ಬ್ರಹ್ಮಲಿಂಗನ ಪ್ರಿಯ ಹೂ ಪ್ರಥಮ ಆದ್ಯತೆಯ  ಹೆಮ್ಮಾಡಿ ಸೇವಂತಿಗೆ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ 

ಪ್ರಕೃತಿಯ ಸುಂದರ ಕಾವ್ಯಹೆಮ್ಮಾಡಿ ಸೇವಂತಿಗೆ ಗೆ ತನ್ನದೇ ಆದ ಇತಿಹಾಸವಿದ್ದು ಸೃಷ್ಟಿ ಸೌಂದರ್ಯದ ಮೆರಗಿನ ಪ್ರತೀಕವಾಗಿ ಈ ಹೂ ಇಬ್ಬನಿತಬ್ಬಿ ಸೊಗಸಾಗಿ ಅರಳಿ ಬಹುದೂರದಿಂದಲೇ ತನ್ನ ಇರುವಿಕೆಯ ಚೆಲುವನ್ನು ತೋರುವ ಹಳದಿ ಓಕುಳಿ ಚಲ್ಲಿದ ಅರಶಿಣ ಬಣ್ಣದ ಉಡುಪು ತೊಟ್ಟಂತೆ ಕಂಗೊಳಿಸುವ ಚಲುವಿಗೆ , ಕೋಮ ಲತೆಗೆ ,ಮೃದುತನಕ್ಕೆ ಸಂಭ್ರಮದ ಪ್ರತೀಕವಾಗಿ   ವೃತ್ತಾಕಾರದಿಂದ ಒಪ್ಪವಾಗಿ ಜೋಡಿಸಿದ ದಳಗಳ ಹಂದರ ಹೆಮ್ಮಾಡಿ ‌ಸೇವಂತಿಗೆ ಬಡಗಿನ ಧರ್ಮಸ್ಥಳ ಖ್ಯಾತಿಯ ಪುರಾಣ ಪ್ರಸಿದ್ಧ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಪ್ರಿಯ ಹೂ. ಮಕರ ಸಂಕ್ರಾಂತಿಯಂದು ದೇವರ ಕೆಂಡಸೇವೇಗೆ ಈ ಹೂವನ್ನು  ಮೊದಲು ಅರ್ಪಿಸಿ ಭಕ್ತಿಯಿಂದ ಪ್ರಾರ್ಥಿಸಿದರೆ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆ ಇದ್ದು. ಬೆಳೆದ ಹೂವಿನ ಅತ್ಯಧಿಕ ಪಾಲು ಮಾರಣಕಟ್ಟೆ ಜಾತ್ರೆಯಲ್ಲಿ ಇದೇ‌ ಜನವರಿ 14 ರಿಂದ 16 ರವರೆಗೆ ನಡೆವ  ಶ್ರೀ ಕ್ಷೇತ್ರ‌ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ವರ್ಷಾವಧಿಯ ಮಕರಸಂಕ್ರಮಣ ಉತ್ಸವದಲ್ಲಿ ಮಾರಾಟವಾಗುತ್ತದೆ. 


    ಮಕರಸಂಕ್ರಾಂತಿಯಂದು ಬೆಳೆಗಾರರು  ಬೆಳೆದಮೊದಲ ಸೇವಂತಿಗೆಯನ್ನು ಕುಂದಾಪುರದಿಂದ ಕೊಲ್ಲೂರಿಗೆ ಸಂಚರಿಸುವ ಮಾರ್ಗದ ಚಿತ್ತೂರಿನ ಬಳಿ ಇರುವ ‌ಪುರಾಣ ಪ್ರಸಿದ್ಧ  ಮಾರಣಕಟ್ಟೆ ಶ್ರಿ ಬ್ರಹ್ಮಲಿಂಗನಿಗೆ ಅರ್ಪಿಸುವ‌ ಪರಿಪಾಠ. ನಂತರ ಇತರೆಡೆ ಮಾರಟ ಮಾಡು ತ್ತಾರೆ. ಇಂದಿಗೂ ಹೆಮ್ಮಾಡಿ ಸೇವಂತಿಗೆ ಬೆಳೆವ ಕುಂದಾಪುರ ತಾಲೂಕಿನ ಜಾಲಾಡಿ, ಹೆಮ್ಮಾಡಿ, ರಾಜಾಡಿ, ಸಳ್ಸೆ, ಹೊಸ್ಕಳಿ, ಹರೆಗೋಡು, ಮೂಡಾಡಿ, ‌ಹರೆಗೋಡುಗಳಲ್ಲಿ ಹೆಚ್ಚಾಗಿ ಬೆಳೆವ ಸೇವಂತಿಗೆಯನ್ನು ಮೂರು ದಿನಗಳ ಕಾಲ ನಡೆವ ಬಹುದೊಡ್ಡ ಮಾರಣಕಟ್ಟೆ ಜಾತ್ರೆಯಲ್ಲಿ ಅಸಂಖ್ಯಾತ ಭಕ್ತರು  ಸೇವಂತಿಗೆ ಕರಿದಿಸಿ ದೇವರಿಗೆ ಅರ್ಪಿಸುತ್ತಾರೆ. ಆದರೆ ಈ ವರ್ಷ ಕರೊನಾ ಮುಂಜಾಗ್ರತಾ ಕ್ರಮ ಅನುಸರಿಸಿ ಸರ್ಕಾರದ ನಿಯಮದಂತೆ  ಧಾರ್ಮಿಕ ಪೂಜೆಗಳು ಸರಳ‌ರೀತಿಯಲ್ಲಿ ನಡೆಯಲಿದೆ. ಸಾರ್ವಜನಿಕರಿಗೆ ಗೆಂಡ ಸೇವೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ.


    ಬ್ರಹ್ಮಲಿಂಗನ ಪ್ರಿಯ ಹೂ ಪ್ರಥಮ ಆದ್ಯತೆಯ ಹೆಮ್ಮಾಡಿ ಸೇವಂತಿ ಮಕರಸಂಕ್ರಾಂತಿಯ ಉತ್ಸವಕ್ಕೆ ಊರಿನ ಗದ್ದೆಗಳಲ್ಲಿ ಅರಳಿಮೊಗ್ಗುಗಳು ಬಿರಿಯಲು ಸಿದ್ದವಾಗಿ ಹದಗೊಂಡು ಸೌಂದರ್ಯ ಮೈದಳೆದು ನಿಂತಾಗ ನೋಡುಗರ ಕಣ್ಮನ ಸೆಳೆಯುವ ಸಣ್ಣ ಗಾತ್ರದ ಆಕರ್ಷಕ ಈ ಸೇವಂತಿಗೆ ಇಲ್ಲಿನ ಗದ್ದೆಯ ಆಸುಪಾಸಿನಲ್ಲಿ  ಹಾದು ಹೋಗುವ ದಾರಿಹೋಕರು ಘಮ ಘಮಿಸುವ ಸುವಾಸನೆಗೆ‌ ಪುಳಕಗೊಳ್ಳುತ್ತಾರೆ. ಮಕರ ಸಂಕ್ರಾಂತಿಯ  ಸ್ವಾಗತಕ್ಕೆ‌ ಅರಳಿ ನಿಂತ ಹೆಮ್ಮಾಡಿ ಸೇವಂತಿಗೆ ಹಳದಿಗಾಡ  ಬಣ್ಣದಿಂದ ಕೂಡಿದ್ದು ಪ್ರಕೃತಿಯ ಒಂದು ಅನನ್ಯ ಕೊಡುಗೆ . 
        ಕೊರೊನಾ ಕಾರಣದಿಂದ ಈ ವರ್ಷದ ಹಬ್ಬ ,ಜಾತ್ರೆ, ಗೆಂಡಸೇವೇ  ಅದ್ದೂರಿ ಆಚರಣೆ ಅನಿಶ್ಚಿತತೆ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಸೇವಂತಿಗೆ ಬೆಳೆಗಾರರು ಹೂ ಬೆಳೆಯಲು ದೈರ್ಯ ತೋರಲಿಲ್ಲ. ಆದರೂ ಬೆಳೆದ ಬೆಳೆ ಸಾಧಾರಣ ವಿದ್ದ ಕಾರಣ ಫಸಲಿನ ನಿರೀಕ್ಷೆಯಿದೆ. ಬೆಳೆದ ಹೂವಿಗೆ ಬೇಡಿಕೆ ಇರುತ್ತದೊ ಇಲ್ಲವೋ ಎಂಬ ಗೊಂದಲದಲ್ಲಿ ರೈತರು ಜಾತ್ರೆ ಅದ್ದೂರಿ ಆಚರಣೆ ಇಲ್ಲದೆ  ಅಂಗಡಿ ತೆರೆಯಲು ಅವಕಾಶ ನೀಡದಿದ್ದರು ಹೆಮ್ಮಾಡಿ ಸೇವಂತಿಗೆ ಮಾರಾಟಕ್ಕೆ ಜಾತ್ರೆ ಗೆಂಡ ಸೇವೆಯಲ್ಲಿ ಅವಕಾಶ ನೀಡಬೇಕು ಎಂದು ಡಿಸಂಬರ್ ನಲ್ಲಿ ಸಂಬಂದಿಸಿದ ‌ಅಧಿಕಾರಿಗಳನ್ನು‌ ಕೊರಿದ್ದಾರೆ. ಪ್ರಾದೇಶಿಕ ವೈಶಿಷ್ಟ್ಯವನ್ನು ಹೊಂದಿದ ಹೆಮ್ಮಾಡಿ ಸೇವಂತಿಗೆ ಹೂವನ್ನು 3 ಹಂತದಲ್ಲಿ ಬೆಳೆಯಲಾಗುತ್ತದೆ. ಆಗಸ್ಟ್ ತಿಂಗಳ ಕೊನೆಯಲ್ಲಿ ಗದ್ದೆ ಸುಡು ಮಣ್ಣಿನಿಂದ‌ ಸುಟ್ಟು ಹದಮಾಡಿ ಸೆಪ್ಟೆಂಬರ್ ನಲ್ಲಿ ಸೇವಂತಿಗೆ ಸಸಿಗಳನ್ನು ನಾಟಿ ಮಾಡಲು ಆರಂಭಿಸುತ್ತಾರೆ. ಈ ಸಸಿಗಳನ್ನು ಪ್ರತಿ ವರ್ಷ ಸೇವಂತಿಗೆ ಬೆಳೆದು, ಕೊಯ್ಲು ಆದ ಬಳಿಕ ಗಿಡವನ್ನು ಹಾಗೆ ಉಳಿಸಿ ಮುಂದಿನ ಬೆಳೆಗೆ ಅದರಲ್ಲೆ ಸಸಿಗಳನ್ನು ಆಯ್ದುಕೊಳ್ಳುತ್ತಾರೆ. ಬಾರಿ ಮೋಡ, ಅಕಾಲಿಕ‌ಮಳೆ, ಚಳಿಕಡಿಮೆ ಇದ್ದರೆ ಬರಬೇಕಾದಷ್ಟು ಪುಷ್ಪಗಳು ಅರಳದೆ ಇಳುವರಿ ಸರಿಯಾಗಿ ಆಗುವುದಿಲ್ಲ. ಕೆಲಒಮ್ಮೆ ಪ್ರತಿಕೂಲ ಹವಾಮಾನದಿಂದಾಗಿ ನಾಟಿಗೆಂದು ಇಡಲಾದ ಸಸಿಗಳು‌ ಕರಟಿ ಅಥವಾ ಕೊಳತು ಸೇವಂತಿಗೆ ಸಸಿಗಳಿಗೂ ಅಭಾವ ಒದಗುವುದು ಉಂಟು. ಡಿಸೆಂಬರ್ ಕೊನೆಯ ಲ್ಲಿ ಅಥವಾ ಜನವರಿ ಮೊದಲ ವಾರದೊಳಗೆ ಹೂ ಕೊಯ್ಲಿಗೆ ತಯಾರಾಗುತ್ತದೆ. ಪ್ರತಿ ವರ್ಷ ಜನವರಿ 14 ರಂದು ನಡೆಯುವ ಮಾರಣಕಟ್ಟೆ ಜಾತ್ರೆಗೆ ಇಲ್ಲಿನ ಹೂವಿಗೆ ಬಾರಿ ಬೇಡಿಕೆ ಇರುತ್ತದೆ.


      ಬಸ್ರೂರು ಹಬ್ಬದಿಂದ ಆರಂಭಗೊಂಡು ಮಾರ್ಚ್ ಕೊನೆಯ ಆಸೋಡು ಹಬ್ಬದವರೆಗೂ ಜಾತ್ರೆ, ಕೆಂಡೋತ್ಸವಗಳಿಗೆ ಸೇವಂತಿಗೆ ಹೂವಿಗೆ ಬೇಡಿಕೆ ಇರುತ್ತದೆ. ಮಕರಸಂಕ್ರಾಂತಿಯಂದು ಶ್ರೀ ಬ್ರಹ್ಮಲಿಂಗನಿಗೆ ಅರ್ಪಿಸಿದ ಬಳಿಕ ಬೆಳೆಗಾರರು ವಿವಿಧ ದೇವಸ್ಥಾನಗಳಲ್ಲಿ ‌ನಡೆಯುವ ಜಾತ್ರೋತ್ಸವಕ್ಕೆ ಹೂವು ಕೊಂಡು ಹೋಗಿ ವ್ಯಾಪಾರ ಮಾಡುವ ಪರಿಪಾಟವಿದೆ.
        ಅಲ್ಪಾಯುಷಿಯಾದರೂ ಸಾರ್ಥಕದ ಖಣಜ . ಎಂಥಹ ಅರಸಿಕನಾದರೂ ಈ ಸೇವಂತಿಗೆ ಗದ್ದೆಯತ್ತಾ ಒಂದು ಕ್ಷಣ ನಿಂತು ಕಣ್ಣು ಹಾಯಿಸಿ ಕಣ್ಣರಳಿಸಿ ನೋಡಿಯೇ ನೋಡುತ್ತಾರೆ. ಹೂವಿನ ಬೆಳೆ ಬೆಳೆಯುವ  ಯುವುದರಿಂದ‌ ಕೇವಲ ಆರ್ಥಿಕ ವಿಚಾರ ಮಾತ್ರವಲ್ಲದೆ ಪ್ರಕೃತಿಸೊಬಗು ಹೆಚ್ಚಿ ಪರಿಸರ ಶುದ್ದಿಗೂ ಕಾರಣವಾಗು ತ್ತದೆ.


        ಈ ಬಾರಿ ಕರೊನಾದ ಹಿನ್ನೆಲೆಯಲ್ಲಿ ಯಾವುದೇ ಜಾತ್ರೆಯ ಅದ್ದೂರಿ ಆಚರಣೆಯಿಲ್ಲದೆ ಇದ್ದರೆ ಬೆಳೆದ ಹೂವನ್ನು ಏನು ಮಾಡುವುದು ಎಂಬ ಚಿಂತೆಯಲ್ಲಿ ಅದ್ದೂರಿಯಾಗಿ ನಡೆವ ಉತ್ಸವದ ಬಗ್ಗೆ ಅನಿಶ್ಚಿತತೆ ಇದ್ದ ಕಾರಣದಿಂದ ಈ ಬಾರಿ ಉತ್ಸವಗಳಿಗೆ ಬಳಸುವ ಹೆಮ್ಮಾಡಿ ಸೇವಂತಿಗೆ ಹೂವನ್ನು ಬೆಳೆಯಲು ಬೆಳೆಗಾರರು  ನಿರಾಸಕ್ತಿ ತೋರಿದಂತೆ ಕಂಡುಬಂದಿದೆ. ಆದರೆ ಬ್ರಹ್ಮ ಲಿಂಗನ ಪ್ರಿಯ ಹೂ ಅವನಿಗೆ ಅರ್ಪಿಸಿಲಾಗುತ್ತದೆ.

Leave a Reply

Your email address will not be published. Required fields are marked *