ಬಾಲ್ಯವಿವಾಹ ಪದ್ಧತಿ ಇನ್ನೂ ರೂಢಿಯಲ್ಲಿದೆಯಾ ?

Spread the love

ಬಾಲ್ಯ ವಿವಾಹ ಪದ್ಧತಿ ಇನ್ನೂ ಜೀವಂತವಾಗಿ ದೆಯಾ…ಬಾಲ್ಯ ವಿವಾಹಕ್ಕೆ ಕರೊನಾ ನಿಯಂತ್ರಣದ ಲಾಕ್ ಡೌನ್ ವೇದಿಕೆ ಆಗಿದ್ದು ಹೌದಾ…ಬಾಲ್ಯ ವಿವಾಹ ನಿಷೇಧಿಸಲಾಗಿದ್ದು ಕಠಿಣ ಕಾನೂನು ಇದ್ದು ಈ ಪದ್ಧತಿ ನಿರ್ಬಂಧಿಸಿ ಅದಾಗಲೇ ಕೆಲವು ವರುಷಗಳೇ ಉರುಳಿ ಹೋಗಿದೆ ಆದರೂ ನಿಯಂತ್ರಣಕ್ಕೆ ಬಂದಿಲ್ಲ. ಲಾಕ್ ಡೌನ್ ದುರ್ಬಳಕೆ ಮಾಡಿಕೊಂಡು ಮಕ್ಕಳ ಪಾಲಕರು ಸಮಾಜದ ಹಾಗೂ ಸರ್ಕಾರದ ಕಣ್ಣು ತಪ್ಪಿಸಿ ಅಪ್ರಾಪ್ತ ಮಕ್ಕಳ ವಿವಾಹ ಸದ್ದಿಲ್ಲದೆ ನಡೆಸುತ್ತಿದ್ದು ತೆರೆ ಮರೆಯಲ್ಲಿ ಈ ಬಾಲ್ಯವಿವಾಹ ಪದ್ಧತಿ ನಡೆಯುತ್ತಿದೆ ಅನ್ನುವುದನ್ನು ಅರಗಿಸಿಕೊಳ್ಳಲು ನನಗಂತು ಕೆಲ ಹೊತ್ತು ಬೇಕಾಯಿತು. ಕೆಲ ದಿನಗಳ ಹಿಂದೆ ಒಂದಲ್ಲ ಎರಡಲ್ಲ 4 ದಿನ ‌ಪತ್ರಿಕೆ ತಿರುವಿ ಹಾಕಿದರು ಎಲ್ಲದರಲ್ಲೂ ಕೋವಿಡ್ 19 ರ ಲಾಕ್ ಡೌನ್ ಅವಧಿಯಲ್ಲಿ ವಿವಿಧೆಡೆ ಬಾಲ್ಯ ವಿವಾಹ ಹೆಚ್ಚಾಗಿ ನಡೆದಿದೆ‌ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದ ವರದಿಯಾಗಿದೆ.‌

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪ್ರಕಾರ ದೇಶದ ಬಹುತೇಕ ಜಿಲ್ಲೆಗಳಲ್ಲಿ ಬಾಲ್ಯ ವಿವಾಹ ಇಂದಿಗೂ ಪ್ರಚಲಿತದಲ್ಲಿದೆ. ಜಗತ್ತಿನ ಅತಿ ಹೆಚ್ಚು ಬಾಲ್ಯ ವಿವಾಹ ಆಗುವ ದೇಶಗಳಲ್ಲಿ ಭಾರತ ಎರಡನೆ ಸ್ಥಾನದಲ್ಲಿದ್ದು.ಉತ್ತರ ಭಾರತದಲ್ಲಿ ಬಾಲ್ಯ ವಿವಾಹ ಕಾನೂನಿನ ಭಯವಿಲ್ಲದೆ ನಡೆಯುತ್ತಿರುವುದು ವರದಿಯಲ್ಲಿ ಉಲ್ಲೇಖಿಸಿದೆ. ಕಳೆದ ವರ್ಷ ನಡೆದ ಬಾಲ್ಯ ವಿವಾಹ ಪ್ರಕರಣಗಳಿಗಿಂತ ಈ ವರ್ಷ ಹೆಚ್ಚು ಬಾಲ್ಯ ವಿವಾಹ ನಡೆದಿರುವ ಅಂಕಿ ಅಂಶ ಗಮನಿಸಿದರೆ ಲಾಕ್ ಡೌನ್ ಅವದಿಯಲ್ಲಿ ನಡೆದ ಬಾಲ್ಯ ವಿವಾಹದ ಅಗಾಧತೆ ಕಣ್ಣಿಗೆ ರಾಚುತ್ತದೆ.ಕೊರೊನಾ ಲಾಕ್ ಡೌನ್ ನಿಂದ ಆರ್ಥಿಕ ಸಮಸ್ಯೆ ಹಾಗೂ ಮಕ್ಕಳು ಶಾಲೆಯಿಂದ ಹೊರಗೆ ಉಳಿದ ಕಾರಣಕ್ಕೆ ಬಾಲ್ಯ ವಿವಾಹ ಹೆಚ್ಚಾಗಿರುವ ಸಾದ್ಯತೆ ಮನಗಂಡ ಸರ್ಕಾರ ಬಾಲ್ಯ ವಿವಾಹ ತಡೆಯಲು ಹೊಸ ಯೋಜನೆ ತಯಾರಿಸಿದೆ. ವಿವಾಹ ನೋಂದಣಿ ವೇಳೆ ಜನನ ಪ್ರಮಾಣ ಪತ್ರ, ಶಾಲಾ ಡೃಢಿಕರಣ ಪತ್ರ ಅಧಿಕೃತ ದಾಖಲೆಯಾಗಿ ಪರಿಗಣಿಸ ಬೇಕೆಂದು ಸುತ್ತೋಲೆ ಹೊರಡಿಸಿದೆ. ಅಷ್ಟೇ ಅಲ್ಲದೇ ಮಕ್ಕಳ ಹಕ್ಕು ರಕ್ಷಣಾ ಆಯೋಗದೊಂದಿಗೆ ಕೆಲವು ಸಂಘಸಂಸ್ಥೆಗಳು ಬಾಲ್ಯ ವಿವಾಹ ಕೊನೆಗೊಳಿಸಲು ಕೈ ಜೋಡಿಸಿದೆ.

ಮಕ್ಕಳು ಸುಮಗಳಂತೆ ಅವರ ಸದಭಿರುಚಿಯನ್ನು ಗುರುತಿಸಿ ನೀರೆರೆದು ಪೋಷಿಸಿದಾಗ ಅವರ ಭವಿಷ್ಯ ಉಜ್ವಲ ವಾಗುವುದು .ಮಕ್ಕಳ ಹಕ್ಕುಗಳ ಒಡಂಬಡಿಕೆಯಯಲ್ಲಿ ಬದುಕುವ ಹಕ್ಕು ,ರಕ್ಷಣೆಯ ಹಕ್ಕು, ಅಭಿವೃದ್ಧಿಯ ಪಥದಲ್ಲಿ ಸಾಗಲು ಅನುಕೂಲ ವಾಗುವ ಹಕ್ಕುಗಳಿವೆ. ಮನೆಯ ಸಂತೋಷದ ಆಗರ ವಾಗಿದ್ದ ಮಕ್ಕಳು ಭಾರವಾಗುವುದಾದರೂ ಹೇಗೆ ಮಕ್ಕಳ ಪ್ರತಿಭೆಗೆ ತಕ್ಕಂತೆ ಆಸಕ್ತಿದಾಯಕ ವೇದಿಕೆ ನಿರ್ಮಾಣ ಮಾಡುವುದರ ಬದಲು ಬಾಲ್ಯ ವಿವಾಹಕ್ಕೆ ಲಾಕ್ ಡೌನ ವೇದಿಕೆ ಆಗಬಾರದಿತ್ತು. ವಿದ್ಯಾವಂತ ಸಮಾಜ ಸ್ವಲ್ಪ ಎಚ್ಚೆತ್ತು ಮಕ್ಕಳ ಸಹಾಯ ವಾಣಿಗೆ ಅಥವಾ ಹತ್ತಿರದ ಪೋಲಿಸ್ ಠಾಣೆಗೆ ಮಾಹಿತಿ ನೀಡ ಬಹುದು ಇದು ನಾಗರೀಕರ ಕರ್ತವ್ಯವೂ ಹೌದು. ಅದರೆ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಮದುವೆ ಮಾಡಲು ಸರಕಾರ ಕೊಟ್ಟ ಅವಕಾಶದ ದುರುಪಯೋಗ ಪಡಿಸಿಕೊಂಡ ಪಾಲಕರಿಗೆ‌ ಶಿಕ್ಷೆಯಾದರು ಅದರ ಅಡ್ಡ ಪರಿಣಾಮಗಳ ಅನುಭವಿಸುವುದು ಮಕ್ಕಳೇ.

ಶಾಲೆಗೆ ಹೋಗಿ ಆಟ ಪಾಠ ಕಲಿಯ ಬೇಕಾದ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ‌ಮದುವೆ ಮಾಡಿಸಿ ತಮ್ಮ ಜವಾಬ್ದಾರಿಯಿಂದ ಮುಕ್ತಿ ಪಡೆಯುತ್ತಿರುವ ಪಾಲಕರ ಬಗ್ಗೆ ಅತೀವ ಖೇದವೆನಿಸುತ್ತಿದೆ. ಇಂತಹ ಸಾಂಪ್ರದಾಯಿಕ ಮನಸ್ಥಿತಿಯಿಂದ ‌ ಹೊರ ಬಂದು ಬೇಟಿ ಬಚಾವ್ ಬೇಟಿಪಡಾವು ಎನ್ನುವುದಕ್ಕೆ ಗಮನ ಹರಿಸಬೇಕು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನೇಕ ಸೌಲಭ್ಯಗಳು ಹಾಗೂ ಕೆಲವೆಡೆ ಉಚಿತ ಶಿಕ್ಷಣವು ಇದೆ. ಬಾಲ್ಯ ವಿವಾಹದಂತ ಪಿಡುಗು ತೊಲಗಿಸಲು ಹೆಣ್ಣು ‌ಮಕ್ಕಳ ಸುರಕ್ಷತೆ ಮತ್ತು ಹಕ್ಕು ಗಳನ್ನು ಖಾತ್ರಿ ಪಡಿಸಿ ಕೊಳ್ಳಲು ಕಾನೂನು ಚೌಕಟ್ಟನ್ನು ಇನ್ನಷ್ಟು ಬಲ ಪಡಿಸುವ ಅಗತ್ಯವಿದೆ. 18 ವರ್ಷ ಕ್ಕಿಂತ ಕಡಿಮೆ ವಯಸ್ಸಿನ ಪತ್ನಿ ಜೊತೆಗಿನ ಲೈಂಗಿಕ ಸಂಪರ್ಕವೂ ವೈವಾಹಿಕ ಅತ್ಯಾಚಾರ ಎಂದು ಸುಪೀಂಕೋರ್ಟ ತೀರ್ಪು ನೀಡಿರುವುದು ಇಲ್ಲಿ ನೆನಪಿಸಿಕೊಳ್ಳ ಬಹುದು. ಚಿಕ್ಕ ವಯಸ್ಸಿನಲ್ಲಿ ತಾಯಿಯಾಗುವ, ಬಾಣಂತಿ ಸಾವು, ಗರ್ಭ ಪಾತ, ಶಿಶು ಮರಣ ಇವೆಲ್ಲ ಬಾಲ್ಯ ವಿವಾಹದ ಅಮಾನವಿಯ ಆಯಾಮಗಳು.

ಭಾರತೀಯ ಸಂಸ್ಕೃತಿ ಪರಂಪರೆಯ ಬಗ್ಗೆ ನನಗೆ ಅತೀವ ಗೌರವ ವಿದೆ. ಆದರೆ ಇಂತಹ ಬಾಲ್ಯ ವಿವಾಹದಂತ ಸಂಪ್ರದಾಯವನ್ನು ಖಂಡಿಸಬೇಕು. ಹಲವಾರು ಧಾರ್ಮಿಕ ಆಚರಣೆಗಳ ತೊಟ್ಟಿಲಾಗಿರುವ ನಮ್ಮ ದೇಶದ ಲ್ಲಿ ಪ್ರಕೃತಿ ಹೆಣ್ಣು , ಭಾರತಾಂಭೆ ಹೆಣ್ಣು, ಹೆಣ್ಣನ್ನು ಕನ್ಯಾ ಮಾತ ಅಂತ ಪೂಜಿಸುವ ನಾಡಿನಲ್ಲಿ ಹೆಣ್ಣು ಮಗಳ ಭವಿಷ್ಯಕ್ಕೆ ಸಂಕಟ ತರುವ‌ ಪದ್ದತಿ ತೆರೆ ಮರೆಯಲ್ಲಿ ನಡೆಯುವುದು ತಲ್ಲಣ ತಳಮಳಗಳಿಗೆ ಸಾಕ್ಷಿ ಯಾಗುತ್ತಿದೆ.‌ಮಾನವನ ಬುದ್ದಿಗೆ ಅಂಟಿದ ಈ ಪಿಡುಗು ಅದರ ನಿರ್ನಾಮವಾಗುವ ತನಕ ಸಮಾಜ ಸುಧಾರಣೆ ಸಾದ್ಯವಿಲ್ಲ. ಕೃಷಿಯಿಂದ ಫ್ಯಾಷನ್ ವರೆಗೂ ,ಅಂಗಳ ದಿಂದ‌ಗಗನ ಯಾತ್ರೆತನಕ,ಅಡುಗೆ ಮನೆಯಿಂದ ಉದ್ಯಮದಲ್ಲೂ ಮೇಲುಗೈ ಸಾಧಿಸುತ್ತಿದ್ದರು ಹೆಣ್ಣು ಮಕ್ಕಳು ಭಾರವಾಗುತ್ತಿರುವುದು ಯಾಕೆ.

ದೇಶದ ಭವಿಷ್ಯತ್ತಾದ ಬಹುತೇಕ ಹೆಣ್ಣು ಮಕ್ಕಳು ಮೂಲ ಭೂತ ಸೌಕರ್ಯ ಗಳಿಲ್ಲದೆ ಬೆಳೆಯುತ್ತಿದ್ದಾರೆ. ಮನು ಸ್ಮೃತಿ ಯಲ್ಲಿ ಬರುವ ಮಾತಿನಂತೆ ಹೆಣ್ಣು ಎಂದರೆ ಬಾಲ್ಯ ದಲ್ಲಿ ತಂದೆ ತಾಯಿಯ ಆಶ್ರಯ, ಯೌವನದಲ್ಲಿ ಪತಿಯ ಆಶ್ರಯ, ಮುಪ್ಪಿನಲ್ಲಿ ಮಕ್ಕಳ ಆಶ್ರಯದಲ್ಲಿ ಕಾಲ ಕಳೆಯುಬೇಕು ಎನ್ನುವುದಿದೆ.‌ ಆದರೆ ಈಗಿನ ‌ಹೆಣ್ಣುಮಕ್ಕಳು ಹೆಚ್ಚಿನ ಅಡೆ ತಡಗಳ ದಾಟಿ ಪ್ರಗತಿ ಪಥದತ್ತ ಸಾಗುತ್ತಿದ್ದು ತಮ್ಮ ಶಕ್ತಿ ಸಾಮರ್ಥ್ಯ ಗಳನ್ನು ತೋರಿ ಹಿರಿಮೆಗಳಿಸಿದ್ದು ಇತ್ತೀಚಿನ ‌ ದಿನಗಳಲ್ಲಿ ಹೆಣ್ಣು ಮಕ್ಕಳು ಅಭೂತಪೂರ್ವ ಎನ್ನುವಂತೆ ಆರ್ಥಿಕ ಸ್ವಾತಂತ್ರ್ಯ ವನ್ನು ಸ್ವತಂತ್ರ ಚಿಂತನಾ ಶೈಲಿಯನ್ನು ರೂಢಿ ಸಿ ಕೊಂಡಿದ್ದಾರೆ .ದುಃಖಿಗಳ ,ಶೋಷಿತರ ಕಷ್ಟ ಕಾರ್ಪಣ್ಯಗಳಲ್ಲಿ ತೊಳಲಾಡುವವರಿಗೆ ಆಶ್ರಯ ದಾತಳಾಗಿ ಮಾದರಿ ಆದದ್ದು ಇದೆ. ಆದರೂ ಎನೂ ಅರಿಯದ ಮುಗ್ಧ ಹೆಣ್ಣು ಮಕ್ಕಳನ್ನು ಬಾಲ್ಯ ದಲ್ಲೇ ವಿವಾಹ ಮಾಡಿಕೊಟ್ಟು ಕೈ ತೊಳೆದು ಕೊಳುತ್ತಿರುವುದು ಬೇಸರದ ವಿಚಾರ. ಅವರ ಬದುಕು ಭವಿಷ್ಯದ ಬಗ್ಗೆ ಯೋಚಿಸಬೇಕು.

ಹೆಣ್ಣು ಪ್ರಕೃತಿಯ ವರದಾನ ಹೆಣ್ಣು ಪ್ರೇರಕ ಹಾಗೂ ಪೂರಕ ಶಕ್ತಿ ಸ್ತ್ರೀ ಶಕ್ತಿಯ ಎತ್ತರ ಬಿತ್ತರಗಳನ್ನು ಅಳೆಯಲು ಅಸಾಧ್ಯ ಅದು ಅಲ್ಲದೆ ಕನ್ಯಾ ಕುಮಾರಿಯರನ್ನು ದೇವಿ ಎಂದು ಪೂಜಿಸುವ ನಮ್ಮ ದೇಶದಲ್ಲಿ ಮಕ್ಕಳ ಬದುಕಿನಲ್ಲಿ ಅನಾಹುತ ತಂದೊಡ್ಡಿದೆ ಬಾಲ್ಯ ವಿವಾಹ . 18 ವರ್ಷ ತುಂಬುವ ಮೊದಲೇ ವಿವಾಹ ಬಂಧನಕ್ಕೆ ಒಳಗಾಗುವ ಅದು ಅಲ್ಲದೇ ಮದುವೆಯ‌ ಬಗ್ಗೆ ಏನ್ನೊಂದು ಅರಿಯದ ಬಾಲ್ಯಕ್ಕೆ ಗೃಹಿಣಿಯ ಪಟ್ಟ ಕಟ್ಟಿದರೆ. ಎಳೆಯರ ಬಾಲ್ಯಕ್ಕೆ ಕಳಂಕವೇ ಸರಿ .ದೈಹಿಕ ಬೆಳವಣಿಗೆ ಸರಿಯಾಗಿ ಆಗುವ ಮೊದಲೇ ಚಿಗುರೊಡೆದು‌ ಬೆಳೆಯ ಬೇಕಾದ ಮಕ್ಕಳ ‌ಬದುಕಿಗೆ ಬಾಲ್ಯ ವಿವಾಹ ಎಂಬ ಬಂಧನ‌ ಎಷ್ಟಕ್ಕೂ ಸರಿ ಅಲ್ಲ.‌ ಶಿಕ್ಷಣ‌ಪಡೆಯ‌ಬೇಕಾದ‌ ವಯಸ್ಸಿನಲ್ಲಿ ಸಂಸಾರ ಸಾಗರ ಈಜಿದಡ ಸೇರುವುದು ಕಷ್ಟ ಸಾದ್ಯ.

ಇಂದು ಕಾಲ ಬದಲಾಗಿದೆ. ಜೀವನ ಮೌಲ್ಯಗಳ ವ್ಯಾಪ್ತಿ ತನ್ನ ಉದ್ದ ಅಗಲವನ್ನು ‌ ಹೆಚ್ಚಿಸಿ ಕೊಂಡಿದೆ.‌ ಬಾಲ್ಯ ವಿವಾಹ ನಿಷೇಧ ಕಾಯ್ದೆ ಗೆ 2016 ರಲ್ಲಿ ತಿದ್ದುಪಡಿ ತಂದು ಅದರ‌ ಪ್ರಕಾರ ಅಪರಾಧಿಗಳಿಗೆ ಕಠಿಣ ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ‌ತಂದೆ ತಾಯಿ ,‌ಪುರೋಹಿತರು ಕಲ್ಯಾಣ ಮಂಟಪ ಮಾಲಕರು ಶಿಕ್ಷೆಗೊಳಗಾಗುತ್ತಾರೆ. ಅಷ್ಟೇ ಅಲ್ಲದೇ ‌ಬಾಲ್ಯವಿವಾಹ ವನ್ನು ಅಸಿಂಧು ಎಂದು ಘೋಷಿಸಲಾಗುತ್ತದೆ. ಬಾಲ್ಯ ವಿವಾಹ ತಡೆಯಲು ಸುರಕ್ಷಣಿ ಎಂಬ ಆಪ್ಯ್ ರಚಿಸುವ ಮೂಲಕ ಕೆಲ ಜಿಲ್ಲಾಡಳಿತ ದೇಶಕ್ಕೆ ಮಾದರಿಯಾಗಿದೆ.‌ಬಾಲ್ಯವಿವಾಹಗಳ ಸಂಖ್ಯೆ ತೀವ್ರ ಏರಿಕೆ ಆಗುತ್ತಿರುವುದರ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕಾದ ಅಗತ್ಯವಿದೆ.‌ ಸ್ತ್ರೀ ಪಾತ್ರದ ಮಹತ್ವ ಕುಟುಂಬದ ನೆಲೆಯಿಂದ ರಾಷ್ಟ್ರೀಯ ಮಟ್ಟದವರೆಗೂ ಎಲ್ಲರಿಗೂ ಗೊತ್ತು ಆದರೂ ಹೆಣ್ಣು ಮಕ್ಕಳು ತನ್ನ ರಕ್ಷಣೆಗೆ, ಅಸ್ತಿತ್ವಕ್ಕೆ, ಆಯ್ಕೆ ಹಾಗೂ ನಿರ್ಧಾರಗಳನ್ನು ತೆಗೆದು ಕೊಳ್ಳ ಲು‌ ಇಂದಿಗೂ ತಡಕಾಡುತ್ತಿರುವುದು ನಿಜ.

  • ಲತಾ ಸಂತೋಷ ಶೆಟ್ಟಿ ಮುದ್ದುಮನೆ.

Leave a Reply

Your email address will not be published. Required fields are marked *