Literature (ಸಾಹಿತ್ಯ)

ನಮ್ಮೂರ ಶ್ರಾವಣ ಹೀಗೊಂದು ಆಚರಣೆ | heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

ಹಿಂದೂ ಸಂಪ್ರದಾಯದಲ್ಲಿ ವರ್ಷದ ‌ಎಲ್ಲಾ ಮಾಸಕ್ಕೂ ಒಂದೊಂದು ಹಿನ್ನಲೆ ಇದೆ. ಅದರಲ್ಲೂ ವೈಶಿಷ್ಟ್ಯ ಪೂರ್ಣ ಶ್ರಾವಣ ಅಥವಾ ಸೋಣೆ ತಿಂಗಳಿಗೆ ವಿಶೇಷ ಪ್ರಾಶಸ್ತ್ಯ. ದೇವತೆಗಳು ಭೂಮಿ ಯಲ್ಲಿ ಸಂಚರಿಸುವ ತಿಂಗಳು, ಸಮುದ್ರ ‌ಮಂಥನ ಮುಗಿದು ದೇವತೆಗಳೆಲ್ಲ ಭೂ ಸ್ವರ್ಶ‌ಮಾಡಿ ಭೂಲೋಕದಲ್ಲಿ ವಾಸವಿದ್ದ ವಿಶೇಷ ದಿನಗಳೇ ಶ್ರಾವಣ ಮಾಸ ಎಂಬ ನಂಬಿಕೆ ಇದೆ. ಸಮುದ್ರ ಮಂಥನದಲ್ಲಿ ಉದ್ಭವಿಸಿದ ವಿಷವನ್ನು ಕುಡಿದ ಶಿವ‌‌ ನೀಲಕಂಠನಾದದ್ದು ಶ್ರಾವಣದಲ್ಲಿ ಎನ್ನುತ್ತಾರೆ. ಶ್ರಾವಣ ದೊಂದಿಗೆ ಆಧ್ಯಾತ್ಮಿಕ ಬೆಸುಗೆಯು ಇದ್ದು. ಶ್ರಾವಣವೆಂದರೆ ಆಲಿಸು,‌ ಕೇಳು ಎಂಬ ಅರ್ಥವನ್ನು ಒಳಗೊಂಡಿದ್ದು ಆಧ್ಯಾತ್ಮಿಕ ಚಿಂತನೆ, ಕೀರ್ತನೆ, ದೇವರ ಧ್ಯಾನ, ಪ್ರವಚನ, ಮಂತ್ರಪಠಣೆ, ಮನ ಶುದ್ಧಿಗಾಗಿ ಹರಿಕಥೆ, ಶಿವನಾಮ ಸ್ಮರಣೆ, ಭಜನೆ ಕೇಳುವುದು‌ ಎಂಬರ್ಥ ವಾದ ಕಾರಣ ಈ ತಿಂಗಳಿಗೆ ಶ್ರಾವಣ ಎಂದು ಹೆಸರು. ಹಬ್ಬ ಗಳು ಸಾಲು ಸಾಲಾಗಿ‌ ಬರುವ ಹಬ್ಬ‌ಹರಿ ದಿನಗಳ‌ ಮಾಸವೂ‌ ಹೌದು.

ಆಷಾಢದ ಆರ್ಭಟ ಕಳೆದು ಶ್ರಾವಣದ ಆಗಮನದೊಡನೆ ಭೂರಮೆಯ ರಂಗ‌ಮಂಟಪದಲ್ಲಿ ಸುರಿವ ಮಳೆಯ‌ ನಡುವೆ ಭೂಮಿ ‌ಹಸಿರಿನಿಂದ‌ ಕಂಗೊಳಿಸುತ್ತಾ ಪಚ್ಚೆ ವರ್ಣದ ಸೊಬಗಲಿ ಪ್ರಕೃತಿ ಮಾತೆ, ಮಳೆಯ ಆಲಿಂಗನದಿ ಸೌಂದರ್ಯ ವತಿಯಾಗಿ ಮೈತಳೆದು‌ ನಿಂತಾಗ. ಗಿಡ ಮರಗಳೆಲ್ಲ ಹಸಿರುಡುಗೆ ಪಸೆದುಟ್ಟು ರಂಗುರಂಗಿನ‌ ಹೂವ ಅರಳಿಸಿ‌ ಶ್ರಾವಣ ದ ಸಂಭ್ರಮದಲ್ಲಿ ಸಂಭ್ರವಿಸಲು ಅಣಿಯಾಗಿ ಎತ್ತ‌ ಕಣ್ಣು ಹರಿಸಿದರತ್ತ ಹಸಿರು ತೊರಣ, ಕೆರೆ , ಹಳ್ಳ, ಜಲಪಾತಗಳು ಮೈದುಂಬಿ ಭೋರ್ಗರೆಯುವ‌ ಕಾಲ ವಿದು. ಶ್ರಾವಣ ‌ಬಂತೆಂದರೆ ಮಹಿಳಾ ‌ಮಣಿಗಳಿಗೆ ಉತ್ಸಾಹ ಬಹುವರ್ಣದಲ್ಲಿ ಇಳೆಯಲ್ಲಿ ಬಿರಿವ ಪುಷ್ಪ ಗಳಿಂದಲೇ ಚೂಡಿ‌ಕಟ್ಟಿ ಒಂದರ ಹಿಂದೆ ಒಂದರಂತೆ ‌ಬರುವ‌ ಹಬ್ಬಗಳಿಗೆ ನಾಂದಿ ಹಾಡುವರು. ಗ್ರಾಮಿಣ ಪ್ರದೇಶದಲ್ಲಿ ಶ್ರಾವಣ ಉತ್ಸಾಹ, ಸಂಭ್ರಮ ‌ವಿಜೃಂಬಿಸುತ್ತದೆ. ಆದರೆ ಇತ್ತೀಚೆಗೆ ಅದ್ಯಾಕೋ ಶ್ರಾವಣ ಸಂಭ್ರಮ ಕಳೆಗುಂದುತ್ತಿದೆ.

ಸೋಣೆ ಆರತಿ ::;ಸಿಂಹ ಸಂಕ್ರಮಣ ಅಥವಾ ಸೋಣೆಸಂಕ್ರಾತಿಯ ಒಂದು ತಿಂಗಳ ‌ಕಾಲ ಕರಾವಳಿಯ ಹೆಚ್ಚಿನ ‌ದೇವಸ್ಥಾನಗಳಲ್ಲಿ ರಾತ್ರೆ‌ ದೇವರಿಗೆ ಸೋಣೆ ಆರತಿ‌ನಡೆಯುತ್ತದೆ. ಸೂರ್ಯ ಬಾನಂಚಿನಲ್ಲಿ ಮರೆ‌ಯಾಗುತ್ತಿದ್ದಂತೆ ದೇವಸ್ಥಾನದಲ್ಲಿ ಪೂಜಾಆರತಿ ತಯಾರಿಯಲ್ಲಿ ತೊಡಗುತ್ತಾರೆ. ಆರತಿಯ ಸಮಯದಲ್ಲಿ ಶಂಖ, ಜೌಗಟೆ ಸದ್ದು ನಭೋಮಂಡಲಕ್ಕೆ‌ಮುಟ್ಟು‌ಮಂತೆ ಬಾರಿಸುತ್ತಾ ನಡೆವ ಆರತಿಯ ಅಂದ‌ಚಂದ ನೋಡುವುದೇ‌ ಒಂದು‌ ಸೌಭಾಗ್ಯ. ‌ ಮರದ‌ ಹಲಗೆ ಯಿಂದ ಮಾಡಲಾಗಿರುವ ಆರತಿಯನ್ನು ದೇವರಿಗೆ ಬೆಳಗಲಾಗುತ್ತದೆ. ಭಕ್ತರ ಅಭಿಲಾಷೆ ಈಡೇರಿಸುವ ಸೋಣೆ ಆರತಿ ಶ್ರದ್ಧಾ ಭಕ್ತಿ ಯಿಂದ ಆಚರಿಸಲಾಗುತ್ತದೆ ಆದರೂ ಆಸಕ್ತ ಭಕ್ತರ ಸಂಖ್ಯೆ ವರ್ಷ ದಿಂದ ವರ್ಷ ಕ್ಕೆ ಕಡಿಮೆ ಆಗುವುದು ಕಂಡು ಬರುತ್ತಿದೆ.

ಸೋಣಾರತಿ ಸಿಂಹ ಮಾಸದಲ್ಲಿ ಅಂದರೆ ಶ್ರಾವಣದಲ್ಲಿ ದೇವರಿಗೆ ಸಮರ್ಪಿಸುವ ವಿಶೇಷ ಪೂಜೆಯಿಂದ ಸಮೃದ್ದಿ ಸಂಪತ್ತು ಆರೋಗ್ಯ ವೃದ್ದಿಯಾಗುತ್ತದೆ ಎಂಬ‌ ನಂಬಿಕೆ ‌ಇದೆ. ಸೋಣಾಆರತಿ ಕೇವಲ ಶ್ರಾವಣ ತಿಂಗಳಲ್ಲಿ‌ ಮಾತ್ರ‌ ನಡೆಯುವ ವಿಶಿಷ್ಟ ಪೂಜೆ ಯಾಗಿದ್ದು ಮರದಿಂದ ಮಾಡಿದ ಆರತಿಯನ್ನು ಬೆಳಗುವುದು ವೈವಿಧ್ಯತೆ . ಸೋಣೆ ಆರತಿಗೆಂದು ಮಾತ್ರ ಬೆಳಗುವ ಮರದ ಆರತಿಗಳನ್ನು ಸಾಮಾನ್ಯವಾಗಿ ಹಲಸು‌ ಮತ್ತು ಡೊಡ್ಡ ಕಿರಾಲ್ ‌ ಬೋಗಿ‌ಮರದಿಂದ‌ ತಯಾರಿಸಿದ ಮೃತಾಕಾರದ ಆರತಿಯಲ್ಲಿ ಸಣ್ಣರಂದ್ರಗಳನ್ನು‌ ಮಾಡಿ ಅದರಲ್ಲಿ ಬತ್ತಿ ಪೊಣಿಸಲಾಗುತ್ತದೆ. ಚಿಕ್ಕ ‌ಚಿಕ್ಕರಂದ್ರಗಳಿರುವ ಈ ಆರತಿಗಳಿಗೆ‌ ಬತ್ತಿ ಹಾಕುವುದು ಶ್ರಮದಾಯಕ ‌‌ ಕೆಲಸ. ರಥದ ಆರತಿ ,ಪಂಚಾರತಿ, ಶೇಷಾರತಿ, ಕೈಆರತಿ‌ ಬೆಳಗುವುದನ್ನು ನೋಡುವುದು ಒಂದು‌ಸೊಗಸು. ಸೋಣೆ ಆರತಿಯ‌ ಕೊನೆಯ ಆರತಿಯನ್ನು ‌ಕನ್ಯಾ‌ಆರತಿ‌ ಎನ್ನುತ್ತಾರೆ. ಸೋಣೆ ಆರತಿಗೆ‌ ಬೇಕಾಗುವ‌ ವಿವಿಧ ಆಕಾರದ ಬಗೆ ಬಗೆಯ ಮರದ‌ ಆರತಿಗಳು ಉಡುಪಿಯ‌ ರಥ ಬಿದಿಯಲ್ಲಿ ಲಭ್ಯ.

ಶ್ರಾವಣದ ಅತಿಥಿ ಸೋಣೆ ಹೂ:::: ಶ್ರಾವಣ ಮಾಸದಲ್ಲಿ ಹೊಸ್ತಿಲು ಪೂಜೆ ಗೆ ಮಹತ್ವವಿದೆ. ಅದರಲ್ಲಿ ಸೋಣೆ ಹೂವನ್ನೆ ಪ್ರಧಾನವಾಗಿರಿಸಿ ಆಚರಿಸಲಾಗುತ್ತದೆ. ವರ್ಷ ವಿಡಿ ಎಲ್ಲೂ‌ಕಾಣಿಸಿಕೊಳ್ಳದೆ ಕಣ್ಮರೆಯಾಗಿರುವ ಸೋಣೆ ಗಿಡ‌ ಋತುಮಾನಕ್ಕೆ ಅನುಗುಣವಾಗಿ‌ ಹುಟ್ಟಿ ಹೂ ಬಿಡುತ್ತದೆ . ಶ್ರಾವಣ ಮಾಸದ ಕೆಲವೆ‌ ದಿನ ಮೊದಲು ಕಾಣಿಸಿ ಕೊಂಡು ಪ್ರಕೃತಿ ಯನ್ನು ಶ್ರಾವಣ ತಿಂಗಳಿಗಾಗಿ ಶೃಂಗರಿಸಲು ಎದ್ದುಬಂದಂತೆ ಗೊಂಚಲು ಗೊಂಚಲಾಗಿ ಅರಳಿ ನಿಂತು ತನ್ನ ಚೆಲುವನ್ನು ಸುಸುತ್ತಾ ಶ್ರಾವಣ ಮಾಸದ ಹೊಸ್ತಿಲ‌ ಪೂಜೆಗೆ ಅಣಿಯಾಗಿ ನಿಲ್ಲುತ್ತದೆ. ಬೆಟ್ಟ ಗುಡ್ಡ, ಕಣಿವೆ, ತೋಟ ,ಹೊಲ, ಗದ್ದೆಅಂಚಿನಲ್ಲಿ , ಸಣ್ಣ ಪುಟ್ಟಗುಡ್ಡ‌ ಪ್ರದೇಶದಲ್ಲಿ ಬೆಳೆವ‌ ಸೋಣೆ ಪುಷ್ಪ ಸುಂದರಿಯರು ತಿಳಿ ಗುಲಾಬಿ ಹಾಗೂ ಕೆಂಪು ಬಣ್ಣದ ಗಳಿಂದ‌ ಆಕರ್ಷಿತವಾಗಿರುತ್ತದೆ.ಅಷ್ಟೇ ‌ಅಲ್ಲದೆ‌ ದನಕರುಗಳು‌ ಹುಲ್ಲರೂಪದಲ್ಲಿ ಈ ಗಿಡವನ್ನು ಹೆಚ್ಚು ‌ಇಷ್ಟಪಡುತ್ತವೆ.‌ ಇದರ‌‌ ದಂಟಿನಲ್ಲಿ‌ ತುಂಬಿಕೊಂಡಿರುವ ನೀರು ನಮ್ಮ ಬಾಲ್ಯದಲ್ಲಿ ಸ್ಲೇಟಿನಲ್ಲಿ ಬರೆದ‌ ಬರಹ ಅಳಿಸುವುದಕ್ಕೆ ಹಾಗೂ ಸ್ಲೇಟ್ ‌ಬಾಳಿಕೆ‌‌ಬರಲು ಸಹಕಾರಿ‌ ಆಗುತ್ತದೆ ಎಂದು ಉಪಯೋಗಿಸುತ್ತಿದ್ದೆವು .ಶ್ರಾವಣದಲ್ಲಿ‌ ಅರಳಿ ಮಳೆಗಾಲದ ನಂತರ ಕಣ್ಮರೆಯಾದ ಸೋಣೆ ಗಿಡಗಳು‌ ಮತ್ತೆ ಕಾಣಸಿಗುವುದು ಮುಂದಿನ‌ ಶ್ರಾವಣವನ್ನು ಸ್ವಾಗತಿಸಲು ಹೂ ಗಿಡಗಳ ಮಧ್ಯೆ‌ಶೊಭಿಸುತ್ತವೆ. ಈ ಹೂವಿಗೆ ವಿಶೇಷ ಪರಿಮಳ‌ವಿಲ್ಲದಿದ್ದರು ಮಕರಂದ ಹಿರಲು ಹಳದಿ‌ ಮತ್ತು ಬಿಳಿ ಬಣ್ಣದ ‌ಪುಟ್ಟ‌ ಚಿಟ್ಟೆಗಳು ಹಾರಾಡುವ ಸೊಬಗು ಶ್ರಾವಣದಲ್ಲಿ ಜೋಕಾಲಿ‌ತೂಗಿದಂತೆ ಕಾಣುತ್ತದೆ.

ಹೊಸ್ತಿಲು ಪೂಜೆಗೆ ‌ಕೊಳ್ಳ್ ಹೂ :::; ಸಿಂಹ ಸಂಕ್ರಾಂತಿ ಯ ದಿನದಿಂದ ತಿಂಗಳಿಡಿ ಆಚರಿಸುವ ಶ್ರಾವಣ ಸಂಭ್ರಮದಲ್ಲಿ ಹೊಸ್ತಿಲು‌ ಪೂಜೆಗೆ ವಿಶೇಷ ಪ್ರಾಧ್ಯಾನತೆ. ಹೊಸ್ತಿಲಿಗೆ ರಂಗೋಲಿ ಹಾಕುವುದರಿಂದ ನಕಾರಾತ್ಮಕ ಶಕ್ತಿ ತಡೆಯುತ್ತದೆ. ಹೊಸ್ತಿಲು ‌ ಸ್ವಚ್ಛಗೊಳಿಸಿ ಜೆಡಿಮಣ್ಣಿನ ಉಂಡೆ ಶೆಡಿಯಿಂದ ಹೊಸ್ತಿಲಿಗೆ‌ ರಂಗವಲ್ಲಿ‌ ಬರೆದು ಅರಶಿಣ ,ಶ್ರೀ ಗಂಧ ಹಚ್ಚಿ ಕೊಳ್ಳ್ ಹೂ, ಹೂರುಳಿ‌ಹೂ, ಸೋಣೆ ಹೂ, ಹೊದ್ದಳ್‌ಹೂ, ಕಾಗೆಕಾಲು, ಗುಬ್ಬಿಕಾಲುಗಳೆಂಬ ಸಣ್ಣಸಸ್ಯ ,ರಥಪುಷ್ಪ ಹೂವಿನಿಂದ ಹೊಸ್ತಿಲನ್ನು ಅಲಂಕರಿಸಿ ದೀಪ, ದುಪದಾರತಿ ಬೆಳಗಲಾಗುತ್ತದೆ.ಎಲ್ಲಾ ಹಬ್ಬಗಳಲ್ಲಿ ವಿವಿಧ ಹೂಗಳನ್ನು ಬಳಸಲಾಗುತ್ತದೆ ಆದರೆ ಶ್ರಾವಣದ‌ ಹೊಸ್ತಿಲು ಪೂಜೆಗೆ ಕೊಳ್ಳ್ ಹೂ ಪ್ರಮುಖ ಪಾತ್ರ ವಹಿಸುತ್ತದೆ.

ಶ್ರಾವಣ ಸಂಕ್ರಾಂತಿಗೆ ಮೂರು ‌ನಾಲ್ಕು‌ ದಿನ‌ ಇರುವಾಗ ಧಾನ್ಯ ಗಳಿಂದ ಕೊಳ್ಳ್ ಹೂ ಬಿತ್ತಲು ಹುರುಳಿ, ಉದ್ದು‌, ಹೆಸರು ಮತ್ತು ರಾಗಿಕಾಳಲ್ಲಿ ಯಾವುದಾದರು ಒಂದನ್ನು ಅರಶಿಣದೊಂದಿಗೆ ಮೂರು ದಿನ ನೀರಿನಲ್ಲಿ‌ ನೆನಸಿಟ್ಟು ತೆಗೆದ ಬೀಜ ಗಳನ್ನು ಕೆಂಪು ‌ಮಣ್ಣಿನಲ್ಲಿ ಬಿತ್ತಿ ಅದರ ಮೇಲೆ ಮಣ್ಣಿನ ಪಾತ್ರೆ‌ ಹಾಕಿ ಗಾಳಿಯಾಡದೆ ‌ಬೆಳಕು ಬೀಳದಂತೆ ಕವಚ್ಚು ಇಟ್ಟ ಪಾತ್ರೆಯನ್ನು ತೆರೆದು ನೋಡುವಂತಿಲ್ಲ ಗಾಳಿತಾಗಿದರೆ ಒಳಗಿನ ಹೂ ಗಿಡದ ರೂಪ ತಾಳಿ ಹಾಳಾಗುತ್ತದೆ. ಅಂದರೆ ಹಸಿರಾಗುತ್ತದೆ. 4 ದಿನಗಳ ನಂತರ ಪಾತ್ರೆ ತೆಗೆದು‌ ನೋಡಿದರೆ ಬಿಳಿ ಸಪೂರ ದಂಟು ಮೇಲ್ಗಡೆ ಹಳದಿ ಪಕಳೆಗಳ ಕೊಳ್ಳ್ ಹೂ ಅರಳಿ ನಿಂತಿರುತ್ತದೆ. ಇದಕ್ಕೆ ಕೊಳ್ಳ್ ಹೂ ಹಾಕುವುದು ಎನ್ನುತ್ತಾರೆ. ಬಾಳೆ ಬಳ್ಳಿ ಹಾಗೂ ತೆಂಗಿನ ಓಲೆ ಅಂಚಿನಿಂದ ಸಪೂರ ದಾರ‌ಮಾಡಿ ಚೂಡಿಕಟ್ಟುತ್ತಾರೆ. ಹೆಚ್ಚು ಸುಂದರ ಹೂ‌ವಿಗಾಗಿ ಹುರುಳಿ ಯೋಗ್ಯ ಧಾನ್ಯ. ಇತ್ತೀಚಿನ ಹೊಸ‌ಪಿಳಿಗೆಗೆ ಈ ಹೂವಿನ ‌ಪರಿಚಯವೂ ಇಲ್ಲ. ಶ್ರಾವಣ ಸಂಭ್ರಮ ದಲ್ಲಿ ಆಸಕ್ತಿಯು ಇಲ್ಲ.

ಹಿಂದೆಲ್ಲಾ ಮಹಿಳೆಯರು ‌ಮಕ್ಕಳು ಶ್ರದ್ಧಾ ಭಕ್ತಿಯಿಂದ ಶ್ರಾವಣ ಸಂಭ್ರಮದಲ್ಲಿ ಪಾಲುಗೊಳ್ಳುತ್ತಿದ್ದರು. ಆದರೆ ಆಧುನಿಕತೆಯ ಭರದಲ್ಲಿ ಶ್ರಾವಣ ಸಂಭ್ರಮ ಕುಂದಿದೆ. ಹೆಣ್ಣು ಮಕ್ಕಳ ‌ನೆಚ್ಚಿನ ಕಾಯಕದಲ್ಲಿ ಒಂದಾದ ಹೂಕಟ್ಟುವುದು ಇಂದು ಮರೆಯಾಗುತ್ತಿದೆ. ಶ್ರಾವಣದಲ್ಲಿ ವಿವಿಧ ಹೂಗಳನ್ನು ಕಟ್ಟಿ ದೇವರಿಗೆ ಅರ್ಪಿಸಿ ತಾವು ಮುಡಿಯುತ್ತಿದ್ದರು. ಆದರೆ ಇದೆಲ್ಲ ಈಗ ವಿರಳವಾಗಿದೆ.

ಪ್ರತಿಯೊಂದು ಆಚರಣೆಯ‌ ಹಿಂದೆ ಸಂಕಲ್ಪ ವಿರುತ್ತಿತ್ತು. ಶ್ರಾವಣ ದಲ್ಲಿ ದೇವಸ್ಥಾನ ದರ್ಶನ, ಬಳೆ ಇಡುವ ಕ್ರಮವೂಇತ್ತು ಇಂದು ಇದೆಲ್ಲ ಆಚರಣೆ ಯ ಚೌಕಟ್ಟನಿಂದ ದೂರವಾಗಿ ಬದಲಾದ ಆಧುನಿಕ ಮನೋಧರ್ಮದ ಪ್ರತೀಕವಾಗಿ ಹೆಚ್ಚಿನ ಆಚರಣೆ ಅಗೊಚರವಾಗಿದೆ. ಯಾಂತ್ರಿಕ ‌ಮನಸ್ಸುಗಳಿಗೆ ಈ ರೀತಿಯ ಸಂಭ್ರಮ ಸಾಟಿಯಾಗುತ್ತಿಲ್ಲ. ಆಧುನಿಕ ಜೀವನದ ಭರಾಟೆಯಲ್ಲಿ ಶ್ರಾವಣದ ಆಚರಣೆಗಳು ಗತಕಾಲದ‌ ಮೆರುಗನ್ನು ಕಳೆದು ಕೊಳ್ಳುತ್ತಿವೆ.

Leave a Reply

Your email address will not be published. Required fields are marked *