ಪಿಶಾಚಿಯಂತೆ ಕಾಡುವ ಅಂತರಗಂಗೆ ರೋಧಿಸುತ್ತಿರುವ ಐತಿಹಾಸಿಕ ಉಣಕಲ್ ‌ಕೆರೆ

Spread the love

ಹುಬ್ಬಳ್ಳಿ ಧಾರವಾಡ ಅವಳಿನಗರದ ಸುಂದರ ತಾಣಗಳಲ್ಲೊಂದು ಪ್ರಾಚೀನ ಉಣಕಲ್ ಕೆರೆ. ಚಲನಚಿತ್ರ, ಧಾರವಾಹಿ,ಕಥೆ, ಕಾವ್ಯಗಳಲ್ಲಿ ಈ ಕೆರೆಯ ಬಗ್ಗೆ ವೈವಿಧ್ಯಮಯ ವಿಚಾರಗಳು‌ ಮೂಡಿ ಬಂದಿದ್ದು ಹುಬ್ಬಳ್ಳಿಗೆ ಮುಕುಟದಂತಿರುವ ಪ್ರವಾಸಿತಾಣ ವಿದು. 200 ಎಕರೆ ‌ವಿಸ್ತ್ರಿರ್ಣದ 20 ಅಡಿ ಆಳದ‌ ನೂರಾರು ವರ್ಷಗಳ ಐತಿಹಾಸಿಕ ಕೆರೆಯನ್ನು ಪಿಶಾಚಿಯಂತೆ ಕಾಡುತ್ತಿರುವ ಅಂತರಗಂಗೆ ಹಸಿರು ಕಸ ತೆಗೆದಷ್ಟು ಹೆಚ್ಚಾಗುವ ಅಕ್ರಮಣಕಾರಿ ಸಸ್ಯ ಕೆರೆಯ ನೀರಿನ ಮೇಲ್ಮೈಯನ್ನು ಆಕ್ರಮಿಸಿಕೊಂಡು ತೀರಾ ಒತ್ತಾಗಿ ಬೆಳೆಯುತ್ತಾ ನೀರಿನ ಹರಿವಿಗೆ ತಡೆಯೊಡ್ಡಿ ಜಲಚರಗಳ‌ ಬೆಳವಣಿಗೆ ಹಾಗೂ ಅವುಗಳ ವಂಶಾಭಿವೃದ್ಧಿಗೆ ತೊಂದರೆ ನೀಡಿ ನೀರಿನ ಗುಣಮಟ್ಟ ಕುಸಿಯಲು ಕಾರಣವಾಗುತ್ತಿದೆ. ಅಂತರಗಂಗೆ ಹಬ್ಬುವಿಕೆಯಿಂದ ಉಣಕಲ್ ಕೆರೆ ತನ್ನ ಮೂಲ ಸ್ವರೂಪವನ್ನು ಕಳೆದು ಕೊಳ್ಳುವ ಸ್ಥಿತಿಗೆ ತಲುಪಿದ್ದು. ಉದ್ದನೆ ಬೆಳೆಯುವ ಇದರ ಬೇರುಗಳು ನೀರಿನ ಆಳದವರೆಗೂ ವ್ಯಾಪಿಸಿ ತನ್ನ ಬೆಳವಣಿಗೆಯನ್ನು‌ ಹೆಚ್ಚಿಸುತ್ತಾ ಇಡಿ ಕೆರೆಯಲ್ಲಿ ‌ಹಬ್ಬಿಕೊಂಡು ಶರವೇಗದಲ್ಲಿ ಹೆಮ್ಮಾರಿಯಂತೆ ಬೆಳೆಯುತ್ತಲೇ ಹೊರಟ ಅಂತರಗಂಗೆ ತೆಗೆದ ಒಂದೇ ವಾರದಲ್ಲಿ ಮತ್ತೆ ಮೊದಲಿನಂತೆ ಹಬ್ಬುವ ಕಳೆಯನ್ನು ನಿರ್ನಾಮ ಮಾಡುವುದು ಸುಲಭದ ಕೆಲಸವಲ್ಲ. ಆದರೂ ಕಳೆ ತೆಗೆಯುವ‌ ಕೆಲಸ ಚುರುಕು‌ಗೊಂಡಿರುವುದು ಗಮನಿಸಿ ಬೇಕಾದ ವಿಚಾರ.

ಒಂದು ಕಾಲದಲ್ಲಿ ಇಡೀ ಹುಬ್ಬಳ್ಳಿಗೆ ಕುಡಿಯವ‌ ನೀರಿನ ಮೂಲವಾದ ಕೆರೆ‌ ಸಂಪೂರ್ಣ ‌ಹದಗೆಟ್ಟಿದ್ದು ಕುಡಿಯಲು ಹಾಗೂ ‌ಕೃಷಿ ಉಪಯೋಗಕ್ಕೆ ನಿರ್ಮಾಣವಾದ ಕೆರೆ ನೀರು ಇಂದು ಯಾವ ಉಪಯೋಗಕ್ಕೂ ಬಾರದಂತೆ ಕಲಷಿತಗೊಂಡು ಬ್ರಹ್ಮರಾಕ್ಷಸನಂತೆ ಆವರಿಸಿದ ಜಲಕಳೆ ಅಂತರಗಂಗೆ ಯಿಂದ ಉಸಿರುಗಟ್ಟಿದ ಕೆರೆ ರೋಧಿಸುತ್ತಿದೆ. ಯಾಕೆ ಉಣಕಲ್ ಕೆರೆ ರೋಧಿಸಬಾರದು, ಖಂಡಿತಾ ರೋಧಿಸುತ್ತಿದೆ ಅದರ ಕೂಗು ಕೇಳಬೇಕಾದ ಕಿವಿಗೆ ತಡವಾಗಿ ಕೇಳಿಸಿದೆ ಅಷ್ಟೇ. ತನ್ನ ಒಡಲಲ್ಲಿ ಚರಂಡಿಯ ನೀರು , ಅಂತರಗಂಗೆ ಎಂಬ ಹಸಿರುಕಸ, ಅಪಾಯಕಾರಿ ಪ್ಲಾಸ್ಟಿಕ್ ತಾಜ್ಯ, ಚನ್ನಬಸವೇಶ್ವರ ದೇವಾಲಯದಲ್ಲಿ‌ ದೇವರಿಗೆ ಅರ್ಪಿಸುವ ವಸ್ತುಗಳು ಯಥೇಚ್ಛವಾಗಿ ಕೆರೆ ಒಡಲು‌ ಸೇರಿ‌ ಗಬ್ಬು‌ನಾರುತ್ತಿದೆ. ಕಣ್ಣಿದ್ದು ಕುರುಡರಾದ, ಕಿವಿ ಇದ್ದು‌ ಕೆಪ್ಪರಂತೆ ವ್ಯವಹರಿಸುವ ಬುದ್ಧಿಜೀವಿಗಳ ನಡುವೆ ನೊಂದು ಬೆಂದು ಬಸವಳಿದ ‌ಉಣಕಲ್ ಕೆರೆ ರೋಧಿಸದೆ ಇನ್ನೇನು ಮಾಡಲಿ. ಜೂನ್ ನಿಂದ ಅಗಸ್ಟ್ ತಿಂಗಳ ತನಕ‌ ಸುರವ ಮಳೆಯಿಂದ ಹೊಸ‌ ನೀರು ತುಂಬಿಕೊಂಡು ನಳನಳಿಸುವ‌ ಕೆರೆ ಸೆಪ್ಟೆಂಬರ್ ನಲ್ಲಿ ನೀರು ‌ಕಪ್ಪು ಬಣ್ಣಕ್ಕೆ ತಿರುಗಿ ‌ಗಬ್ಬೆದ್ದುನಾರುತ್ತದೆ. ಒಟ್ಟಿನಲ್ಲಿ ಶತಮಾನದ ಕೆರೆಗೆ ಹಲವು ಕಂಟಕ, ಉಣಕಲ್ ಕೆರೆಯ ಮಡಿಲು ಹಾಳಾಗುತ್ತಿದೆ. ನೂರಾರು ‌ವರ್ಷಗಳ ಇತಿಹಾಸ ವಿರುವ ಐತಿಹಾಸಿಕ ಕೆರೆ ಅವಸಾನದತ್ತಾ ಸಾಗುತ್ತಿರುವುದು ಖಂಡಿತಾ.

ಉಣಕಲ್ ಕೆರೆಯನ್ನೆ‌ ನುಂಗುತ್ತಿರುವ ಅಂತರಗಂಗೆ ತೆರವಿಗೆ ಹಲವು ರೀತಿಯಲ್ಲಿ ಶ್ರಮಿಸಲಾಗುತ್ತಿದೆ. ಜಿಲ್ಲಾಡಳಿತ, ಹಲವಾರು ಸಂಘಟನೆ ಗಳು,ಪರಿಸರ ‌ಪ್ರೇಮಿ ಸಾರ್ವಜನಿಕರು ಕೈ‌ಜೋಡಿಸಿ ನಡೆಸಿದ ಸ್ವಚ್ಚತಾಕಾರ್ಯ ಅಭಿಯಾನದ ಪ್ರಯತ್ನ ವಿಫಲವಾಗಿ ಉಣಕಲ್ ಅಭಿವೃದ್ಧಿ ಸಂಘ ಅಂತರ ಗಂಗೆಯನ್ನು ಪಾತಾಳ ಸಮೇತ ‌ಕಿತ್ತೋಗೆಯಲು ಅಭಿಯಾನ ನಡೆಸಿತ್ತು. ಆದರೆ ಅದು ಬಕಾಸುರನ ಹೊಟ್ಟೆಗೆ ಅರೆ‌ಮಜ್ಜಿಗೆ ಕಡೆದಂತೆ ಆಗಿದೆ.

ಅಂತರ ಗಂಗೆಯಿಂದ ಮುಕ್ತಿ ಪಡೆಯಲು ರೂಪಿಸಲಾದ ಹೊಸ ಯೋಜನೆ ಭರವಸೆ ಮೂಡಿಸಿದೆ .ಕೆರೆಯಲ್ಲಿ ಕಾರಂಜಿಯಂತೆ ಚಿಮ್ಮುವ ಯಂತ್ರ ಅಳವಡಿಸಲಾಗಿದೆ‌ ನೀರು ನಿರಂತರವಾಗಿ ಚಿಮ್ಮುವುದರಿಂದ ವಾತಾವರಣದಲ್ಲಿನ ಆಮ್ಲಜನಕ ನೀರಿಗೆ ಸೇರಿಕೊಳ್ಳುತ್ತದೆ. ಕೆರೆಯಲ್ಲಿ ಸರ್ವೆ ನಡೆಸಿ‌ ಕೆರೆಯ ಆಳದಲ್ಲಿನ ಹೂಳು, ಮಣ್ಣು ಸಂಗ್ರಹಿಸಿ ನೀರನ್ನು ಪರೀಕ್ಷೆಗೆ ಒಳಪಡಿಸಿ ಅಂತರಗಂಗೆ ಬೆಳೆಯದಂತೆ ವೈಜ್ಞಾನಿಕ ಕ್ರಮ ಅನುಸರಿಸುವ ಪ್ರಯತ್ನದಲ್ಲಿದೆ. ಜಲಕಳೆ‌ ಅಂತರಗಂಗೆ ಕಿತ್ತು ಹಾಕಲು‌ ಈ ಹೊಸ ಯೋಜನೆ 15 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಕೆರೆಗೆ ಹೊಸ ಶೋಭೆ ನೀಡುವ ಯೋಜನೆ ರೂಪಿಸಲಾಗಿದೆ.‌ಅಂತರ‌ ಗಂಗೆಯ‌ ನಿರ್ಮೂಲನೆಗೆ ಈ ಮೊದಲು ನಡೆಸಿದ ರಾಸಾಯನಿಕ ಹಾಗೂ ಜೈವಿಕ ವಿಧಾನಗಳು ಯಶಸ್ವಿಯಾಗಿಲ್ಲಾ ಹೊಸ ಯೋಜನೆಯಲ್ಲಿ ಕೆರೆಯಲ್ಲಿ ಈಗ ಇದ್ದ ಅಂತರ ಗಂಗೆ ಪೂರ್ಣ ಕಿತ್ತು ಹಾಕಿ ಪುನಃ ಬೆಳೆಯದಂತೆ ಯಾಂತ್ರಿಕವಾಗಿ ನೀರಿನ ಮೂಲದಿಂದ ಪ್ರತ್ಯೇಕಿಸುವುದೇ‌ ಈ‌ ಅಂತರಗಂಗೆ ನಿವಾರಣೆಗಿರುವ ಯಶಸ್ವಿ ಮಾರ್ಗ. ನೀರಿನಲ್ಲಿ ‌ ಆಮ್ಲಜನಕ‌ ಪೂರೈಸುವ ಯಂತ್ರ ಅಳವಡಿಕೆ, ಮಲಿನ ನೀರು‌ ಸ್ವಚ್ಚ ಮಾಡಲು ವಾಟರ್ ಫಾಂಟೇನ್ಸ್ ಅಳವಡಿಸಿ. ಜೈವಿಕ ವಿಧಾನದಲ್ಲಿ ‌ಕೆರೆ‌ ಪುನರುಜ್ಜೀವನಕ್ಕೆ ಆದ್ಯತೆ ನೀಡಲಾಗುತ್ತಿದೆ. ಮತ್ತು ಪಿಶಾಚಿ ಅಂತರಗಂಗೆ ಪುನಃ ಬೆಳೆಯದಂತೆ ಅದರ ನಿಯಂತ್ರಣ ‌ಹೇಗೆ ಎಂಬುದರ ಸೂಕ್ತ ಅಧ್ಯಯನ ‌ನಡೆಸಿ‌ ಅಭಿವೃದ್ಧಿ ರೂಪಿಸಲಾಗಿದೆ ಅದಕ್ಕೆ ತಗಲುವ‌ ಸಮಯ‌ ಮತ್ತು ‌ಖರ್ಚು ಹೆಚ್ಚು.

ಉಣಕಲ್ ಕೆರೆಯ ಮಧ್ಯಭಾಗದಲ್ಲಿ 14ಅಡಿ ಎತ್ತರದ ಕಂಚಿನ ವಿವೇಕಾನಂದರ ಮೂರ್ತಿ ಪ್ರತಿಷ್ಠೆ ಗೊಂಡಿರುವುದು‌ ಕೆರೆಯ‌ ಸೊಬಗು ಹೆಚ್ಚಿಸಿದೆ. ಈ ಮೂರ್ತಿಯನ್ನು ಹತ್ತಿರದಿಂದ ದರ್ಶಿಸಲು ಬೋಟಿಂಗ್ ವ್ಯವಸ್ಥೆಯು ಇದೆ. ಹುಬ್ಬಳ್ಳಿ ಧಾರವಾಡ ಅವಳ ನಗರಕ್ಕೆ ಆಗಮಿಸಿದವರು ಇಲ್ಲಿನ ಕೇಂದ್ರ ಬಿಂದು ಉಣಕಲ್ ಕೆರೆ ಗೆ ಬೇಟಿ ನೀಡಲಿಲ್ಲ ವೆಂದರೆ ಪ್ರವಾಸ ಅಪೂರ್ಣ . ಕೇವಲ ಮನುಷ್ಯನಿಗೆ ಮಾತ್ರವಲ್ಲದೆ ಜೀವ ಜಂತು, ಪಶುಪಕ್ಷಿಗಳಿಗೆ ಆಶ್ರಯ ತಾಣ ಈ ಕೆರೆ. ಚಳಿಗಾಲದಲ್ಲಿ ದೇಶ -ವಿದೇಶಗಳಿಂದ ಬಗೆ ಬಗೆಯ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತದೆ. ಪಕ್ಷಿಗಳ ವೀಕ್ಷಣೆಗೂ ಸೌಲಭ್ಯವಿದೆ.

ಉಣಕಲ್ ಕೆರೆ ದಂಡೆಯ ಮೇಲೆ ವರ್ಷ ಪೂರ್ತಿಧಾರ್ಮಿಕ ಕಾರ್ಯಕ್ರಮ ನಡೆಯುವ ಶ್ರದ್ದಾ ಭಕ್ತಿಯ ಕೇಂದ್ರ ಶ್ರೀ ಉಳವಿ ಚನ್ನಬಸವೇಶ್ವರ ದೇವಾಲಯ ವಿದೆ. ಉಣಕಲ್ ಕೆರೆ ಗೆ “ಚನ್ನಬಸವ ಸಾಗರ” ಎಂದು ಮರುನಾಮಕರಣ ಮಾಡುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸರ್ವಾನುಮತದಿಂದ ಠರಾವು ಸ್ವೀಕರಿಸಿ 17 ವರ್ಷ ಗತಿಸಿದೆ. ಯಾಕೆ ಇನ್ನೂ ಉಣಕಲ್ ಕೆರೆ ಚನ್ನಬಸವಸಾಗರ ಮರುನಾಮಕರಣ ಅನುಷ್ಠಾನಕ್ಕೆ ಬಂದಿಲ್ಲ ಎನ್ನುವ ಪ್ರಶ್ನೆಯು ಕೇಳಿಬರುತ್ತಿದೆ.

ಉಣಕಲ್ ಕೆರೆಯ ಉದ್ಯಾನದಲ್ಲಿ ಅನೈತಿಕ ಚಟುವಟಿಕೆ ರಾಜರೋಷವಾಗಿ ನಡೆಯುತ್ತಿದ್ದು ದಾರಿಹೋಕರು,ಪ್ರವಾಸಿಗರು ಅಸಹ್ಯ ಹಾಗೂ ಮುಜುಗರಕ್ಕೆ ಒಳಗಾಗುತ್ತಿದ್ದಾರೆ.ಉದ್ಯಾನ ಸಿಬ್ಬಂದಿಗಳ‌ ಮಾತಿಗೂ‌ ಬೆಲೆಕೊಡದೇ. ಪ್ರೇಮಿಗಳಂತೆ‌ ಬರುವ‌ ಕೆಲವು ಜೋಡಿಗಳ ಸಭ್ಯತೆ ಮಿರಿದ ನಡತೆಗೆ ಕಡಿವಾಣ ಹಾಕ ಬೇಕಾಗಿದೆ. ಒಟ್ಟಿನಲ್ಲಿ ಉಣಕಲ್ ಕೆರೆ ಹತ್ತು ಹಲವು ಸಮಸ್ಯೆಗಳಿಂದ ಬಳಲಿ ರೋಧಿಸುತ್ತಿದೆ ಆಲಿಸುವ ಕಿವಿಗಳ ಹಂಬಲಿಸುತ್ತಿದೆ.

  • ಲತಾ ಸಂತೋಷ ಶೆಟ್ಟಿ ಮುದ್ದುಮನೆ

Leave a Reply

Your email address will not be published. Required fields are marked *