Literature (ಸಾಹಿತ್ಯ)

ಜೇನು ಜಗದ ಅಚ್ಚರಿಯ ಕಥನ : heggaddesamachar

Spread the love

ಜೇನುತುಪ್ಪ ಹಾಗೂ ಜೇನು ವ್ಯವಸಾಯದ ಕುರಿತು ಜಾಗೃತಿ ಮೂಡಿಸಲು ಆಗಸ್ಟ್ 19 ರಂದು ವಿಶ್ವದಾದ್ಯಂತ ಜೇನು ದಿನಾಚರಣೆಯನ್ನು ಆಚರಿಸಲಾಗುತ್ತದೆ. ಜೇನು ಹುಳಗಳನ್ನು ಉಳಿಸಿಕೊಳ್ಳಲು ಅಮೆರಿಕಾದಲ್ಲಿ 2009 ರಿಂದ ಜೇನುದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ಭಾರತದಲ್ಲಿ 2017ರಿಂದ ಆಗಸ್ಟ್ 19ನ್ನು ಜೇನುದಿನವನ್ನಾಗಿ ಆಚರಿಸಲಾಯಿತು.

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

ಜೇನುತುಪ್ಪದ ರುಚಿ ಎಲ್ಲರಿಗೂ ಗೊತ್ತು. ಆದರೆ ಜೇನುನೊಣಗಳ ಜೀವನಚಕ್ರದ ಅರಿವಿನ ಬಗ್ಗೆ ತಿಳಿಯುವ ಕುತೂಹಲ ಉಳ್ಳವರು ಅತಿ ವಿರಳ. ಪ್ರಕೃತಿ ತನ್ನೊಡಲಲ್ಲಿ ಏನೇನೋ ನಿಗೂಢತೆಯನ್ನು ತುಂಬಿಕೊಂಡಿರುತ್ತದೆ. ಸಹಸ್ರಾರು ಜೇನುಗಳ ಜೀವನಕ್ರಮ ವಿಸ್ಮಯ ಮೂಡಿಸುತ್ತದೆ. ಮಡಿಕೇರಿಯ ಜೇನು ಕುಟುಂಬ ಉತ್ಪಾದನಾ ಕೇಂದ್ರದಲ್ಲಿ ಪ್ರವಾಸಿಗರು ಜೇನುತಪ್ಪ ಖರೀದಿಯಲ್ಲಿ ತೊಡಗಿದ್ದರು. ‘ಜೇನುಹುಟ್ಟಿನಲ್ಲಿ ಎಷ್ಟು ಗೂಡುಗಳಿವೆ ಗೊತ್ತೆ?’’ ಎಂಬ ಅಲ್ಲಿನ ಫಲಕವು ನನ್ನ ಕುತೂಹಲ ಕೆರಳಿಸಿತು. ಸರಿ ಜೇನುತುಪ್ಪ ಗೊತ್ತು ಜೇನಿನ ಹುಟ್ಟುಗೂಡು, ಬದುಕಿನ ಬಗ್ಗೆ ತಿಳಿಯುವುದಕ್ಕಾಗಿ ವಿಚಾರಿಸಿದೆ. ಎರಡು ಗಂಟೆಗಳ ಕಾಲ ಜೇನುನೊಣಗಳ ಬದುಕಿನ ಬಗ್ಗೆ ಚಿತ್ರ ಸಹಿತ ಕೂರ್ಗ್ ಜೇನು ಮಾಹಿತಿ ಕೇಂದ್ರದಲ್ಲಿ ಜೇನು ಜಗದ ಅಚ್ಚರಿಯ ಕಥನವನ್ನು ಕೀಟತಜ್ಞರು ವಿವರಿಸುತ್ತಾರೆ.
ಜೇನುಗಳಲ್ಲಿ ರಾಣಿ ಜೇನುನೊಣ, ಗಂಡುಜೇನು, ಕೂಲಿ ನೊಣಗಳು ಇರುತ್ತವೆ. ಇವುಗಳ ಆಯುಷ್ಯ ಏಕರೀತಿಯಲ್ಲಿ ಜೀವಿತಾವಧಿಯು ಪ್ರತ್ಯೇಕವಾಗಿರುತ್ತದೆ. ಒಂದೊಂದು ಜೇನು ಹುಟ್ಟಿನಲ್ಲಿ ಇಪ್ಪತ್ತರಿಂದ ನಲ್ವತ್ತು ಸಾವಿರ ನೊಣಗಳಿರುತ್ತವೆ. ಇವುಗಳಿಗೆಲ್ಲಾ ರಾಣಿಜೇನು ಕುಟುಂಬದ ಹಿರಿಯ ವ್ಯಕ್ತಿಯಂತೆ. ರಾಣಿಜೇನು ಪ್ರತಿದಿನವೂ ಸುಮಾರು ಒಂದು ಸಾವಿರದಿಂದ 1,500 ಮೊಟ್ಟೆ ಇಡುತ್ತಾ ಎರಡು ವರ್ಷಗಳವರೆಗೆ ಜೀವಿಸಬಲ್ಲದು, ಗಂಡುನೊಣಗಳಿಗೆ ಸರಿಯಾದ ಬದುಕಿಲ್ಲಾ, ಕೆಲಸವೂ ಇಲ್ಲ. ಕೇವಲ ರಾಣಿ ಜೇನಿನೊಂದಿಗೆ ಸಂಪರ್ಕ ಹೊಂದುವುದು ಮಾತ್ರ ಹಾಗೂ ಇವುಗಳ ಜೀವಿತಾವಧಿ ಕೇವಲ 20 ರಿಂದ 25 ದಿನಗಳು. ಇನ್ನು ಶ್ರಮಜೀವಿ ಕೂಲಿಜೇನು ಪ್ರತಿದಿನ ಅತ್ತ ಇತ್ತ ಸುತ್ತಾಡಿ ಹೂಗಳಲ್ಲಿನ ಮಧು ಸಂಗ್ರಹಿಸುತ್ತದೆ. ಬಗೆಬಗೆಯ ಹೂಗಳಿಂದ ಮಧು ಸಂಗ್ರಹಕ್ಕೋಸ್ಕರ 15 ಕಿ.ಮೀ.ವರೆಗೂ ಸಂಚರಿಸಿ ಗಂಟೆಗೆ 25 ಕಿ.ಮೀ.ವೇಗದಲ್ಲಿ ಹಾರಬಲ್ಲವು. ಅಷ್ಟೇ ಅಲ್ಲದೆ ತಾವು ಸಂಗ್ರಹಿಸಿದ ಮಧುವಿನ ನೀರಿನಂಶ ನಿವಾರಿಸಲು ಕೂಲಿನೊಣಗಳು ತಮ್ಮ ರೆಕ್ಕೆಯನ್ನು ‘ಗುಂಯ್’ ಎಂದು ಬಡಿಯುತ್ತಿರುತ್ತವೆ. ಇವುಗಳ ಜೀವಿತಾವಧಿ ಸರಾಸರಿ 40 ದಿನಗಳು.


ಪೆಟ್ಟಿಗೆಯಲ್ಲಿ ಜೇನು ಸಾಕುವ ಪದ್ಧತಿ ಉದ್ದಿಮೆಯಾಗಿ ರೂಪ ತಾಳಿದೆ. ಜೇನುತುಪ್ಪ ಹಾಗೂ ಜೇನು ಕುಟುಂಬ ಎರಡಕ್ಕೂ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆ ಇದೆ. ಕೀಟತಜ್ಞ ಡಾ.ರಾಘವೇಂದ್ರ ಗದಗಕರ್ ಅವರ ಹೇಳಿಕೆ ಪ್ರಕಾರ, ಬುದ್ಧಿವಂತಿಕೆಯಲ್ಲಿ ಮನುಷ್ಯನ ನಂತರದ ಸ್ಥಾನ ಜೇನುನೊಣಗಳದ್ದು. ಮಕರಂದ ಹೀರಲು ತಮಗೆ ಬೇಕಾದ ಹೂವನ್ನು ಗುರುತಿಸಿ ಅದು ಸೂಸುವ ಸುವಾಸನೆಯಿಂದ ಗ್ರಹಿಸುವ ಅತ್ಯದ್ಭುತ ಶಕ್ತಿ ಇವುಗಳಿಗೆ ಇದೆ. ಮಕರಂದ ಸೇವಿಸುವ ಜೇನುನೊಣಗಳ ಕಂಗಳ ಕುರಿತು ಹಲವಾರು ವರ್ಷಗಳಿಂದ ವಿಜ್ಞಾನಿಗಳಿಗೂ ಕುತೂಹಲ. ಹೂವಿನಿಂದ ಮಕರಂದವನ್ನು ಜೇನುಹುಳುಗಳು ಸಂಗ್ರಹಿಸುವಾಗ ಕೇವಲ ಸಕ್ಕರೆ ನೀರಿನಂಶವಾಗಿರುತ್ತದೆ. ಇವುಗಳ ಶರೀರದ ಒಂದು ಗ್ರಂಥಿಯಲ್ಲಿ ರಾಜಶಾಹಿರಸ ಅಥವಾ ಕಿಣ್ವವು ಮಕರಂದವನ್ನು ಜೇನುತುಪ್ಪವಾಗಿ ಮಾರ್ಪಡಿಸುತ್ತದೆ. ವರ್ಣಗಳನ್ನು ಗ್ರಹಿಸುವ ವೇಗ ಮಾನವನಿಗಿಂತ ಐದು ಪಟ್ಟು ಹೆಚ್ಚಾಗಿದ್ದು ಪ್ರಾಣಿ ಪ್ರಪಂಚದಲ್ಲೇ ಅತ್ಯಂತ ವೇಗದ್ದಾಗಿದೆ. ಜೇನುಹುಳುಗಳ ಜೀವನಶೈಲಿ ಎಲ್ಲಕ್ಕಿಂತ ಮುಖ್ಯವಾಗಿ ಶಿಸ್ತು ನಿಸ್ವಾರ್ಥಸೇವೆ ಮೆಚ್ಚುವಂತಹದ್ದು. ಇವುಗಳ ಕಾಲುಗಳ ತುದಿಯ ಭಾಗದಲ್ಲಿ ಅರೋಲಿಯಂ ಎಂದು ಒಂದು ವಿಶಿಷ್ಟ ದ್ರವವಿದ್ದು ಇದರ ಸಹಾಯದಿಂದ ಗಾಜು, ಕನ್ನಡಿಯಲ್ಲಿ ಸುಲಭವಾಗಿ ಕುಳಿತುಕೊಳ್ಳುತ್ತವೆ. ನಮ್ಮ ದೇಶದಲ್ಲಿ ಕಾಣಸಿಗುವ ನಾಲ್ಕು ಪ್ರಜಾತಿಯ ಜೇನುನೊಣಗಳಾದ ಇಂಡಿಯನ್ ಬೀ, ಲಿಟಲ್ ಬೀ, ಯುರೋಪಿಯನ್ ಬೀ ಸಾರಂಗ ಮತ್ತು ಬೊಂಬಾರ್ ಎಂದು ಕರೆಯಲ್ಪಡುತ್ತದೆ.


ಜೇನುನೊಣದ ಜೀವನದ ಇನ್ನೊಂದು ಅಚ್ಚರಿ ಹೀಗಿದೆ. ಕೃತಕ ರೀತಿಯಲ್ಲಿ ಜೇನು ಕುಟುಂಬವನ್ನು ಪಾಲು ಮಾಡಿ ರಾಣಿ ಕಣ ಉತ್ಪಾದನೆ ಆಗುವಂತೆ ಮಾಡಿ ರಾಣಿ ಜೇನ್ನೊಣ ಬೆಳೆಸುವುದು, ಹೊಸ ರಾಣಿ ನೊಣದ ಸಂಖ್ಯೆಗೆ ಅನುಗುಣವಾಗಿ ಕುಟುಂಬವನ್ನು ಪಾಲು ಮಾಡಿ ಕುಟುಂಬದ ಸಂಖ್ಯೆ ಹೆಚ್ಚು ಮಾಡುವುದು. 100 ಜೇನು ಕುಟುಂಬದಿಂದ ಒಂದು ವರ್ಷದಲ್ಲಿ 300 ರಿಂದ 400 ಕುಟುಂಬ ಮಾಡಬಹುದು. ಅಭಿವೃದ್ಧಿ ಹೊಂದಿನ ಕುಟುಂಬ ಇರುವ ಜೇನುಪೆಟ್ಟಿಗೆಯಿಂದ ರಾಣಿನೊಣ ಇರುವ ಚೌಕಟ್ಟನ್ನು ಮತ್ತು ಇನ್ನು ಎರಡು ನೊಣಗಳಿರುವ ಚೌಕಟ್ಟನ್ನು ತೆಗೆದು ಇನ್ನೊಂದು ಖಾಲಿಪೆಟ್ಟಿಗೆಯಲ್ಲಿಡಬೇಕು. ರಾಣಿ ಇಲ್ಲದ ಹಳೆ ಪೆಟ್ಟಿಗೆಯಲ್ಲಿರುವ ಕೆಲಸಗಾರ ನೊಣಗಳು ಹೊಸರಾಣಿಯನ್ನು ಉತ್ಪಾದಿಸಲು ಬೇಕಾದ ಕೆಲಸವನ್ನು ಪ್ರಾರಂಭಿಸುತ್ತವೆ, ಇವು ಹಳೆರಾಣಿ ಇಟ್ಟ ಹೆಣ್ಣುಮೊಟ್ಟೆಗಳನ್ನು ರಾಣಿಗಣಗಳಾಗಿ ಪರಿವರ್ತನೆ ಮಾಡಿ ರಾಜಶಾಹಿರಸ ಎಂಬ ಆಹಾರವನ್ನು ಉಣಿಸಿ ರಾಣಿ ನೊಣವಾಗಿ ಬೆಳೆಯುವಂತೆ ಮಾಡುತ್ತವೆ. ಈ ಕಣಗಳು ಒಂದು ವಾರದಲ್ಲಿ ಪೂರ್ಣವಾಗಿ ಬೆಳೆದಾಗ ರಾಣಿ ಇರದ ಜೇನು ಪೆಟ್ಟಿಗೆಗಳಿಗೆ ಒಂದೊಂದೇ ಕಣವನ್ನು ಏರಿಯ ಮಧ್ಯದಲ್ಲಿ ಅಳವಡಿಸಬೇಕು. 3 ರಿಂದ 4 ದಿನದೊಳಗೆ ಈ ಕಣಗಳು ಹೊಸ ರಾಣಿ ಹುಳುವಾಗಿ ತನ್ನ ಕಾರ್ಯದಲ್ಲಿ ತೊಡಗುತ್ತದೆ.
ಜೇನುತುಪ್ಪ ಹಾಗೂ ಜೇನು ವ್ಯವಸಾಯದ ಕುರಿತು ಜಾಗೃತಿ ಮೂಡಿಸಲು ಆಗಸ್ಟ್ 19ರಂದು ವಿಶ್ವದಾದ್ಯಂತ ಜೇನು ದಿನಾಚರಣೆಯನ್ನು ಆಚರಿಸಲಾಗುತ್ತದೆ. ಜೇನು ಹುಳಗಳನ್ನು ಉಳಿಸಿಕೊಳ್ಳಲು ಅಮೆರಿಕಾದಲ್ಲಿ 2009 ರಿಂದ ಜೇನುದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ಭಾರತದಲ್ಲಿ 2017 ರಿಂದ ಆಗಸ್ಟ್ 19ನ್ನು ಜೇನುದಿನವನ್ನಾಗಿ ಆಚರಿಸಲಾಯಿತು. ಔಷಧಿಯ ಗುಣವುಳ್ಳ ಜೇನುತುಪ್ಪ ಆರೋಗ್ಯವರ್ಧಕ ರೋಗನಿರೋಧಕ ಗುಣವನ್ನು ಹೊಂದಿದೆ. ಇಂತಹ ಪ್ರಕೃತಿಯ ಕೊಡುಗೆ ಹಲವು ಕಾರಣಗಳಿಂದ ನಶಿಸುತ್ತಿದೆ. ಕಾಡುನಾಶ ಕೃಷಿ ಹಾಗೂ ತೋಟಗಾರಿಕೆಯಲ್ಲಿ ಹೆಚ್ಚಿನ ರಾಸಾಯನಿಕ ಹಾಗೂ ಕೀಟನಾಶಕ ಬಳಕೆಯಿಂದ ಜೇನುಹುಳಗಳ ಪೀಳಿಗೆ ಸಂಕಷ್ಟದಲ್ಲಿದೆ. ಈ ಸುಂದರ ಭೂಮಿಯಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ಮಾನವನಿಗೆ ನಿಸ್ವಾರ್ಥವಾಗಿ ನೆರವೀಯುತ್ತಿರುವ ಜೇನು ಸಂಕುಲವು ವಿನಾಶದತ್ತ ಸಾಗಿದೆ. ಅದನ್ನು ನಿಯಂತ್ರಿಸಲು ಮಧುಮೇಳವನ್ನು ಆಯೋಜಿಸಿ ಜೇನುಕೃಷಿಯ ಬಗ್ಗೆ ರೈತರಿಗೆ ಮಾಹಿತಿ ನೀಡಲು ಹಾಗೂ ಶುದ್ಧ ಜೇನು ತುಪ್ಪ ಮಾರಾಟ ಮಾಡಲು ತೋಟಗಾರಿಕಾ ಇಲಾಖೆ ಉತ್ತೇಜನ ನೀಡುತ್ತಿದೆ. ಜೇನು ಸಾಕಾಣೆ ಮಾಹಿತಿ ಮಧು ಮಾತ್ರೆ ಆ್ಯಪ್ ವೈಜ್ಞಾನಿಕ ಜೇನುಕೃಷಿ, ಜೇನು ಸಾಕಾಣೆದಾರರ ನಡುವೆ ಕೊಂಡಿ ಬೆಸೆಯುವ ಉದ್ದೇಶದಿಂದ ತೋಟಗಾರಿಕಾ ವಿಜ್ಞಾನಿಗಳು ಮಧುಮಿತ್ರ ಆ್ಯಪ್ ಸಿದ್ಧಪಡಿಸಿವೆ. ಈ ನೂತನ ಆ್ಯಪ್‍ನಲ್ಲಿ ಪರಾಗಸ್ಪರ್ಶ ಕಾರ್ಯದಲ್ಲಿ ಜೇನುನೊಣಗಳ ಪಾತ್ರ, ಜೇನು ಸಂಸ್ಮರಣೆ ಮತ್ತು ಪರೀಕ್ಷೆ, ಪ್ರಗತಿಪರ ಜೇನುಕೃಷಿಕರ ಯಶೋಗಾಥೆ, ಜೇನು ನೊಣಗಳ ಪ್ರಭೇದ, ಜೇನು ಸಾಕಣೆ ಉಪಕರಣಗಳನ್ನೊಳಗೊಂಡಿರುವ ಸಮಗ್ರ ಮಾಹಿತಿ ಲಭ್ಯವಿದೆ.


ಆಹಾರ ಮತ್ತು ಔಷಧೀಯ ರೂಪದಲ್ಲಿ ಜೇನುತುಪ್ಪಕ್ಕೆ ರಾಜಮುಕುಟ ಜೇನಿನಲ್ಲಿ ಸಸಾರಜನಕ ಜೀವಸತ್ವಗಳು, ಖನಿಜಗಳು ಅಲ್ಲದೆ ಅನೇಕ ಔಷಧೀಯ ಗುಣಗಳಿವೆ. ಆಧುನಿಕ ಔಷಧಿಗಳ ಆವಿಷ್ಕಾರದ ಹೊರತಾಗಿಯೂ ಜೇನು ತನ್ನ ಬೇಡಿಕೆ ಕಳೆದುಕೊಂಡಿಲ್ಲ. ಜೇನುತುಪ್ಪದ ಹೊರತಾಗಿ ಆಯುರ್ವೇದ ಚಿಕಿತ್ಸೆಯನ್ನು ಕಲ್ಪಿಸಿಕೊಳ್ಳುವುದು ಕಷ್ಟದ ಸಂಗತಿ. ಆಯುರ್ವೇದ ಚಿಕಿತ್ಸೆಯನ್ನು ಜೇನು ಮೂಲವಸ್ತು. ಈಜಿಫ್ಟ್ ಸಮಾಧಿಯಲ್ಲಿಟ್ಟ ಜೇನು ಹಾಳಾಗಿರಲಿಲ್ಲವಂತೆ. ಇದು ಜೇನುನೊಣದ ಶ್ರಮದ ಫಲತಾನೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜೇನುತುಪ್ಪವೆಂದರೆ ಜೇನುನೊಣಗಳಿಂದ ಉತ್ಪಾದನೆಯಾಗಿರುವ ನೈಸರ್ಗಿಕ ಸಿಹಿ ಪದಾರ್ಥ.
ಸಾವಿರಾರು ಜೇನುಹುಳಗಳು ಒಂದು ತಟ್ಟೆಯಲ್ಲಿದ್ದುಕೊಂಡು ಸಹಬಾಳ್ವೆ ನಡೆಸುವ ಸಹಕಾರಿ ತತ್ವ ಮನುಷ್ಯನಿಗೆ ಒಂದು ಪಾಠವಿದ್ದಂತೆ. ಶ್ರಮಕ್ಕೆ, ಒಗ್ಗಟ್ಟಿಗೆ ಇನ್ನೊಂದು ಹೆಸರೇ ಜೇನುನೊಣಗಳು.

Leave a Reply

Your email address will not be published. Required fields are marked *