Literature (ಸಾಹಿತ್ಯ)

” ಧೋತಿ ” ಫ್ಯಾಷನ್ ಗೂ ಸೈ ಸಂಪ್ರದಾಯಕ್ಕೂ ಸೈ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

ಶುದ್ಧ ಭಾರತೀಯ ಸಂಪ್ರದಾಯಿಕ ಉಡುಗೆ ಧೋತಿ ಎಂದರೆ ಹಳೆಯ ಕಾಲದ ಧಿರಿಸು ಎಂದು ಮೂಗು ಮುರಿಯುತ್ತಿರುವ ಕಾಲ‌ಬದಲಾಗಿದೆ. ಇತ್ತೀಚೆಗಂತೂ ಧೋತಿ ಫ್ಯಾಷನ್ ಲೋಕದಲ್ಲಿ ಮಿಂಚುತ್ತಿದ್ದು ಸಂಪ್ರದಾಯ ಬದ್ಧ ಉಡುಗೆಯಾದರು ಮಾಡರ್ನ್‌ ಲುಕ್ ಪಡೆದುಕೊಂಡಿದೆ. ಧೋತಿ ಸಂಪ್ರದಾಯದ ಚೌಕಟ್ಟಿನೊಳಗೆ ನಲಿಯುತ್ತಿರುವ‌ ಕಾಲದಲ್ಲೇ ಫ್ಯಾಷನ್ ಜಗತ್ತಿಗೂ ಲಗ್ಗೆ ಇಟ್ಟಿದ್ದು ವಿಶೇಷ. ಚಿಣ್ಣರಿಂದ ವೃದ್ದರ‌ ವರೆಗೂ ಎಲ್ಲರೂ ‌ಇಷ್ಟ ಪಡುವ ಧೋತಿ ಆಧುನಿಕತೆಯ ಅಟ್ಟಹಾಸದಲ್ಲಿ ನಲುಗಿ ಹೋಗದೆ ದಿನೆ ದಿನೆ ಹೆಚ್ಚು ಮಾನ್ಯತೆ ‌ಪಡೆಯುತ್ತಿರುವುದು ಆಶ್ಚರ್ಯವಾದರು ವಾಸ್ತವ. ಪ್ಯಾಶನ ಪ್ರಿಯರ ಅಭಿರುಚಿಗೆ ಒಪ್ಪುವಂತಹ ಡಿಸೈನ್ ಬಟ್ಟೆಗಳು ಯಶಸ್ಸು ಪಡೆಯುತ್ತಿದ್ದರು ಈ ಎಲ್ಲದರ ನಡುವೆಯು ಸರಳತೆ, ಸ್ವಚ್ಛತೆ, ಶಿಸ್ತು , ನಮ್ಮ ಸಂಸ್ಕೃತಿ ಹಾಗೂ ಸ್ವಾಭಿಮಾನದ ಪ್ರತಿಕವಾಗಿ ಗರಿಗೆದರಿ ಆದಿಯಿಂದಲೂ ತನ್ನ ಸ್ಥಾನ ಉಳಿಸಿಕೊಂಡ ಧೋತಿ ಅಪಾರ ಬೇಡಿಕೆ ಗಿಟ್ಟಿಸಿಕೊಂಡಿದೆ. ಈಗಂತೂ ಫ್ಯಾಷನ್ ಲೋಕದಲ್ಲಿ ದಿನಕೊಂದು ಹೊಸ ಟೆಂಡ್ ಹರಿದಾಡಿದರು ಧೋತಿ ಬಗ್ಗೆ ಜನರಿಗೆ ಹೊಸ ಆಕರ್ಷಣೆ ಹಾಗೂ ಆಸಕ್ತಿ ‌ಮೂಡಿರುವುದು ಈ ಉದ್ಯಮದ ಪ್ರಗತಿಯ ಗುಟ್ಟು.

ಧೋತಿ ನೋಡಲು ‌ಸರಳವಾಗಿದ್ದರು ಉಟ್ಟಾಗ ಅದರ ಗತ್ತೆ ಬೇರೆ ರೀಚ್ ಲುಕ್ ನೊಂದಿಗೆ ಗೌರವದ ನೋಟವನ್ನು ‌ನೀಡುತ್ತದೆ. ದೇಶಿ ಸಂಸ್ಕೃತಿ, ಸಂಪ್ರದಾಯಗಳೊಂದಿಗೆ ಆರಾಮದಾಯಕ‌ವಾಗಿ ಕಾಣುವ ಧೋತಿ ನಮ್ಮ ದೇಶದ ವಿಭಿನ್ನ ಪ್ರದೇಶದಲ್ಲಿ ತನ್ನದೆ ಆದ ಬೇರೆ ಬೇರೆ ಶೈಲಿಯಲ್ಲಿ ಜನ ಸಾಮಾನ್ಯರಿಂದ ಶ್ರೀಮಂತರವರೆಗೂ ಕೂಲಿ ಕಾರ್ಮಿಕರಿಂದ ಸಿನೇಮಾ ತಾರೆ,ಸೆಲೆಬ್ರಿಟಿಯವರಿಗೂ ಅಚ್ಚು ‌ಮೆಚ್ಚಿನ‌ ಧೋತಿ ಇತ್ತೀಚಿನ ‌ಕೆಲ ವರ್ಷ ಗಳಿಂದ ದಾಖಲೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ನಮ್ಮ ಸಂಪ್ರದಾಯವನ್ನು ಎತ್ತಿ‌ ತೋರಿಸುವ ಧೋತಿಗೆ ಗೌರವದ ಉಡುಗೆ ಎಂಬ ಬಿರುದು ಇರುವುದು ಗಮನಿಸ‌ಬೇಕಾದ ವಿಚಾರ.

ಗಾಂಭೀರ್ಯ ಹಾಗೂ ಸೌಂದರ್ಯ ಹೆಚ್ಚಿಸುವ ಶುಭ್ರ, ಸ್ವಚ್ಛ ಧಿರಿಸು ವಿಶೇಷ ಸಭೆ, ಮದುವೆ ಸಮಾರಂಭಗಳಲ್ಲಿ ‌ಗ್ರ್ಯಾಂಡ್ ಲುಕ್ ನೀಡುವ ಸಂಸ್ಕೃತಿ ಬಿಂಬಿಸುವ ಉಡುಗೆ. ಇತ್ತೀಚೆಗೆ ಮದುವೆ ಯಂತ ಧಾರ್ಮಿಕ, ಸಾಂಸ್ಕೃತಿಕ ಕಾರ್ಯ ಕ್ರಮಗಳಲ್ಲಿ ಪುಟ್ಟ ‌ಮಕ್ಕಳಿಂದ‌ ಹಿರಿಯರತನಕ ಭೇದವಿಲ್ಲದೆ ಪಂಚೆ ಉಡುತ್ತಾರೆ. ಸೀದಾಸಾದಾ ಧೋತಿಗೆ ಕೂಡ ಹೊಸ ಕಳೆ ನೀಡಿ ಸಾಂಪ್ರದಾಯಿಕ ನೋಟ ಮತ್ತು ಆಕರ್ಷಕವಾಗಿ‌ ಕಾಣುವುದು ಮೆಚ್ಚುವ‌ ವಿಚಾರ. ಶುಭ್ರವಾದ ಜರಿ ಅಂಚಿನ ಧೋತಿ ಶರಟಿನ ಮೇಲೆ ಹೆಗಲಿಂದ ಕೆಳಗೆ ಇಳಿ ಬಿಟ್ಟು ಜರಿಶಾಲು ಧರಿಸಿ ನಡೆದರಂತೂ ಅದರ ಗತ್ತೇ ಬೇರೆ. ಫ್ಯಾಷನ್ ಜಗತ್ತು ವೇಗವಾಗಿ ಬದಲಾಗುತ್ತಿದೆ.ಆದರೆ ಧೋತಿ ಇಂದಿಗೂ ಫ್ಯಾಷನ್ ಹಾಗೂ ಸಂಪ್ರದಾಯ ಎರಡರಲ್ಲೂ ತನ್ನ ತನ ಉಳಿಸಿಕೊಂಡು ಸೈ ಎನಿಸಿಕೊಂಡಿದೆ.

ನಮ್ಮ ದೇಶದಲ್ಲಿ ಧೋತಿ ಉತ್ಪಾದನೆ ಮತ್ತು ಮಾರಾಟದ ಕ್ಷೇತ್ರ ಬಹು ವಿಶಾಲ ವಾಗಿದೆ. ದಕ್ಷಿಣ ಭಾರತದಲ್ಲಿ ಬಹು ಬೇಡಿಕೆಯ ಉಡುಪಿದು. ಯುವಕರು ತಮ್ಮ ಕಾಲೇಜ್ ಡೇ, ಸಾಂಸ್ಕೃತಿಕ ಉತ್ಸವ ಗಳಲ್ಲಿ ಸಂತಸದಿಂದ ತೊಡುತ್ತಾರೆ.ಆದರೆ ಪರ್ಸ್ ಇಟ್ಟುಕೊಳ್ಳಲು ಅವಕಾಶವಿಲ್ಲ. ಬೆಲ್ಟ್ ಧರಿಸಲು ಸಾಧ್ಯವಾಗುತ್ತಿಲ್ಲ ಎಂಬ ಅನಾನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಧೋತಿ ಒಳಗಡೆ‌ ಜೇಬು ಹಾಗೂ ಬೆಲ್ಟ್ ಇರುವ ಧೋತಿ ಸಿದ್ಧ ಉಡುಪುಗಳಂತೆ‌ ತಯಾರಿಸಿ ಧರಿಸುವುದು‌ ಸುಲಭ ಎನ್ನುವುದನ್ನು ಗಮನಿಸಿ ಇಂತಹ ಧೋತಿ ಮಾರುಕಟ್ಟೆ ಯಲ್ಲಿ ಬಿಡುಗಡೆಗೊಳಿಸಲಾಗಿದೆ. ಕಾಟನ್ , ಲಿಲನ್ ಹಾಗೂ ರೇಷ್ಮೆ ಧೋತಿ ಗಳ ಜೋತೆ ಅರ್ಧ ತೋಳಿನ ಅಂಗಿ ಧರಿಸಿದರಂತೂ ರಾಜ ಮಹಾರಾಜರ ಗಾಂಭಿರ್ಯ ಎದ್ದು ಕಾಣುತ್ತದೆ.ನಮ್ಮ ಭವ್ಯ ಪರಂಪರೆಯ ಉಡುಗೆ ತೊಡುಗೆಗಳನ್ನು ಎತ್ತರಕ್ಕೆ ಹಬ್ಬಿಸ‌ಬೇಕಾದ ಜವಾಬ್ದಾರಿ ಹೊತ್ತ ಯುವ ಪೀಳಿಗೆಯ ಸಾಂಪ್ರದಾಯಿಕ ಉಡುಗೆ ಯಾದ ಧೋತಿ ಉಡುವಲ್ಲಿ ಉತ್ಸಾಹ ಕಾಣಿಸುತ್ತಿರುವುದು ಶ್ಲಾಘನೀಯ.

ಕೆಲ ವರ್ಷ ಗಳ ಹಿಂದೆ ಧೋತಿ ಉಟ್ಟವರನ್ನು ಕೀಳಾಗಿ ಕಂಡ ನಿದರ್ಶನಗಳಿವೆ. ಸಭೆ ಸಮಾರಂಭಗಳಲ್ಲಿ ಧೋತಿ ಉಟ್ಟ ಕಾರಣಕ್ಕೆ ನಿರ್ಲಕ್ಷ್ಯ ತೋರಿಸಿದ್ದಾರೆ ಎಂಬ ಪತ್ರಿಕೆಯ ವರದಿ ಓದಿದ ನೆನಪು. ಧೋತಿ ಉಟ್ಟ ಕಾರಣಕ್ಕೆ ಮದ್ರಾಸ್ ಹ್ಯೆಕೋಟ್ ನ್ಯಾಯ ಮೂರ್ತಿ ಯೊಬ್ಬರಿಗೆ ಕ್ಲಬ್‌ ನೊಳಗೆ ಪ್ರವೇಶ ‌ನಿರಾಕರಿಸಿದ ಹಿನ್ನೆಲೆ ಯಲ್ಲಿ ಇನ್ನೊಮ್ಮೆ ‌ಇಂತಹ ನಡೆ ಕೇಳಿಬಂದರೆ ಕ್ಲಬ್ ನ ಪರವಾನಿಗೆ ರದ್ದು ಪಡಿಸಲಾಗುವುದು ಎಂದು ಸರಕಾರದ ಆದೇಶವು ಆಗಿತ್ತು. ಅಷ್ಟೇ ಅಲ್ಲದೆ ತಮಿಳುನಾಡಿನ ಸರಕಾರಿ ಅನುದಾನಿತ “ಅಹೋಬಿಲಾ ಮಠ‌ ಓರಿಯಂಟಲ್ ಸೆಕಂಡರಿ ಸ್ಕೂಲ್ “ನಲ್ಲಿ ‌ವಿದ್ಯಾರ್ಥಿಗಳಿಗೆ ಧೋತಿ ಮತ್ತು ಬಿಳಿ ಅಂಗಿ ಹುಡುಗರಿಗೆ ಸಮವಸ್ತ್ರ. 1953 ರಲ್ಲಿ ಶಾಲೆ ಸ್ಥಾಪನೆ ಆದ ದಿನ ದಿಂದಲೂ ಈ ನಿಯಮ ಜಾರಿಯಲ್ಲಿದೆ. ವಿದ್ಯಾರ್ಥಿಗಳು ಧೋತಿ ಉಡುವುದಕ್ಕೆ ಯಾವುದೇ ತರದ ಟೀಕೆ ಗಳು ‌ವ್ಯಕ್ತವಾಗುವುದಿಲ್ಲವೇ ಎಂದು ಪತ್ರಕರ್ತರು ‌ಕೇಳಿದ್ದಕ್ಕೆ ನಮ್ಮ ಸಂಸ್ಕೃತಿಗೆ ಇದು ಗೌರವ ವಾಗಿರುವುದರಿಂದ ಭವ್ಯ ಪರಂಪರೆಯ ಧೋತಿಗೆ ಸಾಂಪ್ರದಾಯಿಕ ಹಿನ್ನೆಲೆಯಿದ್ದು ದೇಶಿ ಸಂಸ್ಕತಿ ಸಂಪ್ರದಾಯ ಗಳೊಂದಿಗೆ ವಿದ್ಯಾಭ್ಯಾಸಕ್ಕೆ ಇಲ್ಲಿ ಅವಕಾಶವಿದೆ ಎಂದಿದೆ ಶಾಲಾ ಆಡಳಿತ ಮಂಡಳಿ.

ಧೋತಿ ಒಂದು ವಿಶಿಷ್ಟ ಉಡುಗೆ ಎಲ್ಲಾ ತರದ ಅಂದರೆ ಅಧಿಕ ದೇಹತೂಕ ಹೊಂದಿದವರು, ಎತ್ತರ ದವರು,ಕುಳ್ಳಗಿನ ಶರೀರದವರಿಗೂ ಸರಿ ಹೊಂದುವಂತದ್ದು. ಧೋತಿ ಧರಿಸಿಸುವಲ್ಲಿ ಭಿನ್ನತೆಇದೆ. ಧೋತಿ ಚನ್ನಾಗಿ ಉಡುವುದು ಒಂದು ಕಲೆ. ಕಚ್ಚೆ ಹಾಕಿಪಂಚೆ ಉಡಬೇಕಾದರು ಸರಿಯಾದ ಅನುಭವ ಬೇಕು.ಧೋತಿ ಯಲ್ಲಿ ಬಿಳುಪಿನ ಹಾಗೂ ಕ್ರಿಂ ಬಣ್ಣದ ಧೋತಿಗಳಿಗೆ‌ ಹೆಚ್ಚು ಬೇಡಿಕೆ ಇದೆ. ಇಂದಿನ ಯುವಕರಿಗೆ ಧೋತಿ ಉಟ್ಟು ಸಂಭಾಳಿಸಿಕೊಂಡು ನಡೆಯಲು, ಜಾರದಂತೆ ಎಚ್ಚವಹಿಸಲು ಬಾರದಿದ್ದರು ಅವರ ನೆಚ್ಚಿನ ಉಡುಪುಗಳಲ್ಲಿ ಧೋತಿ ಇದೆ ಎನ್ನುವುದು ಮೆಚ್ಚುಗೆಯ ವಿಚಾರ.

ನನಗೆ ಬಾಲ್ಯದಲ್ಲಿ ಅಪ್ಪಯ್ಯ ತೆಗೆದಿರಿಸಿದ ಧೋತಿಯನ್ನೋಮ್ಮೆ ಉಟ್ಟು‌ಮನೆ ತುಂಬಾ ತಿರುಗಾಡುವ ಅಭ್ಯಾಸ ಇತ್ತು . ಅಮ್ಮ “ಹುಚ್ಚು ಹುಡುಗಿ ” ಎಂದು ಗದರಿಸಿದ‌ ನಂತರ ಧೋತಿ ತೆಗೆದಿರಿಸುತ್ತಿದ್ದೆ. ಇಂದಿಗೂ ನನಗೆ ‌ಧೋತಿ ಉಟ್ಟ ಗಂಡಸರು ರಾಜ‌ ಮಹಾರಾಜ , ಮಹಾಪುರುಷರಂತೆ ಕಾಣಿಸುತ್ತಾರೆ. ಅದಕ್ಕಾಗಿ ತಾನೆ ಧೋತಿ ಸಂಪ್ರದಾಯಕ್ಕೂ ಸೈ ಫ್ಯಾಷನ್ ಗೂ ಸೈ ಎಂಬ ಹೆಗ್ಗಳಿಕೆ ಹೊಂದಿರುವುದು.

Leave a Reply

Your email address will not be published. Required fields are marked *