Literature (ಸಾಹಿತ್ಯ)

“ಕಾರಹುಣ್ಣಿಮೆಗೆ ಕೊರೊನಾ ಕರಿನೆರಳು” : heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ

ಹಳ್ಳಿ ರೈತರ ವಿಶೇಷ ಹಬ್ಬ ಕಾರಹುಣ್ಣಿಮೆ. ಕೃಷಿಕರು,ಜನಪದರು ಆಚರಿಸುವ ಅದರಲ್ಲೂ ಉತ್ತರ ಕರ್ನಾಟಕದ ಭಾಗಗಳಲ್ಲಿ ನಡೆವ ವಿವಿಧ ಆಚರಣೆ, ಉತ್ಸವ, ಜನಪ್ರಿಯಹಬ್ಬ ಹರಿದಿನಗಳಲ್ಲಿ ಒಂದಾಗಿರುವ ಗ್ರಾಮೀಣ ಸೊಗಡಿನ ಕಾರ ಹುಣ್ಣಿಮೆ ಬಹು ಸಂಭ್ರಮದ ಹಬ್ಬ. ಆದರೆ ಈ ವರ್ಷ ಕಾರ ಹುಣ್ಣಿಮೆಗೆ ಕೊರೊನಾ ಕರಿಛಾಯೆ ಆವರಿಸಿದೆ. ಗ್ರಾಮೀಣ ಜನ ಜೀವನದಲ್ಲಿ ಆರಾಧನೆ ಹಾಗೂ ಮನರಂಜನೆಯ ಹಿನ್ನೆಲೆಯಲ್ಲಿ ಜನಮನ ತಣ್ಣಿಸುವ ಬದುಕಿನ ಅವಿಭಾಜ್ಯ ಅಂಗವಾಗಿ ಅನೇಕ ಹಬ್ಬ ಹರಿದಿನಗಳು ರೂಢಿಯಲ್ಲಿರುವಂತೆ ನಂಬಿಕೆಯ ತಳಹದಿಯ ಮೇಲೆ ನೆಡೆಯುತ್ತಿರುವ ದೈವಿಕ ಹಿನ್ನೆಲೆ ಯಿಂದ ‌ನಡೆಯಲ್ಪಡುವ ರೈತರ ಆಚರಣೆಗಳು ಪ್ರಕೃತಿ ಯನ್ನು ಪ್ರೀತಿಸುವ ದ್ಯೋತಕವಾಗಿ ಕಾರಹುಣ್ಣಿಮೆ ಹಬ್ಬ ಆಚರಿಸಲಾಗುತ್ತದೆ. ಆಯಾಕಾಲದ ಸಂದರ್ಭ ಮತ್ತು ಪರಿಸರಕ್ಕೆ ಅನುಗುಣವಾಗಿ ವಿಭಿನ್ನ ನಂಬಿಕೆ, ಆಚರಣೆ, ಸಂಪ್ರದಾಯಗಳನ್ನು ಒಳಗೊಂಡು ವರ್ಷ ಪೂರ್ತಿ ರೈತರ ಏಳಿಗೆಗಾಗಿ ದುಡಿಯುವ ಎತ್ತು ಗಳು ರೈತನ ಎರಡು ಕಣ್ಣುಗಳು, ಅವುಗಳಿಗೆ ಮಹತ್ವಕೊಟ್ಟು ಜನಪದ‌ ಸಂಸ್ಕ್ರತಿಯ ಒಂದು ಅಂಗವಾಗಿ ನಡೆಯುವ ಅನ್ನದಾತರ ಸಡಗರದ ಹಬ್ಬವೇ ಕಾರಹುಣ್ಣಿಮೆ.

ಮುಂಗಾರು ಬಂತೆಂದರೆ ರೈತರಿಗೆ ಎಲ್ಲಿಲ್ಲದ ಹಿಗ್ಗು. ಬಟ್ಟಬಾನಲಿ ತೇಲುತಾ ನಲಿವ ಮುಗಿಲು ನೋಡಿ ರೈತರು ಪುಳಕಗೊಳ್ಳುವ‌ ಕಾಲ. ಇಳೆಗೆ ಜೀವ ತುಂಬಲು ಸುರಿವ ಮಳೆಯಂತು ರೈತನ ಪಾಲಿಗೆ ಅಮೃತ. ಬಿರುಬೇಸಿಗೆ ಮುಗಿದು ಇಳೆಗೆ ಮಳೆ ತರಲು ಮೋಡಗಳು ಆಗಸದಿ ನರ್ತಿಸುತ್ತಿರುವಾಗ ರೈತ ಹೊಲದಲ್ಲಿ ಬೀಜ ಬಿತ್ತಿ ಬೆಳೆ ತೆಗೆಯಲು ಅಣಿಯಾಗುವ ಸಮಯ .ಇದೆ ಜೂನ್ ತಿಂಗಳ 5ನೇ ತಾರೀಖಿನಂದು ಕಾರಹುಣ್ಣಿಮೆ. ಕಾರ್ ಎಂದರೆ ಮಳೆಗಾಲ. ಮಳೆ ಪ್ರಾರಂಭದ ಈ ಶುಭಾವಸರದ ಹೊತ್ತಿನಲ್ಲಿ ಎತ್ತುಗಳನ್ನು ಪೂಜಿಸಿ ‌ಸತ್ಕರಿಸಿ ಉಳಿಮೆಮಾಡಲು ಸಜ್ಜಾಗುವಂತೆ‌ ಪ್ರೇರೆಪಿಸುವ‌ಮಣ್ಣಿನ ಮಕ್ಕಳ ಸಡಗರದ‌ ಹಬ್ಬ ಕಾರ ಹುಣ್ಣಿಮೆ. ಮುಂಗಾರು ಶುರುವಾಗುತ್ತಿಂದಂತೆ ಕೃಷಿ ಚಟುವಟಿಕೆಗಳಿಗೆ ಸಜ್ಜಾಗುವ ರೈತರ ಹುಮ್ಮಸ್ಸು ತುಂಬಲೆಂದು ಕಾರ ಹುಣ್ಣಿಮೆ ಆಚರಿಸಿಕೊಂಡು ಬರಲಾಗುತ್ತಿದೆ. ಮುಂಗಾರು ಮಳೆಯ ವ್ಯೆಭವಕ್ಕೆ ಉತ್ತರ ಕರ್ನಾಟಕ ರೈತರು ಬೇಸಾಯ ಮಾಡಲು ಇಡುವ ಮೊದಲ ಹೆಜ್ಜೆಯೆ ಕಾರ ಹುಣ್ಣಿಮೆಯಂದು ನಂತರ ಕ್ರಷಿ ಚಟುವಟಿಕೆ ಗರಿಗೆದರಲಿದೆ.

ಕೊರೋನ ಮಹಾಮಾರಿ ಕರಿಛಾಯೆ ನಡುವೆಯೂ ರೈತರು ಮುಂಗಾರು ಪ್ರಾರಂಭದ ಹಬ್ಬವಾದ ಕಾರಹುಣ್ಣಿಮೆ ಆಚರಣೆಗಾಗಿ ರೈತರು ಬಲು ಉಲ್ಲಾಸದಿಂದ ಎತ್ತುಗಳನ್ನು ಸಿಂಗರಿಸಲು ಅಲಂಕಾರಿಕ ವಸ್ತುಗಳನ್ನು ಖರೀದಿಸಿ ಇದೆ ಶುಕ್ರವಾರ ಜೂನ್ 5 ರ ಕಾರಹುಣ್ಣಿಮೆ ಹಬ್ಬದ ನಿಮಿತ್ತ ಗ್ರಾಮೀಣ ಭಾಗದ ಜನರು ಹಗ್ಗ, ಬಾರುಕೋಲು, ಜತ್ತಿಗೆ,ಕೊಡಲಿ, ಕಡುಗೊಲು,ಎತ್ತು ಗಳಕೊಂಡೆ, ಕೊಂಬುಜೂಲು, ಬಣ್ಣ ಬಣ್ಣದ ರಿಬ್ಬನ್ ಮುಂತಾದ ಕೃಷಿ ಉಪಕರಣ ಹಾಗೂ ಅಲಂಕಾರ ವಸ್ತು ಗಳ ಮಾರಾಟ ಹಾಗೂ ಖರೀದಿಯಲ್ಲಿ ತೊಡಗಿದ್ದರು .ಆದರೆ ಕಳೆದ ವರ್ಷ ದಷ್ಟು ಉತ್ಸಾಹ ಈ ಸಲ ಕಂಡು ‌ಬರಲಿಲ್ಲ.ಕೊರೊನ ಸೊಂಕು ಅಲ್ಲಲ್ಲಿ ಪತ್ತೆ ಯಾಗಿರುವುದು ಗ್ರಾಮೀಣ ಭಾಗದ ಜನರಲ್ಲಿ ಆತಂಕದ ವಾತವರಣ ವಿದ್ದು ಮಹಾಮಾರಿ ಕೊರೊನ ರೈತರ ಹಬ್ಬದ ಉತ್ಸಾಹ ವನ್ನು ಕುಗ್ಗಿಸಿದೆ. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಜನದಟ್ಟಣೆಗೆ ನಿಷೇಧ ಹೇರಿದೆ. ಆದ್ದರಿಂದ ರೈತರು ಈ ಸಲದ ಕಾರಹುಣ್ಣಿಮೆ ಯನ್ನು ಸರಳವಾಗಿ ಮನೆಯಲ್ಲಿ ಆಚರಿಸುವುದು ಅನಿವಾರ್ಯ ವಾಗಿದೆ.

ಕೆಲಸವಿಲ್ಲದೆ ವಿಶ್ರಾಂತಿ ಪಡೆದ‌ ಎತ್ತುಗಳನ್ನು ಮುಂಗಾರು ಕ್ರಷಿ ಚಟುವಟಿಕೆಗೆ ಸಿದ್ಧಗೊಳಿಸುವ ಮುನ್ನವೇ ಆಗಮಿಸುವ ರೈತರ ಜೀವ ನಾಡಿಯ ಹಬ್ಬ ಕಾರಹುಣ್ಣಿಮೆ ಉತ್ತರ ಕರ್ನಾಟಕ ದಲ್ಲಿ ಎರಡು ದಿನಗಳ ಕಾಲ ನಡೆಯುವ ಹಬ್ಬ. ಮೊದಲ ದಿನ ಹೊನ್ನುಗ್ಗಿ ಅದರ ಮರುದಿನವೇ ಕಾರಹುಣ್ಣಿಮೆ. ಎತ್ತುಗಳು ರೈತನ ಬೆನ್ನೆಲುಬಾಗಿ ಡುಡಿಯುವುದರಿಂದ ಅವುಗಳನ್ನು ದೇವರೆಂದು ‌ಪೂಜಿಸುತ್ತಾರೆ. ಕ್ರಷಿ ಸಂಪ್ರದಾಯ ಮತ್ತು ಭವ್ಯಸಂಸ್ಕ್ರತಿ,ಪರಂಪರೆ ಈ ಹಬ್ಬದೊಂದಿಗೆ ಹೆಣೆದಿರುತ್ತದೆ. “ಕಾರ ಹುಣ್ಣಿಮೆ ಹಬ್ಬಗಳ ಕರಕೊಂಡು ಬಂತು‌ ಹೋಳಿ ಹುಣ್ಣಿಮೆ ಹೊಯ್ದುಕೊಂಡು ಹೊಯ್ತು” ಎಂಬ ಹಾಡು ಈ ಹಬ್ಬ ಹರಿದಿನಗಳಲ್ಲಿ ‌ಜನಪದರೂಪದಲ್ಲಿ ಕೇಳಿ ಬರುವ ಪ್ರಮುಖ ಹಾಡು. ಪಾರಂಪರಿಕ ಕ್ರಷಿಪದ್ದತಿ ನೈಸರ್ಗಿಕ ಅಂಶಗಳ ಬುನಾದಿಯ ಮೇಲೆ ರೂಪ ತಾಳಿ ಪರಿಸರ ,ಹವಾಮಾನ, ಜಲ ಇತ್ಯಾದಿ ಗಳು ಕ್ರಷಿ ಉತ್ಪಾದನಾ ಕೌಶಲ್ಯ ಮತ್ತು ತಂತ್ರಜ್ಞಾನ ವನ್ನು ರೂಪಿಸಿದೆಯಾದರು ಕ್ರಷಿಕರಿಗೆ ಇಂದಿಗೂ ಹಬ್ಬಗಳ ಹೊಸ್ತಿಲು ಕಾರಹುಣ್ಣಿಮೆ. ತಮ್ಮ ರಾಸುಗಳ ಸಂಭ್ರಮ ಮತ್ತು ಭೂಮಾತೆಯ ಬಗ್ಗೆ ಭಕ್ತಿ ಹಾಗೂ ಬರವಸೆ‌ ಉಳಿದಿದೆ.

ಬೇರೆ ಬೇರೆ ಕಡೆಗಳಲ್ಲಿ ಹಲವಾರು ರೀತಿಯಲ್ಲಿ ಕಾರಹುಣ್ಣಿಮೆ ಆಚರಣೆಯಲ್ಲಿ ಇದ್ದರೂ ಉತ್ತರ ಕರ್ನಾಟಕದಲ್ಲಿ ಪ್ರಮುಖವಾಗಿ ಆಚರಿಸಲಾಗುತ್ತದೆ. ಇಂದು ‌ಎಲ್ಲೆಡೆ ಪ್ರಾಣಿ-ಮಾನವ ಸಂಘರ್ಷ ನೋಡಲು, ಕೇಳಲು ಸಿಗುವ ಈ ಕಾಲದಲ್ಲಿ ಧಾರವಾಡ ಹನುಮನ ಕೊಪ್ಪಗ್ರಾಮದಲ್ಲಿ ಕಳೆದ ವರ್ಷ ನಾನು ಕಂಡ ಈ ವಿಶಿಷ್ಟ ಹಬ್ಬ ಪ್ರಾಣಿ ಹಾಗೂ ಮಾನವನ ನಡುವಿನ ಬಾಂಧವ್ಯ, ಪ್ರೀತಿ, ಸಾಮರಸ್ಯದ ಸಂಕೇತವಾಗಿ ಆಚರಿಸಲಾಗುವ ಕಾರಹುಣ್ಣಿಮೆ. ಅಂದು ಕಾರಹುಣ್ಣಿಮೆಯ ಮೊದಲ ದಿನ ಅಂದರೆ ಹೊನ್ನುಗಿಯ ದಿನ. ಮುಂಬಯಿಯಿಂದ ಧಾರವಾಡಕ್ಕೆ ಹೋದವಳಿಗೆ ಎಲ್ಲೆಲ್ಲೂ ಕಾಣ ಸಿಕ್ಕಿದ್ದು ಎತ್ತುಗಳನ್ನು ಶ್ರಂಗರಿಸಿಕೊಂಡು ಹೋಗುತ್ತಿದ್ದ ರೈತರು ಹಾಗೂ ಹೆಚ್ಚಿನೆಲ್ಲ ಅಂಗಡಿಗಳಲ್ಲಿ ಎತ್ತುಗಳ ಶೃಂಗಾರದ ಸಾಮಾನುಗಳೇ ಪ್ರಧಾನವಾಗಿರಿಸಿದ್ದರು. ಸ್ಥಳೀಯರಲ್ಲಿ ವಿಚಾರಿಸಿದಾಗ ತಿಳಿಯಿತು ಇಂದು ಹೊನ್ನುಗ್ಗಿ ನಾಳೆ ಕಾರಹುಣ್ಣಿಮೆ ಇಲ್ಲಿನ ರೈತರಿಗೆ ಸಂಭ್ರಮವೋ ಸಂಭ್ರಮ ಅಂತಾ. ಸರಿಅಂದುಕೊಂಡು ಆದಷ್ಟು ಮಾಹಿತಿ ಕಲೆಹಾಕಿಕೊಂಡೆ.

ಕರಿಹರಿಯುವ ಅಗಸಿಬಾಗಿಲಿಗೆ ಬಂದು ಕಾರಹುಣ್ಣಿಮೆಯ ವೈಭವ ನೋಡತೊಡಗಿದೆ. ಮಾನವ ಸಂಬಂಧಗಳು ಕ್ಷೀಣಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ತಮ್ಮ ಹೊಲದಲ್ಲಿ ದುಡಿದ ಎತ್ತುಗಳಿಗೆ ಧನ್ಯತಾಭಾವದೊಂದಿಗೆ ಭಕ್ತಿಯಿಂದ ಪೂಜಿಸುವ ಕಾರಹುಣ್ಣಿಮೆ ನೋಡಿ ಸಂತಸ ಪಟ್ಟೆ. ರೈತರ‌ ಬದುಕಿನಲ್ಲಿ ನೋವಿದೆ ನಲಿವಿದೆ. ತಂತ್ರಜ್ಞಾನ ಬದುಕನ್ನು ಬದಲಿಸಿದೆ ಆದರೂ ಇಂತಹ ಆಚರಣೆ ಇಂದಿಗೂ ಜೀವಂತವಾಗಿರುವುದಕ್ಕೆ ಹೆಮ್ಮೆ ಪಟ್ಟೆ. ಇಲ್ಲಿನ ರೈತರ ಹಾಗೂ ಎತ್ತುಗಳ ಭಾಂಧ್ಯವಕ್ಕೆ ಬೆರಗಾದೆ. ತಮ್ಮ ಎತ್ತುಗಳಿಗೆ ಯಾವ ತೊಂದರೆಯೂ ಬಾರದಿರಲೆಂದು ಭಕ್ತಿಯಿಂದ ‌ನಮಿಸುವರ ಕಂಡೆ. ಇದೆ ಕಾರಹುಣ್ಣಿಮೆಯ ಪ್ರತ್ಯೇಕ ವಾದ ವಿಶಿಷ್ಟತೆ. ರೈತರು ಕಾಯಕದ ಜೊತೆಗೆ ಪ್ರಾಣಿ ಗಳನ್ನು ಆರಾದಿಸುವ ಪೂಜೆಯೆ ಕಾರಹುಣ್ಣಿಮೆ ಇದರಲ್ಲಿ ಎತ್ತುಗಳಿಗೆ ಪ್ರಮುಖ ಸ್ಥಾನ. ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡಿ ಸಂಭ್ರಮಿಸಲಾಗುತ್ತದೆ. ಕೃಷಿಕರು ಬೇಸಾಯ ಪ್ರಾರಂಭಿಸುವಾಗ ಕೃಷಿಪರಿಕಗಳನ್ನು ಪೂಜಿಸಿಯೆ ಮೊದಲುಗೊಳ್ಳುತಾರೆ. ವರ್ಷ ವಿಡಿ ತಮ್ಮ ಜೊತೆಗೆ ದುಡಿದು ಎಲ್ಲರಿಗೂ ಅನ್ನ ನೀಡುವ ಬಸವಣ್ಣ ನನ್ನು ಗೌರವಿಸುವ ಸಲುವಾಗಿ ಕಾರಹುಣ್ಣಿಮೆಗೆ ಒಂದು ವಾರಮೊದಲೆ ಜಾನುವಾರುಗಳನ್ನು ಸಿಂಗರಿಸಲು ಬೇಕಾಗುವ ಸಾಮಗ್ರಿಗಳ ಖರೀದಿ ಭರ್ಜರಿಯಾಗಿ ನಡೆಯುತ್ತದೆ.

ಹೊನ್ನುಗ್ಗಿ = ಕಾರಹುಣ್ಣಿಮೆಯ ಹಿಂದಿನ ದಿನ ಹೊನ್ನುಗ್ಗಿಯ ಆಚರಣೆಯಲ್ಲಿ ಎತ್ತುಗಳ ಪೂಜೆ ಸೌಭಾಗ್ಯವೆಂಬ ಧಾರ್ಮಿಕ ನಂಬಿಕೆ ಇದೆ. ಎತ್ತು, ದನ,ಕರುಗಳನ್ನು ಊರಿನ ಕರೆ ಕೊತ್ತಲಿಗೆ ಒಯ್ದು ಮೈತೊಳೆದು ಬಗೆ ಬಗೆಯ ಹಣೆಪಟ್ಟಿ ಪದರಗಳಿಂದ ಅಲಂಕ್ರತವಾದ ಎತ್ತಿನ ಬೆನ್ನಿನ‌ ಮೇಲೆ ಬಣ್ಣ ಬಣ್ಣದ ಬಟ್ಟೆ ಹೊದಿಸಿ, ಕೊಡುಗಳಿಗೆ ಬಣ್ಣ ಸವರಿ ರಿಬ್ಬನ್ ಕಟ್ಟಿ ಕೊರಳಲ್ಲಿ ಗೆಜ್ಜೆಸರ, ಬಾಸಿಂಗ ಕಟ್ಟಿ ಶ್ರಂಗರಿಸಿ ಕಂಬಳಿ ಹಾಸಿ‌ಎತ್ತುಗಳನ್ನು ಮನೆಯೊಳಗಿನ ಪಡಸಾಲೆಯಲ್ಲಿ ನಿಲಿಸಿ ಪೂಜೆಸಿ, ಆರತಿ ಬೆಳಗಿ ಎತ್ತುಗಳ ಬಲಪಾದಗಳಿಗೆ ಮನೆಯ ಒಡತಿಯ ಬಂಗಾರ ಮುಟ್ಟಿಸಿ ತಿನ್ನಲು ಅಕ್ಕಿಯ ಹುಗ್ಗಿ‌ನೀಡುತ್ತಾರೆ.‌ಸಂಜೆ ಆಗುತ್ತಿದಂತೆ ಎತ್ತುಗಳನ್ನು ಗಾಡಿ(ಬಂಡಿ)ಗೆ ಕಟ್ಟಿ ಊರ ದೇವಾಲಯ ಅಥವಾ ಅಗಸಿಯಿಂದ ವಾದ್ಯ ಮೇಳದೊಂದಿಗೆ ಮೆರವಣಿಗೆ ಹೊರಡುತ್ತಾರೆ. ಇನ್ನೊಂದು ವಿಶೇಷ ವೆಂದರೆ ವಿವಿಧ ಖಾದ್ಯಗಳ ಸರ ಉದಾಹರಣೆಗೆ ಶೆಂಗಾಸರಾ,ಕೋಡುಬಳೆ,ಕರಚಿಕಾಯಿ ಸೇರಿದಂತೆ ವಿವಿಧ ಸಿಹಿ ತಿಂಡಿಗಳ ಸರಗಳನ್ನು ಮಾಡಿ ಎತ್ತುಗಳ ಕೊಡು ಮತ್ತು ಕೊರಳಿಗೆ ಕಟ್ಟಿ ಸಂಭ್ರಮಿಸುತ್ತಾರೆ. ಮನೆಯಲ್ಲಿ ಹೋಳಿಗೆ ಕಿಚಡಿ, ಅಂಬಲಿ, ಸಿಹಿ‌ಪದಾರ್ಥ ಮಾಡಿ ಕಿಚಡಿ ನೈವೇದ್ಯ ಎತ್ತುಗಳಿಗೆ‌ ನೀಡಿ ಮನೆಯವರೆಲ್ಲ ಸಹಭೊಜನ ಮಾಡುತ್ತಾರೆ. ಹೊನ್ನು-ಹುಗ್ಗಿ ಎಂಬುದು ಜನರ ಬಾಯಲ್ಲಿ ಹೊನ್ನುಗ್ಗಿ ಯಾಗಿ ಎತ್ತುಗಳ ಹಬ್ಬವೆನಿಸಿದೆ.

ಕಾರಹುಣ್ಣಿಮೆಯ ವೈಶಿಷ್ಟ್ಯತೆ = ಹೊನ್ನುಗ್ಗಿ ಯ ಮರುದಿನ ಎತ್ತು ಮತ್ತು ಜಾನುವಾರು ಗಳ ಮೈತೊಳೆದು ಶುಚಿಗೊಳಿಸಿ ಕೊಂಬು ಹಾಗೂ ಮೈಮೇಲೆ ನಾನಾ ಬಣ್ಣದ ಚಿತ್ತಾರಗಳನ್ನು ಬಿಡಿಸುತ್ತಾರೆ. ಹುಣ್ಣಿಮೆಯ ದಿನ ಗ್ರಾಮಸ್ಥರೆಲ್ಲ ಎತ್ತುಗಳನ್ನು ‌ಮೆರವಣಿಗೆ ಮೂಲಕ ಕರೆದೊಯ್ದು ಪೂಜಿಸಿ ಅವುಗಳಿಗೆ ಮುಂಗಾರು, ಹಿಂಗಾರು ಎಂದು ಹೆಸರಿಸಿ ಗುಲಾಲು ಹಚ್ಚಿ . ಬಾಸಿಂಗ ಹೂಹಾರ ಹಾಕಿ ಸಂಭ್ರಮಿಸುತ್ತಾರೆ. ಕೊಂಬುಗಳಿಗೆ ರಿಬ್ಬನ್, ಮತಾಟಿ,ಗೊಂಡೆ,ಮುಗಾಹಾ,ಕೊರಳಿಗೆ ಗೆಜ್ಜೆ ಪಟ್ಟಿ, ಮುಕ್ಕಡ,ಕಾಂಡ,ಹಣೆಪಟ್ಟಿ, ಹಣೆಹಗ್ಗ ಸೇರಿದಂತೆ ‌ಹಿತ್ತಾಳೆ,ಬೆಳ್ಳಿ,ತಾಮ್ರಗಳಿಂದ ತಯಾರಾದ. ಸೂರ್ಯ, ಚಂದ್ರ, ಶಿವನ. ತ್ರಿಶೂಲಗಳಿಂದ ಎತ್ತುಗಳ ಹಣೆಯನ್ನು ಮುಚ್ಚುವಂತೆ ಶಂಗ್ರರಿಸುತ್ತಾರೆ. ಮೂಗುದಾರ, ಬಾರುಕೋಲು,ಹಳದಿ,ಕೆಂಪು, ಹಸಿರು ಬಣ್ಣದ ವಾರ್ನಿಷ್, ಸರಜಂಗ ಗಂಟೆ ಸೇರಿದಂತೆ ವಿವಿಧ ರೀತಿಯ ಅಲಂಕಾರ ಸಾಮಾಗ್ರಿಗಳನ್ನು ರೈತರು ಖರೀದಿ ಮಾಡಿ ಕಾರಹುಣ್ಣಿಮೆಯ ಸಂಭ್ರಮದಲ್ಲಿ ಕ್ರಷಿಕರ ಒಡನಾಡಿ ಎತ್ತು ಗಳನ್ನು ಶ್ರಂಗರಿಸಿದ್ದನ್ನು ನೋಡುವುದೆ ಒಂದು ಸೊಗಸು. ಅನ್ನ‌ಕೊಡುವ ಎತ್ತುಗಳನ್ನು ನಂದಿರೂಪದಲ್ಲಿ ದೇವರೆಂದು ಪೂಜಿಸಲಾಗುತ್ತದೆ. ಈ ಹಬ್ಬದಂದು ದೇವರಿಗೆ ನೈವೇದ್ಯ ಸಲ್ಲಿಸಿದ‌ಬಳಿಕ ಸುಮಂಲೆಯರು ಎತ್ತು ಗಳಿಗೆ ಆರತಿ ಮಾಡಿ ಜೋಳದ ಕಿಚಡಿ ನೀಡಿ ಉತ್ತಮ ಮಳೆ ಮತ್ತು ಬೆಳೆ ಹಾಗೂ ಎತ್ತು ಗಳ ಆರೋಗ್ಯ ಕ್ಕಾಗಿ ದೇವರ ಲ್ಲಿ ಪ್ರಾರ್ಥಿಸಿ ಜೊತೆಯಲ್ಲಿ ಕ್ರಷಿಪರಿಕ ಗಳನ್ನು ಪೂಜಿಸುತ್ತಾರೆ.ಕಾರಹುಣ್ಣಿಮೆ ನಿಮಿತ್ತ ಪೂಜೆ ಸಲ್ಲಿಸುವ ಮಹಿಳೆಯರು ಅರಳಿ ಮರಕ್ಕೆ ಪೂಜೆ ಸಲ್ಲಿಸುವರು. ರೈತರ ಪಾಲಿಗೆ ಎತ್ತು ಬರೆ ಎತ್ತಲ್ಲ ಹತ್ತು ದಿಕ್ಕಿಗೂ ಸಲಹುವ ಬಸವಣ್ಣ ಎಂದು ಹಾಡಿ ಹೋಗಳುವರು. ಒಟ್ಟಿನಲ್ಲಿ ಕಳೆದ ವರ್ಷ ಧಾರವಾಡ ದಲ್ಲಿ ಕಾರಹುಣ್ಣಿಮೆ ನೋಡಲು ಸಿಕ್ಕಾಗ ಆದ ಆನಂದ ಅತೀವ.

ಮಳೆಗಾಲದಲ್ಲಿ ಬಿತ್ತನೆಗೆ ಗದ್ದೆಗಳನ್ನು ಸಜ್ಜುಗೊಳಿಸುವ ಎತ್ತು ಗಳಿಗೆ ಯಾವುದೇ ರೋಗ ಬರದಂತೆ ತಡೆಯುತ್ತದೆ ಎನ್ನುವ ರೈತರ ನಂಬಿಕೆ ಯೊಂದಿಗೆ ಎಳ್ಳೆಣ್ಣೆ, ಅರಶಿಣ, ಉಪ್ಪನ್ನು ಮಿಶ್ರಣ ಮಾಡಿ ಎತ್ತು ಗಳಿಗೆ ‌ಕುಡಿಸುತ್ತಾರೆ. ನಂತರ ಹಿಂಡಿ, ನುಚ್ಚು, ಹತ್ತಿಕಾಳುಗಳನ್ನು ಕಲಸಿ ಮನೆ ಮಕ್ಕಳಂತೆ ‌ಪ್ರೀತಿಯಿಂದ ತಿನ್ನಿಸಲಾಗುತದೆ.

ಕಾರಹುಣ್ಣಿಮೆಯ ದಿನ ಸಂಜೆಎತ್ತು ಗಳು ಕರಿಹರಿಯುವ ಸಂಪ್ರದಾಯ ರೋಮಾಂಚನ. ಊರ ಮುಂದಿನ ಅಗಸಿ ಬಾಗಿಲಲ್ಲಿ ರಸ್ತೆಗೆ ಅಡ್ಡಲಾಗಿ ದಪ್ಪ ನಾರಿನ ಹಗ್ಗ ಕ್ಕೆ ಬೇವಿನ ಸೊಪ್ಪು, ಕೊಬ್ಬರಿ ಬಟ್ಟಲು ಸರ ಮಾಡಿ ಎತ್ತು ಗಳಿಗೆ ಏಟುಕುವ ಹಾಗೆ ಕಟ್ಟುತ್ತಾರೆ. ಶ್ರಂಗಾರಗೊಂಡ ಕರಿ ಮತ್ತು ಬಿಳಿ ಬಣ್ಣದ ಎರಡು ಎತ್ತು ಗಳನ್ನು ಆಯ್ಕೆ ಮಾಡಿ ಊರ ತುಂಬಾ ಮೆರವಣಿಗೆ ಮಾಡಿ ಬಂದು ದೇವಾಲಯ ದ‌ ಮುಂದೆ ನಿಲ್ಲಿಸಿ ಎತ್ತುಗಳನ್ನು ಓಡಿಸಿಕೊಂಡು ಹೋಗಿ ಊರ ಹೊರಗಡೆ ಕಟ್ಟಿದ ಕೊಬ್ಬರಿ ಬಟ್ಟಲು ಹರಿದುಕೊಂಡು ಹೋಗುತ್ತವೆ. ಈ ಎತ್ತು ಗಳ ಓಟ ನೋಡುಗರಿಗೆ ಮೈನವಿರೇಳಿಸುತ್ತದೆ. ಯಾವ ಬಣ್ಣದ ಎತ್ತು ಮೊದಲು ಕರಿಹರಿಯುತ್ತದೊ ಅದರ ಆಧಾರದ ಮೇಲೆ ಮುಂದಿನ ವರ್ಷದ ಮಳೆ ಬೆಳೆ ನಿರ್ಧರಿಸುವ ವಾಡಿಕೆ. ಅಂದರೆ ಬಿಳಿ ಎತ್ತು ಮೊದಲು ಬಂದು ಕರಿಹರಿದರೆ ಆ ವರ್ಷ ಹಿಂಗಾರು‌ ಉತ್ತಮ. ಕರಿ ಎತ್ತು ಮುಂದೆ ಬಂದರೆ ಮುಂಗಾರು ಉತ್ತಮ ಎಂಬ‌ವಾಡಿಕೆ ಇದೆ.ಅದೆ ವರ್ಷ ಯಾರಮನೆಯಲ್ಲಿ ಮದುವೆ ಆಗಿದ್ದರೆ ಆ ಮನೆಯ‌ ಎತ್ತುಗಳು ಕರಿಹರಿಯುವುವಂತಿಲ್ಲ.ಕಾರಹುಣ್ಣಿಮೆಯ ದಿನ ದಿಂದ ದೀಪಾವಳಿ ಕಳೆದು ತುಳಸಿ ವಿವಾಹ ಬರುವತನಕ ವಿವಾಹ ಗಳು ‌ನಡೆಯವುದಿಲ್ಲ.

ಕಾರಹುಣ್ಣಿಮೆ ಯ ದಿನ ಎಲ್ಲಾ ‌ರೈತರ ಮನೆಯಲ್ಲಿ ಹಬ್ಬದಡುಗೆ . ಕೊಡುಬಳೆ,ಚಕ್ಕುಲಿ, ಅಕ್ಕಿ ಹುಗ್ಗಿ, ಕಡಬು ಹೋಳಿಗೆ ನೈವೇದ್ಯ ಸಿಹಿ ಊಟ. ಆದರೆ ಈ‌ ವರ್ಷ ಮಣ್ಣಿನ ಮಕ್ಕಳ ಕಾರಹುಣ್ಣಿಮೆಗೆ ತಗುಲಿದ ಕೊರೊನ ಕರಿ ನೆರಳು ಸರಿದು ರೈತರ ಬದುಕಲಿ ಹುಣ್ಣಿಮೆಯ ಹೊನಲು ಹರಿದು ಎಲ್ಲೆಡೆಯೂ ಸಂತಸ ಮೂಡಲಿ.

Leave a Reply

Your email address will not be published. Required fields are marked *