Literature (ಸಾಹಿತ್ಯ)

‘ನೀರಾ’ ಇನ್ನೂ ನಿರಾಳ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

ಬೆಂಗಳೂರು, ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಹಾದು ಹೋಗುವಾಗ ಹೆಚ್ಚಿನ ನೀರಾ ಕೇಂದ್ರಗಳಲ್ಲಿ ಗಂಡಸರು, ಹೆಂಗಸರು, ಮಕ್ಕಳು ಎಂಬ ಬೇದವಿಲ್ಲದೆ ನೀರಾ ಸೇವಿಸುವುದನ್ನು ಕಂಡು ನನಗೆ ಬಹು ಆಶ್ಚರ್ಯ. ನೀರಾ ಅಂದರೆ ಹೆಂಡ ಎಂಬ ಮನೋಭಾವನೆ ನನ್ನಲ್ಲಿ ಇತ್ತು. ನೀರಾ ಅಲ್ಕೋಹಾಲ್ ಎಂದೇ ತಿಳಿದಿದ್ದ ನನಗೆ ನೀರಾದ ಬಗ್ಗೆ ತಿಳಿಯುವ ಕುತೂಹಲ ಹುಟ್ಟಿತು. ಗಾಡಿಯಿಂದ ಇಳಿದು ಬಂದಿದ್ದವರೆಲ್ಲಾ ನೀರಾ ಕುಡಿದರು. ನಾನು ನೀರಾ ಅಲ್ಕೋಹಾಲ್ ಎಂಬ ಭ್ರಮೆಯಲ್ಲಿ ಇದ್ದ ಕಾರಣ ಅದನ್ನು ಮುಟ್ಟಲು ಹೋಗಲಿಲ್ಲ. ನೀರಾ ನಮ್ಮ ಕುಂದಾಪುರ, ಉಡುಪಿ, ದಕ್ಷಿಣ ಕನ್ನಡದ ಒಂದು ನಿರ್ದಿಷ್ಟ ಸಮುದಾಯದ ಕುಲಕಸುಬು ಆಗಿದ್ದ ಕಾಲ ಒಂದಿತ್ತು. ಆದರೆ ನೀರಾ ಇಳಿಸುವುದು ಈಗ ಹೈಟೆಕ್ ರೂಪ ತಾಳಿದೆ. ನೀರಾ ಬಳಕೆ ಆರೋಗ್ಯಕ್ಕೆ ಉತ್ತೇಜನಕಾರಿಯಾದದು ಎಂದು ವೈಜ್ಞಾನಿಕ ಸಂಶೋಧನೆಗಳು ಸಾದರಪಡಿಸಿವೆ.
ನೀರಾ ಹೋರಾಟ – ಹಲವು ವರ್ಷಗಳಿಂದ ನೀರಾ ಇಳಿಸುವಿಕೆಗೆ ಮಾನ್ಯತೆ ನೀಡುವಂತೆ ಹೋರಾಟ ನಡೆಸಿದ ರೈತ ಸಂಘಟನೆಗಳು ಪ್ರತಿಭಟನೆಗಳು ನಡೆಸಿದ್ದು, ಈಗ ನೀರಾ ಇಳಿಸುವಿಕೆ ಹಾಗೂ ಮಾರಾಟಕ್ಕೆ ಪರವಾನಿಗೆ ದೊರೆತಿದೆ. ಶಿವಮೊಗ್ಗದ ರೈತರು ಸೇರಿಕೊಂಡು ರಚಿಸಿದ ಮಲೆನಾಡು ನೆಟ್ ಅಂಡ್ ಸ್ಪೈಸನ್ ರೈತ ಉತ್ಪಾದನ ಕಂಪನಿಗೆ ನೀರಾ ಉತ್ಪಾದನೆ, ಸಂಸ್ಕರಣೆ ಮತ್ತು ಸಗಟು ಮಾರಾಟಕ್ಕೆ ಅಬಕಾರಿ ಇಲಾಖೆಯಿಂದ ಪರವಾನಿಗೆ ಲಭಿಸಿದೆ. ಮನ್ನಣೆ ಪಡೆದ ರಾಜ್ಯದ ಮೊದಲ ನೀರಾ ಸಂಸ್ಕರಣ ಘಟಕ ಎಂಬ ಹೆಗ್ಗಳಿಕೆಗೆ ಸಂಸ್ಥೆ ಪಾತ್ರವಾಗಿದೆ. ಇನ್ನು ಮುಂದೆ ಆರೋಗ್ಯಕರ ಪೇಯವಾದ ನೀರಾ ರೈತರ ಆದಾಯ ವೃದ್ಧಿಗೆ ಈ ಘಟಕ ಸಹಕಾರಿಯಾಗುವ ನಿರೀಕ್ಷೆ ಇದೆ. ನಿರಂತರ 18 ವರ್ಷಗಳ ಹೋರಾಟಕ್ಕೆ ಸಿಕ್ಕ ಜಯ ಇದು. ಸರ್ಕಾರ ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ನೀರಾ ಇಳಿಸಲು ಅನುಮತಿ ನೀಡಿದೆ. ರೈತರ ಅಭಿವೃದ್ಧಿಗಾಗಿ ಈ ಸಂಸ್ಥೆಗೆ ಪರವಾನಿಗೆ ನೀಡಲಾಗಿ ತೆಂಗು ಬೆಳೆಗಾರರಿಗೆ ಪರ್ಯಾಯ ಮಾರ್ಗ ಸಿಕ್ಕಾಂತಾಗಿ ನೀರಾ ಮೇಲಿನ ನಿಷೇದ ತೆರವಿನ ನಂತರ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಬಾರಂದೂರಿನಲ್ಲಿ ರಾಜ್ಯದ ಮೊದಲ ನೀರಾ ಉತ್ಪಾದನಾ ಮತ್ತು ಸಂಸ್ಕರಣ ಘಟಕ ನಿರ್ಮಾಣವಾಗಿದೆ.


1990ರ ದಶಕದ ಮಧ್ಯಭಾಗದ ತೆಂಗು ಬೆಳೆಯಲ್ಲಿ ಕಾಣಿಸಿಕೊಂಡ ನುಸಿರೋಗ ತೆಂಗು ಬೆಳೆಯನ್ನು ಸರ್ವನಾಶ ಮಾಡುವ ಹಂತಕ್ಕೆ ತಲುಪಿದ ಕಾರಣ ಆ ಸಮಯದಲ್ಲಿ ರೈತರು ನೀರಾ ಇಳಿಸುವ ನಿರ್ಧಾರಕ್ಕೆ ಬಂದಿದ್ದರು. ನೀರಾ ಉತ್ಪನ್ನಕ್ಕೆ ವಿಶೇಷ ಮಾನ್ಯತೆ ಸಿಗಬೇಕು ಈ ಮೂಲಕ ತೆಂಗು ಬೆಳೆಗಾರರ ಬದುಕು ಹಸನಾಗಬೇಕೆಂಬ ಉದ್ದೇಶದಿಂದ ಹೋರಾಟ ನಡೆಸಲಾಗಿದೆ. ಸ್ವಾತಂತ್ರ್ಯ ನಂತರ ರಾಜ್ಯ ಅಬಕಾರಿ ಕಾಯ್ದೆಯಡಿ ನೀರಾ ಇಳಿಸುವುದು ನಿಷಿದ್ಧವಾಗಿತ್ತು. 2001ರಲ್ಲಿ ನೀರಾ ಕುರಿತ ಹೋರಾಟ ತೀವ್ರವಾಗಿದ್ದ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ ಚನ್ನಪಟ್ಟಣ ತಾಲೂಕಿನ ಕೆಲ ರೈತರು ಬಲಿಯಾಗಿದ್ದರು.
ರಾಜ್ಯ ಅಬಕಾರಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿದ ನಂತರ ನೀರಾ ಉತ್ಪಾದನೆ ಸಂಸ್ಕರಣೆ ಮಾಡಿ ಮಾರಾಟ ಮಾಡಲು ರೈತರ ಉತ್ಪಾದಕ ಕಂಪನಿಗೆ ಅವಕಾಶ ನೀಡಲಾಗಿದೆ. ಎಲ್ಲಾ ಚಳವಳಿ ಹೋರಾಟ, ಸಂಘರ್ಷಗಳನ್ನು ದಾಟಿ ಬಂದಿರುವ ನೀರಾಕ್ಕೆ ಈ ಸ್ಥಾನ ಸಿಕ್ಕಿದೆ. ಇವುಗಳ ಹೊರತಾಗಿಯೂ ಅನುಮತಿ ಇಲ್ಲದೆ ನೀರಾ ಉತ್ಪಾದನೆ ಮಾಡುವುದು ಈಗಲೂ ಕ್ರಿಮಿನಲ್ ಅಪರಾಧದಡಿ ಬರುತ್ತದೆ.


ನೀರಾ ಇಳಿಸುವ ಹಕ್ಕಿಗಾಗಿ ರೈತರು ನಿರಂತರ ಹೋರಾಟ ನಡೆಸುತ್ತಲೇ ಇದ್ದು ರೈತರ ಹೋರಾಟಕ್ಕೆ ಮಣಿದ ಸರ್ಕಾರ 2016ರಲ್ಲಿ ತೆಂಗು ನೀರಾ ನೀತಿ ಜಾರಿಗೆ ತಂದಿತು. ಅಬಕಾರಿ ಕಾಯ್ದೆ ತಿದ್ದುಪಡಿ ಮಾಡಿ 2017ರಲ್ಲಿ ರಾಜ್ಯ ಸರ್ಕಾರ ಶುದ್ಧ ನೀರಾ ಉತ್ಪಾದನೆ ಮಾಡಲು ರೈತ ಉತ್ಪಾದನಾ ಕಂಪನಿಗಳಿಗೆ ಅವಕಾಶ ನೀಡಿದೆ. ನೀರಾ ಗ್ರಾಹಕರಿಗೆ ತಲುಪುವವರೆಗೂ ಶೀತಲೀಕೃತ ಜಾಲದ ವ್ಯವಸ್ಥೆಯಲ್ಲಿ ನೀಡುವಂತೆ ಅಂದರೆ ನೀರಾವನ್ನು ಪರಿಶುದ್ಧ ಹಾಗೂ ಅಲ್ಕೋಹಾಲ ರಹಿತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು. ಆದರೆ ಇದರ ಸದ್ಭಳಕೆ ಆಗುತ್ತದೆಯೋ ಕಾದು ನೋಡೋಣ.
ನೀರಾ ಇಳಿಸಲು ತರಬೇತಿ ಪ್ರಮಾಣ ಪತ್ರ ಕಡ್ಡಾಯ. ಪ್ರಮಾಣ ಪತ್ರ ಹೊಂದಿರದೆ ತರಬೇತಿ ಪಡೆಯದಿರುವವರು ನೀರಾ ಇಳಿಸುವಂತಿಲ್ಲ. ನೀರಾ ಇಳಿಸುವುದು ಕರ್ನಾಟಕಕ್ಕೆ ಹೊಸ ಸಂಪ್ರದಾಯವೇನು ಅಲ್ಲ. ನೀರಾ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟಕ್ಕೆ ಅನುಮತಿಗಾಗಿ ದೇಶದ ವಿವಿಧೆಡೆ ತೆರಳಿ ನೀರಾ ಬಗ್ಗೆ ಅಧ್ಯಯನಗಳು ನಡೆದಿದ್ದವು. ತೆಂಗು ಬೆಲೆ ಇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿದಾಗ 2000ನೇ ಇಸವಿಯಲ್ಲಿ ನೀರಾ ಚಳವಳಿ ತೀವ್ರವಾಗಿ ತೀವ್ರತರದಲ್ಲಿ ಹೋರಾಟ ನಡೆಸಲಾಗಿದೆ. ವಿಧಾನ ಮಂಡಲದಲ್ಲಿ ರೈತರ ಚಳವಳಿ ಧ್ವನಿ ಪ್ರತಿಧ್ವನಿಸಿತ್ತು.

ಏನಿದು ನೀರಾ!?
ನೀರಾ ಅಂದರೆ ತೆಂಗಿನ ಅರೆಬರಿದ ಮೊಗ್ಗಿನಿಂದ ಒಸರುವ ಸಿಹಿಯಾದ ಸ್ವಾದಿಷ್ಟ, ಪೌಷ್ಟಿಕ ರಸ. ಇದರಲ್ಲಿ ಅನೇಕ ಮಿಟಮಿನ್ ಮತ್ತು ಕಬ್ಬಿಣದ ಅಂಶಗಳಿಂದ ಕೂಡಿದ ಸತ್ವವಿದೆ. ತೆಂಗಿನ ಗಿಡಗಳ ಹೂ ಗೊಂಚಲುಗಳಿಂದ ಇಳಿಸಲಾಗಿರುವ ಆರೋಗ್ಯಕರ ಪ್ರಕೃತಿದತ್ತ ನೈಸರ್ಗಿಕ ಪಾನೀಯ. ಮನುಷ್ಯ ದೇಹಕ್ಕೆ ಅಗತ್ಯವಿರುವ ಈ ನೀರಾಕ್ಕೆ ದಶಕÀಗಳಿಂದ ಬೇಡಿಕೆ ಇದೆ. ನೀರಾ ಅತ್ಯಂತ ಶಕ್ತಿಯುತ ಆಹಾರ. ಇದರಲ್ಲಿ ಕಾರ್ಬೊಹೈಡ್ರೇಟ್ ಹೆಚ್ಚು, ಕೊಬ್ಬು ಕಡಿಮೆ ಇರುತ್ತದೆ. ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ಆದರೆ ನೀರಾವನ್ನು ವಾತಾವರಣಕ್ಕೆ ತೆರೆದಿಟ್ಟರೆ ಅದು ಹೆಂಡವಾಗುತ್ತದೆ. ಆದರೆ ನೀರಾ ಹೆಂಡವಾಗದಂತೆ ಮತ್ತು ಆರೋಗ್ಯಕರವಾಗಿ ಉಳಿಸಿಕೊಳ್ಳಲು ಈಗ ಸಾಕಷ್ಟ ತಂತ್ರಜ್ಞಾನದ ಲಭ್ಯವಿದೆ.
ಸೂರ್ಯ ಉದಯಿಸುವ ಮೊದಲೇ ತೆಂಗಿನ ಮರಗಳಿಂದ ನೀರಾ ಇಳಿಸಿ ಸಂಸ್ಕರಿಸುವುದು ಅತ್ಯುತ್ತಮ ಮಾರ್ಗ. ಕರ್ನಾಟಕದಲ್ಲಿ ನೀರಾ ತೆಗೆಯಲು ಮಾಹಿತಿ ಪಡೆದ ತಂತ್ರಜ್ಞರ ಕೊರತೆ ಇದೆ. ತರಬೇತಿದಾರರೂ ಇಲ್ಲ. ಅಧೀನದಲ್ಲಿರುವ ಘಟಕಗಳಿಗೆ ಸರಿಯಾದ ತರಬೇತಿದಾರರ ಕೊರತೆಯೂ ಇದೆ.
ರಾಜ್ಯ ತೆಂಗು ಬೆಳೆಗಾರರಿಗೆ ನೀರಾ ತಯಾರಿಕೆ ಆಶಾದಾಯಕ ಮೌಲ್ಯವರ್ಧಿತ ಉತ್ಪನ್ನವಾಗಲಿದೆ. ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಅನುಕೂಲವಿದೆ. ಆದರೆ ಕರ್ನಾಟಕ ಹೆಚ್ಚಿನ ರೈತರಿಗೆ ನೀರಾ ತೆಗೆಯುವುದು ಹಾಗೂ ಅದರ ಪ್ರಯೋಜನವನ್ನು ಪಡೆಯುವ ಬಗ್ಗೆ ಮಾಹಿತಿ ಕೊರತೆ ಇದೆ. ನೀರಾ ಇಳಿಸಲು, ತೆಂಗಿನ ಮರ ಹತ್ತಲು, ಪುಷ್ಪಗುಚ್ಚವನ್ನು ಸರಿಯಾದ ಹದದಲ್ಲಿ ತಟ್ಟಿ ಕತ್ತರಿಸಿ ಸೋಂಕು ನಿವಾರಕವನ್ನು ಲೇಪಿಸಲು ಸರಿಯಾದ ಅನುಭವಿಗಳ ಅಗತ್ಯವಿದೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ನೀರಾ ಕೇಂದ್ರಗಳಲ್ಲಿ ನಿತ್ಯ 2 ಸಾವಿರ ಲೀಟರ್‍ಗೂ ಹೆಚ್ಚು ನೀರಾವರಿ ಮಾರಾಟವಾಗುತ್ತಿದೆಯಂತೆ. ನೀರಾದಲ್ಲಿರುವ ಪೋಷಕಾಂಶಗಳ ಬಗ್ಗೆ ಮೈಸೂರಿನ ಸಿ.ಎಫ್.ಟಿ.ಆರ್.ಐ ಸಂಸ್ಥೆ ಪರೀಕ್ಷೆ ಮಾಡಿ ಪ್ರಮಾಣ ಪತ್ರವನ್ನು ನೀರಾ ಘಟಕ ಸೆಂಟರ್‍ಗಳಿಗೆ ನೀಡಿದ್ದನ್ನು ಅಂಗಡಿ ಎದುರು ತೂಗು ಹಾಕಲಾಗಿದೆ. ಇಲ್ಲಿನ ನೀರಾ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.


ನೀರಾದಿಂದ ಬಗೆಬಗೆಯ ಮಿಠಾಯಿ, ಬೆಲ್ಲ, ಸಕ್ಕರೆ, ಸಿರಫ್, ಚಾಕಲೇಟ್, ಕೇಕ್, ಕ್ಯಾಂಡಿ, ನೀರಾ ಫ್ರೂಟ್ ಜಾಂ, ನೀರಾಕಾಫಿ ಹೀಗೆ ಇನ್ನೂ ಅನೇಕ ಉತ್ಪನ್ನಗಳಿಂದ ತಯಾರಿಸಬಹುದು. ತೆಂಗಿನ ಮರಗಳನ್ನು ನುಸಿ ಪೀಡೆಯಿಂದ ನೀರಾ ಇಳಿಸುವಿಕೆ ಸೂಕ್ತ ಕ್ರಮ ನೀರಾ ತೆಗೆದರೆ ಮರಗಳಿಗೆ ಯಾವುದೇ ತೊಂದರೆ ಇಲ್ಲ. ಮರಗಳು ಆರೋಗ್ಯವಾಗಿರುತ್ತವೆ. ತೆಂಗಿನ ಮರಗಳಿಗೆ ರೋಗ ಹರಡುವುದನ್ನು ತಡೆಯುವುದರ ಜತೆಗೆ ರೈತರಿಗೆ ಆದಾಯದ ಮೂಲವು ಆಗುತ್ತದೆ. ಮಳೆಗಾಲದಲ್ಲಿ ಭೂಮಿಯಲ್ಲಿ ನೀರಿನ ಅಂಶ ಹೆಚ್ಚು ಇರುವುದರಿಂದ ನೀರಾ ಉತ್ಪಾದನೆಯ ಮಟ್ಟವೂ ಹೆಚ್ಚಾಗುತ್ತದೆ.
ನೀರಾ ಉತ್ಪಾದನೆ ಉದ್ಯಮವಾಗಿ ಮುಂದುವರಿದರೆ ಹಲವರಿಗೆ ಉದ್ಯೋಗ ದೊರೆಯುತ್ತದೆ. ಆಸಕ್ತಿ ಇದ್ದವರು ಮರಗಳನ್ನು ಗುತ್ತಿಗೆ ಪಡೆದು ನೀರಾ ಇಳಿಸಬಹುದು. ಕೇರಳದಲ್ಲಿ ಸರ್ಕಾರವೇ ನೀರಾವನ್ನು ಕೊಂಡುಕೊಳ್ಳುತ್ತದೆ. ಅದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರ ನೇರವಾಗಿ ನೀರಾವನ್ನು ರೈತರಿಂದಲೇ ಕೊಂಡುಕೊಂಡರೆ ಬೆಳೆಗಾರರ ಆರ್ಥಿಕ ಸ್ಥಿತಿ ಸುಧಾರಿಸಬಹುದು.


ಗಾಂಧೀಜಿ ಅವರು ವಿಶ್ವದ ಬಡತನ ನಿವಾರಣೆಗೆ ನೀರಾ ಉತ್ಪನ್ನಗಳೇ ಉತ್ತರ ಎಂದಿದ್ದಾರೆ. ಅಷ್ಟೇ ಅಲ್ಲದೆ ವಿಶ್ವದ ಬಡತನವನ್ನು ಹೋಗಲಾಡಿಸಲು ಇದೊಂದು ಉತ್ತಮ ಮಾರ್ಗ. ಬಡತನ ನಿರೋಧಕ ಇದು ಎಂದು ಹರಿಜನ ಪತ್ರಿಕೆಯಲ್ಲಿ ಗಾಂಧೀಜಿ ಬರೆದಿದ್ದಾರಂತೆ.
ನಮ್ಮ ರಾಜ್ಯದಲ್ಲಿ ತೆಂಗಿನ ಬೆಳೆ ಸಾಕಷ್ಟು ಪ್ರಮಾಣದಲ್ಲಿದೆ. ವೈಜ್ಞಾನಿಕ ಮತ್ತು ಆರೋಗ್ಯಕರ ತಂತ್ರಜ್ಞಾನದೊಂದಿಗೆ ಈ ಉದ್ಯಮಕ್ಕೆ ಕಾಲಿಡಬೇಕು. ನೀರಾ ಇಳಿಸುವ ತಂತ್ರಜ್ಞಾನದ ತರಬೇತಿ ತೆಂಗು ಅಭಿವೃದ್ಧಿ ಮಂಡಳಿ ನೀಡುತ್ತದೆ. ಆದರೆ ನೀರಾವನ್ನು ಇಳಿಸುವ ಕುಶಲಕರ್ಮಿಗಳ ಕೊರತೆ ಇಲ್ಲ ಎನ್ನುವಂತಿಲ್ಲ. ಆದರೂ ನೀರಾ ಇನ್ನೂ ನಿರಾಳ.

https://www.youtube.com/channel/UCvfStDhBH0Kti6uwfyQ3IKA?view_as=subscriber

Leave a Reply

Your email address will not be published. Required fields are marked *