ಕೆರೆಗಳ ಕಂಡಿರಾ : heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ
ಒಂದೆಡೆ ದಿನದಿಂದ ದಿನಕ್ಕೆ ಬಿಸಿಲ ಧಗೆ ಏರುತ್ತಿದೆ. ಇನ್ನೊಂದೆಡೆ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ನೀರಿನ ಮೂಲಗಳು ಬತ್ತುತ್ತಿದ್ದು ಅಂತರ್ಜಲ ಮಟ್ಟ ಕುಸಿಯುತ್ತಿದೆ. ಜಲಸಮೃದ್ಧಿಯ ಸಂಕೇತವಾಗಿದ್ದ ಬೇಸಿಗೆಯ ಜಲಪಾತ್ರೆಗಳೆಂದು ಕರೆಯಲ್ಪಡುವ ಕೆರೆಗಳ ಒಡಲು ಒಣಗುತ್ತಿದೆ. ಅನೇಕ ಕೆರೆಗಳು ಸದ್ದಿಲ್ಲದೆ ಕಣ್ಮುಚ್ಚಿವೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ ಹೊಸ ಕೆರೆಗಳು ಕಣ್ಮರೆಯಾಗಬಹುದು. ಕೆರೆಗಳ ಅವನತಿ ಗ್ರಾಮೀಣ ಬದುಕಿಗೊಂದು ಕರಾಳ ಕರಗಂಟೆ.
ಸದ್ಯ ಕೆರೆಗಳು ಅಪಾಯದಂಚಿನಲ್ಲಿವೆ. ಕೇವಲ ಕರ್ನಾಟಕ ರಾಜ್ಯವೊಂದರಲ್ಲಿ ವರ್ಷವೊಂದಕ್ಕೆ 30 ರಿಂದ 40 ಕೆರೆಗಳು ಕಣ್ಮರೆಯಾಗುತ್ತಿವೆ ಎನ್ನುವುದನ್ನು ನೇಚರ್ ರೀಸಚ ಸೆಂಟರ್ನ ವರದಿ ತಿಳಿಸುತ್ತದೆ. ಎಲ್ಲಿ ಹೋದವು ಕೆರೆಗಳು?, ಕೆರೆ, ಸರೋವರ, ಅಳಿವೆ, ಮದಕಗಳು ಯಾಕೆ ಮಾಯವಾಗುತ್ತಿದೆ?, ಕೆರೆಗಳಿಗೆ ಒದಗಿದ ಸಂಕಷ್ಟವೇನು!?. ಅದರ ಪರಿಹಾರಕ್ಕೆ ಆಗಬೇಕಾದ ಕ್ರಮಗಳು, ತಜ್ಞರ ಸಲಹೆ.., ಒಟ್ಟಾರೆ ಕೆರೆಗಳ ಉಳಿವಿಗೆ ಗಮನಹರಿಸಬೇಕಾದ ಅನಿವಾರ್ಯ ಬಹಳಷ್ಟಿದೆ. ನಿಸರ್ಗದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಪ್ರಕೃತಿಯಲ್ಲಿ ವಿಕೃತಿಯನ್ನು ಕಾಣದಿರುವುದೇ ನಮ್ಮ ಸಂಸ್ಕೃತಿ. ಯಾವುದನ್ನೇ ಆಗಲಿ ಸೃಷ್ಟಿಸುವುದು ಕಷ್ಟ, ಹಾಳು ಮಾಡುವುದು ಸುಲಭ. ಆದರೆ ಭವಿಷ್ಯದ ಆಪತ್ತುಗಳಿಗೆ ವರ್ತಮಾನದಲ್ಲೆ ಯಾಕೆ ಯೋಚಿಸಬಾರದು.

ಒಂದು ಕಾಲದಲ್ಲಿ ನಮ್ಮ ನಾಡು ಕೆರೆಗಳ ತಾಣವಾಗಿತ್ತು. ಪ್ರತಿಯೊಂದು ಊರಿನಲ್ಲಿ ತುಂಬಿ ತುಳುಕುವ ಕೆರೆಗಳಲ್ಲಿ ಕಮಲದ ಹೂ ಅರಳಿ ಚೆಲುವು ಸೂಸುತ್ತಿದ್ದವು. ಕೆರೆಗಳಲ್ಲಿ ವೈವಿಧ್ಯಮಯ ಜೀವರಾಶಿಗಳಿಗೆ ಆಶ್ರಯವಿತ್ತು. ಸಸ್ಯರಾಶಿಗಳು ನಳನಳಿಸುತ್ತಿದ್ದ ಕೆರೆಗಳು ಮಾಯವಾಗಿದೆ. ಮೂರು ಬೆಳೆಗೆ ಆಸರೆಯಾಗಿದ್ದ ಕೆರೆ ಕಾಲಕಾಲಕ್ಕೆ ಹೂಳು ತೆಗೆದು ನಿರ್ವಹಣೆ ಮಾಡದೆ ಸುತ್ತಮುತ್ತ ಪರಿಸರಗಳಲ್ಲಿ ಅಂತರ್ಜಲದ ಕೊರತೆಯಿಂದ ನೀರಿನ ಸಮಸ್ಯೆಯಲ್ಲಿ ಪರಿಸ್ಥಿತಿ ಗಂಭೀರಗೊಳ್ಳುವ ಮುನ್ನ ಕಣ್ತೆರೆಯಬೇಕಾಗಿದೆ. ನಿರ್ಲಕ್ಷ್ಯದಿಂದ ನೂರಾರು ವರ್ಷಗಳ ಇತಿಹಾಸವಿರುವ ಕೆರೆಗಳು ಅಸ್ತಿತ್ವ ಕಳೆದುಕೊಂಡು ವೈವಿಧ್ಯಮಯ ಜೀವರಾಶಿಗೆ ತಾಣವಾಗುವ ಬದಲು ದುರ್ವಾಸನೆ ಬೀರುತ್ತಿದೆ. ನಮ್ಮ ಪೂರ್ವಜರು ಯಾವ ಉದ್ದೇಶದಿಂದ ಕೆರೆಗಳನ್ನು ಕಟ್ಟಿಸಿದ್ದಾರೋ ಆ ಉದ್ದೇಶ ಈಗ ಸಫಲವಾಗದಿರುವುದು ವಿಷಾದನೀಯ. ಒಂದೆಡೆ ಕೆರೆಗಳು ಕಣ್ಮರೆಯಾಗುತ್ತಿದ್ದರೆ ಮತ್ತೊಂದೆಡೆ ನದಿ-ಕಾಲುವೆಗಳು ಒತ್ತುವರಿಗೆ ಬಲಿಯಾಗಿ ತಮ್ಮ ದಿಕ್ಕುದೆಸೆಯನ್ನು ಬದಲಿಸಿಕೊಂಡು ಕಿರಿದಾಗಿದೆ. ಜಲಮೂಲವಾಗಿದ್ದ ಕೆರೆಗಳು ಭಾಗಶಃ ಮಾಯವಾಗಿದೆ. ರಾಜ್ಯಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಹಿತಿ ಪ್ರಕಾರ ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಕೆರೆಗಳು ಅಂತರ್ಜಲ ವೃದ್ಧಿಗೆ ಸಹಕಾರಿ, ಕೆರೆ ಉಳಿಸಿ ಅಂತರ್ಜಲ ಹೆಚ್ಚಿಸೋಣ ದೇಶದಾದ್ಯಂತ ಕೆರೆ ಉಳಿವು ಜನಾಂದೋಲನದ ಅಗತ್ಯವಿದೆ.

ಕೊಳವೆ ಬಾವಿಗಳ ಸಂಖ್ಯೆ ವಿಪರೀತ ಹೆಚ್ಚು ಅಂತರ್ಜಲಮಟ್ಟ ಕುಸಿದಿರುವುದರಿಂದ ಕಂಗಾಲಾಗಿರುವ ರೈತರು ಈಗ ಮತ್ತೆ ಸಾಂಪ್ರದಾಯಿಕ ತೆರೆದ ಬಾವಿ-ಕೆರೆಗಳತ್ತ ಮುಖ ಮಾಡುತ್ತಿದ್ದಾರೆ. ಜಲಮಂಡಳಿ ಅಧಿಕಾರಿಗಳೊಂದಿಗೆ ಭೂಗರ್ಭ ವಿಜ್ಞಾನ ಇಲಾಖೆ ಅಧಿಕಾರಿಗಳು ಅಧ್ಯಯನ ಮಾಡಿ ಕೊಳವೆ ಭಾವಿಗೆ ಅನುಮತಿ ನೀಡುವುದು ಸೂಕ್ತ. ಕೊಳವೆ ಬಾವಿ ತೋಡಿಸುವ ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಹಿಂದು-ಮುಂದಿನ ಆಲೋಚನೆ ಇಲ್ಲದೆ, ಭವಿಷ್ಯದ ಚಿಂತೆ, ವಿವೇಚನೆ ಇಲ್ಲದೆ ಕೊಳವೆ ಬಾವಿ ತೋಡಿ ಅಂತರ್ಜಲವನ್ನು ಮೇಲೆತ್ತುವುದಕ್ಕೆ ಶಿಕ್ಷೆ ನೀಡುವ ಆಥವಾ ಅಂತರ್ಜಲ ರಕ್ಷಿಸುವ ಹೊಣೆ ಕರ್ನಾಟಕ ಅಂತರ್ಜಲ ಪ್ರಾಧಿಕಾರಕ್ಕೆ ಅಧಿಕಾರವಿದೆ. ಬಾವಿಯಲ್ಲಿ ನೀರಿಲ್ಲಾ ನೀರಿನ ಸಮಸ್ಯೆ ಎಂದಾಕ್ಷಣ ಬೋರ್ ವೆಲ್ ಕೊರೆಸಿ ಬಿಡೋಣ ಎಂಬ ಮನೋಭಾವನೆ ಜನಸಾಮಾನ್ಯರಲ್ಲಿ ಬಂದಿದೆ. 2-3 ವರ್ಷಗಳಲ್ಲಿ ಎರಡರಲ್ಲೂ ನೀರು ಅಷ್ಟಕಷ್ಟೆ. ಅಂತರ್ಜಲ ಹೆಚ್ಚಿಸಲು ಕೊಳವೆ ಬಾವಿಗಳನ್ನು ಕಡಿಮೆಗೊಳಿಸಿ ಭೂ ಒಡಲನ್ನು ಮತ್ತೆ ತುಂಬಿಸಿಕೊಳ್ಳುವ ಅಗತ್ಯವಿದೆ. ಕೆರೆಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದನ್ನು ಯೋಚಿಸುವ ಬದಲು ತಾತ್ಕಾಲಿಕ ಪರಿಹಾರ ಕಂಡುಕೊಳ್ಳುತ್ತೇವೆ ಹೊರತು ಶಾಶ್ವತ ಪರಿಹಾರದ ಬಗ್ಗೆ ಹೆಚ್ಚು ಚಿಂತನೆ ಮಾಡದಿರುವುದರ ಪರಿಣಾಮ ಸಮಸ್ಯೆ ಬಿಗಡಾಯಿಸಿದೆ.

ಸಾವಿರ ಕೆರೆಗಳ ನಗರ ಎಂದು ಕರೆಸಿಕೊಂಡ ಬೆಂಗಳೂರಿನಲ್ಲಿ ಭೂಗಳ್ಳರದಾಹಕ್ಕೆ ನೂರಾರು ಕೆರೆ ಬಲಿಯಾಗಿ ಕೆರೆಗಳು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಇದ್ದ ಕೆರೆಗಳ ನೀರಿನ ಆಮ್ಲೀಯತೆಯು ಹೆಚ್ಚಾಗುತ್ತಿದೆ. ಬೆಳೆದಿರುವ ಕಳೆ ತುಂಬಿರುವ ಕೊಳೆ ಚರಂಡಿ ನೀರಿನಿಂದ ದುರ್ನಾತ ಬೀರುತ್ತಾ ನಾಶದ ಅಂಚಿನಲ್ಲಿದೆ. ಬೆಂಗಳೂರು ಕೆರೆ 2018 ಮಾರ್ಚ್ 1ರಂದು ಬೆಂಗಳೂರಿನ ಎಲ್ಲ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಹೊಣೆಯನ್ನು ಸಣ್ಣ ನೀರಾವರಿ ಯೋಜನೆ ಬರಲಿದೆ ಎಂದು ಸರ್ಕಾರದ ಆದೇಶ ಬಂದಿದೆ. ಆದರೆ ಸರ್ಕಾರದ ದಾಖಲೆಗಳಲ್ಲಿ ಇದ್ದ ಕೆರೆಗಳು ಮಾಯವಾಗಿದೆ. ಅವಸಾನದತ್ತ ವಾಲುತ್ತಿದೆ ಕೆರೆಗಳು, ಭವಿಷ್ಯದ ದೃಷ್ಟಿಯಿಂದ ಈಗಿರುವ ಕೆರೆಗಳನ್ನು ಸಂರಕ್ಷಿಸಿ ಉಳಿಸಿಕೊಳ್ಳುವ ಅಗತ್ಯವಿದೆ. ಜೀವಜಲ ಬರಿದಾಗಿ ಬದುಕು ದುಸ್ತರವಾಗುವ ಮೊದಲು ಜೀವ ವೈವಿಧ್ಯದ ದೃಷ್ಟಿಯಿಂದ ಕೆರೆ ಉಳಿವಿಗೆ ಅಪಾರ ಮನ್ನಣೆ ನೀಡಲೇಬೇಕು.
ಅಳಿವಿನಂಚಿನಲ್ಲಿರುವ ಕೆರೆಗಳನ್ನು ಮೂಲ ಸ್ವರೂಪ ಪಡೆದು ಜಲಸಂರಕ್ಷಣೆ ಮಾಡಲು ಸರ್ಕಾರದೊಂದಿಗೆ ಸ್ಥಳೀಯರು, ಪರಿಸರ ಪ್ರೇಮಿಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಅವರವರ ಕೆರೆಗಳ ಹೂಳೆತ್ತಲು ಸರ್ಕಾರದ ಹಣ ಕಾಯಬೇಕಾಗಿಲ್ಲ. ಒಂದಿಬ್ಬರು ನಾಲ್ಕು ಹೆಜ್ಜೆ ಮುಂದಿಟ್ಟರೆ ಹಿಂದೆ ಸಾವಿರಾರು ಜನ ಬಂದೆ ಬರುತ್ತಾರೆ. ಕರ್ನಾಟಕ ರಾಜ್ಯ ಕೆರೆ ಸಂರಕ್ಷಣೆ ಬಗ್ಗೆ ಹೈಕೊರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲು ಕರ್ನಾಟಕ ರಾಜ್ಯ ಕಾನೂನು ಸೇವಾಪ್ರಾಧಿಕಾರ ಚಿಂತನೆ ನಡೆಸಿದೆ. ಕಾನೂನು, ಕಾಯಿದೆಯಂತೆ ಕೆರೆಗಳ ಸಂರಕ್ಷಣೆ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಪ್ರಾಧಿಕಾರ ಮಾಹಿತಿ ಕಲೆ ಹಾಕಲಿದ್ದು ಕಾಯಿದೆಯ ಕಟ್ಟುನಿಟ್ಟಿನ ಜಾರಿಗೆ ಸರ್ಕಾರಕ್ಕೆ ಹೈಕೋರ್ಟ್ನಿಂದ ನಿರ್ದೇಶನ ಕೊಡಿಸಲಾಗುವುದು. ಕೆಲವೆಡೆ ಅರಣ್ಯ ಮತ್ತು ಪರಿಸರ ಇಲಾಖೆ ಅಡಿಯಲ್ಲಿ ಬತ್ತಿಹೋದ ಕೆರೆಗಳ ಪುನಶ್ಚೇತನ ಕಾರ್ಯ ನಡೆಯುತ್ತಿದೆ. ಕೆರೆ ಸಂರಕ್ಷಣೆ ಮತ್ತು ಅಭಿವೃಧ್ಧಿ ಪ್ರಾಧಿಕಾರದ ಅಧಿನಿಯಮದಂತೆ ಕರ್ನಾಟಕ ಸರ್ಕಾರ ರಾಜ್ಯ ಮತ್ತು ಜಿಲ್ಲೆ ಹಾಗೂ ಹೋಬಳಿ ಮಟ್ಟದಲ್ಲಿ ಕೆರೆ ಸಂರಕ್ಷಣೆ ಮಾಡಲಾಗುವುದು. ಕೆರೆ ಒತ್ತುವರಿ ಹಾಗೂ ಕೆರೆಯ ಸ್ವರೂಪ ಹಾಳಾದರೂ ಅಷ್ಟೆ ಅಲ್ಲದೆ ಕೆರೆಯನ್ನು ಖಾಸಗಿ ವ್ಯಕ್ತಿಗಳು ಹಾಳು ಮಾಡಿದರೂ ಕಾನೂನು ಅಪರಾಧ. ಅಂತವರ ವಿರುದ್ಧ ಸಾರ್ವಜನಿಕರು ದೂರು ನೀಡಬಹುದು. ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ತಮ್ಮ ಊರಿನ ಕೆರೆ ರಕ್ಷಣೆಗೆ ಸಹಕಾರ ಕೋರಿ ಅರ್ಜಿ ಸಲ್ಲಿಸಬಹುದು.
ಬೆಂಗಳೂರಿನಲ್ಲಿ 2014ರಲ್ಲಿ 183 ಕೆರೆಗಳಿದ್ದು, 2019ರಲ್ಲಿ 168 ಕೆರೆಗಳಿವೆ ಎಂದು ಬಿಬಿಎಂಪಿ ಹೇಳುತ್ತದೆ. ಹಾಗಾದರೆ ಕಳೆದ ನಾಲ್ಕೂವರೆ ವರ್ಷದಲ್ಲಿ 15 ಕೆರೆಗಳು ಎಲ್ಲಿ ಕಣ್ಮರೆಯಾದವು ಎಂದು ಹೈಕೋರ್ಟ್ ಪ್ರಶ್ನಿಸಿದೆ. ಕೇಂದ್ರ ಸರ್ಕಾರದ ನೀರಾ ಸಂಸ್ಥೆಗಳಿಂದ ಕೆರೆಗಳ ಆಡಿಟ್ ಮಾಡಿಸಬೇಕಾಗುತ್ತದೆ ಎಂದು ಉಚ್ಚನ್ಯಾಯಾಲಯ ಇಂಗಿತ ವ್ಯಕ್ತಪಡಿಸಿದೆ. ಹಾಗಾದರೆ ಯೋಚಿಸಿ ಕೆರೆಗಳ ಕಂಡಿರಾ!? ಎಂಬ ಪ್ರಶ್ನೆ ಬಂದೇ ಬರುತ್ತದೆ ತಾನೆ.
ಸುತ್ತಮುತ್ತಲಿನ ಪರಿಸರಕ್ಕೆ ಜನ-ಜಾನುವಾರುಗಳಿಗೆ ಸೆಲೆಯಾಗಿ ಅಂತರ್ಜಲ ವೃದ್ಧಿಗೆ ಕಾರಣವಾಗುತ್ತಿದ್ದ ಕೆರೆ ಬತ್ತಿಹೋಗಿ ಆಟದ ಮೈದಾನವಾಗಿದೆ. ಹಕ್ಕಿಗಳ ನೆಚ್ಚಿನ ತಾಣಗಿದ್ದ ಕೆರೆಗಳಲ್ಲಿ ನೀರಿಲ್ಲದೆ ಪಕ್ಷಿಗಳು ವಲಸೆ ಬರುವುದಿಲ್ಲ. ಕರೆ ಸಂರಕ್ಷಣೆ ವಿಚಾರದಲ್ಲಿ ಇದೇ ರೀತಿ ನಿರ್ಲಕ್ಷ್ಯ ಮುಂದುವರಿದರೆ ದೇಶದ ಉದ್ದಗಲಕ್ಕೂ ಹನಿನೀರಿಲ್ಲದೆ ಕಂಗೆಡುವ ಜನಸಂಖ್ಯೆ ಏರಬಹುದು. ಕೆರೆಗಳು ಮೈದುಂಬಿದ ಕಾಲ ಒಂದಿತ್ತು. ಕೃಷಿ ಕುಡಿಯುವ ನೀರಿಗೆ ಆಧಾರವಾಗಿದ್ದ ಕೆರೆಯಲ್ಲೀಗ ನೀರು ಇಲ್ಲ ಕೆಲವೆಡೆ ಕೆರೆಯೇ ಮಾಯವಾಗಿದೆ.
ಸ್ವಾತಂತ್ರ್ಯ ಪೂರ್ವಕಾಲದಿಂದಲೂ ರಾಜ, ಮಹಾರಾಜರ ಕಾಲದಲ್ಲೂ ಕೆರೆಗಳಿಗೆ ಹೆಚ್ಚಿನ ಮಹತ್ವವಿತ್ತು. ಕೆರೆದಂಡೆ, ಕೆರೆಯ ಪರಿಸರಗಳು ಕಥೆಗಳಲ್ಲಿ ಜನಪದ ಹಾಡುಗಳಲ್ಲಿ ದಾಖಲಾಗುತ್ತಿತ್ತು. ಆದರೆ ಇಂದು ಕೆರೆ ಶಬ್ದಗಳೇ ಕೇಳ ಸಿಗುತ್ತಿಲ್ಲ. ಕೆರೆ ಮೇಲ್ನೋಟಕ್ಕೆ ಕೃಷಿಸಂಬಂಧ ಜನರ ಹಿತ ಕಾಪಾಡಲು ಕೆರೆ ಪ್ರಮುಖ ಸ್ಥಾನ ವಹಿಸಿದ ನಿದರ್ಶನಗಳಿವೆ. ಕೆರೆಯ ನೀರಿಗಾಗಿ ಜಗಳ ಹೋರಾಟ ನಡೆದದ್ದು ಇದೆ. ಆದರೆ ಇಂದು ಕೆರೆಗಳನ್ನೇ ಮರೆತು ಬಿಟ್ಟೇವಲ್ಲ. ಸಾಂಪ್ರದಾಯಿಕ ಜಲ ಮೂಲವನ್ನು ನಾಶಪಡಿಸುತ್ತಾ ಪರಿಸ್ಥಿತಿ ಗಂಭೀರಗೊಳ್ಳುವ ಮುನ್ನ ಕಣ್ತೆರೆಯಬೇಕಾಗಿದೆ. ಸತತ ಬರ ಅಂತರ್ಜಲ ಕುಸಿತದಿಂದ ಕುಡಿಯುವ ನೀರಿಗೂ ತತ್ವಾರ ಪಡುವ ಶಾಶ್ವತ ಪರಿಹಾರಕ್ಕೆ ಕೆರೆಗಳಿಗೆ ಮರುಜೀವ ತುಂಬಲೇಬೇಕು. ಬರಗಾಲದ ಕರಾಳ ಛಾಯೆಯಲ್ಲಿ ಸಾಕಷ್ಟು ಜಲ ಮೂಲದ ತಾಣ ಬತ್ತಿ, ಜಗತ್ತಿನಲ್ಲಿ ಜಲಕ್ಷಾಮ ತಲೆದೂರುವುದೆಂದು ವಿಜ್ಞಾನಿಗಳು ಈಗಾಗಲೇ ಎಚ್ಚರಿಸಿದ್ದಾರೆ. ಜಲಮಾಲಿನ್ಯವನ್ನು ತಡೆಯುವ ನಿಯಂತ್ರಿಸುವ ಉದ್ದೇಶಕ್ಕಾಗಿ ಜಲಕಾಯಿದೆಯನ್ನು 1947ರಲ್ಲಿ ಜಾರಿಗೊಳಿಸಲಾಗಿದೆ. ಕೆರೆ ಉಳಿದರೆ ಮಾತ್ರ ಹಳ್ಳಿಗರ ಬದುಕು ಸುಂದರ ಎಂದು ಮನಗಂಡು ಧರ್ಮಸ್ಥಳದ ದೇವಳದ ವತಿಯಿಂದ ಬರಪೀಡಿತ ಪ್ರದೇಶಗಳ ಕರೆಗಳನ್ನು ಪುನರ್ ನಿರ್ಮಿಸುವ ಕಾರ್ಯಕ್ಕೆ ಉತ್ತೇಜನ ನೀಡಿದ್ದಾರೆ.
ಕೆರೆಯನ್ನು ಅಭಿವೃದ್ಧಿ ಪಡಿಸಿದರೆ ಸುತ್ತಮುತ್ತಲಿನ ಭೂ ವಾತಾವರಣದ ಮೇಲೂ ಪರಿಣಾಮ ಬೀರಲಿದೆ. ಭತ್ತ ಪ್ರಮುಖ ಬೆಳೆಯಾಗಿದ್ದ ಕಾಲದಲ್ಲಿ ಕೆರೆ ತುಂಬಾ ನೀರು ತುಂಬಿರುತ್ತಿತ್ತು. ದೇಶದಲ್ಲೇ ಏಕದಳ ಹಾಗೂ ಉತ್ಪಾದನೆಯ ವಿಶೇಷ ಸಾಧನೆಗಾಗಿ ಕರ್ನಾಟಕಕ್ಕೆ ‘ಕೃಷಿಕರ್ಮಿಣಿ ಪ್ರಶಸ್ತಿ’ ಲಭಿಸಿದೆ. ಹಲವು ವರ್ಷಗಳ ಹಿಂದೆ ಕೃಷಿಕರು ಎರಡನೇ ಬೆಳೆಯನ್ನು ಬೆಳೆಯುತ್ತಿದ್ದರು. ಆಗ ಗದ್ದೆಗಳಿಗೆ ನೀರುಣಿಸುವ ರೈತರ ಕನಸುಗಳನ್ನು ಹಸಿರಾಗಿಡುವ ಕೆರೆಗಳು ಸಮೃದ್ಧವಾಗಿ ಜಲದಾಹವನ್ನು ತಣಿಸಿಲ್ಲವೇ? ಒಂದು ಕಾಲದಲ್ಲಿ ಸುತ್ತಲೂ ಕೃಷಿ ಭೂಮಿ ನಡುವೆ ಬೃಹತ್ ಕೆರೆ ಆದರೆ ಪ್ರಸ್ತುತ ಹೀಗಿಲ್ಲ. ಗದ್ದೆಗಳು ಮಾಯವಾಗಿ ಕೆರೆಗಳು ಯಾರಿಗಾಗಿ, ಯಾಕಾಗಿ ಎಂಬ ಸ್ಥಿತಿಗೆ ಬಂದು ಮುಟ್ಟಿವೆ.