Literature (ಸಾಹಿತ್ಯ)

ಜೀವವೈವಿಧ್ಯಗಳ ತಾಣ ಕೊಡಚಾದ್ರಿಗೆ ರೋಪ್ ವೇ  ಯೋಜನೆ ಪರಿಸರಕ್ಕೆ ಮಾರಕವಾಗದಿರಲಿ : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ 
 

      ಭಾರತದ ಶಕ್ತಿಪೀಠಗಳಲ್ಲಿ‌ಒಂದು ಕರ್ನಾಟಕದ ಸಪ್ತಮುಕ್ತಿ ಸ್ಥಳಗಳ ಪೈಕಿ ಒಂದಾದ ಶ್ರೀ ಕ್ಷೇತ್ರ ಕೊಲ್ಲೂರಿನ ಮೂಲ ಸ್ಥಾನ ಎಂದೆ ಪ್ರಸಿದ್ದಿ ಪಡೆದಿರುವ ಕೊಡಚಾದ್ರಿ ಸೂಕ್ಷ್ಮ ಜೀವವೈವಿಧ್ಯಗಳ ನೆಲೆಬೀಡು. ವಿಶ್ವಪಾರಂಪರಿಕ ‌ತಾಣ ಹಾಗೂ ಆಧ್ಯಾತ್ಮಿಕ ಕೇಂದ್ರವೂ ಹೌದು.  ಕರ್ನಾಟಕ ಸರ್ಕಾರದಿಂದ ಪಾರಂಪರಿಕ ನೈಸರ್ಗಿಕ ಸ್ಥಳದ ಮಾನ್ಯತೆ ಪಡೆದ ಮಲೆನಾಡಿನ ಸ್ವರ್ಗ. ದೃಷ್ಟಿ ಹರಿಸಿದಷ್ಟು ದೂರ  ನಿಸರ್ಗ ಸೌಂದರ್ಯದಿಂದ ರಾರಾಜಿಸುವ ಔಷಧೀಯ ಗುಣವುಳ್ಳ ಗಿಡ  ಮರಗಳ ಭಂಡಾರ ,ಸಸ್ಯ ಶ್ಯಾಮಲೆ ಭೂಮಿಗಿಟ್ಟ  ಹಸಿರು ರಂಗೋಲಿಯಂತೆ ಕಂಗೊಳಿಸುವ‌  ಕೊಡಚಾದ್ರಿಯ  ಸರ್ವಜ್ಞ ‌ಪೀಠ‌ , ಶಂಕರಾಚಾರ್ಯರ ತಪೋಭೂಮಿ ಒಮ್ಮೆ ನೋಡಿದರೆ ಮಗದೊಮ್ಮೆ ನೋಡಬೇಕೆಂಬ ಆಶೆ ಹುಟ್ಟಿಸುವ ತಂಪು ತಾಣ. ಪ್ರಕೃತಿ  ಸೌಂದರ್ಯದ ಕಲಶ  ನೋಡುವ ಕಂಗಳಿಗೆ ತೃಪ್ತಿಯ ರಸದೌತಣ  ನೀಡುವ ಕೊಡಚಾದ್ರಿಗೆ  ಕೊಲ್ಲೂರಿನಿಂದ ಸಂಪರ್ಕ ಕಲ್ಪಿಸಲು ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ  ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ಪ್ರಥಮ  ರೋಪ್ ವೇ(ಕೇಬಲ್ ಕಾರು) ಹೆಗ್ಗಳಿಕೆಯ  ಮಹತ್ವದ  ಯೋಜನೆಯ  ಸಿದ್ದತೆ ನಡೆಯುತ್ತಿದೆ. ಕೊಡಚಾದ್ರಿಗೆ  ರಸ್ತೆ ನಿರ್ಮಿಸಲು ತಾಂತ್ರಿಕ ಅಡಚಣೆಗಳು ಎದುರಾಗುವುದರಿಂದ ರೋಪ್ ವೇ ಅಗತ್ಯ ಎನ್ನಲಾಗಿದೆ.

        ಈ ಯೋಜನೆಯ  ಬಗ್ಗೆ  ಪರ – ವಿರೋಧ ನಿಲುವು ವ್ಯಕ್ತವಾಗುತ್ತಿದ್ದು  ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿ ನಾಶವಾಗದಿರಲಿ.  ರೋಪ್ ವೇ ನಿರ್ಮಾಣದಲ್ಲಿ ವನ್ಯಜೀವಿ ಹಾಗೂ ಪರಿಸರ ಹಾನಿ ಆಗದಂತೆ ಎಚ್ಚರ ವಹಿಸಿ ವಿನೂತನ ತಂತ್ರಜ್ಞಾನ ಅಳವಡಿಸುವ  ಭರವಸೆ ಇಲ್ಲಿನ ಅಧಿಕಾರಿಗಳು ನೀಡಿದ್ದು. ಈ ಭರವಸೆಯಲ್ಲಿ ಸ್ಥಳೀಯರಿಗೆ  ಪೂರ್ಣ ಪ್ರಮಾಣದ ವಿಶ್ವಾಸವಿಲ್ಲ. ಈ ರೋಪ್ ವೇಯಿಂದ  ಯಾತ್ರಾರ್ಥಿ ಗಳಿಗೆ ಆಗಬಹುದಾದ ಲಾಭಗಳು ಅನೇಕ . ಈಗ ಮೂಕಾಂಬಿಕಾ ದೇವಸ್ಥಾನಕ್ಕೆ ಬರುವ ಅನೇಕರು ಕಷ್ಟದ ದಾರಿಯೆಂದು ಕೊಡಚಾದ್ರಿಗೆ‌ ಹೋಗುತ್ತಿಲ್ಲಾ. ಬೆಟ್ಟದ ಬುಡದ ತನಕ ಮಾತ್ರ  ಸಾಗುವ ಕಷ್ಟಕರ ಜೀಪ್ ಪಯಣ ಉಳಿದ ಒಂದುವರೆ ಕಿಲೊಮೀಟರ್ ಗುಡ್ಡ ‌ಹತ್ತಿ ನಡೆದೆ ಸರ್ವಜ್ಞ ಪೀಠಕ್ಕೆ ‌ಸಾಗಬೇಕು. ಒಂದೆಡೆ ಕಡಿದಾದ ಬಂಡೆ ಕಲ್ಲು ಇನ್ನೊಂದೆಡೆ ಆಳವಾದ‌ ಪ್ರಪಾತ, ನಡುವೆ ಸಣ್ಣ ಕಾಲುದಾರಿ ಇಲ್ಲಿ ಬೆಟ್ಟ ಏರುವುದು ಅಷ್ಟು ಸುಲಭವಲ್ಲ. ಅದೇ  2 ಗಂಟೆಯ ದಾರಿಯನ್ನು 15 ನಿಮಿಷದಲ್ಲಿ   ಕ್ರಮಿಸಬಹುದು ಎಂಬ ಲಾಭಾಂಶವಿದ್ದರು.ರೋಪ್ ವೇ ಯೋಜನೆ ಕೊಡಚಾದ್ರಿಗೆ  ಅಷ್ಟೊಂದು ಪೂರಕವಲ್ಲ ಎಂಬ ಕೂಗು ಅಲ್ಲಲ್ಲಿ ಕೇಳಿಬರುತ್ತಿದೆ. ಇದಕ್ಕಾಗಿ ‌ಬಳಸುವ ಬೃಹತ್ ಯಂತ್ರಗಳು ಅರಣ್ಯ ನಾಶಕ್ಕೆ ಕಾರಣವಾಗಬಹುದು. ಯಂತ್ರಚಲಾವಣೆಯಿಂದ  ಜೀವವೈವಿಧ್ಯತೆಯ ವಂಶಾಭಿವೃದ್ಧಿಗೆ  ಮಾರಕವಾಗಬಹುದು. ಇಲ್ಲಿನ ಜೀವ ಜಂತುಗಳು ವನ್ಯಪ್ರಾಣಿಗಳು ಸ್ಥಳ ‌ಬದಲಾವಣೆ ಮಾಡುವ ಸಾಧ್ಯ ತೆಯೂ ಹೆಚ್ಚಿದೆ.ಅತೀ ಪ್ರಾಚೀನ ವೃಕ್ಷಗಳಿಗೆ ಅಪಾಯವಾದರೆ ಇನ್ನೆಂದೂ ಇಂತಹ ವೃಕ್ಷಗಳನ್ನು ನೆಲೆಯೂರಿಸಲಾಗದು. ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯನಾಶವಾಗದೆ ವನ್ಯಜೀವಿ ರಕ್ಷಣೆ ‌ಮತ್ತು ಸಂರಕ್ಷಿತ ಅಭಯಾರಣ್ಯಕಾಯಿದೆಗಳನ್ನು ಗಾಳಿಗೆ ತೂರಿಬಿಡದೆ. ಪರಿಸರ ತಜ್ಞರ ಅಭಿಪ್ರಾಯಕ್ಕೆ ಹೆಚ್ಚಿನ ‌ಮಹತ್ವ‌ನೀಡಬೇಕಾಗಿದೆ. ಅಭಿವೃದ್ಧಿಯ ಯೋಜನೆ ಬೇಡವೆಂದಲ್ಲಾ ಆದರೆ ಕಾಡು ನಾಶ ಮಾಡಿ ಸಾಧಿಸಿದ‌   ಅಭಿವೃದ್ಧಿಯು ಅಭಿವೃದ್ಧಿ ಅಲ್ಲ.ದಟ್ಟ ಕಾಡುಗಳ ನಾಶ, ವನ್ಯ ಜೀವಿಗಳ ಮಾರಣ ಹೋಮ, ಅರಣ್ಯಕಾಯಿದೆ, ವನ್ಯಜೀವಿಕಾಯಿದೆ, ಜೀವ ವೈವಿದ್ಯಕಾಯಿದೆ, ಪರಿಸರರಕ್ಷಣಾಕಾಯಿದೆಗಳ ಉಲ್ಲಂಘನೆ ಆಗದೆ ರೋಪ್ ವೇ ಆಗಲು ಸಾಧ್ಯವಾದರೆ ಅದು ನಿಜ ಅರ್ಥದಲ್ಲಿ ಅಭಿವೃದ್ಧಿ.

    ಕಳೆದ ವರ್ಷ ವಿಶ್ವ ಸಂಸ್ಥೆ ಅಭಿವೃದ್ಧಿ ಕಾರ್ಯ ಸಹಯೋಗದಲ್ಲಿ ‌ಕೇಂದ್ರ ಗ್ರಹಸಚಿವಾಲಯ ಸಿದ್ದಪಡಿಸಿದ‌ ವರದಿ‌ ಪ್ರಕಾರ  ಹೆಚ್ಚಿನ ‌ಪ್ರಕೃತಿವಿಕೋಪ ದಿಂದ ಹಾನಿಗೊಳಗಾಗುವ ರಾಜ್ಯಗಳ ಪೈಕಿ ‌ಕರ್ನಾಟಕಕ್ಕೆ 6 ನೇ ಸ್ಥಾನ ದೊರೆತಿದೆ. ಅಂದರೆ ‌ನಿಸರ್ಗ‌ ಮತ್ತು‌ ಮಾನವ ನಿರ್ಮಿತ‌ ವಿಪತ್ತುಗಳೆರಡಕ್ಕೂ ಕರ್ನಾಟಕ ಬಲಿಯಾಗಿದೆ. ಎಲ್ಲಾ ಲೂಟಿ ಹೋದ‌ ಮೇಲೆ ದೊಡ್ಡಿಬಾಗಿಲು ಹಾಕಿ‌ಪ್ರಯೋಜನವಿಲ್ಲ ಎಂಬಂತೆ ಪ್ರಕೃತಿಯನ್ನು ವಿಕೃತಿಗೊಳಿಸುವ ಮೂರ್ಖತನದ ಹಂಬಲ ಎಲ್ಲೂ ಆಗದಿರಲಿ. ಪ್ರಗತಿ, ಅಭಿವೃದ್ಧಿ ಊರೆಲ್ಲ ಹರಿದಾಡುತ್ತಿರುವಾಗ ಅಡವಿಗಳ ಆಹುತಿಯಾಗುತ್ತಿರು ವುದನ್ನು ಯಾರು ಗಂಭೀರವಾಗಿ ತೆಗೆದು ಕೊಳ್ಳುವುದಿಲ್ಲ.  ಅರಣ್ಯನಾಶ ಪರವಾದ ಧ್ವನಿಯೇ ಜೋರಾಗಿ ಪರಿಸರ ಸಂರಕ್ಷಣೆಯ‌ ಕೂಗು ‌ಕ್ಷೀಣವಾಗತ್ತಾ. ಮಾನವ ತನ್ನ ಪ್ರಗತಿಗೆ ನಡೆಸಿದ ಹಲವು ಬಗೆಯ ತಂತ್ರಗಳಿಂದ ಅನೇಕ ಪ್ರಾಣಿ ಪಕ್ಷಿಗಳು ಇಂದು ಅಳಿವಿನಂಚಿಗೆ  ಬಂದಿದೆ. ಕಾಡು ಕಡಿಮೆ ಆಗುತ್ತಿದೆ. ಕಾಡಿನಲ್ಲಿ ಪ್ರಾಣಿಗಳಿಗೆ ಇರಲು‌ಜಾಗವಿಲ್ಲ. ದೂರ ದೃಷ್ಟಿಯಿಂದ ಅನೇಕ ಯೋಜನೆಗಳು ಶುರುವಾದರು ಕೊನೆಯಲ್ಲಿ ಫಲಿತಾಂಶಗಳು ತೃಪ್ತಿ ದಾಯಕವಾಗಿಲ್ಲದ ಉದಾಹರಣೆಗಳು  ಅನೇಕವಿದೆ.

      ಕೊಲ್ಲೂರು ಮೂಕಾಂಬಿಕಾ ದರ್ಶನ ಕ್ಕೆ ಬರುವ ಕೇರಳ, ತಮಿಳುನಾಡು, ಆಂದ್ರಪ್ರದೇಶದ ಭಕ್ತರು ಕೊಡಚಾದ್ರಿ ಬೆಟ್ಟಕ್ಕೆ ಹೋಗಿ ಪೂಜೆ ಸಲ್ಲಿಸಿದರೆ ಅವರ ಯಾತ್ರೆ ಪೂರ್ಣ ಗೊಳುವುದು ಎಂಬ ನಂಬಿಕೆ ಇದೆ. ರೋಪ್ ವೇ ಆದ ಮೇಲೆ ‌ಕೊಡಚಾದ್ರಿಗೆ ಬರುವವರ ಸಂಖ್ಯೆಯಲ್ಲಿ ಹೆಚ್ಚಳ ಆಗುವುದು ಖಂಡಿತ .ಆದರೆ ಚಾರಣಕ್ಕೆ ಆಪ್ತವೆನಿಸುವ  ಚಾರಣಿಗರ ಸ್ವರ್ಗ ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಕೊಡಚಾದ್ರಿಯ ಗುಡ್ಡ ಏರಿನಿಂತರೆ ಪ್ರಕೃತಿಸೌಂದರ್ಯದ ವಿರಾಟ ದರ್ಶನವಾಗುತ್ತದೆ. ದೂರ ದೂರಕ್ಕೂ ಹಸಿರು‌ಹೊದ್ದು‌ಮಲಗಿರುವ ಬೆಟ್ಟಗುಡ್ಡಗಳು ಸುಡುಬಿಸಿಲಿನಲ್ಲೂ ತಣ್ಣಗೆ ಮೈಸೋಕುವ‌ ಗಾಳಿ, ಮುಗಿಲು ಚುಂಬಿಸುವ ಸಸ್ಯರಾಶಿ.ಸಮಸ್ತ ಸೌಂದರ್ಯವನ್ನು ಭಂಡಾರವನ್ನಾಗಿ ಮಡಿಲಲ್ಲಿ ತುಂಬಿಕೊಂಡಿರುವ ಕೊಡಚಾದ್ರಿಗೆ  ಕಾಲ್ನಡಿಗೆಯಲ್ಲಿ ಸಾಗಿದಾಗ ಸಿಗುವ ಮಜಾ ರೋಪ್ ವೇಯಲ್ಲಿ ಸಿಗಲಾರದು. ಕೊಡಚಾದ್ರಿ ಏರುತ್ತಾ ಸಾಗುವಾಗ  ಮರಗಳನ್ನು ತಬ್ಬಿಹಿಡಿದ ತರುಲತೆಗಳಲ್ಲಿ ನಳನಳಿಸುವ ಪುಷ್ಪಗಳ ಕಂಪು ಕೊಡಚಾದ್ರಿ ಬೆಟ್ಟವೇರಿ ದಣಿದ ಮೈಮನವನ್ನು ಹಗುರಾಗಿಸಿ ತನ್ನದೇ‌  ಲೋಕಕ್ಕೆ ಕೊಂಡೊಯ್ಯುತ್ತದೆ. ಅರಣ್ಯ ದೈಸಿರಿ ಸೊಬಗಿನ ಎದುರು ಯಾವ ಆಯಾಸದ ಪರಿವೆ ಇಲ್ಲದೇ ಕೊಡಚಾದ್ರಿ ಏರುವವರು ಇದ್ದಾರೆ ಆದರೆ ಅಶಕ್ತರು, ಹಿರಿಯನಾಗರಿಕರಿಗೆ ರೋಪ್ ವೇ ಅಗತ್ಯವಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

Leave a Reply

Your email address will not be published. Required fields are marked *