆಯ ವಿಚಾರ. ಸಾವಿರಾರು ಟನ್ ಗಳಷ್ಟು ಕಲ್ಲಂಗಡಿ ಕೊಳ್ಳುವವರಿಲ್ಲದೆ. ಬೇಡಿಕೆ ಕಳೆದುಕೊಂಡಿದ್ದ ಬೆಳೆ ಮಾರಾಟವಾಗದೆ ಭಾರಿ ಪ್ರಮಾಣದ ನಷ್ಟ ಉಂಟಾಗುವ ಲಾಕ್ ಡೌನ್ ಲ್ಲೊಂದು ಹೊಸ ಅನ್ವೇಷಣೆ ಕಲ್ಲಂಗಡಿ ಬೆಳೆಗಾರರಿಗೆ ಆಶಾಕಿರಣಮೂಡಿದೆ. ಜಯರಾಮ ಶೆಟ್ಟಿಯವರು ತಾನು ಬೆಳೆದ ಕಲ್ಲಂಗಡಿಯಿಂದ ಬೆಲ್ಲ ತಯಾರಿಕೆಗೆ ಇಳಿದುದಲ್ಲದೆ.  ತನ್ನಂತೆ ಬೆಳೆ ಹಾಳಾಗುತ್ತಿರುವ ಅನೇಕ ರೈತರಿಗೆ ಮಾರ್ಗದರ್ಶಕರು ಆಗಿ ಬೇರೆ ಬೇರೆ ಊರಿನ ಅನೇಕ ಕಲ್ಲಂಗಡಿ ಬೆಳೆದ ರೈತರು ಶೆಟ್ಟಿಯವರ ಈ ಪ್ರಯೋಗವನ್ನು ತಾವು ಅನುಸರಿಸಿ‌ ಬೆಳೆ  ನಷ್ಟದ ದೊಡ್ಡ ಹೊಡೆತದಿಂದ ತಪ್ಪಿಸಿ ಕೊಂಡರು. ಈ ವರ್ಷ ಕಲ್ಲಂಗಡಿ ಬೆಲ್ಲ ಆರ್ಥಿಕವಾಗಿ ದೊಡ್ಡ ಲಾಭಗಳಿಸಿಲ್ಲವಾದರೂ ಮುಂದಿನ ದಿನಗಳಲ್ಲಿ ಬೆಳೆಗಾರರಿಗೆ ಪೂರ್ಣ ಪ್ರಮಾಣದ ನಷ್ಟದಿಂದ ಪಾರಾಗಲು ಸರಿಯಾದ ‌ಮಾರುಕಟ್ಟೆ ದೊರೆತರೆ ರೈತರಿಗೆ ನಷ್ಟವಿಲ್ಲ. ಕೊಳೆತು ಹೋಗುತ್ತಿದ್ದ ಕಲ್ಲಂಗಡಿಗೆ ಹೊಸ ರೂಪ ನೀಡಿ ವಿನೂತನ ಪ್ರಯೋಗಕ್ಕೆ ನಾಂದಿ ಹಾಡಿದ ಹೆಗ್ಗಳಿಕೆ ಜಯರಾಮ ಶೆಟ್ಟಿಯವರಿಗೆ ಸಲ್ಲುತ್ತದೆ.
 
ಜಯರಾಮ ಶೆಟ್ಟಿಯವರು ಹೇಳುವಂತೆ ಒಂದು ಟನ್ ಕಲ್ಲಂಗಡಿ ಹಣ್ಣಿನಿಂದ 60 ರಿಂದ 65 ಕೆಜಿ ಬೆಲ್ಲ ತಯಾರಿಸ‌ಬಹುದು. ಯಾವುದೇ ‌ತರಹದ ಅಡ್ಡ ವಾಸನೆ ಇಲ್ಲ. ಕಲ್ಲಂಗಡಿ ಹಣ್ಣಿನ ಬೆಲ್ಲ ಸವಿದವರು ತಮ್ಮ ಅಭಿಪ್ರಾಯವನ್ನು ತಿಳಿಸಲು ತಮ್ಮ ನಿಟ್ಟೂರಿನ ಹೋಟೆಲ್ ನಲ್ಲಿ ಉಚಿತವಾಗಿ 2 ಕ್ವಿಂಟಾಲ್ ಬೆಲ್ಲವನ್ನು ಇರಿಸಿದ್ದೇನೆ ತಿಂದವರು ಬೆಲ್ಲ ರುಚಿಕರವಾಗಿದೆ ಎನ್ನುತ್ತಾರೆ. ಬೆಳೆದ ಕಲ್ಲಂಗಡಿ ಕೊಳ್ಳುವವರಿಲ್ಲದೆ  ಗದ್ದೆಯಲ್ಲಿ ಹಾಗೆ ಕೊಳೆಯದೆ ಪರ್ಯಾಯ
 ರೂಪದಲ್ಲಿ ಬೆಲ್ಲ ‌ಬೆಳೆದು ಮಾದರಿಯಾಗಿ ಹಲವು ರೈತರಿಗೆ ನೆರವಾಗುವುದು ಸಮಾಧಾನ ಆದರೆ ಸರಿಯಾದ ಮಾರುಕಟ್ಟೆ ದೊರೆಯ ಬೇಕು . ಗದ್ದೆಯಲ್ಲಿ ಬೆಳೆದ ಕಲ್ಲಂಗಡಿ ಮಾರಾಟ ಮಾಡಲಾಗದ ಪರಿಸ್ಥಿತಿ ಎದುರಾದಾಗ ಬೆಲ್ಲ ತಯಾರಿಸುವ ಉಪಾಯ ಹೊಳೆದು ಹೊಸ ಪ್ರಯೋಗಕ್ಕೆ ಇಳಿದಿದ್ದೇನೆ. ನನ್ನೊಂದಿಗೆ ನನ್ನ ಹೋಟೆಲ್ ಸಿಬ್ಬಂದಿಗಳು ಸಹಕರಿಸಿದ್ದಾರೆ. ಲಾಕ್ ಡೌನ್ ನಿಂದಾಗಿ ಹೋಟೆಲ್ ಕೂಡ ಸರಕಾರದ ಆದೇಶದಂತೆ ಮುಚ್ಚಿದ್ದು,ಹಗಳಿರುಳು ಬೆವರಿಳಿಸಿ ಬೆಳೆದ ಬೆಳೆಗೆ ಮಾರುಕಟ್ಟೆ ಹಾಗೂ ಸೂಕ್ತ ಬೆಲೆಯು ಇಲ್ಲದೆ ಗದ್ದೆಗಳಲ್ಲಿ ಕಲ್ಲಂಗಡಿ ಕೊಳೆತು ಹೋಗುವುದನ್ನು ನೋಡಲಾಗದೆ. ಯೋಚನೆಗೆ ಒಳಗಾದಾಗ  ಹೊಳೆದದ್ದೆ ಈ ಬೆಲ್ಲದ ಆಲೋಚನೆ. ಬೆಲ್ಲ ‌ಕೆಜಿಗೆ  ಒಳ್ಳೆಯ ದರ ದೊರೆಯ ಬೇಕು ಇಲ್ಲ ಅಂದರೆ ಖರ್ಚು ಹುಟ್ಟು ವುದಿಲ್ಲ. ಆಳುಕಾಳು, ಆಲೆ ಮನೆ ಖರ್ಚು, ಕಟ್ಟಿಗೆ ಖರ್ಚು ಅದು ಅಲ್ಲದೇ ಹಣ್ಣಿನ 49℅ ಸಿಪ್ಪೆ ಹಾಗೂ ಬೀಜ ಮುಖಾಂತರ ಹಾಳಾಗುತ್ತದೆ. 

 ಅಧಿಕೃತ ಮುದ್ರೆ  = ಕಲ್ಲಂಗಡಿ ಬೆಲ್ಲ ಜನ ಮನ್ನಣೆ ಗಳಿಸಿದೆ ಆದರೆ ‌ ಯಾವುದೇ ತರದ  ಲಾಭದ ದೃಷ್ಟಿಯಿಂದ ಪ್ರಾರಂಭಿಸಿದ ವ್ಯವಹಾರವಲ್ಲ ಇದು  ಬೆಳೆದ ಬೆಳೆ  ಹಾಳಾಗದೆ ಪರ್ಯಾಯ ಮಾರ್ಗ ಕಂಡು ಕೊಂಡಿದ್ದು. ಶಿವಮೊಗ್ಗದ ತೋಟಗಾರಿಕಾ  ಇಲಾಖೆ ಕಲ್ಲಂಗಡಿ ಬೆಲ್ಲ ತಯಾರಿ‌ ಸ್ಥಳಕ್ಕೆ  ಬೇಟಿ ‌ ನೀಡಿ ಬೆಲ್ಲದ ಸ್ಯಾಂಪಲ್‌ ಪಡೆದುಕೊಂಡು ಹೋಗಿದ್ದಾರೆ. ಕಾನೂನು ಹಾಗೂ ಆಹಾರ ಉತ್ಪಾದನಾ ‌ ಮಂಡಳಿಯ  ಚೌಕಟ್ಟಿನಲ್ಲಿ ಕಲ್ಲಂಗಡಿ ಬೆಲ್ಲದ  ತಯಾರಿಕೆ‌ ಅಧಿಕೃತ ಮುದ್ರೆ ದೊರತು ಸರಿಯಾದ  ಮಾರುಕಟ್ಟೆ ದೊರೆತರೆ ರೈತರ  ಬದುಕು ‌ಹಸನಾಗುತ್ತದೆ. ಕಲ್ಲಂಗಡಿ ಯಿಂದ ‌ಬೆಲ್ಲ ತಯಾರಿಸುವ ಪ್ರಕ್ರಿಯೆ ಬಗ್ಗೆ  ಸರಕಾರಿ ಸಂಶೋಧನೆ ‌ನಡೆಸಿ‌ ವಾಣಿಜ್ಯ ಕರಣವಾಗಿ ಯಶಸ್ವಿ ಗೊಳಿಸಿದರೆ ರೈತರಿಗೆ ಅನುಕೂಲ ವಾಗಿ ಜಯರಾಮ ಶೆಟ್ಟಿ ಯವರ ಶ್ರಮಕ್ಕೂ ಫಲ ಸಿಗುತ್ತದೆ.

 ಪ್ರತಿ ಯೊಬ್ಬ ಮನುಷ್ಯ ಉನ್ನತಿ – ಅವನತಿ ಅವರವರ ಕೈಯಲ್ಲಿರುವುದು ಎನ್ನುವ ‌ಮಾತು ನಿಜ. ಬಂದ ಪರಿಸ್ಥಿತಿ ಯನ್ನು ‌ಎದುರಿಸಿ ಸರಿಯಾದ ಆಯ್ಕೆ ಯೊಂದಿಗೆ ಅಡಿ ಇಟ್ಟರೆ ವಿಜಯ ಸಾಧಿಸ ಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.ಯಾವಾಗಲೂ ಎನಾದರು  ವಿಶೇಷ ವಿಚಾರದಲ್ಲಿ ತನ್ನನ್ನು ತೊಡಗಿಸಿ ಕೊಳ್ಳುವ ಸಂಶೋಧಕ  ಪ್ರವೃತ್ತಿಯ ಜಯರಾಮ ಶೆಟ್ಟಿಯವರ  ಮನದಲ್ಲಿ ಹೊಳೆದ ಕಲ್ಲಂಗಡಿ ಬೆಲ್ಲದ  ಹೊಸ ಪ್ರಯೋಗವನ್ನು ನೋಡಿ ಅನೇಕ ರೈತರು ಅನುಸರಿಸಿದ್ದು ಬೆಲ್ಲದ ಜನಪ್ರಿಯತೆಗೆ ಹಿಡಿದ ಕೈ ಗನ್ನಡಿ ಎನ್ನಬಹುದು. ಮನಸ್ಸಿದ್ದರೆ ಮಾರ್ಗ ಅನ್ನುವುದು ಇಲ್ಲಿ ‌ನಿಜವೆನಿಸಿದೆ.

Leave a Reply

Your email address will not be published. Required fields are marked *