Literature (ಸಾಹಿತ್ಯ)

ಕೊಡವರ ನಾಡಲಿ ಹುತ್ತರಿ ಸಂಭ್ರಮ ರೈತರ ಪಾಲಿನ ಸುಗ್ಗಿ ಹಬ್ಬ : heggaddesamachar

Spread the love

    ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ 

ಕೊಡಗು ಎಂದ ಕೂಡಲೇ ಹಸಿರು ಹೊದ್ದ ನಿಸರ್ಗ ಸಿರಿಯ ಮಡಿಲಿನ ರಮಣಿಯತೆ ಕಣ್ಮುಂದೆ ಬರುತ್ತದೆ. ಬೆಟ್ಟಗುಡ್ಡ, ನದಿ, ತೊರೆಗಳು,ಮಂಜು ಹಾಗೂ  ತಂಗಾಳಿಯ ಪ್ರಶಾಂತ ವಾತಾವರಣಕ್ಕೆ ಇನ್ನೊಂದು ಹೆಸರು ಕೊಡಗು.   ಪ್ರಕೃತಿ ಸೌಂದರ್ಯದ ಸ್ವರ್ಗ ಸದೃಶ ಅನುಭವನೀಡುವ ದಟ್ಟ ಹಸಿರಿನ ಗಿರಿಕಂದರಗಳ ನಡುವೆ ನಿಸರ್ಗದೇವತೆ ಧರೆಗಿಳಿದಂತೆ  ಕಂಗೊಳಿಸುವ  ನೈಸರ್ಗಿಕತಾಣ ಕೊಡಗಿನ ಚುಮು ಚುಮು ಚಳಿಯ ನಡುವೆ  ಮೇಳೈಸಲಿದೆ ಹುತ್ತರಿ ಸಂಭ್ರಮ. ಕೊಡವರ ಸಂಸ್ಕೃತಿ,  ಸಂಪ್ರದಾಯದ ಹಬ್ಬ ಹರಿದಿನಗಳು ವೈವಿಧ್ಯಮಯ‌  ಹಾಗೂ ಅಷ್ಟೇ ‌ವಿಶೇಷವಾಗಿ ಆಚರಿಸಿಕೊಳ್ಳುವ  ಪ್ರಮುಖ ‌ಹಬ್ಬಗಳಲ್ಲಿ ಹುತ್ತರಿ (ಪುತ್ತರಿ ನೆಮ್ಮೆ) ಯು ಒಂದು.   ವ್ಯವಸಾಯಕ್ಕೆ ಸಂಬದಿಸಿದ ಆಚರಣೆ ಹಬ್ಬವಾಗಿದ್ದು ಗದ್ದೆಯಲ್ಲಿ ‌ಹುಲುಸಾಗಿ  ಬೆಳೆದ  ಭತ್ತದ  ಪೈರನ್ನು ಆರಾಧಿಸಿ  ಮನೆ ತುಂಬಿಸಿಕೊಳ್ಳುವ    ಹುತ್ತರಿ ಕೊಡಗಿನ ಸುಗ್ಗಿ ಹಬ್ಬ. ಈ ವರ್ಷ ನವೆಂಬರ್ 29 ರಂದು ರೋಹಿಣಿ ನಕ್ಷತ್ರವಿರುವ ಹುಣ್ಣುಮೆಯ ರಾತ್ರಿ ಕೊಡಗಿನಲ್ಲಿ ಹುತ್ತರಿ ಹಬ್ಬದ ಆಚರಣೆ ನಡೆಯಲಿದ್ದು ಧಾನ್ಯ ಲಕ್ಷ್ಮಿ ಯನ್ನು  ಶ್ರದ್ದಾ ಭಕ್ತಿಯಿಂದ ಮನೆ ತುಂಬಿಸಿಕೊಳ್ಳುವ ಉತ್ಸವ .

     ಕೊಡವರ  ಭಾಷೆಯಲ್ಲಿ  ಪುತ್ತರಿ  ಅಂದರೆ  ಹೊಸ ಅಕ್ಕಿ  ಎಂದರ್ಥ. ಕನ್ನಡದಲ್ಲಿ  ಅದೇ  ಶಬ್ದ  ಹುತ್ತರಿ. ಕೃಷಿ ಪ್ರಧಾನವಾದ ನಾಡಿನಲ್ಲಿ  ಭೂಮಿತಾಯಿಗೆ  ಕೃತಜ್ಞತೆ ಅರ್ಪಿಸಲು  ಹಲವಾರು  ಆಚರಣೆಗಳು ಇದ್ದು. ತನ್ನ ವಿಶಿಷ್ಟ ಆಚಾರ,  ಸಂಪ್ರದಾಯ,  ಊಟ, ಉಪಚಾರ, ಉಡುಗೆ  ತೊಡುಗೆಗಳಿಂದಲೂ ಇಲ್ಲಿನ ಜನರು ‌ಪ್ರಕೃತಿಯೊಂದಿಗೆ  ಅವಿನಾಭಾವ ‌ಸಂಬಂಧವನ್ನು‌ ಹೊಂದಿದ್ದು  ಹುತ್ತರಿ ಹಬ್ಬಕ್ಕೆ ಕುಂಬಾರರು  ಹುತ್ತರಿ ಕುಡಿಕೆ,‌ ಮರದ‌ ಕೆಲಸದವರು  ‌ಕದಿರು ತುಂಬಲು ಬುಟ್ಟಿ, ಬಿದಿರುನೇಯುವವರು  ಹುತ್ತರಿ  ಕುಕ್ಕೆ ಮಾಡುವ ಸಂಪ್ರದಾಯವಿದೆ. ಶ್ರದ್ಧಾ ಭಕ್ತಿ ಹಾಗೂ ಸಡಗರದಿಂದ ಅಗ್ನಿ , ನೀರು ಮತ್ತು ಪ್ರಕೃತಿಗೆ  ವಿಶೇಷ ಸ್ಥಾನ ನೀಡುವ  ಹುತ್ತರಿ ಹಬ್ಬದಲ್ಲಿ ಹೊಸ ಬೆಳೆಯನ್ನು ನೀಡಿದ ಭೂಮಾತೆಗೆ ಧಾನ್ಯಲಕ್ಷ್ಮಿಗೆ  ಭಕ್ತಿಭಾವದಿಂದ ಕೃತಜ್ಞತೆಯನ್ನು  ಸಲ್ಲಿಸುತ್ತಾರೆ. ಒಂದು ಸಮುದಾಯದ ನಂಬಿಕೆ ಆಚರಣೆಗಳು  ಆ ಸಮುದಾಯದ ಪ್ರತಿಬಿಂಬಗಳೇ ಆಗಿವೇ.


         ಹುತ್ತರಿ ಹಬ್ಬದಂದು ಸಾಂಕೇತಿಕವಾಗಿ‌ ಬೆಳೆದ ಬೆಳೆಯ ಮೊದಲ ಧಾನ್ಯವನ್ನು ಕೊಡವರ ಪ್ರಮುಖ ಆರಾಧ್ಯ ದೈವಗಳಾದ ಕಾವೇರಿ ಅಮ್ಮ ಹಾಗೂ  ಮಳೆ-ಬೆಳೆ ತರುವ ದೇವರು ಇಗ್ಗು  ತಪ್ಪನಿಗೆ  ಕೃತಜ್ಞತೆಯಿಂದ ಸಮರ್ಪಿಸುತ್ತಾರೆ.  ಇಗ್ಗುತಪ್ಪ‌ ದೇವಸ್ಥಾನದ  ಗದ್ದೆಯಲ್ಲಿ ಕದಿರು ಮೂರ್ತವಾದ‌ ಮೇಲೆ ಸಾರ್ವಜನಿಕರು ತಮ್ಮ ಗದ್ದೆಯಿಂದ ಕದಿರು ತಂದು ಹಬ್ಬ ಆಚರಿಸುತ್ತಾರೆ. ನಿಶ್ಚಿತವಾದ  ಗದ್ದೆಗೆ  ಕದಿರು ಕ್ಯೊಯುವವರು ಕತ್ತಿಹಿಡಿದು ಉಳಿದವರು ಕುಕ್ಕೆ, ಚಾಪೆ‌ ಹಾಗೂ‌ ಕೊವಿ ಹಿಡಿದು‌  ತೆರಳುವರು. ಓಲಗ,ಹುತ್ತರಿ ಹಾಡು ಹಾಡುತ್ತಾ, ಡೋಲುಬಾರಿಸುತ್ತಾ , ಹುತ್ತರಿ ಹಬ್ಬಕ್ಕೆ   ಕೋವಿಯಿಂದ ಗುಂಡು ಹಾರಿಸುವ  ಮೂಲಕ ಚಾಲನೆ ನೀಡುವರು .ಕದಿರು ‌ಹೊತ್ತು‌ಮನೆ ಪ್ರವೇಶಿಸಿಸುವಾಗ ಮನೆಯ ಹೆಂಗಸರು  ಕಾಲು ತೊಳೆದು ಕುಡಿಯಲು ಹಾಲು, ಬಾಳೆಹಣ್ಣು, ಜೇನು ತುಪ್ಪ ತಿನ್ನಿಸಿ ಕದಿರನ್ನು ಆದರದಿ ಬರಮಾಡಿಕೊಂಡು  ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಹುತ್ತರಿ ಬರುವಾಗ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡು ಬಂತು ಹೋಗುವಾಗ‌ ಹೇಳದೆ ಹೊಯಿತು ಎನ್ನುವ ಜನಪದವಿದೆ.  ಪರವೂರಲ್ಲಿ ವಾಸಿಸುವವರು ಅಗತ್ಯವಾಗಿ ಈ ಹಬ್ಬಕ್ಕೆ ಊರಿಗೆ ತೆರಳುತ್ತಾರೆ. ಕೊಡವರ‌ ಕುಟುಂಬದ ಐನ್ ಮನೆಗಳಲ್ಲಿ ಕುಟುಂಬಸ್ಥರು ಸೇರಿ ಕದಿರು ಕಟ್ಟಿದ  ನಂತರ ಕದಿರನ್ನು ಅಂಗಳದ  ಮೇಟೀಕಂಬಕ್ಕೆ, ಮನೆಯ ಕಿಟಿಕಿ ಬಾಗಿಲಿಗೆ,  ಕಣಜಕ್ಕೆ, ಮನೆಯ ದೈನಂದಿನ ಉಪಯೋಗದ ವಸ್ತುಗಳಿಗೆ, ಅಶ್ವತದೆಲೆಯಲ್ಲಿ ಸುತ್ತಿನಾರಿನಿಂದ ‌ಕಟ್ಟುತ್ತಾ “ಒಲಿದು ಬಾ..ದೇವರೇ ಎಂದು ಪ್ರಾರ್ಥಿಸುತ್ತಾರೆ.

      ‌ಆಚರಣೆ =   ಒಮ್ಮೆ ಇಗ್ಗು  ತಪ್ಪನು ಕೊಡಗಿನಲ್ಲಿ ಸುಗ್ಗಿಯ ಸಂಭ್ರಮವನ್ನು ಆಚರಿಸಲು ಯಾವುದೇ ಆಚರಣೆಗಳು ಇಲ್ಲದಾಗ ಕೇರಳದಲ್ಲಿ ನೆಲಸಿರುವ ತನ್ನ ಸಹೋದರ ಚಂದ್ರು ಕೋಲಪ್ಪನ  ಬಳಿ ತೆರಳಿ ಸುಗ್ಗಿ ಆಚರಣೆಗೆ ಒಂದು ಮೂರ್ತ, ವಿದಿ‌ವಿಧಾನಗಳು ಆಗಬೇಕೆಂದು ಕೇಳಿಕೊಂಡಾಗ ” ಓಣ ತಮ್ಮೆ” ಎಂಬ ಓಂ  ಹಬ್ಬದ  ದೇಯನ್ನು ಕರೆದು ಓಣಂ‌ಹಬ್ಬ‌ ಆಚರಿಸಿ ತೊಂಬತ್ತು ದಿನಗಳ‌ನಂತರ ಮೊದಲ ರೋಹಿಣಿ ನಕ್ಷತ್ರದ ಹುಣ್ಣುಮೆಯಂದು ಸುಗ್ಗಿ ಹಬ್ಬವನ್ನು ಆಚರಿಸಲು‌ ನಿಚ್ಚಯಿಸುತ್ತಾರೆ   ಅಂದಿನಿಂದಲೂ  ಇಗ್ಗೂ ತಪ್ಪನಿಂದಲೇ  ಈ ಹಬ್ಬ ಪ್ರಾರಂಭವಾಯಿತು ಎಂಬ ನಂಬಿಕೆ ಇದೆ.
       ಹುತ್ತರಿಯಂದು “ನೆರೆ ಕಟ್ಟುವೋ” ಎಂಬ‌ ಕ್ರಮವಿದ್ದು ಆಲ, ಅಶ್ವತ್ಥ ಮತ್ತು ಕೇಕು ಮರದ ಎಲೆಗಳನ್ನು ‌ಸೇರಿಸಿ ಸಿದ್ಧ ಪಡಿಸಿಕೊಂಡು ಕದಿರು ಕಟ್ಟುವ ಗದ್ದೆಯಲ್ಲಿ ಭತ್ತದ‌ ತೆನೆಗಳಿಗೆ‌  ಹೂವಿನಿಂದ  ಅಲಂಕರಿಸಲಾಗುತ್ತದೆ. ದೇವರ ಮುಂದೆ ಚಾಪೆಹಾಕಿ‌ ಮೂರುಕಾಲಿನ ಮಣೆಇಟ್ಟು ತಾವ್ರದ ಬೋಗುಣಿಯಲ್ಲಿ ಅಕ್ಕಿ ತುಂಬಿಸಿ ಅದರ ಮೇಲೆ ಕಳಶವಿಟ್ಟು ಹಣತೆ ಹಚ್ಚಿ ಪಕ್ಕದಲ್ಲಿ ವೀಳ್ಯ ದೆಲೆ ಅಡಿಕೆಯಿಟ್ಟು‌ ಶ್ರಂಗರಿಸಿ ಹೂವಿನ ಮಾಲೆಹಾಕಿ ಅಲಂಕರಿಸಿದ  ಬಿದಿರಿನ ಕೋಲನ್ನು ದೇವರ ಎದುರಿಗೆ ಇಟ್ಟು ಅಡ್ಡ ಕತ್ತರಿಸಿದ  ಸೌತೆಕಾಯಿಯನ್ನು  ಅಕ್ಕಿ ಹಿಟ್ಟನಲ್ಲಿ  ಅದ್ದಿ ಕುಡಗೋಲು, ಸೇರು, ಕುಡಿಕೆ ಮನೆಯ ಕಿಟಕಿ ಬಾಗಿಲಿಗೆ ಅದರ ಮುದ್ರೆಯನ್ನು ಒತ್ತಿ. ಮನೆಯ ಹಿರಿಯ ‌ಕಿರಿಯರೆಲ್ಲಾ ಸೇರಿ ತೂಗುದೀಪದೆದುರು  ಪ್ರಾರ್ಥಿಸುತ್ತಾರೆ.  ಹಾಲು ಜೇನು ಹಾಕಿ ಅಕ್ಕಿ‌ಹಿಟ್ಟಿನಿಂದ ಮಾಡಿದ ವಿಶೇಷ ತಿಂಡಿ ಹಾಗೂ ಎಳ್ಳು, ಶುಂಠಿ, ತೆಂಗಿನ ತುರಿ,ಬಾಳೆ ಹಣ್ಣು, ಜೇನಿನೊಂದಿಗೆ ಕಲಸಿ ಸಣ್ಣ ಸಣ್ಣ ಉಂಡೆಗಳನ್ನಾಗಿ‌ ಮಾಡಿ ಹೊಸ ಚಾಪೆ ಮೇಲೆ ‌ಹಾಸಿದ ಅಶ್ವತ್ಥ ದೆಲೆಗಳ‌ ಮೇಲೆ ಇಟ್ಟು ನಂತರ ದಿವಂಗತ ಹಿರಿಯರನ್ನು ನೆನಪಿಸಿ ಕೊಂಡು‌ ಮಿಸಲು‌‌ ಇಡುತ್ತಾರೆ. ಬೆಲ್ಲಾ ಅಕ್ಕಿ ‌ಸೇರಿಸಿ  ‌ಪಾಯಸ‌ ಮಾಡುವಾಗ ಹೊಸ ಅಕ್ಕಿ ‌ಸೇರಿಸುವುದು ಸಂಪ್ರದಾಯ. ಎಲ್ಲರೂ ಒಟ್ಟಾಗಿ ಕುಳಿತು ಬೇಯಿಸಿದ ಗೆಣಸ್ಸಿಗೆ‌ ಜೇನು‌ಸೇರಿಸಿ ಅದ್ದಿತಿನ್ನುವ ಕ್ರಮವಿದೆ.

    ಹುತ್ತರಿ ಹಬ್ಬವಾದ ಮೇಲೆ ‌ಸಂಪ್ರದಾಯಕ‌ ಉಡುಗೆ ಧರಿಸಿ ವ್ರತ್ತಾಕಾರದಲ್ಲಿ‌ ಕುಣಿಯುತ್ತಾ‌ ಹಾಡುತ್ತಾ ವಿಶಾಲ ಮೈದಾನದಲ್ಲಿ ಕೋಲಾಟ, ಸುಗ್ಗಿ ಕುಣಿತ ಕುಣಿಯುತ್ತಾರೆ. ಮಹಿಳೆಯರು ಸಂಪ್ರದಾಯಿಕಾ ‌ಮಹಿಳಾ ನೃತ್ಯ (ಉಮ್ಮತ್ತಾಟ್) ದಲ್ಲಿ ಭಾಗವಹಿಸುತ್ತಾರೆ ಊರಿನವರೆಲ್ಲಾ ಒಟ್ಟಿಗೆ ಸೇರಿ ವಿವಿಧ ಕ್ರೀಡೆ, ಸಾಂಸ್ಕೃತಿಕ ‌ಕಾರ್ಯ ಕ್ರಮಗಳು  ನಡೆಸುವರು. ಈ ಹುತ್ತರಿ ಹಬ್ಬ ಎಷ್ಟು ‌ಪ್ರಖ್ಯಾತವೆಂದರೆ ಪಂಜೆ ಮಂಗೇಶರಾಯರು ಹುತ್ತರಿ ಹಾಡು‌ ಎಂಬ‌ ಪದ್ಯ ರಚಿಸಿ ‌ಕೊಡಗಿನ ಸೌಂದರ್ಯ ಹಾಗೂ ಹಬ್ಬ ಆಚರಣೆಯನ್ನು ವಿವರಿಸಿದ್ದಾರೆ.

Leave a Reply

Your email address will not be published. Required fields are marked *