ಮನೆ… ಮನೆ….ಮುದ್ದುಮನೆ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ    

        ” ಮನೆ …ಮನೆ…ಮುದ್ದುಮನೆ ”  ಈ ಶೀರ್ಷಿಕೆ ನೋಡಿ ನಾನು ನನ್ನ ಊರಿನ ಬಗ್ಗೆ ಬರೆಯುತ್ತಿದ್ದೆನೆಂದು ಕೊಳ್ಳದಿರಿ ಹಾಗೆ ಊಹಿಸಿದ್ದರೆ ಖಂಡಿತಾ ನಿರಾಶರಾಗುವಿ ರಿ ಅಥವಾ ಕುವೆಂಪು ಅವರ ಮುದ್ದುಮನೆ ಕಾವ್ಯದ ನೆನಪಾದರು ಆದಿತು ಅನ್ನಿ.ಆದರೆ  ನಾನು ಮುಂದೆ ಹೇಳುವ ಮನೆಗಳ ಸುದ್ದಿ ಮಾತ್ರ ಬೆಂಗಳೂರು,  ಮುಂಬಯಿ ,ದಿಲ್ಲಿ ಅಂತಹ ಮಹಾನಗರಕ್ಕೆ ಬದುಕನ್ನು ಅರಸಿಕೊಂಡು  ನೆಲೆ ನಿಲ್ಲಲು ಬಂದ ಪ್ರತಿಯೊಬ್ಬರ ಕನಸಿನ ಮುದ್ದಾದ ಮನೆಯ ಚಿತ್ರಣ.ಇದು ಬಹಳಷ್ಟು ಜನರ ಜೀವನದ ಗುರಿ ಹೆಚ್ಚಿನವರ ಬದುಕಿನ‌ ಮುಖ್ಯ‌ಧ್ಯೇಯವು ಹೌದು. ಜೀವಮಾನವಿಡಿ ದುಡಿದು ಸ್ವಂತಕ್ಕೆಂದು ಮಾಡಿಕೊಂಡ‌ ಮನೆಯೆಂದರೆ ತನ್ನ ತಾನೇ ಪ್ರೀತಿ ಜಾಸ್ತಿ ತಾನೆ. ತಮ್ಮ ಕರ್ಮ ಭೂಮಿಯಲ್ಲಿ  ಸ್ವಂತದ‌ ಸೂರು ಹೊಂದಿದರೆ ಬದುಕು ಸಾರ್ಥಕ. ತನ್ನದೆ ದುಡಿಮೆಯ  ಹಣದಿಂದ‌ ಕೊಂಡ ಅಥವಾ ‌ಕಟ್ಟಿಸಿದ‌ ಸ್ವಂತ ಮನೆಯಲ್ಲಿ  ಜೀವನದ ಬಂಡಿಯನ್ನು ಸಾಗಿಸುವ  ಆಸೆ ಮೂಡುವುದು ಸಹಜ ಇದು ಜೀವಮಾನದ  ಸಾಧನೆಯು ಹೌದು. ಇದ್ದಬದ್ದದನ್ನೆಲ್ಲ ವ್ಯಯಿಸಿ  ಮಹಾ ನಗರದಲ್ಲಿ ಸ್ವಂತಮನೆಯ ಕಲ್ಪನೆ  ಸಕರಗೊಂಡರೆ ಆಶೆ ನೆರವೇರಿತಲ್ಲಾಎಂಬ ಸಮಾಧಾನ.

       ಮನೆ ಎಂಬುದು ಎಲ್ಲರಿಗೂ ವಾಸ ಸ್ಥಾನ ಮಾತ್ರ ವಲ್ಲದೆ ಆಸರೆ ಅಷ್ಟೇ ಅಲ್ಲದೆ ಭಾವುಕತೆಯ ತಾಣ. ಪ್ರೀತಿ, ಅಂತಃಕರಣ ,ಕಾಳಜಿ ತುಂಬಿದ ವಾಸ್ತಲ್ಯದ ಹೂದೋಟವೇ ಮನೆ. ಮನೆ ಎಂದೊಡನೆ ಅದು ಎಲ್ಲರಿಗೂ ಸುಖ, ನೆಮ್ಮದಿ ಶಾಂತಿ ನೀಡುವ ಗೂಡು.ಇಲ್ಲಿ ನಮ್ಮ ರಕ್ತಸಂಬಂಧಗಳು ನೆಲೆಯೂರಿಗಟ್ಟಿಗೊಳ್ಳುತ್ತದೆ. ತನ್ನ ತನದ ಒಗ್ಗಟ್ಟಿನ ಕೇಂದ್ರ . ಬಾಂಧವ್ಯ ಬೆಳೆಯವ ಆಸರೆಯ ತಾಣ. ಕೌಟುಂಬಿಕ ಸಂಬಂಧಗಳು ಬೆಳೆದು  ಹೆಮ್ಮರವಾಗುವ ಸುಖದ ಸುಪತ್ತಿಗೆಯೆ ಮನೆ.
   
           ಮಾನವ ಜೀವನದ ಬಹುತೇಕ ಸುಖ- ದುಃಖಗ ಳು ನಡೆಯುವುದು ಮನೆಯಲ್ಲಿ. ಎಲ್ಲರ ಕನಸಿನ ಕೂಸು, ನೆಮ್ಮದಿಯ ತಾಣ . ಮನೆ ಅಂದೊಡನೆ ಅಲ್ಲಿ ಸುಮಧುರ ಭಾವನೆಗಳು ಪುಟಿಯುತ್ತವೆ. “ಬೆಚ್ಚನೆಯ ಮನೆಯಿದ್ದು ವೆಚ್ಚಕ್ಕೆ ಹಣವಿರಲು ಇಚ್ಚೆಯನ್ನರಿವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ.”  ನಿಜವಾಗಿಯು ನಾಲ್ಕು ಗೋಡೆಗಳಿಗೆ ಮನೆಯ ರೂಪ ಕೊಡುವವಳೆ‌ ಹೆಣ್ಣು. ಮನೆಯನ್ನು ಮುದ್ದುಮನೆ ಯಾಗಿಸುವವಳು ಮನೆ ಯೊಡತಿ.ಅವಳು ಚೊಕ್ಕವಾಗಿ ಮನೆ ನಡೆಸಿಕೊಂಡು ಹೋಗುವ ಜಾಣ್ಮೆ, ದಕ್ಷತೆ,ಇದ್ದರಂತೂ ಮನೆ ಸೊಬಗಿನ ಅರಮನೆ. ಒಪ್ಪ ಓರಣವಾಗಿ ಇದ್ದದ್ದರಲ್ಲೆ ಆರ್ಥಿಕ ವ್ಯವಸ್ಥೆ ಸರಿದೂಗಿಸುವ ಲಕ್ಷ್ಮಿ ಯಾಗಿ ಅವಳ ಸಂಸಾರ ಕ್ಷೇತ್ರದ ಚೌಕಟ್ಟು ಭಧ್ರಗೊಳಿಸಿ ಗಟ್ಟಿ ನಿಂತು ಮನೆ ರೂಢಿಸಿಲ್ಲ ಅಂದರೆ ಮನೆ ಕೇವಲ ನಾಲ್ಕು ಗೋಡೆಯಾಗಿರುತ್ತದೆ. ಹಾಗಾಗದೆ “ಹೆಂಡತಿ ಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ” ಅಹುದು….. ಅಹುದು ಎಂಬಂತಿರ ಬೇಕು.ಅದಕ್ಕೆ ನೋಡಿ ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿರುವ ಗಾದೆ” ಮನೆ ಕಟ್ಟಿ ನೋಡು ಮದುವೆ ಮಾಡಿನೋಡು”. ಮನೆಯೆಂದರೆ‌ ಸುಮ್ಮನೆಯ ಸಣ್ಣ ಮಾತಲ್ಲ.

     ಮನೆಯಲ್ಲಿ ಕೂತು ಕೈಕಾಲು ಜಡ್ಡುಗಟ್ಟಿದೆ ಅನ್ನುವವರು ಎಲ್ಲಿ ಹೋದರು  ಮನೆಯಷ್ಟು ವಿಶ್ರಾಂತಿ, ನೆಮ್ಮದಿ ಬೇರೆಲ್ಲು ಸಿಗದು. ಇಡಿ ದೇಶ ವಿದೇಶಗಳ ಸುತ್ತಿಬಂದರೂ ಮನೆಯೊಳಗೆ ಸಿಗುವ ನೆಮ್ಮದಿಯೇ ಬೇರೆ. ನಮ್ಮದೇ ಆದ ಸಣ್ಣ ಗುಡಿಸಲು ಆದರೂ ಅದು ನೀಡುವ ಸಂತೃಪ್ತಿಯೇ ಬೇರೆ. ಬಡವ, ಶ್ರೀಮಂತಯಾರೆ ಇರಲಿ ಅವರವರ ಯೋಗ್ಯತೆ ಆರ್ಥಿಕ ಅನುಕುಲಕ್ಕೆ ತಕ್ಕಂತೆ ಮನೆ ಕಟ್ಟಿಕೊಳ್ಳಲು ಅಪೇಕ್ಷಿಸುವುದು ಸಹಜ ತಾನೆ.ಅದೂ  ದುಬಾರಿ ನಗರ ಪ್ರದೇಶದಲ್ಲಿ ಮನೆ ಮಾಡುವ ಕಷ್ಟ ಮಾಡಿದವರಿಗೆ ಗೊತ್ತು. ಮನೆಯ ಕಲ್ಪನೆ ಮಹಾನಗರದಲ್ಲಿ ಬಹುಮಹಡಿ ಗಗನಚುಂಬಿ ಕಟ್ಟಡಗಳಲ್ಲಿ ನೆರವೇರುತ್ತಿಲ್ಲ ಅಂತ ಅನಿಸಿದರೆ ಉಪನಗರದಲ್ಲಾದರು ಸೈ ನಮ್ಮ ಆಸಕ್ತಿ ಅನುಕೂಲ, ಅಗತ್ಯಗಳಿಗೆ ತಕ್ಕಂತೆ ನಮಗೊಂದು ಗೂಡು ಕಟ್ಟಿಕೊಳ್ಳಲು ಅಪೇಕ್ಷಿಸುವುದು ಸಹಜ ತಾನೆ.

       ಮನೆ ನಿರ್ಮಿಸುವಾಗ  ವಾಸ್ತುವಿಗು ಪ್ರಾಮುಖ್ಯತೆ ಕೊಡುವುದಿದೆ.ಅದರಲ್ಲೂ ಪ್ರಕೃತಿಯ 5 ಅಂಶಗಳಾದ ಗಾಳಿ, ನೀರು, ಬೆಂಕಿ, ಭೂಮಿ, ಆಕಾಶಗಳ ಸಮತೋಲನ ದ ದಿಕ್ಕುದಿಶೆಗಳತ್ತ ಗಮನ ಹರಿಸುತ್ತಾ ಇತ್ತೀಚೆಗೆ ಅಡುಗೆ ಮನೆ, ಸ್ನಾನದ ಮನೆಗಳು ಕೂಡ ಹೊಸ ಪ್ರಯೋಗ ಗಳಿಗೆ ಒಡ್ಡಿಕೊಂಡಿದೆ. ಮನೆಯ ವಿನ್ಯಾಸಗಳಿಗೆ ಅಧಿಕ ಖರ್ಚು ನಡೆಯುತ್ತದೆ. ಬದುಕಿನ ಬಹುತೇಕ ಸುಖ- ದಃಖ ಎಲ್ಲತರದ ಕ್ಷಣಗಳು ನಡೆಯುವುದು ಮನೆಯಲ್ಲಿ  ಹಿರಿ ಯರಿಗೆ  ಕೊನೆಉಸಿರನ್ನು ತನ್ನ ಮನೆಯೊಳಗೆ ಎಳೆವ ಆಸೆ ಇರುವುದು ರೂಢಿ ವಿಚಾರ.

      ‌ ಮಹಾನಗರದಲ್ಲಿ ಬಾಡಿಗೆ ಮನೆಗಿಂತ ಸ್ವಂತ ಮನೆ ಖರೀದಿಸುವುದು ಜಾಣತನ . ಕಡಿಮೆ ಬಡ್ಡಿಯಲ್ಲಿ ಬ್ಯಾಂಕ್ ಸಾಲ ಸಿಕ್ಕಾಗ.ಬಾಡಿಗೆ ಮನೆಯ  ತಿಂಗಳ ಬಾಡಿಗೆಯೆನು ಅಗ್ಗವಾಗಿರುವುದಿಲ್ಲ.ಬದಲಿಗೆ ಸ್ವಂತ ಮನೆ ಮಾಡಿ ಅದರ ಇ ಎಂ ಐ ಬಾಡಿಗೆ ಹಣದ  ಆಸುಪಾಸಿನಲ್ಲಿರುವ ಸಾದ್ಯತೆ ಇದ್ದರೆ ಸ್ವಂತ ಮನೆಯೇ ಸೂಕ್ತ. ಮನೆ ಮಾರುವ, ಕೊಳ್ಳುವ ವ್ಯವಸ್ಥೆಯಲ್ಲಿ ಏಜನ್ಸಿ ಗಳ ಕೈವಾಡವು ಇರುತ್ತದೆ. ಒಟ್ಟಿನಲ್ಲಿ ಎಲ್ಲರ ಮನೆ ಮಾಡುವ ಕನಸು ನನಸಾಗಿ ಮನೆ ನಂದನವನವಾಗಿರಲಿ.

Leave a Reply

Your email address will not be published. Required fields are marked *