ಪ್ರಧಾನಿಯವರಿಂದ ಒಡಿಶಾದಲ್ಲಿ ಅಂಫಾನ್ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ: 500 ಕೋ.ರೂ. ಗಳ ಹಣಕಾಸು ನೆರವು ಘೋಷಣೆ: heggaddesamachar

- ಪ್ರಧಾನಿಯವರಿಂದ ಒಡಿಶಾದಲ್ಲಿ ಅಂಫಾನ್ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ:
- 500 ಕೋ.ರೂ. ಗಳ ಹಣಕಾಸು ನೆರವು ಘೋಷಣೆ
- ಚಂಡಮಾರುತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ., ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಪ್ರಕಟಿಸಿದ ಪ್ರಧಾನಿ
ಅಂಫಾನ್ ಚಂಡಮಾರುತದ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಒಡಿಶಾಗೆ ಭೇಟಿ ನೀಡಿದರು. ಅವರೊಂದಿಗೆ ಕೇಂದ್ರ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ಕೇಂದ್ರ ರಾಜ್ಯ ಸಚಿವರಾದ ಶ್ರೀ ಬಾಬುಲ್ ಸುಪ್ರಿಯೋ, ಶ್ರೀ ಪ್ರತಾಪ್ ಚಂದ್ರ ಸಾರಂಗಿ ಮತ್ತು ಶ್ರೀಮತಿ ದೇಬಶ್ರೀ ಚೌಧುರಿ, ರಾಜ್ಯಪಾಲ ಶ್ರೀ ಗಣೇಶಿ ಲಾಲ್ ಮತ್ತು ಮುಖ್ಯಮಂತ್ರಿ ಶ್ರೀ ನವೀನ್ ಪಟ್ನಾಯಕ್ ಅವರೊಂದಿಗಿದ್ದರು. ಚಂಡಮಾರುತದ ಪರಿಣಾಮವನ್ನು ತಿಳಿಯಲು ಪ್ರಧಾನ ಮಂತ್ರಿಯವರು ಭದ್ರಕ್ ಮತ್ತು ಬಾಲಸೋರ್ ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.
ಪ್ರಧಾನ ಮಂತ್ರಿಯವರು ವೈಮಾನಿಕ ಸಮೀಕ್ಷೆಯ ನಂತರ, ಭುವನೇಶ್ವರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಒಡಿಶಾ ರಾಜ್ಯಕ್ಕೆ 500 ಕೋಟಿ ರೂ.ಗಳ ಹಣಕಾಸು ನೆರವು ಘೋಷಿಸಿದರು. ಅಂತರ ಸಚಿವಾಲಯದ ಕೇಂದ್ರ ತಂಡವೊಂದು ಹಾನಿಯ ಮೌಲ್ಯಮಾಪನ ನಡೆಸಲಿದೆ.
ಈ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ, ಸಂತ್ರಸ್ತ ಪ್ರದೇಶಗಳಲ್ಲಿನ ಮೂಲಸೌಕರ್ಯಗಳ ಮರುಸ್ಥಾಪನೆ ಮತ್ತು ಪುನರ್ನಿರ್ಮಾಣಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತದೆ ಎಂದು ಪ್ರಧಾನಿ ರಾಜ್ಯದ ಜನರಿಗೆ ಭರವಸೆ ನೀಡಿದರು.
ಪ್ರಧಾನಿಯವರು ಒಡಿಶಾದ ಜನರಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ವಿಪತ್ತಿನಿಂದಾಗಿ ತಮ್ಮ ಸಂಬಂಧಿಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಚಂಡಮಾರುತದಿಂದ ಮೃತಪಟ್ಟ ಕುಟುಂಬದವರಿಗೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಪ್ರಧಾನಿ ಘೋಷಿಸಿದರು.