ಮುಂಬಯಿಯಲ್ಲಿ ಹಕ್ಕಿ ಗೂಡಿನ ವಿಸ್ಮಯ : heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ
ಜಗತ್ತನೇ ತಲ್ಲಣಗೊಳಿಸಿರುವ ಕೊರೊನ ಮಹಾಮಾರಿಯ ವೈರಸ್ ನಿಯಂತ್ರಿಸಲು ಸರಕಾರ ವಿಧಿಸಿದ್ದ ಧೀರ್ಘ ಕಾಲದ ಲಾಕ್ ಡೌನ್ ನಿಂದಾಗಿ ಮಾರ್ಚ ಕೊನೆಯ ವಾರದದಿಂದ ವಾಣಿಜ್ಯ ನಗರಿ, ಕರ್ಮಭೂಮಿ ಎಂದೆಲ್ಲಾ ಕರೆಸಿಕೊಂಡ ಮಾಯನಗರಿ ಮುಂಬಯಿಯಲ್ಲಿ ಲಾಕ್ ಡೌನ್ ಚಾಲ್ತಿಯಲ್ಲಿದ್ದು ಎಂದೂ ನಿದ್ರಿಸದ ನಗರದಲ್ಲಿ ನೀರವ ಆವರಿಸಿದೆ. ಕರೊನಾಲಾಕ್ ಡೌನ್ ಗೂ ಮೊದಲು ಬೆಳಿಗ್ಗೆ ಯಿಂದ ರಾತ್ರಿ ತನಕ ಇರುವ ರೈಲು ವ್ಯವಸ್ಥೆ ಅನುದಿನ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಭಾಯಂದರ್ ಪಶ್ಚಿಮ ರೈಲು ನಿಲ್ದಾಣದ ಟಿಕೆಟ್ ಕೌಂಟರ್ ಎದುರಿನಲ್ಲಿ ಗುಬ್ಬಿ ಜಾತಿಗೆ ಸೇರಿದ ಚಿಕ್ಕ ಚಿಕ್ಕ ವರ್ಣರಂಜಿತ ಹಕ್ಕಿಗಳು ಅಪರೂಪದ ಮಣ್ಣಿನ ಗೂಡು ಕಟ್ಟಿ ಸಂಸಾರ ಹೂಡಿದ್ದು ಬಾಣಂತನ ನಡೆಯುತ್ತಿದೆ. ಅಗಣಿತ ಅಚ್ಚರಿಯ ಬಾನಾಡಿಗಳ ಚಿನ್ನಾಟ, ಚಿಲಿಪಿಲಿ ನಿನಾದ, ಪಕ್ಷಿಗಳ ಕಲರವ ದೊಂದಿಗೆ ಹಕ್ಕಿ ಸಂಕುಲದ ಸುಂದರ ಸಂವಹನದ ನಿನಾದ ಸೃಷ್ಟಿ ಯಾಗಿದೆ. ಹಕ್ಕಿಗಳಿಗೆ ಬೇಕಾದ ಸೂಕ್ಮ ಪರಿಸರ ಹಾಗೂ ತಮ್ಮ ಸಂತಾನೋತ್ಪತ್ತಿಗೆ ಪೂರಕ ವಾತಾವರಣ, ಪಕ್ಷಿಗಳು ನೆಲೆಸಲು ನೈಸರ್ಗಿಕವಾಗಿ ಶ್ರೀಮಂತವಾದ ಸ್ಥಳ ಭಾಯಂದರ್ ನಲ್ಲಿ ಇದೆ. ಸಮುದ್ರಕಿನಾರ, ಉಪ್ಪಿನ ತಯಾರಿಕ ವಿಶಾಲ ದಿಬ್ಬಗಳಲ್ಲಿ ಹೇರಳವಾಗಿ ಸಿಗುವ ಹುಳು ಹಪ್ಪಟೆ ಆಹಾರ ಹಾಗೂ ಕರೊನಾ ಮಹಾಮಾರಿಗೆ ಹೆದರಿಮನೆ ಒಳಗೆ ಉಳಿದ ಜನರ ಸದ್ದು ಗದ್ದಲ ವಿಲ್ಲದ ಒಳ್ಳೆಯ ಆಶ್ರಯತಾಣ ಈಗ ದೊರೆತ್ತಿದ್ದು ಗೂಡು ಕಟ್ಟುವಲ್ಲಿ ನಿಪುಣವಾದ ಹಕ್ಕಿಗಳು ನೆಲೆ ನಿಲ್ಲಲು ಕಾರಣ ವಾಗಿದೆ . ಕಾಂಕ್ರೀಟ್ ಕಾಡಿನಲ್ಲೂ ಮಣ್ಣಿನಲ್ಲಿ ಕಟ್ಟಿಕೊಂಡಿರುವ ಹಕ್ಕಿಗೂಡು ಅದರೊಳಗೆ ಚುಯಿಗುಟ್ಟುವ ಹಿಂಡು ಹಿಂಡಾಗಿ ವಾಸಿಸುವ ಹಕ್ಕಿಪಕ್ಕಿಗಳು . ಅಮ್ಮನ ಕೊಕ್ಕಿನೂಟಕ್ಕೆ ಬಾಯ್ತೆರೆದು ಸಂಭ್ರಮಿಸುವ ಮರಿ ಹಕ್ಕಿಗಳು .ಗುಬ್ಬಿ ಜಾತಿಗೆ ಸೇರಿದ ಹಕ್ಕಿಗಳ ಸಮೂಹ ಮುಂಬಯಿಯ ಹಾಗೂ ಉಪನಗರದ ಎಲ್ಲಾ ವಹಿವಾಟು ಸ್ತಬ್ಧ ಗೊಂಡಿರುವ ಈ ಕಾಲದಲ್ಲಿ ನಿಶಬ್ದ ನಿರವ ವಾತಾವರಣವನ್ನು ತಮ್ಮ ಸಂತಾನೋತ್ಪತ್ತಿಗಾಗಿ ಆಯ್ಕೆ ಮಾಡಿಕೊಂಡಿವೆ . ಚಿಕ್ಕ ಚಿಕ್ಕ ಕಾಲು, ಕಂದುಬಣ್ಣದ ರೆಕ್ಕೆ, ಹೊಟ್ಟೆಯ ಹಾಗೂ ಹಣೆಯ ಭಾಗ ಬಿಳಿ ಇರುವ ಈ ಹಕ್ಕಿಗಳು ಸಾಮಾನ್ಯವಾಗಿ ಎಲ್ಲಾ ಹಕ್ಕಿಗಳಂತೆ ಸಂಜೆ ಗೂಡಿಗೆ ಆಗಮಿಸುವ ಇವುಗಳ ಚುರುಕು, ಸೂಕ್ಷ್ಮ ಗಾಹಿತನಕ್ಕೆ ಆಶ್ಚರ್ಯವಾಗುತ್ತದೆ.
ಕರೊನಾದ ತೀವ್ರ ಹೊಡೆತದಿಂದ ತಪ್ಪಿಸಿಕೊಳ್ಳಲು ಮುಂಬಯಿ ಯಿಂದ ತನ್ನ ಊರಿನತ್ತಾ ಮುಖಮಾಡಿ ಮನೆ ಖಾಲಿಮಾಡಿ ಲೆಕ್ಕ ವಿಲ್ಲದಷ್ಷು ಮಂದಿ ತಮ್ಮ ತಮ್ಮ ಊರಿನೆಡೆಗೆ ಪಯಣ ಬೆಳೆಸಿದ್ದರು . ಆದರೆ ವಿಪರ್ಯಾಸ ನೋಡಿ ಇಲ್ಲಿ ಪಕ್ಷಿಗಳ ಜಾಣ್ಮೆಗೆ ತಲೆದೂಗಲೆ ಬೇಕು. ಈ ಪುಟ್ಟ ಹಕ್ಕಿಗಳು ಇಲ್ಲೆ ನಲೆನಿಂತು ಗೂಡುಕಟ್ಟಿ, ಮೊಟ್ಟೆಯಿಟ್ಟು ,ಮರಿಮಾಡುವ ತರಾತುರಿಯಲ್ಲಿದ್ದು.ಈಗ ಮರಿಗಳಿಗೆ ಆಹಾರ ಗುಟುಕು ನೀಡಿ ಅವು ಬೆಳೆದು ಹಾರಾಡುವುದನ್ನು ನೋಡಿ ಸಂತಸ ಪಡುವಹಂತದಲ್ಲಿವೆ. ಈ ಹಕ್ಕಿ ಮರಿ ಬೆಳೆದು ಹಾರಾಡುವ ಶಕ್ತಿ ತಂದು ಕೊಳ್ಳುವವರೆಗೂ ಲಾಕ್ ಡೌನ್ ತೆರೆವುಗೊಳ್ಳುವ ಹಾಗೆ ಕಾಣುತ್ತಿಲ್ಲಾ. ಪ್ರಕೃತಿಯ ಸೊಬಗಿನ ನಿರ್ಮಲತೆಯ ಪ್ರತೀಕವಾದ ಬಾನಾಡಿಗಳು ನೆಲೆ ನಿಲ್ಲಲ್ಲು ಜಾಗವಿಲ್ಲದಂತೆ ಮಾಡಿದ್ದ ಮಾನವ. ಒಮ್ಮೊಮ್ಮೆ ಹೀಗೆ ಅನ್ನಿಸುತ್ತದೆ ಕರೊನಾ ಮಹಾಮಾರಿ ನೆವನದಲ್ಲಿ ಪ್ರಕೃತಿ ತನ್ನನ್ನು ತಾನು ರಕ್ಷಿಸಿಕೊಳ್ಳತ್ತಿದೆಯೋ ಹೇಗೆ. ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಲೆಂದು ಮನುಕುಲವ ಮನೆ ಒಳಗೆ ಬಂದಿಸಿದನೆ.
ಕೆಲದಿನಗಳ ಹಿಂದೆ ಮನೆಯಲ್ಲಿ ಕಾಫಿ ಹಿರುತ್ತಾ ಕುಳಿತ್ತಿದ್ದೆ ಪಕ್ಕದ ಮನೆಯ ಚಿಕ್ಕ ಹುಡುಗ ” ಶೆಟ್ಟಿ ಆಂಟಿ… ರೈಲು ನಿಲ್ದಾಣದ ಟಿಕೇಟ್ ಕೌಂಟರ್ ಎದುರು ಹಕ್ಕಿಗಳು ಗೂಡು ಕಟ್ಟಿದೆ. ಲೆಕ್ಕ ಮಾಡಲಾಗದಷ್ಷು ಹಕ್ಕಿಗಳು ಕೂತಿದೆ” ಎಂದು ನನ್ನಲ್ಲಿ ಅರುಹಿದ. ಸರಿ ಎಂದು ಸುಮ್ಮನಿದ್ದೆ. ಎತ್ತಣ ರೈಲು ನಿಲ್ದಾಣ ಎತ್ತಣ ಹಕ್ಕಿಗೂಡು ಎಂದೆನಿಸಿತು.ಆದರೆ ರೈಲು ನಿಲ್ದಾಣಕ್ಕೂ ಹಕ್ಕಿ ಗೂಡಿಗೂ ಕರೊನಾ ಲಾಕ್ ಡೌನ್ ನಂತರ ಅವಿನಾಭಾವನಂಟು ಎನ್ನಲೇಬೇಕು. ಸದಾ ಜನರ ಸದ್ದು ಗದ್ದಲದಿಂದ ಕೂಡಿರುತ್ತಿದ್ದ ರೈಲು ನಿಲ್ದಾಣದ ಟಿಕೇಟ್ ಕೌಂಟರ್ ಗೆ ಇದ್ದಕ್ಕಿದಂತೆ ಬೀಗ ಬಿದ್ದಿದ್ದೆ ಹಕ್ಕಿ ಗೂಡುಕಟ್ಟಲು ನಾಂದಿಯಾಯಿತು. ರೈಲು ಹಳಿಗಳು ಸ್ತಬ್ಧ ಗೊಂಡಿವೆ . ಈಗ ಇಲ್ಲಿ ಕೇಳಿ ಬರುತ್ತಿರುವುದು ಕೇವಲ ಹಕ್ಕಿಗಳ ಇಂಚರ.ಭೂಮಿಯಲ್ಲಿ ವಾಸಿಸುವ ಜೀವಿಗಳ ವೈವಿಧ್ಯಗಳಲ್ಲಿ ಪಕ್ಷಿಗಳ ಸಹಬಾಳ್ವೆ ಸಾಮರಸ್ಯನೋಡಿ ನಾವು ಪಾಠ ಕಲಿಯಲೇ ಬೇಕು.
ಯಾವ ಶಿಲ್ಪಿ ಕೆತ್ತಿದನೋ, ಇನ್ನಾರ ಕಲಾಚಾಕಚಕ್ಯತೆಯೋ ಎಂಬಂತೆ ರಚನಾತ್ಮಕ ರೀತಿಯ ಗೂಡು ಕಟ್ಟುವ ಅರ್ಪೂವ ಸಾಮರ್ಥ್ಯ ಹೊಂದಿರುವ ಹಕ್ಕಿಗಳ ಮನೆಯನ್ನು ನೋಡಿ ಬೆರಗಾದೆ. ಅಂದೆಂತ ಸೂಕ್ಷ್ಮ ತೆ ಯಿಂದ ಆಸುಪಾಸಿನಲ್ಲಿ ಸಿಕ್ಕ ಮಣ್ಣು ತನ್ನ ಕೊಕ್ಕಿನಿಂದ ಆರಿಸಿ ಹಿಡಿದು ತರುವ ದ್ರಶ್ಯ. ಒಂದೇ ತೆರನಾದ ಹೂಜಿರೂಪದ ರಂಧ್ರಗಳಲ್ಲಿ ಮಣ್ಣಿನ ಗೂಡು ನಿರ್ಮಾಣ ಮಾಡಿದ ರೀತಿ ಹಾಗೂ ತಾಂತ್ರಿಕ ಕೌಶಲ್ಯ ಕ್ಕೆ ,ಆ ಕಲೆಗಾರಿಕೆಗೆ, ಹಕ್ಕಿ ಗೂಡಿನ ವಿಸ್ಮಯ ಲೋಕಕ್ಕೆ ಬೆರಗಾಗಲೆ ಬೇಕು. ಗೂಡಿನ ರಂಧ್ರದ ಒಳಗೂ ಹೊರಗೂ ಹಾರಾಡುತ್ತಾ ಕೊಕ್ಕಿನಿಂದ ಮಣ್ಣು ತಂದು ಮೇತ್ತಿ ಒಂದರಪಕ್ಕ ಒಂದಿರಿಸಿ ಮೇಲೆ ಕೆಳಗೆ ಸುತ್ತಾ ಮುತ್ತಾಕಟ್ಟುತ್ತಾ ಗೂಡಿನ ರೂಪ ಕೊಟ್ಟು ತಯಾರಿಸಿದ ಗೂಡು ನೋಡಿದರೆ ಎಂತವರೂ ಬೆರಗಾಗಲೆ ಬೇಕು. ಬಹಳ ಅಚ್ಚುಕಟ್ಟಾಗಿ ಚಿತ್ರ ಬರೆದಂತೆ ಅಗಲವಾಗಿ ಹಬ್ಬಿಕೊಂಡಿರುವ ಈ ಗೂಡಿ ನೊಳ್ಳಗೆ ಚಿಕ್ಕ ಚಿಕ್ಕ ಅನೇಕ ಕೋಣೆಗಳಿದ್ದು ಹಲವಾರು ಹಕ್ಕಿಗಳು ವಾಸಿಸುವಷ್ಟು ಸ್ಥಳಾವಾಕಾಶವಿರುವ ಗೂಡುಕಟ್ಟಿ ಕೊಂಡಿವೆ ಗೂಡಿಗೆ ಹಾನಿಯಾದರೆ ಬೀತಿಯಿಂದ ಕೂಗಾಡಿ ಹಾರಿಹೊಗುತ್ತವೆಯೆ ಹೊರತು ಪ್ರತಿದಾಳಿ ನಡೆಸುವ ಸ್ವಭಾವ ಇವಕ್ಕಿಲ್ಲಾ
ಶತ್ರು ದಾಳಿಗೆ ಒಳಗಾಗದಂತೆ ರಕ್ಷಣೆ ಒದಗಿಸುವ ಹಕ್ಕಿಗಳ ಈ ಅರಮನೆ ಯಲ್ಲಿ ಹಕ್ಕಿಗಳದೊಂದು ಬೇರೆ ಯದೇಲೋಕ , ಆಹ್ಲಾದಕರ ವಾತಾವರಣಕ್ಕೆ ಮೈಯೊಡ್ಡಿ ಚಿಲಿಪಿಲಿ ಗುಟ್ಟುತ್ತಾ ಸುಳಿದಾಡುವ ಈ ಪಕ್ಷಿಗಳಿಗೆ ಗೂಡು ಕಟ್ಟಲು ಜಾಗವಿಲ್ಲದ ಪರಿಸ್ಥಿತಿಯಲ್ಲಿ ಹಕ್ಕಿಗಳ ಸಂಖ್ಯೆ ಇಳಿಯುವುದು ಬದಲಾದ ಪರಿಸ್ಥಿತಿಗಳಿಗೂ ಇವುಗಳ ಸಂಖ್ಯೆಯಲ್ಲಿ ಏರಿಕೆ ಆಗ ಬಹುದು.ಕರೊನಾ ಮಹಾಮಾರಿಯಿಂದ ಜನದಟ್ಟಣೆ ಇಲ್ಲದೆ ನೀರವ ಮೌನವಾದ ಮುಂಬಯಿ ಈಗ ಇವುಗಳ ಬದುಕಿಗೆ ಸೂಕ್ತ ಸ್ಥಳವೆನಿಸಿರ ಬಹುದು. ರಸ್ತೆ ಬದಿಯ ವ್ಯಾಪಾರ ವಹಿವಾಟು ಮಾರುಕಟ್ಟೆ ಮಾಯವಾಗಿ ಜನಸಂಚಾರವೆ ವಿರಳವಾಗಿ ಸದಾಜನ ಜಂಗುಲಿಯಿಂದ ಕೂಡಿರುತ್ತಿದ್ದ ರೈಲು ನಿಲ್ದಾಣದ ಟಿಕೇಟ್ ಕೌಂಟರ್ ಬಿಕೋಎನ್ನುತಿದೆ. ಪದೇ ಪದೇ ಸ್ಥಾನ ಬದಲಿಸಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಹಕ್ಕಿಗಳು ಸದ್ದಿಲ್ಲದೆ ಈ ಪ್ರದೇಶದಲ್ಲಿ ಸಂತಾನೋತ್ಪತ್ತಿ ನಡೆಸಿದೆ. ಲಾಕ್ ಡೌನ್ ಮುಗಿದ ನಂತರ ರೈಲ್ವೆ ಕರ್ಮಚಾರಿಗಳು ಈ ಚಂದದ ಹಕ್ಕಿ ಗೂಡನ್ನು ತೆಗೆಯಲು ಒಂದು ಕ್ಷಣವಾದರೂ ಬೇಸರಗೋಳ್ಳ ಬಹುದು. ಅಷ್ಟು ನಾಜೂಕು ಹಕ್ಕಿಗೂಡಿನ ವಿಸ್ಮಯ ನೋಟವನ್ನು ಹತ್ತಿರದಿಂದ ನೋಡಿ ಅವುಗಳ ನಡವಳಿಕೆಯನ್ನು ಗಮನಿಸುವ ಅಪೂರ್ವ ಅವಕಾಶ ಈ ಲೋಕಡೌನಲ್ಲಿ ದೊರೆಯಿತು.
ತಮ್ಮ ಚಿಂವ್ ಚಿಂವ್ ರಾಗವನ್ನು ಎಲ್ಲಡೆ ಬೀರುವ ಸುತ್ತಲಿನ ವಾತಾವರಣ ಇಂಪಾಗಿರಿಸಿ ಕಂಪಾಗಿಸುವ ಈ ಪುಟ್ಟ ಹಕ್ಕಿಗೆ ಕಾಡಿಗಿಂತ ತೋಟ,ಬಯಲು, ನಿರ್ಜನ ಪ್ರದೇಶ ದಲ್ಲಿ ವಾಸಿಸಲು ಇಷ್ಟಪಡುತವಂತೆ. ಭಾರತದಾದಾಂತ್ಯ ಕಾಣ ಸಿಗುವ ಈ ಪುಟಾಣಿಗಳು ಮುಸುಕಲು ಬಣ್ಣದಿಂದ ಜನರ ಗಮನಕ್ಕೆ ಬರುವುದು ಕಡಿಮೆ . ಆಹಾರ ನೀರು ಸಂತಾನೋತ್ಪತ್ತಿಗೆ ಬೇಕಾದ ವಾತಾವರಣವನ್ನು ಹುಡುಕಿಕೊಂಡು ಪಕ್ಷಿಗಳು ಸಾವಿರಾರು ಕಿಲೋ ಮೀಟರ್ ಸಂಚಾರ ಮಾಡುತ್ತವೆ. ಈ ಹಕ್ಕಿಗಳು ಮರಿಮಾಡುವ ಸಮಯದಲ್ಲಿ ಅದರ ಗೂಡಿರುವ ಕಡೆ ಹೆಚ್ಚು ಜನ ಓಡಾಡುವಂತಿಲ್ಲ ಗದ್ದಲ ಆದರೆ ಅವುಗಳಿಗೆ ಕಿರಿಕಿರಿ ಆಗುವ ಪುಕ್ಕಲು ಸ್ವಭಾವದವುಗಳು ಆದರೆ ಈಗ ವಾಹನ ಹಾಗೂ ಮಾನವರ ಸದ್ದು ಗದ್ದಲ ವಿಲ್ಲದೆ ನೆಮ್ಮದಿ ಯಿಂದ ತನ್ನ ವಂಶಾಭಿವೃದ್ಧಿ ಗೆ ಗಮನ ನೀಡಿ ಕಟ್ಟಿದ ಗೂಡಂತೂ ಕಣ್ತಂಬಿಕೊಳ್ಳುವಂತಿದೆ. ಗೊರವ ಪಕ್ಷಿಗಳನ್ನು ಹೊಲುವ ಚಿಕ್ಕ ಹಕ್ಕಿ ಕಾಯಂ ಅತಿಥಿಗಳಂತೆ ಡೊಡ್ಡ ಗುಂಪಿನಲ್ಲಿ ಇಲ್ಲಿಗೆ ಆಗಮಿಸಿವೆ . ಯಾವುದೇ ತರದ ಜೀವ ಭಯದ ಸೂಚನೆ ಸಿಕ್ಕರು ತಮ್ಮ ವಾಸ್ತವ್ಯ ಬದಲಾಯಿಸುವ ಹಕ್ಕಿಗಳು ಏಕಾಂತಕ್ಕೆ ಭಂಗ ಬರುವುದಿಲ್ಲವೋ ಅಲ್ಲಿಯವರೆಗೆ ಒಂದೆಡೆ ಗುಂಪುಕಟ್ಟಿ ಕೊಂಡು ಕುಟುಂಬ ಸಮೇತ ವಿಹರಿಸುವ ಪುಟ್ಟ ಪುಟ್ಟ ಪಕ್ಕಿಗಳಿವು.
ಗುಬ್ಬಚ್ಚಿ ಗಿಂತಲೂ ಸಣ್ಣ ಗಾತ್ರದ ಈ ಹಕ್ಕಿಗಳು ಚಟುವಟಿಕೆ ಯಿಂದ ಕೂಡಿದ್ದು ರಭಸದಲ್ಲಿ ಏನೋ ಹುಡುಕಾಡಿದಂತೆ ಹಾರಡುತ್ತಿರುತ್ತವೆ. ಸಂಘಜೀವಿಗಳಾದ ಇವುಗಳು ಗೂಡು ನಿರ್ಮಾಣದಲ್ಲಿ ಕಲಾತ್ಮಕತೆ ಯಿಂದ ಗಂಡು ಹಕ್ಕಿ ಹೆಣ್ಣುಹಕ್ಕಿಗಳೆರಡು ಶ್ರಮವಹಿಸಿ ಗೂಡುಕಟ್ಟುವಿಕೆಯಿಂದ ಹಿಡಿದು ಮರಿಗಳನ್ನು ಸಶಕ್ತ ರನ್ನಾಗಿಸುವ ವರೆಗೂ ನಿರಂತರ ವಾಗಿ ಜೊತೆ ಯಾಗಿರುತ್ತದೆ. ಕಾಳು,ಕಡ್ಡಿ,ಕೀಟ ಗಳನ್ನು ತಿಂದು ಬದುಕುವ ಜೀವಿ ಆದರೆ ಎಳೆ ಮರಿಗಳ ಬೆಳವಣಿಗೆಗೆ ಬೇಕಾಗುವ ಪೌಟಿಕಾಂಶ ಸಿಗಲೆಂದು ಸಣ್ಣ ಕ್ರಿಮಿ ಕೀಟಗಳನ್ನು ತಿನಿಸುತ್ತದೆ. ಈ ಹಕ್ಕಿ ಗಳಿಗೆ ನಗರ ಪ್ರದೇಶದಲ್ಲಿ ವಿಪರಿತ ವಾಹನ ದಟ್ಟಣೆಯ ಕಾರಣ ಕ್ರಿಮಿ ಕೀಟಗಳು ಹೇರಳವಾಗಿ ಸಿಗದೆ ನಗರದಿಂದ ದೂರ ಸರಿಯುತ್ತವೆ ಕರೋನಾಮಹಾ ಮಾರಿ ಹಿನ್ನಲೆಯಿಂದ ವಾಹನ ಹಾಗೂ ಜನದಟ್ಟಣೆಯು ಇಲ್ಲದೆ ಪಕ್ಷಿಗಳಿಗೆ ಬೇಕಾದ ವಾತಾವರಣ ಸಿಕ್ಕಿದೆ. ಪಕ್ಷಿಗಳು ಸಂತಸದಿ ಗೂಡು ಕಟ್ಟಿ ಮರಿ ಮಾಡಿ ಸಂತಾನೋತ್ಪತ್ತಿಯಲ್ಲಿ ತೊಡಗಿದೆ. ಇದಕ್ಕೆ ನೋಡಿ ಹೇಳುವುದು ಕಾಲ ಎಲ್ಲರಿಗೂ ಪಾಠ ಕಲಿಸಿದಂತೆ ಅವಕಾಶವನ್ನು ನೀಡುತ್ತದೆ ಸದುಪಯೋಗದ ಜಾಣ್ಮೆ ಇರಬೇಕಷ್ಟೆ.