ಬದುಕೆಂದರೆ ಇಷ್ಟೆ…

ರಸ್ತೆ ಬದಿಯಲಿ ಹೂ ಮಾರುವ ಹುಡುಗಿ
ಪುಟ್ಪಾತಿನಲಿ ಷೂ ಪಾಲಿಸ್ ಮಾಡುವ ಹುಡುಗ
ಟ್ರಾಫಿಕ್ ಸಿಗ್ನಲ್ಗಳಲಿ ನಿಂತು ಭಿಕ್ಷೆಗಾಗಿ
ಕೈ ಚಾಚುವ ಅನಾಥ ಮಕ್ಕಳು
ಬಸ್ಟಾಂಡಿನಲಿ ಕುಳಿತು ತನ್ನಷ್ಟಕ್ಕೆ ತಾನೇ ಹಾಡುವ ಅಂಧ ಗಾಯಕ
ಹಸಿದ ಕಂದನ ತುತ್ತು ಅನ್ನಕ್ಕಾಗಿ ಗಿರಾಕಿಗಾಗಿ ಕಾಯುವ ಹೆಂಗಸು
ಹೀಗೆ ಒಬ್ಬೊಬ್ಬರದು ಒಂದೊಂದು ರೀತಿಯ ಬದುಕು ಮತ್ತು ನೋವು
ಬಾಲ್ಯದಲ್ಲಿ ಕಳೆದು ಹೋದ ಮಗ
ಎಂದಾದರೊಮ್ಮೆ ತನ್ನ ಬಳಿ ಬಂದು
ತನ್ನನ್ನು ಕರೆದೊಯ್ಯಬಹುದೆಂಬ ನಿರೀಕ್ಷೆಯಲಿ ಬದುಕಿನ ಕೊನೆಯ ದಿನಗಳ ಎಣಿಸುತ್ತಿಹ ತಾಯಿ
ಬಿಟ್ಟು ಹೋದ ಗಂಡ
ಮತ್ತೆ ತನ್ನನ್ನು ಹುಡುಕಿ ಬರಬಹುದೆಂದು
ಆಸೆಯ ಹಣತೆ ಹಚ್ಚಿಕೊಂಡು
ಪ್ರತಿ ದಿನ ಅವನಿಗಾಗಿ ಕಾಯುವ ಹೆಂಡತಿ
ಯುದ್ಧದಲ್ಲಿ ಮಡಿದ ತಮ್ಮ ತಂದೆ
ಮತ್ತೆ ಬಂದು ತಮ್ಮನ್ನು ಮಡಿಲಲ್ಲಿ ಮಲಗಿಸಿಕೊಂಡು ಲಾಲಿ ಹಾಡಬಹುದೆಂದು ಕನವರಿಸುತ್ತಿಹ ಮುಗ್ದ ಮಕ್ಕಳು
ಇಲ್ಲಿ ಎಲ್ಲರದು ನಿರೀಕ್ಷೆಗಳ ಬದುಕೆ
ಎಲ್ಲವೂ ಇದ್ದು ಏನೂ ಇಲ್ಲವೆಂದು ಸದಾ ಕೊರಗುವ ನಾವು
ಏನೂ ಇಲ್ಲದೆಯೂ ಎಲ್ಲವೂ ಇದೆ ಎಂದು ಇರುವುದರಲ್ಲೇ ನೆಮ್ಮದಿ ಹುಡುಕುವ ಅವರು
ಬದುಕೆಂದರೆ ಸದಾ ದೂಷಿಸುವುದಲ್ಲ
ನಮಗೆ ದೊರೆತ ಪ್ರತಿ ಕ್ಷಣವನ್ನು ಅನುಭವಿಸುವುದು
ನಾಳೆಯೆಂಬ ತೆರೆಯದ ಲಕೋಟೆಯಲಿ
ಏನಿದೆಯೋ? ಇಲ್ಲವೋ? ಬಲ್ಲವರಾರು!
ನಮ್ಮೊಂದಿಗಿರುವ ಈ ಕ್ಷಣಗಳಷ್ಟೆ ಸತ್ಯ
ನೆಮ್ಮದಿಯೆಂಬುದು ಹೊರಗೆ ಸಿಗುವುದಲ್ಲ
ನಮ್ಮೊಳಗೆ ಹುಟ್ಟುವಂತದ್ದು
ಸಿಕ್ಕಿದ್ದು ಕಳೆದು ಹೋಗಬಹುದು
ನಮ್ಮೊಳಗೆ ನಾವೇ ಕಂಡು ಕೊಂಡದಲ್ಲ

ಹಣತೆಯೊಂದು ಉರಿಯುತ್ತಿದೆ
ಸುಟ್ಟು ಹೋಗುತ್ತೇನೆಂಬ ನೋವಿನಿಂದಲ್ಲ
ಮತ್ಯಾರದೋ ಕತ್ತಲ ಬದುಕಿಗೆ ಬೆಳಕಾಗುತ್ತೇನೆಂಬ ಒೌದಾರ್ಯದಿಂದ
ಹಾಗೆಯೇ ಬದುಕು ಕೂಡ
ಅವರವರ ಭಾವಕ್ಕೆ, ಅನುಭೂತಿಗೆ ಸಿಕ್ಕಿದಷ್ಟು, ತೋಚಿದಷ್ಟು.
ಬದುಕೆಂದರೆ ನಮ್ಮೊಡನಿದ್ದು ನಮ್ಮೊಳಗೆಯೇ ಹರಿಯುವ ಗುಪ್ತಗಾಮಿನಿ…..
- ಪ್ರಭಾಕರ್ ಎಂ.ಸಿ