ಮರೆಯಾದ ಡೋಲು… ಮರೆಯಲಾಗದ ಡೋಲನಾದ…: heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ
ಆಧುನಿಕತೆಯ ಭರಾಟೆಯಲ್ಲಿ ಬಹುತೇಕ ಪುರಾತನ ಸಂಸ್ಕೃತಿಗೆ ಫಾಸಿಯಾಗಿರುವುದರೊಂದಿಗೆ ಡೋಲು, ಕೊಳಲು ಮುಂತಾದ ಸಾಂಪ್ರದಾಯಿಕ ಸಂಗೀತ ಪರಿಕರಗಳು ಕಾಣೆಯಾಗುತ್ತಿರುವುದು ನೋವಿನ ವಿಷಯ. ಜಾಗತೀಕರಣದ ನೆಪದಲ್ಲಿ ಜಾನಪದೀಯ ಮೌಲ್ಯಗಳು ಗೌಣವಾಗುತ್ತಿದೆ. ಒಂದು ಕಾಲದಲ್ಲಿ ಜನಪದ ಸಂಗೀತ ಪರಿಕಗಳಿಗೆ ಅಗ್ರಸ್ಥಾನ ವಿದ್ದು ಅವುಗಳ ಹಿಂದೆ ಒಂದು ಜನಾಂಗದ ಸಂಸ್ಕೃತಿಯ ಪರಿಚಯ ಹಾಗೂ ಆರೋಗ್ಯದಾಯಕ ಸಂದೇಶ ದೊಂದಿಗೆ ಗ್ರಾಮೀಣ ಸೊಡಗು ಹಾಗೂ ಜೀವನ ಪದ್ಧತಿಗೆ ಪೂರಕವಾಗಿದ್ದವು.
ಊರಿನ ಜಾತ್ರೆ, ಭೂತಾರಾಧನೆ ಹಾಗೂ ಸಂಸ್ಕೃತಿ ವಿಚಾರಗಳಲ್ಲಿ ಒಂದೊಂದು ದೈವ ದೇವರು ಗಳಿಗೆ ಅದರದ್ದೇ ಆದ ಸಂಗೀತವಾದನವಿರುತ್ತಿತ್ತು. ಆದರೆ ಇಂದು ಹೆಚ್ಚಿನ ವಾಹಕಗಳು ಮೂಲೆ ಸೇರಿವೆ. ಡೊಡ್ಡ ಗಾತ್ರದ ಚರ್ಮವಾದ್ಯವಾದ ಡೋಲು ಆಧುನಿಕತೆಯ ಸಂಪರ್ಕಕ್ಕೆ ಮಣಿಯದೆ ತನ್ನ ಮೂಲ ಸ್ವರೂಪದಲ್ಲಿಯೇ ಉಳಿದುಕೊಂಡಿದೆ. ಎಂತಹ ವಾದ್ಯ ಬಂದರೂ ಡೋಲಿಗೆ ಡೋಲೆ ಸಾಟಿ ಎನ್ನುವಂತ ಕಂಚಿನ ಧ್ವನಿ ಡೋಲಿನದ್ದು. ಡೋಲನ್ನು ಹೋರಿಯ ತೊಗಲಿನಿಂದ ಮಾಡಲಾಗುತ್ತದೆ. ಹಳ್ಳಿ ಗಳಲ್ಲಿ ಜಾತ್ರೆ, ರಥೋತ್ಸವ, ಕಂಬಳಗಳಲ್ಲಿ ಬೃಹದಾಕಾರವಾಗಿರುವ ಡೋಲು ವಾದನವು ಭಕ್ತರ ಮನಸ್ಸು ಉಲ್ಲಾಸದಿಂದ ಕುಣಿಯಲು ಸಾಕ್ಷಿ ಯಾಗುತ್ತಿತ್ತು. ಡೋಲಿನ ಶಬ್ದ ಕಿವಿಗೆ ಬಿದ್ದಾಗ ಮೈಮನ ರೋಮಾಂಚನಗೊಳ್ಳುವಂತ ಶಕ್ತಿ ಡೋಲಿಗಿದೆ. ಜಾತ್ರೆ, ಹಬ್ಬ, ಮೆರವಣಿಗೆ ಮುಂತಾದ ಕಾರ್ಯ ಕ್ರಮಗಳಲ್ಲಿ ಡೋಲುವಾದಕ ವಿದ್ದರೆ ಆ ಉತ್ಸವದ ಗತ್ತೆ ಬೇರೆ. ಬಪ್ಪನಾಡು ಡೋಲು ಬಹುವಿಖ್ಯಾತ.
ಪ್ರಕೃತಿಯ ಆರಾಧಕರು ಹಾಗೂ ಪ್ರಕೃತಿಯೊಡನೆ ಹೊಂದಾಣಿಕೆಯಿಂದ ಬದುಕುವ ಕೊರಗರಿಗೆ ಡೋಲು ಮತ್ತು ಕೊಳಲಿನೊಡನೆ ಭಾವನಾತ್ಮಕ ಸಂಬಂಧವಿದ್ದು. ಈ ಜನಾಂಗದ ಸಾಂಸ್ಕೃತಿಕವಾದನವು ಹೌದು. ವಂಶ ಪಾರಂಪರಿಕ ಹಕ್ಕಿನ ನೆಲೆಯಲ್ಲಿ ತಲೆತಲಾಂತರದಿಂದ ಜನರ ವಿನೋದಕ್ಕಾಗಿ ಡೋಲು ಬಾರಿಸುವ, ಕೊಳಲು ನುಡಿಸುವ ಕಾಯಕದಲ್ಲಿದ್ದರು. ಕಲಾತ್ಮಕವಾಗಿ ಡೋಲು ಬಾರಿಸುವ ಗತ್ತೆ ಬೇರೆ. ಅಜಲು ನಿಷೇಧ ಕಾನೂನು ಜಾರಿ ಯಾದನಂತರ ಡೋಲು ಬಾರಿಸುವುದು ನಿಂತುಹೋಯಿತು. ಅಷ್ಟೇ ಅಲ್ಲದೆ ಪ್ರಾಣಿ ಚರ್ಮವನ್ನು ಬಳಸಲು ಕಾನೂನು ತೊಡಕುಗಳು ಇರುವುದರಿಂದ ಮತ್ತು ಡೋಲು ತಯಾರಿಸುವ ಮತ್ತು ಮಾರಾಟ ಮಾಡುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ಡೋಲು ತರೆಮರೆಗೆ ಸೇರುತ್ತಿದೆ.
ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯ ದ ನೆಲೆಯಲ್ಲಿ ಪ್ರಕೃತಿ ನಿಯಮಗಳಿಗೆ ಅನುಗುಣವಾಗಿ ವೈಜ್ಞಾನಿಕ ದೃಷ್ಟಿ ಕೋನದೊಂದಿಗೆ ಮಾನವೀಯ ಮೌಲ್ಯಗಳನ್ನು ಒಳಗೊಂಡು ನಿರ್ಭಯ ವಾತಾವರಣದಲ್ಲಿ ಮನಸ್ಸು ಅರಳಿಸುವ ಡೋಲನಾದ ಕೇಳ ಸಿಗುತ್ತಿದ್ದರೆ ಏನಿತು ಸೊಗಸು.ಮರೆಯಲಾರದ ಡೋಲನಾದದಲ್ಲಿ ತಾಳಲಯಕ್ಕೆ ಡೋಲು ಬಾರಿಸುವುದು ಹಳ್ಳಿಗಳ ಸಾಂಸ್ಕೃತಿಕ ಬದುಕಿನ ಹೊಂಗಿರಣಗಳ ಮನರಂಜನೆಗೆ ತನ್ನದೇ ಆದ ಪ್ರಾಮುಖ್ಯತೆ ಯೊಂದಿಗೆ ಕಲಾವಿದರ ಬುದ್ಧಿಕೌಶಲ್ಯ, ದೈಹಿಕ ಸ್ಥೈರದ ಮೆರುಗು ಇರುತ್ತಿತ್ತು.
ಇಂದು ಗ್ರಾಮೀಣ ಸಂಗೀತ ವಾದನಗಳು ತಮ್ಮ ಮೂಲ ಮೌಲ್ಯ ವನ್ನು ಕಳೆದುಕೊಂಡು ಸೊರಗುತ್ತಿದೆ. ಈಗ ಸಿಡಿ , ಟಿವಿ , ರೇಡಿಯೋ, ಟೇಪ್ ರೆಕಾರ್ಡರ್, ಮೊಬೈಲ್ ಮೂಲಕ ಬೇಕಾದ ಸಂಗಿತವನ್ನು ಕೇಳಬಯಸುವ ಜನಸಾಗರದ ನಡುವೆ ಡೋಲು ವಾದಕರು ಬದಲಾಗುತ್ತಿರುವ ಕಾನೂನು, ಸಮಾಜ, ಜೀವನ ಶೈಲಿ ಯಿಂದ ತಮ್ಮ ಜನಪದಕಲೆ ಹಾಗೂ ಕಲಾಪರಿಕಗಳನ್ನು ಮೂಲೆ ಗುಂಪಾಗಿಸುತ್ತಿದ್ದಾರೆ. ಆಡಂಬರದ ಅಬ್ಬರದಲ್ಲಿ ಧ್ವನಿವರ್ಧಕಗಳ ಕರ್ಕಶದಲ್ಲಿ ಡೋಲಿನ ಧ್ವನಿ ಅಡಗಿಹೋಗಿದೆ. ಐತಿಹಾಸಿಕ ಪರಿಕಗಳು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದ ಜವಾಬ್ದಾರಿಯನ್ನು ಕುಟುಂಬ, ಸಮಾಜ, ಜನಪದ ಅಕಾಡೆಮಿಗಳು, ಸಂಘಟನೆಗಳು ದೇಸಿ ಸೊಗಡಿನ ಸಿರಿವಂತಿಕೆಯ ಪರೀಕಗಳಿಗೆ ಕಾಯಕಲ್ಪ ನೀಡುವ ಹಿನ್ನೆಲೆಯಲ್ಲಿ ವಿಶೇಷ ಗಮನ ನೀಡಬೇಕು.
ಸಾಂಸ್ಕೃತಿಕ ಸಂಪ್ರದಾಯ ಬದ್ಧ ಹಿನ್ನೆಲೆಯಲ್ಲಿ ದೈವ- ದೇವರುಗಳಿಗೆ ಸಂಬಂಧ ಪಟ್ಟ ಬಹುಕಾಲದ ಇತಿಹಾಸ ಹೊಂದಿರುವ ಡೋಲು ಬಾರಿಸುವಿಕೆ ಒಂದು ವಿಶೇಷಕಲೆ. ಕಂಬಳದ ಹಿಂದಿನ ರಾತ್ರಿ ಕೊರಗರು ಹನಿ ಕುಳಿತು ರಾತ್ರಿ ಇಡಿ ಡೋಲು ಬಾರಿಸುತ್ತಿದ್ದರು. ನನ್ನ ಬಾಲ್ಯದಲ್ಲಿ ಊರಿನಲ್ಲಿ ಯಾರಾದರೂ ಹಿರಿಯರು ತೀರಿಹೋದರೆ ಸಾವುಡೋಲು ಹಾಕಿದ ಶಬ್ದ ಊರೆಲ್ಲ ಕೇಳಿಸುತ್ತಿತ್ತು. ಆದರೆ ಅದು ಕೂಡ ಡೋಲು ಬಾರಿಸಬಾರದು ಎಂಬ ಸರ್ಕಾರದ ನೀತಿಯಡಿಯಲ್ಲಿ ಒಂದು ಹಂತದವರೆಗೆ ನಿರ್ನಾಮವಾಗಿದೆ. ತಾಳ, ಕೊಳಲುನಾದದೊಂದಿಗೆ ಡೋಲಿನನಾದಕ್ಕೆ ಬಾಲ್ಯ ದಿಂದಲೂ ಮೈಮರೆತವರಿಗೆ ಈಗ ಅದೆಲ್ಲಾ ನೆನಪು ಮಾತ್ರ. ಕಾನೂನುಗಳ ಸುಳಿಯಲ್ಲಿ ಸಿಕ್ಕ ಗ್ರಾಮೀಣ ಜನಪದ ಸಂಗೀತ ಪರಿಕಗಳು ಅಳಿವಿನಂಚಿನಲ್ಲಿದೆ. ಅದರ ಉಳಿವಿಗಾಗಿ ಗಂಭೀರ ಚಿಂತನೆಯ ಅಗತ್ಯ ವಿದೆ. ಜನಪದ ಸಂಸ್ಕೃತಿ ಯ ಸಂಕೇತ ಡೋಲು ಎಂಬ ಅರಿವು ಮೂಡಿಸಬೇಕು. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರಾರು ? ನೇಪಥ್ಯದತ್ತ ವಾಲಿ ಮರೆಯಾಗುತ್ತಿರುವ ಡೋಲು…ಮರೆಯಲಾಗದ ಡೋಲನಾದ..ಪುನಃ ಕೇಳಿಸಿತೆ…..ಕಾದು ನೋಡೊಣ.