ಬೆಲೆ ಕಟ್ಟಲಾಗದ ತಂದೆ ತಾಯಿಯ ಪ್ರೀತಿ | heggaddesamachar

ಒಂದು ಚಿಕ್ಕದಾದ ಹಳ್ಳಿಯಿಂದ ಹೀಗೊಂದು ದಿನ ತಂದೆ-ತಾಯಿ ಹಾಗೂ ತನ್ನೆರಡು ಮಕ್ಕಳನ್ನು ಕೂಡಿಕೊಂಡು ಮನೆಗೆ ಬೇಕಾದ ದಿನನಿತ್ಯದ ಸಾಮಗ್ರಿಗಳನ್ನು ತರಲು ಒಂದೆರಡು ಕಿಲೋಮೀಟರ್ ಕ್ರಮಿಸಿದರು. ಹಾಗೆಯೇ ಸಾಮಾಗ್ರಿಗಳನ್ನು ತೆಗೆದುಕೊಂಡು ಪುನಃ ತಮ್ಮ ಮನೆಗೆ ಬರುವಾಗ ದಾರಿಯ ಮಧ್ಯದಲ್ಲಿ ಜೋರಾಗಿ ಮಳೆ ಸುರಿಯಲು ಪ್ರಾರಂಭವಾಯಿತು. ತುಂಬಾ ಬಡತನದ ಸ್ಥಿತಿಯಲ್ಲಿರುವ ಕುಟುಂಬವಾಗಿದ್ದರಿಂದ ಇವರಿಗೆ ಯಾವುದೇ ಆಟೋ ರಿಕ್ಷಾಗಳಲ್ಲಿ ಪ್ರಯಾಣ ಮಾಡಲು ಇವರಿಗೆ ಕಷ್ಟಕರವಾದ ಸಂಗತಿಯಾಗಿದೆ. ತಂದೆಯಾದವನು ಹೇಗೋ ಕೂಲಿ ಕೆಲಸವನ್ನು ಮಾಡಿಕೊಂಡು ಸರಳವಾಗಿ ಸಂಸಾರವನ್ನು ಸಾಗಿಸುತ್ತಿದ್ದ. ಇವರ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಅದೊಂದು ಹಳ್ಳಿಯಾಗಿದ್ದರಿಂದ ಮನೆಗೆ ಬರುವ ದಾರಿಯ ಮಧ್ಯದಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಯಾವುದೇ ಸರಿಯಾದ ತಾಣವಿಲ್ಲವಾಗಿತ್ತು.
ತಾಯಿಯ ಕೈಯಲ್ಲಿ ಇತ್ತು ಒಂದು ಬಣ್ಣಬಣ್ಣದ ಕೊಡೆ. ಆ ಕೊಡೆಯನ್ನು ತೆಗೆದು ತಾಯಿ ತನ್ನ ಸುಮಾರು ಎಳೆಂಟು ವರ್ಷ ಪ್ರಾಯದ ಮಗಳಿಗೆ ಕೊಟ್ಟು, ಇನ್ನೊಬ್ಬ ಸರಿಸುಮಾರು ಐದು ವರ್ಷ ಪ್ರಾಯದ ಮಗನನ್ನು ತಾನು ತೊಟ್ಟಿರುವ ಸೀರೆಯ ಸೆರಗಿನಿಂದ ಮುಚ್ಚಿಕೊಂಡು ಮೂರು ಜನ ಸೇರಿ ಒಂದೇ ಕೊಡೆಯಲ್ಲಿ ಸಾಗುತ್ತಾರೆ. ಆದರೆ ತಂದೆಯಾದವನ ಪರಿಸ್ಥಿತಿ ಯಾರಾದರೂ ನೋಡಿದರೆ ಮೈ ಜುಮ್ಮೆನ್ನುತ್ತದೆ. ಮಳೆಯನ್ನೇ ಲೆಕ್ಕಿಸದೆ ಆ ಮಳೆಯಲ್ಲಿಯೆ ನೆನೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದರೆ ಎಂತಹ ಅದ್ಭುತವಾದ ಪ್ರೀತಿ, ಕಾಳಜಿ ತನ್ನ ಕುಟುಂಬದ ಮೇಲೆ ಅನಿಸುತ್ತದೆ.
ನಿಜವಾಗಿಯೂ ನಾವೆಲ್ಲರೂ ಗಮನಿಸಬೇಕಾದ ವಿಷಯವೆಂದರೆ ತಂದೆಯಾದವನು ತನ್ನೆಲ್ಲಾ ಆಸೆಗಳನ್ನು ಬದಿಗೊತ್ತಿ ತನ್ನ ಹೆಂಡತಿ ಮಕ್ಕಳಿಗಾಗಿಯೇ ಜೀವನವನ್ನೇ ಕಳೆಯುತ್ತಾನೆ. ಅದೇ ರೀತಿ ತಾಯಿಯಾದವಳು ತನಗೆಷ್ಟೇ ಕಷ್ಟಕರ ಜೀವನವಾದರೂ ತನ್ನ ಮಕ್ಕಳನ್ನ ಸಾಕಿ ಸಲಹಿ, ಪ್ರೀತಿಯಿಂದ ಬೆಳೆಸುವಲ್ಲಿ ತನ್ನೆಲ್ಲಾ ಕಷ್ಟವನ್ನು ಮರೆಯುತ್ತಾಳೆ. ಇದಕ್ಕೆ ಹೇಳುವುದು ಈ ವಿಶಾಲವಾದ ಭೂಮಿಯ ಮೇಲೆ ಬೆಲೆ ಕಟ್ಟಲಾಗದ ಪ್ರೀತಿಯೆಂದರೆ ತಂದೆ-ತಾಯಿಯ ಪ್ರೀತಿ ಮಾತ್ರ.