ಮಳೆ ಎಂಬ ದೃಶ್ಯ ಕಾವ್ಯ

maley latha santhosh shetty
Spread the love

ಮಳೆಯೆಂದರೆ ನೀರಧಾರೆ ಮಾತ್ರವಲ್ಲ ಭೂರಮೆಯ ಹಸಿಯಾಗಿ, ಹಸಿರಾಗಿಸುವ ಮುಂಗಾರಿನ ಅಭಿಷೇಕ. ಪರಿಸರದ‌ ವಾತಾವರಣವನ್ನೆ‌ ಬದಲಾಯಿಸ ಬಲ್ಲ ಅಮೃತ ಸಿಂಚನಾ. ಇದಕ್ಕೆ ಪುಳಕಗೊಳ್ಳೊ ನಾನಂತೂ ಬಾಲ್ಯದಲ್ಲಿ ಮಳೆ ಸುರಿವಾಗ ಅಂಗಳದ ಲತೆಯಾಗುತ್ತಿದ್ದೆ. ಬಿಸಿಲ ಬೇಗೆಯಿಂದ ಕಾದ‌ ಇಳೆಗೆ ಸುರಿವ ಧಾರಕಾರ ‌ಮಳೆ‌ ಹಾಗೂ ಮಳೆಗಾಲದ ‌ಮುನ್ಸೂಚನೆ ನೀಡುವ ಹಲವು ಪ್ರಾಕೃತಿಕ ವೈಚಿತ್ರ್ಯದ ಆತಂಕದ ‌ಕಾರ್ಮೋಡ, ಗುಡುಗು ,ಸಿಡಿಲು, ಕಪ್ಪೆಗಳ ಗುಟುರುವಿಕೆ, ಮಿಂಚು ಹುಳುಗಳ‌ ಸಂಚಾರಗಳ ನಡುವೆ ಮೊದಲ ‌ಮಳೆ ಸ್ಪರ್ಶವಾಗುತ್ತಲೆ ಮಣ್ಣಿನಿಂದ ಹೊರ ಹೊಮ್ಮಿವ ಪರಿಮಳ ಆಘ್ರಣಿಸುತ್ತಾ ಬೇಸರವಿಲ್ಲದೆ‌ ಮಳೆಯಲ್ಲಿ ನೆನೆದು ಒದ್ದೆಯಾಗಿ ಮನೆಗೆ ಬರುತ್ತಿದಂತೆ ನಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡುವ ಅಮ್ಮನ ಉಪದೇಶವನ್ನು ಲೆಕ್ಕಿಸದೆ ಸುರಿವ ಮಳೆಯೊಂದಿಗೆ ನನ್ನದು ಲವಲವಿಕೆಯ ಮಳೆಯಾಟ.
ಕಾರ್ಮುಗಿಲು ಕವಿದು ಧೊ ಎಂದು ಇಳೆಗೆ ತಂಪೆರೆವ ಮಳೆಗಾಲದ ಅಪೂರ್ವ ಅನುಭವ ನೋಡಿ ಅನುಭವಿಸ‌ಬೇಕು.ಮುಂಗಾರು ಮೋಡಗಳು ಸೃಷ್ಟಿಸುವ ಚಿತ್ತಾರದ ಆಟ ನೋಡುಗರಲ್ಲಿ ಮುದ ನೀಡುತ್ತದೆ. ಕ್ಷಣಾರ್ಧದಲ್ಲಿ ವಿವಿಧ ಆಕೃತಿಗಳಾಗಿ ಬದಲಾಗುತ್ತಾ ಆಗಸದಿ ಪರ್ವತ ಶ್ರೇಣಿಗಳಂತೆ, ಕಡಲ ನೀರ ನೊರೆಯಂತೆ ,ಹತ್ತಿಯ ರಾಶಿಯಂತೆ ಮೈದಳೆದು ಭೂಮಿಯ ತಬ್ಬುವ ಮೋಡಗಳು ನೀಲಾಕಾಶದಲ್ಲಿ ನಲಿವ ನೋಟವೇ ಮಳೆ ಎಂಬ ದೃಶ್ಯ ಕಾವ್ಯ.

ಮಳೆಗಾಲದಲ್ಲಿ ಅಲ್ಲಲ್ಲಿ ಧುಮ್ಮಿಕ್ಕುವ ಜಲಪಾತವನ್ನು ಕಣ್ತುಂಬಿಕೊಳ್ಳ ಬಹುದು. ಈ ವರ್ಷ ಮುಂಗಾರು ಬರುವ ಮೊದಲೆ ಮಳೆರಾಯ ಆಭರ್ಟಿಸಿದ್ದಾನೆ. ಮುಂಗಾರು ಪೂರ್ವ ಅವಧಿಯಲ್ಲಿ ಸುರಿದ ಮಳೆಯ ಹಿನ್ನೆಲೆಯಲ್ಲಿ ‌ನಿಗದಿತ ಅವಧಿಗೆ‌ ಮೊದಲೆ ಹಂಗಾಮಿ ಕೃಷಿ ಚಟುವಟಿಕೆಗೆ ಭರದ ಚಾಲನೆ ಸಿಕ್ಕಿತು. ಅಂದರೆ ಪ್ರತಿ ವರ್ಷ ಜೂನ್ ಮೊದಲ ವಾರದಲ್ಲಿ ಕೃಷಿ ಚಟುವಟಿಕೆಗೆ ರೈತರು ಸಿದ್ದವಾಗುತ್ತಿದ್ದವರು 15 ದಿನ ಮುಂಚಿತವಾಗಿ ಕೃಷಿಕಾಯಕದಲ್ಲಿ ತೊಡಗಿದ್ದಾರೆ. ಮಳೆ ರಾಯ ಕೃಷಿ ಭೂಮಿ ಹಾಗೂ ಪ್ರಕೃತಿಯನ್ನು ಹಸನುಗೊ ಳಿ‌ಸಿದ್ದಾನೆ. ಸೃಷ್ಟಿಯ ಸುಂದರತೆಗೆ ಬಣ್ಣ ಬಳಿವ ಕಲಾಕಾರ ಮಳೆ. ಇಳೆಗೆ ಜೀವ ತುಂಬಲು ಸುರಿವ ಮಳೆಯಂತು ರೈತನ ಪಾಲಿಗೆ ಅಮೃತ. ಬಿರು ಬೆಸಿಗೆ ಮುಗಿದು ಇಳೆಗೆ ಮಳೆ‌ತರಲು ಮೋಡಗಳು ಆಗಸದಿ ನರ್ತಿಸುತ್ತಿರುವಾಗ ರೈತ ಹೊಲದಲ್ಲಿ ಬೀಜ ಬಿತ್ತಿ ಬೆಳೆ ತೆಗೆಯಲು ಅಣಿಯಾಗುತ್ತಾ ಬಟ್ಟಬಾನಲಿ ತೇಲುತ್ತಾ‌ ನಲಿವ ಮುಗಿಲು‌ ನೋಡಿ ರೈತ ಪುಳಕಗೊಳ್ಳುತ್ತಾನೆ. ಬೇಸಾಯದ ಎಲ್ಲಾ ಕೆಲಸ ಕಾರ್ಯ ಮಳೆಯನ್ನೇ ಅವಲಂಭಿಸಿದೆ. ಮಳೆರಾಯನ ಆರ್ಭಟಕ್ಕೆ ಹಳ್ಳಿಯ ಜನ ಹೆದರದೆ ಹೊಲಗದ್ದೆಗಳಲ್ಲಿ ಕೆಲಸಕ್ಕೆ ತೊಡಗುತ್ತಾರೆ. ಗಂಡಸರು ಕಂಬಳಿಯನ್ನು ಹೊದ್ದು ಕೆಲಸ ಮಾಡಿದರೆ ಹೆಂಗಸರು ದೂಪದ ಎಲೆಯಿಂದ ಮಾಡಿದ ಗೋರಬನ್ನು ತಲೆಯಲ್ಲಿಟ್ಟು ಮಳೆಯಿಂದ ರಕ್ಷಣೆ ಪಡೆಯುತ್ತಾರೆ. ವಾಡಿಕೆಗಿಂತ ಹೆಚ್ಚು ಮಳೆ ಬಂದರು ,ಕಡಿಮೆ ಬಂದರು ಬೈಗುಳವೇ ಮಳೆಗೆ.

ಬೇಸಿಗೆ ಮುಗಿಯುತ್ತಲೆ ಗ್ರಾಮೀಣ ಪ್ರದೇಶದ ಜನರು ಮಳೆಗಾಲಕ್ಕಾಗಿ ಆಹಾರ ಸಂಗ್ರಹಿಸಿಡುವ ಕ್ರಮವಿತ್ತು ಸೌತೆ ಕಟ್ಟಿಇಡುವುದು ಹಲಸಿನ‌ ಸೊಳೆ ಉಪ್ಪು ನೀರಿಗೆ ಹಾಕಿಟ್ಟು ಮಳೆಗಾಲಕ್ಕೆ ಶೇಖರಿಸಿಡುವುದು. ಹಲಸಿನ ಗೆಣಸಿನ ಹಾಗೂ ಅಕ್ಕಿಹಪ್ಪಳ, ಸಂಡಿಗೆ ಮತ್ತು ಭರಣಿಯಲ್ಲಿ ಮಾವಿನಕಾಯಿ ಮಿಡಿ ಉಪ್ಪಿನಕಾಯಿ ಹಾಕಿ ಸಂಗ್ರಹಿಸುತಾರೆ. ಹಳ್ಳಿಗರು ಮುಂಗಾರು ಪ್ರಾರಂಭವಾಗಿ ಎಲ್ಲೆಡೆ ನೀರು ತುಂಬಿದ ಮೇಲೆ ಕತ್ತಲಲ್ಲೆ ನದಿ, ತೊರೆ, ಗದ್ದೆ ಬದಿಯಲ್ಲಿ ಟಾರ್ಚ್ ಹಿಡಿದು ಮೀನು,ಏಡಿ ಬೇಟಿಯಾಡಲು ಹೋಗುತ್ತಾರೆ. ಮಳೆಗಾಲ ಬಂತೆಂದರೆ ಮಳೆಗಾಲದ ಅತಿಥಿಗಳಾದ ಅಣಬೆ, ಕಳಲೆ, ಏಡಿ ಸಿಗುವ ಸಂಭ್ರಮ. ತುಂತುರು ಮಳೆಯಲ್ಲಿ ಇವುಗಳ ಹುಡುಕಾಟಕ್ಕೆ ನಮ್ಮೆಲ್ಲರ ಪರದಾಟ . ಧಾರಾಕಾರ ಮಳೆಗೆ ಒಳಗೆ ಕುಳಿತು ವಿಶೇಷ ಖಾದ್ಯ ಹಾಗೂ ಹಪ್ಪಳ- ಸಂಡಿಗೆ ತಿನ್ನುವ ರುಚಿಯ ಮಜವೇ ಬೇರೆ.

ಅದರಲ್ಲೂ ಮಳೆಗಾಲದ ಕರಿ ಮುಗಿಲು ರಭಸದ ಮಳೆ ಇಡಿ ದಿನವೂ ಮುಸ್ಸಂಜೆ ಅಂತೆ ಭಾಸವಾಗುವ ವಾತಾವರಣದಲ್ಲಿ ಮಳೆ ಎಂದರೆ ಅದೇನೋ ಉತ್ಸಾಹ. ಮಳೆ ಹನಿಗೆ ಪುಳಕ ಗೊಳ್ಳದವರಾರು. ಬಾಲ್ಯದಲ್ಲಿ ಹೆಚ್ಚು ಮಳೆ ಬಂದು ಶಾಲೆಗೆ ರಜೆ ಸಿಗಲೆಂದು‌ ಮುಗ್ಧ ಮನದಲ್ಲಿ ದೇವರಲ್ಲಿ ಪ್ರಾರ್ಥಿಸುತ್ತಾ ಆಗಾಗ ಆಗಸ ನೋಡುತ್ತಿದ್ದ ದಿನಗಳು ಈಗ ನೆನಪಾದಾಗೆಲ್ಲಾ ನಗು‌ ಉಕ್ಕಿ‌ ಬರುತ್ತದೆ. ಹೂಯ್ಯೋ..ಹೂಯ್ಯೋ‌ ಮಳೆರಾಯ ಎಂದು ಹಾಡುತ್ತಾ ಕಾಗದದ ದೋಣಿ ಮಾಡಿ ಮನೆ ಹೋಸ್ತಿಲ ಒಳಗೆ ಕುಳಿತು ಅಂಗಳದಲ್ಲಿ ‌ಹರಿವ ನೀರಿಗೆ ದೋಣಿ ಬಿಟ್ಟು ಸಂಭ್ರಮಿಸು ತಿರುವ ಬಾಲ್ಯದ ದಿನಗಳು ಈಗ ಕಾಡುತ್ತಿರುವ ನೆನಪುಗಳು. ಮಳೆ ಪ್ರಾರಂಭವಾಗುತ್ತಲೇ ಒಳಗಡೆ ಇರಿಸಿದ ಕೊಡೆ ರೈನ್ ‌ಕೋಟ್ ಗಳು ಹೊರ ಪ್ರಪಂಚಕ್ಕೆ ಅಡಿ‌ ಇಡುತ್ತವೆ.
ಮಳೆಗಾಲ ಬಂದಾಗೆಲ್ಲಾ ಅಮ್ಮ ಹೇಳುತ್ತಿದ್ದ ಆ ನಂಬಿಕೆಯ ಮಾತುಗಳು. ಇದು ಆರ್ದ್ರಾಮಳೆ ದಾರಿದ್ಯ ದೂರಮಾಡುವ ಶಕ್ತಿಶಾಲಿಮಳೆ .ಸ್ವಾತಿ ಮಳೆ ಬಂದರೆ ನೆಲದಲ್ಲಿ ಮುತ್ತು ಬೆಳೆಯುತ್ತದೆ. ಇನ್ನೇನು ಧರಣಿ ತಣಿಸುವ ಭರಣಿ ಮಳೆ ಪ್ರಾರಂಭವಾಗುತಿದೆ ಬೀಜ ಬಿತ್ತ ಬೇಕು.ಆಶ್ಲೇಷ ಮಳೆ ಬರುವಾಗ ಒಂದು ಹೊತ್ತಿನ ‌ಗಂಜಿ ಇದ್ದವರು ಮನೆಯಿಂದ ಹೊರ ಹೋಗಲಾರರು ಎನ್ನುತಿದ್ದ ಮಾತು ಇಂದಿಗೂ ಕಿವಿಯೊಳಗೆ ಕಂಪಿಸುತ್ತಿದೆ. ಮನೆಯವರ ಕಣ್ಣು ತಪ್ಪಿಸಿ ಜಡಿ‌ಮಳೆಯಲ್ಲಿ ಒಂದು ಸುತ್ತು ಗದ್ದೆ, ತೋಟಗಳತ್ತಾ ಸುತ್ತಾಡಿ ಬರುವ ನನ್ನ ಬಾಲ್ಯದ ತುಂಟಾಟ ಇಂದು ಮುಂಬಯಿನ ಬಹುಮಹಡಿ ಕಟ್ಟಡದ ಮನೆಯೊಳಗೆ ಕುಳಿತು ನಾನು ಮಳೆಯ ಸಿಂಚನಕ್ಕೆ ಕಾತರಿಸುವಾಗ ನೆನಪಾಗುವುದು ನಮ್ಮೂರ ಮಳೆ ಎಂಬ ದೃಶ್ಯ ಕಾವ್ಯ. ಒಂದೇ ಮಳೆಗೆ ತತ್ತರಿಸುವ ಮುಂಬಯಿಯ ಜನ ಜೀವನ ಸ್ತಬ್ದಗೊಳ್ಳುತ್ತದೆ. ಆದರೆ ನಮ್ಮ ಊರು ಹಾಗಲ್ಲ ಮಳೆಗೆ ಎಲ್ಲೆಲ್ಲೂ ಹೊಸ ‌ಜೀವಕಳೆ ತುಂಬಿ ಭೂರಮೆ ಮೈನೆರೆದಳೊ ಎಂಬಂತೆ ನಳನಳಿಸುತ್ತಾಳೆ.

ಹುಯ್ಯೋ..ಹುಯ್ಯೋ ಮಳೆರಾಯ ತೆಂಗಿನ ತೋಟಕ್ಕೆ ನೀರಿಲ್ಲ ಭತ್ತದ ಗದ್ದೆಗೆ ನೀರಿಲ್ಲ…ಎನ್ನುವ ಹಳ್ಳಿ ಗರ ಜನಪದ ಹಾಡು.. ಇನ್ನೂ ಬೇಂದ್ರೆಯವರ ಒಂದು ಕವನದ ಸಾಲುಗಳು…ಮಳೆ ಬರುವ ‌ಕಾಲಕ್ಕೆ ಒಳಗ್ಯಾಕ ಕುಂತೇವ ಇಳೆಯೊಡನೆ ಜಳಕವಾಡೋಣ ನಾವೂನು, ಮೋಡಗಳ ಆಟ ನೋಡೊಣ. ಹೀಗೆ ಮಳೆಯ ಬಗ್ಗೆ ಅನೇಕ ಕವಿಗಳು ಬರೆದಿದ್ದಾರೆ. ಹಾಗೆ ಮುಂಗಾರು ಮಳೆಯ ಮೂನ್ಸೂಚಕ ಎಂದೆ ಕರೆಯುವ ಜಾತಕ ಪಕ್ಷಿಗೂ ಮಳೆಗೂ ಅವಿನಾಬಾವ ನಂಟು .ಮಳೆ ಬರಲಿದೆ ಎಂಬ ಬರವಸೆ ನೀಡುವ ಪಕ್ಷಿ ಇದು. ಮಳೆಯ ನೀರನ್ನೆ ಕುಡಿದು ತಮ್ಮ ದಾಹ ತೀರಿಸಿ ಕೊಳ್ಳುತ್ತವೆ ಎಂಬ ನಂಬಿಕೆಯೂ ‌ಇದೆ. ನೀರಿಲ್ಲದ ಜಗತ್ತಿನ್ನು ಊಹಿಸಿಕೊ ಳ್ಳೊದು ಕಷ್ಟ. ಮಾನ್ಸೂನ್ ಪದ ಅರಬ್ಬೀಯ ಭಾಷೆಯಲ್ಲಿ ಋತು ಎಂದು ಅರ್ಥ.
ಮುಂಬಯಿಯಲ್ಲಿ ಕೆಲ ಗಂಟೆ ನಿರಂತರ ಮಳೆ ಬಂದರು ಇಲ್ಲಿನ ಜನ ಜೀವನ ಸ್ತಬ್ಧಗೊಳ್ಳುತ್ತದೆ. ಮಳೆಗಾಲದ ಪೂರ್ವ ಭಾವಿಕಾಮಗಾರಿ ವಿಳಂಬವಾದರಂತು ಮ್ಯಾನ್ ಹೋಲ್ ಸ್ವಚ್ಛ ಗೋಳಿಸದೆ ದಿಡೀರನೆ ಧಾರಕಾರ‌ ಮಳೆಯಿಂದ ಕೆರೆಯಂತಾಗುವ ರಸ್ತೆ ಗಳು, ಮಳೆ ಅನಾಹುತ ತಡೆಗೆ ಸಿದ್ದಗೊಳ್ಳದ ಪಾಲಿಕೆ. ಒಟ್ಟಿನಲ್ಲಿ ಮಳೆ ಕೆಲವೊಮ್ಮೆ ಅನಾಹುತ ತಂದೊಡ್ಡುವುದು ಇದೆ. ಆದರೆ ಹಳ್ಳಿಗಳಲ್ಲಿ ಮಳೆ ಎಂದರೆ ಹೊಸ ಉಸಿರು. ಭೂರಮೆಗೆ ಹೊಸ ಉಡುಗೆ ತೊಡಿಸುವ ಕಾಲ.ಹಚ್ಚ ಹಸಿರು ನಳನಳಿಸುವ ಸಮಯ.

  • ‌ಲತಾ ಸಂತೋಷ ಶೆಟ್ಟಿ ಮುದ್ದುಮನೆ.

Leave a Reply

Your email address will not be published. Required fields are marked *