ಕೊರೋನ ಕವನ | heggaddesamachar.com

ನಮ್ಮಲ್ಲಿಗೆ ಬರಬೇಡಿರೆಂದು
ಬಾಗಿಲು ಮುಚ್ಚಿಕೊಂಡ
ಜಗತ್ತಿನ ಮಂದಿರ,ಮಸೀದಿ,ಚರ್ಚುಗಳು!
ನೊಂದ ಜೀವಗಳು
ನಮ್ಮಲ್ಲಿಗೆ ಬನ್ನಿರೆಂದು
ಬಾಗಿಲು ತೆರೆದ ಆಸ್ಪತ್ರೆಗಳು!
ಕಾಯಬೇಕಾದ ದೇವರೆ
ಕೈ ಚೆಲ್ಲಿ ಕೂತಾಗ
ತಮ್ಮ ಪ್ರಾಣದ ಹಂಗನ್ನು ತೊರೆದು
ನಮ್ಮನ್ನು ರಕ್ಷಿಸಲು ನಿಂತವರು
ವೈದ್ಯ ದೇವರುಗಳು
ಯಾವ ಸೋಂಕಿಗು ಹೆದರದೆ
ಚಿಕಿತ್ಸೆಯನು ನೀಡುತಾ ಪ್ರಾಣ ತೊರೆದ
ಅದೆಷ್ಟೊ ವೈದ್ಯರುಗಳು
ನಿಮ್ಮ ನಿಸ್ವಾರ್ಥ ಸೇವೆಗೆ, ತ್ಯಾಗಕ್ಕೆ
ನಾವು ಏನು ತಾನೇ ಕೊಡಬಲ್ಲೆವು
ನಿಮ್ಮಗಿದೊ ಕೋಟಿ ಪ್ರಣಾಮಗಳು
ಸಮವಸ್ತ್ರ ಧರಿಸಿ
ಸೇವೆಗೆ ಹೊರಟು ನಿಂತ
ಅಪ್ಪನ ಕೈ ಹಿಡಿದು ಅಳುತಾ
” ಮನೆಯಿಂದ ಹೋಗದಿರು ಅಪ್ಪ
ಹೊರಗೆ ಕೊರೊನಾ “
ಎನ್ನುವ ಮುದ್ದು ಕಂದನ ಮಾತಿಗೆ
ಎದೆಯ ಕಲ್ಲಾಗಿಸಿ
ದೇಶ ಸೇವೆಗೆ ಹೊರಟ ಇಂತಹ
ಲಕ್ಷಾಂತರ ಪೋಲಿಸರುಗಳು
ರಸ್ತೆಯಲಿ ನಿಂತು ಸೋಂಕನ್ನು ಲೆಕ್ಕಿಸದೆ
ಕೈ ಮುಗಿದು ಬೇಡುತ್ತಿದ್ದಾರೆ
ಮನೆಯಿಂದ ಹೊರಗೆ ಬರಬೇಡಿರೆಂದು
ಬೆಚ್ಚನೆಯ ಮನೆಯ ತೊರೆದು
ಪ್ರಾಣವನು ಲೆಕ್ಕಿಸದೆ
ನಮಗಾಗಿ ಶ್ರಮಿಸುತ್ತಿರುವ ಪೋಲಿಸರುಗಳೇ
ನಿಮಗಿದೊ ನಮ್ಮ ನಮನಗಳು

ಮಂಗಳಕ್ಕೆ ಕಾಲಿಟ್ಟ ನಮಗೀಗಾ
ಅಂಗಳಕ್ಕೂ ಕಾಲಿಡಲು ಜೀವ ಭಯ
ನಾವು ಅದೆಷ್ಟೆ ಮುಂದುವರೆದರು
ಪ್ರಕ್ರತಿ ಮಾತೆಯ ಮುಂದೆ ಕುಬ್ಜರು
ಅವಳ ದೇಹದ ರಕ್ತದ ಹನಿ ಹನಿಯ ಹೀರಿ ನಿಂತ ನಮಗೀಗಾ ಅವಳೇ ದೇವರು
ಯಾಕೋ, ಭವಿಷ್ಯದ ಕನ್ನಡಿಯೊಳಗೆ
ನಮ್ಮದೇ ಶವದ ಯಾತ್ರೆ ಕಾಣುತ್ತಿದೆ…..
ಪ್ರೀತಿಯ ಸ್ನೇಹಿತರೆ,
ಜಗತ್ತು ಬಲು ಸಂಕಷ್ಟಕ್ಕೆ ಗುರಿಯಾಗಿದೆ. ಯಾವ ದೇವರು ಕಾಯಲಾರದ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಾಗಿದೆ. ಒಂದು ಕಡೆ ಸರ್ಕಾರ, ಮತ್ತೊಂದೆಡೆ ತಮ್ಮ ಪ್ರಾಣದ ಹಂಗನ್ನು ತೊರೆದು ನಮಗಾಗಿ ಹೋರಾಡುತ್ತಿರುವ ವೈದ್ಯಕೀಯ ದೇವರುಗಳು, ಪೋಲೀಸಿನವರು ನಮಗಾಗಿ ಶ್ರಮಿಸುತ್ತಿದ್ದಾರೆ.
ತೀರ ಅನಿವಾರ್ಯದ ಹೊರತು ಮನೆಯಿಂದ ಹೊರಗೆ ಕಾಲಿಡದಿರಿ. ಅದೊಂದೆ ನಮ್ಮನ್ನು ನಾವು ಉಳಿಸಿಕೊಳ್ಳುವ ಮಾರ್ಗ.
ಮನೆಯಲ್ಲೇ ಉಳಿಯಿರಿ, ನಿಮ್ಮೊಂದಿಗೆ ಇತರರನ್ನು ಉಳಿಸಿ.
ಪ್ರಭಾಕರ್ ಎಂ.ಸಿ