Literature (ಸಾಹಿತ್ಯ)

ಕೃತಕ ಕಾಲಿನ ಮೂಲಕ ಗೆಜ್ಜೆ ಕಟ್ಟಿ ಹೆಜ್ಜೆ ಹಾಕುವ ಯಕ್ಷ ಕಲಾವಿದ – ಮನೋಜ್ ಕುಮಾರ್ ವೇಣೂರ್ ರವರ ಯಕ್ಷ ಗೆಜ್ಜೆಗೆ ಸಲಾಂ: heggaddesamachar.com

Spread the love

ಕಲೆ ಕಲಾವಿದರ ಕಣ್ಣುಗಳಿದ್ದಂತೆ, ಕಲೆ ನಮ್ಮನ್ನು ಅರಸಿ ಬರುತ್ತದೋ ಅಥವಾ ನಾವು ಕಲೆಯನ್ನು ಅರಸಿ ಹೊರಟೆವೋ ಉತ್ತರ ಒಗಟಾಗಿ ಉಳಿಯುವುದೇನೋ! ಯಾಕಂದ್ರೆ ಒಂದು ಕಲೆ ಅದು ಯಾರೊಳಗೂ ಅಡಗಿರಬಹುದು, ಶ್ರೀಮಂತ ಬಡವ, ಅಥವಾ ಮೇಲು ಕೀಳೆಂಬ ಭೇದ ಭಾವಗಳಿಲ್ಲ…
ಒಂದು ಹವ್ಯಾಸವನ್ನು ಹೆಚ್ಚಾಗಿ ಅಭ್ಯಸಿಸಿದಂತೆ, ಅದು ಕಲೆಯಾಗಿ ಕಲಾವಿದರ ಅಂತರಂಗದೊಳಗೆ ಅಚ್ಚಳಿಯದೆ ಉಳಿದು ಬಾಳು ಬೆಳಗಲು ದಾರಿದೀಪವು ಆಗುತ್ತದೆ.
ನಾವು ಕಲೆಯಲ್ಲಿ ಕಲಾವಿದರಾಗಿ ತೊಡಗಿಸಿಕೊಳ್ಳುವುದಕ್ಕೆ ಹಲವಾರು ಅಡೆತಡೆಗಳು, ಕುಂದುಕೊರತೆಗಳು ಸವಾಲು ಎಂಬಂತೆ ಎದುರಾಗುತ್ತದೆ.
ಸವಾಲುಗಳನ್ನು ಮೆಟ್ಟಿನಿಂತು ಸಾಧನೆಯ ಹಾದಿ ಅತ್ತ ದಿಟ್ಟ ಹೆಜ್ಜೆ ಇಟ್ಟ ಕಲಾರಾಧಕರ ಕಲಾಜೀವನಕ್ಕೆ ಪ್ರೇರಕ ಶಕ್ತಿ ಇವರೇ

ಮನೋಜ್ ಕುಮಾರ್ ವೇಣೂರು”…

ಕಳೆದ ಕೆಲದಿನಗಳಿಂದ ವಾಟ್ಸಾಪ್ ಫೇಸ್ ಬುಕ್ ಗಳಲ್ಲಿ ಜನಮನಗೆದ್ದ ಕಲಾ ಕಣ್ಮಣಿ.
ಕೃತಕ ಕಾಲಿನಿಂದ ರಂಗಸ್ಥಳದಲ್ಲಿ ಹೆಜ್ಜೆ ಬೆಸೆಯುವ ಇವರು, ಸಾಮಾನ್ಯವಾಗಿ ಎಲ್ಲ ಕಡೆಯಲ್ಲಿ ಮನೆಮಾತಾಗಿದ್ದಾರೆ. ಅವರೇ ಮನೋಜ್ ವೇಣೂರು.
ಸಾಮಾನ್ಯವಾಗಿ ಕಾಲು ನೋವು ಬಂದರೆ ಓಡಾಡೋದೇ ತುಂಬಾ ಕಷ್ಟ, ಅಂತಹುದರಲ್ಲಿ ಕೃತಕ ಕಾಲು ಜೋಡಿಸಿ ಕುಣಿಯೋದು ಬಹುದೊಡ್ಡ ಸವಾಲೇ ಸರಿ.
ಚಿಕ್ಕಂದಿನಲ್ಲೇ ಯಕ್ಷ ಪ್ರೇಮಿಯಾಗಲು ಕಾರಣ ಇವರ ತಾಯಿ. ಯಾಕಂದ್ರೆ ಅವರಿಗೆ ಯಕ್ಷಗಾನ ಎಂದರೆ ಎಲ್ಲಿಲ್ಲದ ಪ್ರೀತಿ ಹಾಗಾಗಿ ಅವರಿದ್ದ ಯಕ್ಷಗಾನದೊಲವು ಇವರನ್ನು ಯಕ್ಷಗಾನ ಕ್ಷೇತ್ರಕ್ಕೆ ಬರಸೆಳೆಯಿತು.
ಶಾಲಾದಿನಗಳಲ್ಲಿ ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿದ ಇವರು, ಶಾಲೆಯಲ್ಲಿ ಯಕ್ಷಗಾನ ತರಬೇತಿ ಪಡೆಯುತ್ತಿದ್ದರು, ಶಾಲಾ ಶಿಕ್ಷಕರ ಹಾಗೂ ಯಕ್ಷಗಾನ ಗುರುಗಳ ಪ್ರೋತ್ಸಾಹದ ಪ್ರತೀಕವೇ ಇಂದು ಇವರು ಸದ್ದು ಮಾಡುತ್ತಿರುವ ಗೆಜ್ಜೆನಾದ.

ವೇಣೂರಿನ ಹವ್ಯಾಸಿ ಕಲಾ ಆರಾಧಕರಿಗೆ ವೇಣೂರಿನಲ್ಲೇ ಚಿಕ್ಕದಾದ ಬಳಗವನ್ನು ಕಟ್ಟಿಕೊಂಡು ಅಲ್ಲಿ ಯಕ್ಷಗಾನವನ್ನು ಮತ್ತಷ್ಟು ರಂಗೇರುವಂತೆ ಮಾಡಿದರು.
ಹವ್ಯಾಸಿ ಕಲಾವಿದರಾಗಿ ಯಕ್ಷಗಾನ ತಂಡಗಳೊಂದಿಗೆ ಬಣ್ಣ ಹಚ್ಚುವ ಇವರು ಸರಕಾರಿ ಕಾಲೇಜು ವೇಣೂರು ಇಲ್ಲಿ ಕಲಾವಿಭಾಗದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾರೆ.
ಚಿಕ್ಕಂದಿನಲ್ಲಿ ದೇಹದಲ್ಲಾದ ಪುಟ್ಟ ನೋವೋಂದು(ಶಸ್ತ್ರಚಿಕಿತ್ಸೆ) ವಿಧಿಯಾಟಕ್ಕೆ ಸಿಲುಕಿ ಕೃತಕ ಕಾಲು ಅಳವಡಿಕೆಗೆ ಕಾರಣವಾಯಿತು.
ಮನೆಯಲ್ಲಿ ಅರ್ಥಿಕ ಪರಿಸ್ಥಿತಿ ಸಾಧಾರಣವಾಗಿ ಇದ್ದರೂ ಮನೆಯವರ ಒಡನಾಟ ಮತ್ತು ಆರೈಕೆಯಿಂದ ಎಲ್ಲರಂತೆ ಧೈರ್ಯವಾಗಿ ಇಂದು ನಿಲ್ಲುವವರಾಗಿದ್ದಾರೆ.
ಅಸ್ಪತ್ರೆಯಲ್ಲಿ ಚಿಕಿತ್ಸೆಯ ನಿಮಿತ್ತ ದಾಖಲಾಗಿದ್ದಾಗ ಹೆಚ್ಚಾಗಿ ಯಕ್ಷಗಾನದ ತುಣುಕುಗಳನ್ನು ನೋಡುತ್ತಿದ್ದುದು ಮತ್ತು ಪ್ರೇರಕ ಆಗುವಂತಹ ವಿಷಯಗಳು, ಅಲ್ಲದೆ ಸಾಮಾನ್ಯ ಜ್ಞಾನ, ಸಾಧಕರ ಕಥೆ, ವಿಜ್ಞಾನಿಗಳ ವಿಷಯವನ್ನು ಹುಡುಕಿ ತಿಳಿಯುತ್ತಿದ್ದರಿಂದ ಆತ್ಮಸ್ಥೈರ್ಯ ತುಂಬಲು ಕಾರಣವಾಯಿತು.

ಅದರೆ ಚಿಕಿತ್ಸೆ ನಡೆದು ಒಂದು ವರುಷದಲ್ಲೇ ಯಕ್ಷಗಾನದತ್ತ ಛಲ ತೋರಿ ಪಾದಾರ್ಪಣೆ ಮಾಡಿರುವ ಇವರ ಅತ್ಮಬಲ ಎಲ್ಲರೂ ಮೆಚ್ಚುವಂತಹುದು. ಅದರೆ ಸಾಮಾನ್ಯರೇ ಕುಣಿಯುವುದು ಕಷ್ಟ ಎಂದಾಗ ಇವರು ಅವಕಾಶ ಅರಸಿ ಹೊರಟಾಗ ಹಲವಾರು ಕಡೆ ಟೀಕೆಗೆ ಗುರಿಯಾಗಿದ್ದು ಇದೆ, ಕೀಳಾಗಿ ಕಂಡವರು ಇದ್ದಾರೆ, ಆದರೆ ಇವರು ಛಲ ಬಿಡದೆ ಹೆಜ್ಜೆ ಮುಂದೆ ಇಟ್ಟರು.
ಯಕ್ಷಗಾನ ಮಾತ್ರವಲ್ಲದೆ ನಟನೆ, ನಾಟಕದಲ್ಲಿ ಮತ್ತು ಭಾಗವತಿಕೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಚಿತ್ರಕಲಾಕಾರರು ಹೌದು. ಬಿಡುವಿನ ವೇಳೆಯಲ್ಲಿ ಚಿತ್ರವನ್ನು ಬಿಡಿಸುತ್ತಾರೆ ಕ್ರಾಫ್ಟ್ ಮಾಡುತ್ತಾರೆ.
ಶಾಲಾದಿನಗಳಲ್ಲಿ ಪ್ರತಿಭಾಕಾರಂಜಿಯಲ್ಲಿ ಚಿತ್ರಕಲಾಕಾರರಾಗಿ ತಾಲೂಕು ಮಟ್ಟದಲ್ಲೂ ಭಾಗವಹಿಸಿದ ಹೆಗ್ಗಳಿಕೆ ಇವರದ್ದು.
ಯಕ್ಷರಂಗದಲ್ಲಿ ಇಲ್ಲಿವರೆಗೂ ಇಪ್ಪತ್ತೈದಕ್ಕಿಂತಲೂ ಹೆಚ್ಚು ಭಾರಿ ರಂಗಸ್ಥಳದಲ್ಲಿ ಹೆಜ್ಜೆ ಹಾಕಿದ ಇವರು, ಸುಂಕದಕಟ್ಟೆ ಮೇಳ, ಮಂಗಳಾದೇವಿ ಮೇಳ, ಕಾರ್ಕಳ ಮೇಳಗಳಲ್ಲಿ ಬಣ್ಣಹಚ್ಚಿದ್ದು ಬಪ್ಪನಾಡು ಮೇಳದಲ್ಲೂ ಹೆಜ್ಜೆ ಹಾಕಿದ್ದಾರೆ.
ಅತಿಥಿ ಕಲಾವಿದರಾಗಿ ಭಾಗವಹಿಸುವುದರಿಂದ ಹಲವಾರು ಮೇಳಗಳಲ್ಲಿ ಬಣ್ಣ ಹಚ್ಚಿ ಪರದೆಯ ಮುಂದೆ ಕಾಣಿಸಿಕೊಳ್ಳುತ್ತಾರೆ.


ವೆಂಕಟೇಶ್ ಎಂ ಶಾಲಾ ಯಕ್ಷಗಾನ ಗುರುಗಳು ಮತ್ತೇ ನಂತರದ ದಿನಗಳಲ್ಲಿ ಯಕ್ಷಗಾನ ಗುರುಗಳಾಗಿ ರಮೇಶ್ ಶೆಟ್ಟಿ ಸಮ್ಮುಖದಲ್ಲಿ ಅಭ್ಯಸಿಸುತ್ತಿರುವರು. ಅರ್ಥಗಾರಿಕೆಯಲ್ಲಿ ಪ್ರಭಾಕರ್ ಪ್ರಭು ವೇಣೂರು ಮಾರ್ಗದರ್ಶಿ(ಗುರು).
ಮೇಳಗಳಲ್ಲಿ ತಿರುಗಾಟ ಸಮಯ ಸಹಕಾರ ನೀಡುವುದು ರಮೇಶ್ ಕುಮಾರ್ ಕುಲಶೇಖರ ಹಾಗೂ ಸಹಕಲಾವಿದರು ಸಹಾಯಾರ್ಥವಾಗಿ ಯಕ್ಷಗಾನ ಅಭ್ಯಾಸಿಸಲು ಸಹಕರಿಸುತ್ತಾರೆ.
ತಂದೆಯ ಹೆಸರು ಶ್ರೀನಿವಾಸ್ ಮತ್ತು ತಾಯಿಯ ಹೆಸರು ಮಲ್ಲಿಕಾ, ಇವರ ಸುಪುತ್ರ ಮನೋಜ್ ವೇಣೂರಿನಲ್ಲಿ ವಾಸವಾಗಿದ್ದಾರೆ.

ಕಲಾವಿದರಿಗೆ ಕಲೆಯೇ ಬಹುದೊಡ್ಡ ಆಸ್ತಿ, ಕಲಾಮಾತೆಯೇ ಸಕಲೈಶ್ವರ್ಯ ಎಂದು ತಿಳಿದಾಗ, ತಮ್ಮಲ್ಲಿದ ಕುಂದು ಕೊರತೆಗಳು ಇಲ್ಲವೇ ಅಂಗವೈಕಲ್ಯತೆ ಕಾರಣವಾಗಿ ನಿಲ್ಲುವುದಿಲ್ಲ. ಉತ್ಸಾಹ ಮತ್ತು ಹುರುಪು ಬೆನ್ನು ಬಿಡದಂತಿರುವ ಛಲ ಜೊತೆಗಿದ್ದರೆ ಸವಾಲುಗಳು ಅಡೆತಡೆಗಳನ್ನು ಎಸೆದರು ನಮ್ಮ ಪಯಣ ನಿಲ್ಲದು ಎನ್ನುವುದಕ್ಕೆ ಸಾಕ್ಷಿಯೇ ಇವರು.


ನಂಬಿರುವ ದೈವ ದೇವರ ಹಾರೈಕೆ ಎಲ್ಲರ ಪ್ರೋತ್ಸಾಹ ಇಷ್ಟರ ಮಟ್ಟಕ್ಕೆ ನನ್ನನ್ನು ಬೆಳೆಸಿತು, ಎನ್ನುತ್ತಾರೆ ಮನೋಜ್ ಅವರು.

ಕಲೆ ಎಲ್ಲರೊಳಗೂ ಬರದು, ಅದು ಬಂದರೆ ಎಂತಹವರನ್ನೂ ಮೋಡಿ ಮಾಡಿಸದೆ ಬಿಡದು ಎಂಬಂತೆ ಮನೋಜ್ ನಮ್ಮೆದುರು ಗೆಜ್ಜೆ ಕಟ್ಟಿ ಕುಣಿಯುವಾಗಲೆಲ್ಲ ಅವರ ಕಲಾ ಸೇವೆ ಇನ್ನೂ ಅಘಾಧವಾಗಿ ಹೊರಹೊಮ್ಮಲಿ ಎನ್ನುವ ಆಶಾಭಾವ ಮೂಡುತ್ತದೆ. ಅಂತೆಯೇ ಅವರ ಕಲಾ ಸೇವೆ ಹೀಗೆ ಸಾಗಲಿ, ಆರೋಗ್ಯದ ಜೊತೆಗೆ ಕಲಾ ಅಂತಸ್ತನ್ನು ಅವರಿಗೆ ಆ ಭಗವಂತ ನೀಡಲಿ ಎನ್ನುವುದು ನಮ್ಮ ಆಶಯ…

ರಿ: ಚೈತ್ರ ವರ್ಕಾಡಿ
ಹೆಗ್ಗದ್ದೆ ಸಮಾಚಾರ್.ಕಾಮ್ ಬೆಂಗಳೂರು

Leave a Reply

Your email address will not be published. Required fields are marked *