News (ಸುದ್ದಿ)

ಬ್ರೇಕಿಂಗ್ ನ್ಯೂಸ್ – ಆಷಾಡಕ್ಕಿಲ್ಲ ಚಾಮುಂಡೇಶ್ವರಿ ದರ್ಶನ: heggaddesamachar

Spread the love

ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಎಸ್ ನೇತೃತ್ವದ ಸಭೆಯಲ್ಲಿ ನಿರ್ಧಾರ
ಆಷಾಡದ ಪ್ರತಿ ಶುಕ್ರವಾರ ಮತ್ತು ಅದರ ಮುಂದಿನ ಶನಿವಾರ, ಭಾನುಬಾರ ಇಲ್ಲ ಸಾರ್ವಜನಿಕ ಪ್ರವೇಶ
ಸರಳವಾಗಿ ವರ್ದಂತ್ಯುತ್ಸವ ಆಚರಣೆ
ದೇವಸ್ಥಾನದಲ್ಲಿ ಎಂದಿನಂತೆ ಪೂಜೆ

ಮೈಸೂರು: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ನಡೆಯುತ್ತಿದ್ದ ಆಷಾಡ ಮಾಸ ಆಚರಣೆಗೆ ಈ ಬಾರಿ ಸಾರ್ವಜನಿಕ ಪ್ರವೇಶ ಇಲ್ಲ. ಈ ಮಾಸದಲ್ಲಿ ಬರುವ ಪ್ರತಿ ಶುಕ್ರವಾರದಿಂದ ಭಾನುವಾರ ವರೆಗೆ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಚಾಮುಂಡಿ ಬೆಟ್ಟದಲ್ಲಿ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಜೂನ್ 26 ರಿಂದ ಆಷಾಡ ಶುಕ್ರವಾರ ಪ್ರಾರಂಭವಾಗಲಿದ್ದು, ಜುಲೈ 03, ಜುಲೈ 10 ಹಾಗೂ ಜುಲೈ 17ರಂದು ಪೂಜೆ ಪುನಸ್ಕಾರಗಳು ನಡೆಯಲಿದೆ. ಆದರೆ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಪ್ರವೇಶ ನಿರಾಕರಣೆ ಮಾಡಲಾಗುತ್ತಿದೆ. ಜೊತೆಗೆ ವರ್ಧಂತಿ ಉತ್ಸವಕ್ಕೂ ಸಾರ್ವಜನಿಕ ಪ್ರವೇಶ ಇರುವುದಿಲ್ಲ. ಉಳಿದ ದಿನಗಳಲ್ಲಿ ತಾಯಿಯ ದರ್ಶನ ಪಡೆಯಬಹುದಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ ಎಂದು ಸಚಿವರು ತಿಳಿಸಿದರು.

ಶಿಸ್ತಿಲ್ಲದಿದ್ದರೆ ಸಂಪೂರ್ಣ ಪ್ರವೇಶ ನಿಷೇಧ


ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಮಾತನಾಡಿ, ಧಾರ್ಮಿಕ ಭಾವನೆಗಳನ್ನು ನಾವು ಗೌರವಿಸುತ್ತೇವೆ. ಆದರೆ, ಎಲ್ಲದಕ್ಕಿಂತಲೂ ಮಿಗಿಲಾಗಿ ಸಾರ್ವಜನಿಕರ ಆರೋಗ್ಯ ಹಾಗೂ ಜೀವ ಮುಖ್ಯವಾಗುತ್ತದೆ.

ಇಲ್ಲಿ ಯಾವುದೇ ಅನಾಹುತವಾಗಬಾರದು. ಚಿಕ್ಕಮಕ್ಕಳು, ಗರ್ಭಿಣಿಯರು ಹಾಗೂ ವಯೋವೃದ್ಧರು ತಾಯಿ ದರ್ಶನಕ್ಕೆ ಬರುತ್ತಾರೆ. ಹಾಗಾಗಿ ಸೋಂಕು ಹರಡುವ ಸಾಧ್ಯತೆ ಬಹಳ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ದೇಗುಲ ಆಡಳಿತ ಮಂಡಳಿಯವರ ಅಭಿಪ್ರಾಯ ಪಡೆದು ಈ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದರು.

ಆಷಾಡ ಮಾಸದ ಪ್ರತಿ ಶುಕ್ರವಾರ ಹಾಗೂ ಅದರ ಮುಂದಿನ 2 ದಿನಗಳಾದ ಶನಿವಾರ ಹಾಗೂ ಭಾನುವಾರ ಮತ್ತು ವರ್ಧಂತಿ ದಿನ ಸಾರ್ವಜನಿಕ ಪ್ರವೇಶ ಇರುವುದಿಲ್ಲ. ಉಳಿದ ದಿನಗಳಲ್ಲೂ ಸಾರ್ವಜನಿಕರಿಗೆ ದೇಗುಲ ಪ್ರವೇಶಕ್ಕೆ ಅನುಮತಿ ಇದ್ದು, ಶಿಸ್ತಿನಿಂದ ವರ್ತಿಸಬೇಕು. ಈ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಸಮಸ್ಯೆ ಮಾಡಿದರೆ, ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣ ನಿಷೇಧ ಮಾಡುವ ಬಗ್ಗೆ ಮತ್ತೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಎಚ್ಚರಿಕೆ ನೀಡಿದರು.

ಅಲ್ಲದೆ, ಈ ಸಂದರ್ಭದಲ್ಲಿ ಬೆಟ್ಟದ ಪ್ರವೇಶದ್ವಾರವನ್ನೇ ಬಂದ್ ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ಬಸ್ ವ್ಯವಸ್ಥೆಯೂ ಇರುವುದಿಲ್ಲ. ಇದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಸಹ ಒಪ್ಪಿಗೆ ಸೂಚಿಸಿದರು.

ಸಚಿವರಾದ ಆನಂದ್ ಸಿಂಗ್, ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ನಾಗೇಂದ್ರ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಇದ್ದರು. ಸಚಿವ ಎಸ್ ಟಿ ಎಸ್ ಗೆ ಬೆಳ್ಳಿ ಗಧೆ ನೀಡಿ ಗೌರವ ನನ್ನ ಇಲಾಖೆಗೆ ಸಂಬಂಧಪಟ್ಟಂತೆ ಇರುವ ಮೈಸೂರಿ ಮೃಗಾಲಯಕ್ಕೆ 3.27 ಕೋಟಿ ರೂಪಾಯಿ ದೇಣಿಗೆಯನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಸಂಗ್ರಹಿಸಿಕೊಟ್ಟಿದ್ದಾರೆ. ನಾನು ಮಾಡದ ಕೆಲಸವನ್ನು ಅವರು ಮಾಡಿ ತೋರಿಸಿದ್ದಾರೆ. ಇದಕ್ಕೆ ನಾನು ಅವರಿಗೆ ಗೌರವವನ್ನು ಸಲ್ಲಿಸಲೇಬೇಕಿದೆ ಎಂದು ಸಚಿವರಾದ ಆನಂದ್ ಸಿಂಗ್ ಹೇಳಿದರು. ಇದೇ ವೇಳೆ ಸಚಿವ ಸೋಮಶೇಖರ್ ಅವರಿಗೆ ಬೆಳ್ಳಿ ಗಧೆ ನೀಡಿ ಸಚಿವರಾದ ಆನಂದ್ ಸಿಂಗ್ ಸನ್ಮಾನಿಸಿದರು.

Leave a Reply

Your email address will not be published. Required fields are marked *