ಭಾರತದ ಏಕೈಕ ತಿರಂಗ ತಯಾರಿಕ ಕೇಂದ್ರ : heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ
ಭಾರತದಲ್ಲಿ ರಾಷ್ಟ್ರಧ್ವಜ ತಯಾರಿಸುವ ಏಕೈಕ ರಾಜ್ಯ ಕರ್ನಾಟಕ. ಸ್ವಾತಂತ್ರ್ಯ ದಿನದಂದು ಗ್ರಾಮಪಂಚಾಯತಿಯಿಂದ ಕೆಂಪು ಕೋಟೆಯ ವರೆಗೆ ಅಂದರೆ ದೇಶದಾದ್ಯಂತ ಹಾರಾಡುವ ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಪ್ರತ್ಯೀಕವಾದ ರಾಷ್ಟ್ರಧ್ವಜ ತಯಾರಾಗುವ ಸಂಸ್ಥೆ ಇರುವುದು ಗಂಡು ಮೆಟ್ಟದ ನಾಡು ಹುಬ್ಬಳ್ಳಿಯ ಬೆಂಗೇರಿಯಲ್ಲಿ . ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ನಿಂದ ಪ್ರಮಾಣಿಕರಿಸಿದ ದೇಶದ ಏಕೈಕ ಸಂಸ್ಥೆ ರಾಷ್ಟ್ರಧ್ವಜ ತಯಾರಿಸುವ ಹೆಮ್ಮೆಯ ಗರಿಯನ್ನು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ತನ್ನ ಮುಡಿಗೇರಿಸಿಕೊಂಡಿದೆ. ರಾಜ್ಯದಲ್ಲಿರುವ ಖಾದಿ ಸಂಘಗಳ ಶ್ರೇಯೋಭಿವೃದ್ಧಿಗಾಗಿ 1957 ನವೆಂಬರ್ ಒಂದರಂದು ಹುಬ್ಬಳ್ಳಿಯಲ್ಲಿ ಅಸ್ತಿತ್ವಕ್ಕೆ ಬಂತು. ಸ್ವಾತಂತ್ರ್ಯ ಹೋರಾಟಗಾರ ದಿ. ವೆಂಕಟೇಶ ಟಿ.ಮಾಗಡಿ ಇದರ ಸಂಸ್ಥಾಪಕರು. ಈ ಸಂಸ್ಥೆ ಎಲ್ಲಾ ನಿಯಮಾವಳಿ ಗಳನ್ನು ಕಟಿಬದ್ದವಾಗಿ ಪಾಲಿಸುವ ಮೂಲಕ ರಾಷ್ಟ್ರಧ್ವಜ ತಯಾರಿಸಿ ದೇಶ ಸೇವೆಯ ಕೆಲಸಕ್ಕೆ ಪಾದಾರ್ಪಣೆ ಮಾಡಿದ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ.
ತಿರಂಗ ತಯಾರಾಗುವ ಪರಿ :: ಚಿತ್ರ ದುರ್ಗ ದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸೆಂಟ್ರಲ್ ಸ್ಲೈವರ್ ಪ್ಲಾಂಟ್ ನಿಂದ ಹತ್ತಿ ಅರಳೆ ಖರೀದಿಸಿ ಬಾಗಲಕೋಟೆ ಯಲ್ಲಿರುವ ಉತ್ಪಾದನಾ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಅಲ್ಲಿನ ಕಾರ್ಮಿಕರು ಹತ್ತಿಯನ್ನು ದಾರ ರೂಪಕ್ಕೆ ತಂದು ನೇಯ್ಗೆ ಮಾಡಿ ವಸ್ತ್ರ ತಯಾರಿಸಿ ಹುಬ್ಬಳ್ಳಿಯ ಬೆಂಗೇರಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಕಳುಹಿಸುತ್ತಾರೆ. ಅಲ್ಲಿ ಬಟ್ಟೆಗಳ ಕೊಳೆ ತೆಗೆದು ಅಪ್ಪಟ ಖಾದಿ ಬಟ್ಟೆಗೆ ಕೇಸರಿ ಮತ್ತು ಹಸಿರು ಬಣ್ಣ ಯಂತ್ರದ ಮೂಲಕ ಲೇಪಿಸಿ ನಂತರ ಒಣಗಿಸಿ ತಿರಂಗ ತಯಾರಿಕಾ ಕೇಂದ್ರ ದಲ್ಲಿ ಸರಿಯಾದ ಅಳತೆಗೆ ಬಟ್ಟೆ ಗಳನ್ನು ಕತ್ತರಿಸಿ ಬಿಳಿ ಬಟ್ಟೆಯ ಮೇಲೆ ಕಡು ನೀಲಿ ಬಣ್ಣದ ಅಶೋಕ ಚಕ್ರ ಮುದ್ರಿಸಲಾಗುತ್ತದೆ. ನಂತರ ದರ್ಜಿಗಳು ತ್ರಿವರ್ಣದ ಬಟ್ಟೆಗಳನ್ನು ಹೊಲಿಯುತ್ತಾರೆ. ಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ತಲುಪಿಸಲಾಗುತ್ತದೆ. ಸರ್ಕಾರದ ನಿಯಮಾವಳಿ ಯಂತೆ ಖಾದಿ ಬಟ್ಟೆಯಲ್ಲಿ ಧ್ವಜದ ಅಳತೆಗೆ ತಕ್ಕಂತೆ ಅಶೋಕಚಕ್ರ ಹೊಂದಾಣಿಕೆ ಮಾಡಲಾಗುತ್ತದೆ. ದೇಶದ ತುಂಬೆಲ್ಲಾ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶಾಭಿಮಾನದಿಂದ ಬೀಗುವ ರೋಮಾಂಚನ ಭರಿತಸ್ಪೂರ್ತಿಯ ಸೆಲೆಯಾದ ರಾಷ್ಟ್ರಧ್ವಜ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಘ ನಿರ್ಮಾಣ ಮಾಡುತ್ತದೆ.
ಬೆಂಗೇರಿಯ ಈ ಕೇಂದ್ರದಲ್ಲಿ ರಾಷ್ಟ್ರಧ್ವಜ ತಯಾರಿಸುವ ವಿವಿಧ ಹಂತಗಳಾದ ಖಾದಿ ಬಟ್ಟೆಗೆ ಬಣ್ಣ ಲೇಪಿಸಿ,ಡೈಯಿಂಗ್ ಯಂತ್ರದ ಮೂಲಕ ಒಣಗಿಸುವುದು, ಧ್ವಜಕ್ಕೆ ಹಗ್ಗ ಮತ್ತು ಕುಣಿಕೆ ಹಾಕುವುದನ್ನು ಕಣ್ಣಾರೆಕಾಣಬಹುದು. ಹುಬ್ಬಳ್ಳಿಗೆ ಭೇಟಿ ನೀಡುವ ಹೊರರಾಜ್ಯದ ಪ್ರವಾಸಿಗರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಆದರೆ ಕರ್ನಾಟಕದ ವರು ಬರುವುದು ಅತೀ ವಿರಳ ಎಂದು ಇಲ್ಲಿನ ಕಾರ್ಮಿಕರು ಬೇಸರ ವ್ಯಕ್ತಪಡಿಸುತ್ತಾರೆ. ಈ ಕೇಂದ್ರ ಇಡೀ ದೇಶದ ಹೆಮ್ಮೆಯ ಪ್ರತೀಕ ಅಭಿಮಾನದಿಂದ ಭೇಟಿ ನೀಡಬೇಕಾದ ಸ್ಥಳ. 17 ಎಕರೆ ಪ್ರದೇಶದಲ್ಲಿ ಕೇಂದ್ರ ಕಚೇರಿ ರಾಷ್ಟ್ರಧ್ವಜ ತಯಾರಿಸುವ ಕೇಂದ್ರ ವಿದ್ದು ಇದರಲ್ಲಿ ಮುಖ್ಯ ವಾಗಿ ವರ್ಣಲೇಪಿತ ಕೇಂದ್ರ ಮತ್ತು ವಸ್ತಾಗಾರ ಕಟ್ಟಡ ಗಳನ್ನು ಒಳಗೊಂಡಿದೆ 210 ಮಗ್ಗಗಳು, 450 ಚರಕಗಳಿವೆ. 352 ಮಂದಿ ನೂಲುವರು 180 ಜನ ನೇಯ್ಗೆಯವರು ಒಟ್ಟು ಸೇರಿ 800 ಕೆಲಸಗಾರರು ಇದ್ದಾರೆ.ಇಲ್ಲಿನ ಕೆಲಸಗಾರಲ್ಲಿ ರಾಷ್ಟ್ರಧ್ವಜ ತಯಾರಿಕೆಯೊಂದಿಗೆ ತಮ್ಮ ಬದುಕು ಕಟ್ಟಿ ಕೊಂಡದ್ದಕ್ಕೆ ಆತ್ಮ ತೃಪ್ತಿ ಇದ್ದು ಹೆಮ್ಮೆ ಪಡುತ್ತಾರೆ .
ಹಳ್ಳಿಯಿಂದ ದೆಹಲಿ ಕೆಂಪು ಕೋಟೆವರೆಗೆ ಎಲ್ಲಾ ಸರಕಾರಿ, ಸಂಘ ಸಂಸ್ಥೆ ಯಲ್ಲಿ ಹಾರಾಡುತ್ತಿರುವ ರಾಷ್ಟ್ರಧ್ವಜ ತಯಾರಾಗುವುದು ಹುಬ್ಬಳ್ಳಿಯ ಬೆಂಗೇರಿಯಲ್ಲಿ ಎಂಬುದು ಹೆಮ್ಮೆಯ ವಿಚಾರ. ಆದರೆ ರಾಷ್ಟ್ರಧ್ವಜ ತಯಾರಕರಿಗಿಲ್ಲ ಸರಕಾರದ ಸಂಪೂರ್ಣ ಪ್ರೋತ್ಸಾಹ. ಪ್ಲಾಸ್ಟಿಕ್ ಧ್ವಜದ ಹಾವಳಿ, ಪ್ಲಾಸ್ಟಿಕ್ ಉತ್ಪನ್ನ ನಿಷೇಧವಿದ್ದರೂ ಕೆಲವೆಡೆ ಪ್ಲಾಸ್ಟಿಕ್ ಧ್ವಜ ಮಾಡಿ ಮಾರಾಟ ಮಾಡಲಾಗುತ್ತದೆ ಇದು ತಪ್ಪು.
ಬೆಂಗೇರಿಯಲ್ಲಿ ವರ್ಷ ದಿಂದ ವರ್ಷ ಕ್ಕೆ ಶೇಕಡ 20 ರಷ್ಟು ಪ್ರಮಾಣದಲ್ಲಿ ಧ್ವಜ ತಯಾರಿಕೆ ಹೆಚ್ಚುತ್ತಾಬಂದಿದೆ. ಕಳೆದ ವರ್ಷ 3 ಕೋಟಿ ವ್ಯವಹಾರದ ಗುರಿಹೊಂದಿದ್ದು ಅಗಸ್ಟ 15 ರೊಳಗೆ ಶೇಕಡಾ 80 ಗುರಿ ಸಾಧಿಸಿ ಇನ್ನುಳಿದ ಶೇಕಡಾ 20ರಷ್ಟು ಜನವರಿ 26 ರೊಳಗೆ ಮಾರಾಟವಾಗಿ ನಮ್ಮ ಸಂಸ್ಥೆ ಗುರಿ ಮುಟ್ಟಿದೆ ಎನ್ನುತ್ತಾರೆ ಇಲ್ಲಿನ ಅಧಿಕಾರಿಗಳು. ಕೊರೊನಾ ಮಹಾಮಾರಿಯ ನಿಯಂತ್ರಣದ ಲಾಕ್ ಡೌನ್ ನಂತರ ರಾಷ್ಟ್ರಧ್ವಜ ತಯಾರಿಕೆಯಲ್ಲಿ ಹಲವು ಸವಾಲಿನ ನಡುವೆಯೂ ಬಂದ ಆರ್ಡರ್ ಗಳನ್ನು ಈ ವರ್ಷವೂ ಸಮಯಕ್ಕೆ ಸರಿಯಾಗಿ ಪೂರೈಸಿದ್ದಾರೆ.
ರಾಷ್ಟ್ರಧ್ವಜ ಇಲ್ಲಿ ತಯಾರಾಗುತ್ತಿರುವುದು ನಮ್ಮ ರಾಜ್ಯಕ್ಕೆ ಹೆಮ್ಮೆಯ ಕಿರೀಟವಿದ್ದಂತೆ ಆದರೆ ಇಂಥ ಉದ್ಯಮಕ್ಕೆ ಸರಕಾರ ಅನುದಾನ ನೀಡಿದರೆ ಸಂಸ್ಥೆ ಆರ್ಥಿಕವಾಗಿ ಗಟ್ಟಿ ಗೊಳ್ಖಬಹುದು. ಇಲ್ಲಿನ ಖಾದಿ ಗ್ರಾಮೋದ್ಯೋಗ ವಿದ್ಯಾಲಯದಲ್ಲಿ 14 ತಿಂಗಳ ತರಬೇತಿ ಶಿಬಿರ ಇದ್ದು ಶಿಷ್ಯ ವೇತನವನ್ನು ನೀಡಲಾಗುತ್ತದೆ.
ತ್ರಿವರ್ಣ ಧ್ವಜ: ನಮ್ಮ ತಿರಂಗ ರಾಷ್ಟ್ರದ ಏಕತೆ ಅಖಂಡತೆಯ ಗೌರವದ ಪ್ರತೀಕ. ತ್ರಿವರ್ಣ ಧ್ವಜ ಆಶೋಕ ಚಕ್ರದಿಂದ ಕೂಡಿದ್ದು ನಮ್ಮ ದೇಶದ ಐಕ್ಯತೆ ಮತ್ತು ಅನನ್ಯತೆಯ ಸಂಕೇತ. ಧ್ವಜ ದಲ್ಲಿ ಇರುವ 3 ಬಣ್ಣ ಗಳು ಕೇವಲ ಚಂದಕ್ಕಾಗಿ ಅಲ್ಲ. ಇದರ ಕೇಸರಿ ಬಣ್ಣ ಸಾಹಸ, ಶೌರ್ಯ, ತ್ಯಾಗ, ಬಲಿದಾನದ ಪ್ರತೀಕವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣತೆತ್ತವರ ದೇಶಾಭಿಮಾನ ಮತ್ತು ತ್ಯಾಗದ ಪ್ರತೀಕವಾಗಿದೆ. ಬಿಳಿ ಬಣ್ಣವು ಸತ್ಯ ಮತ್ತು ಪಾವಿತ್ರ್ಯತೆ ನಿಷ್ಕಾಮತೆ ಹಾಗೂ ಸತ್ಯ ನಿಷ್ಠ, ಸಾಹಸಿಯಾಗುವ ಪ್ರೇರಣೆ ನೀಡುತ್ತದೆ. ಹಸಿರು ಬಣ್ಣ ದೇಶದ ಸಮೃದ್ದಿ , ಬಡತನ ನಿವಾರಣೆ ಮಾಡುವ ಸೂಚನೆಯಾಗಿದೆ. ನಡುವೆ ನೀಲಿ ಬಣ್ಣದ ಎಳೆಗಳನ್ನು ಹೊಂದಿರುವ ಅಶೋಕ ಚಕ್ರ ಸಾಮ್ರಾಟ ಅಶೋಕನ ಕಾಲದ ಸಂಚಿಸ್ತೂಪದಿಂದ ಸ್ಪೂರ್ತಿ ಪಡೆದಿದೆ. ರಾಷ್ಟ್ರಧ್ವಜ ನಿರ್ಮಾಣವನ್ನು ತೆಲುಗು ಭಾಷಿಕರಾದವೆಂಕಯ್ಯ ಪಿಂಗಳಿಯು ರೂಪಿಸಿದ್ದರು.
ರಾಷ್ಟ್ರಧ್ವಜ ಸಂಹಿತೆ : ಸೂರ್ಯೋದದಿಂದ ಸೂರ್ಯಾಸ್ತದ ತನಕ ಮಾತ್ರ ರಾಷ್ಟ್ರಧ್ವಜ ಹಾರಿಸ ಬೇಕು. ಧ್ವಜ ವನ್ನು ವಿರೂಪಗೊಳಿಸುವುದಾಗಲಿ, ಬೆಂಕಿತಾಗಿಸುವುದಾಗಲಿ,ಕಾಲಡಿಯಲ್ಲಿ ಹಾಕುವುದಾಗಲಿ ಅಥವಾ ಯಾವುದೇ ಅಗೌರವ ತೋರುವ ರೀತಿಯಲ್ಲಿ ನಡೆದುಕೊಳ್ಳುವಂತಿಲ್ಲ. ರಾಷ್ಟ್ರಧ್ವಜ ದ ಅವಹೇಳನ, ರಾಷ್ಟ್ರದ್ರೋಹವಾಗಿದ್ದು ಶಿಕ್ಷಾರ್ಹ ಅಪರಾಧ. ರಾಷ್ಟ್ರಧ್ವಜ ಹರಿದುಹೊದರೆ ಅಥವಾ ಹಾಳಾದರೆ ಅದನ್ನು ನಾಲ್ವರು ಗಣ್ಯರ ಸಮ್ಮುಖದಲ್ಲಿ ಗುಂಡಿ ತೆಗೆದು ಅದರಲ್ಲಿ ಮುಚ್ಚಬೇಕು ಅಥವಾ ಸುಟ್ಟಲ್ಲಿ ಬೂದಿ ಯನ್ನು ನದಿಯಲ್ಲಿ ತೇಲಿ ಬಿಡಬೇಕು ಎಂಬ ನಿಯಮವಿದೆ ಎನ್ನುತ್ತಾರೆ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ. ರಾಷ್ಟ್ರಧ್ವಜ ಸಂಹಿತೆ ಯಂತೆ ಧ್ವಜ ವನ್ನು ಖಾದಿ ಮತ್ತು ರೇಷ್ಮೆ ಯಿಂದ ಮಾತ್ರ ಮಾಡ ಬೇಕು.ಪ್ಲಾಸ್ಟಿಕ್ ಮತ್ತು ಕಾಗದದಿಂದ ತಯಾರಿಸಿದ ರಾಷ್ಟ್ರಧ್ವಜ ಕಡಿಮೆ ಬೆಲೆ ಗೆ ಸಿಗುತ್ತದೆ ಎಂಬಕಾರಣಕ್ಕೆ ನಾಗರಿಕರು ಅದನ್ನು ಬಳಸ ಬಾರದು.
ಹುಬ್ಬಳ್ಳಿ ರೈಲ್ವೆ ಸ್ಟೇಷನ್ ನಿಂದ ಹಾಗೂ ಪ್ರಮುಖ ಬಸ್ಸು ತಂಗುದಾಣಗಳಿಂದ ಬೆಂಗೇರಿಗೆ ಬಸ್ಸಿನ ವ್ಯವಸ್ಥೆ ಇದೆ. ಬೆಳಿಗ್ಗೆ 10 ರಿಂದ 4 ಗಂಟೆ ವರೆಗೆ ಪ್ರವಾಸಿಗರ ವೀಕ್ಷಣೆಗೆ ಅವಕಾಶವಿದೆ. ಹುಬ್ಬಳ್ಳಿ-ಧಾರವಾಡ ಕಡೆ ಹೋದವರು ನಮ್ಮ ದೇಶದ ಹೆಮ್ಮೆಯ ಪ್ರತೀಕವಾದ ಈ ಕೇಂದ್ರಕ್ಕೆ ಅಗತ್ಯ ಭೇಟಿ ನೀಡಿ.