Literature (ಸಾಹಿತ್ಯ)

ಉಪ್ಪಿನ ಆಗರ ನಿಸರ್ಗದತ್ತ ಕೊಡುಗೆ :heggaddesamachar

Spread the love

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ 

ನೀರಿನಿಂದಲೇ ಜನನ ನೀರಿನಿಂದಲೇ ಮರಣ ಹೊಂದುವ ಉಪ್ಪು ನಮ್ಮ ದಿನ ನಿತ್ಯ ಜೀವನದಲ್ಲಿ ಹಲವಾರು ರೀತಿಯಲ್ಲಿ ಉಪಯೋಗಿಸುವ ಅವಶ್ಯಕ  ವಸ್ತು. ರುಚಿಯ ಇನ್ನೊಂದು ಅರ್ಥವೇ ಉಪ್ಪು. ಗ್ರಹ ಬಳಕೆ ಹಾಗೂ ಕೈಗಾರಿಕಾ ಬಳಕೆಗಾಗಿ ಉಪ್ಪು ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಆವಿಯಾಗುವ ಮೂಲಕ ‌ನೀರಿನಿಂದ ಬೇರ್ಪಡಿಸ ಲಾಗುವ ನೈಸರ್ಗಿಕ ಉಪ್ಪು ನಿಸರ್ಗದ ಅದ್ಬುತವೆಂದೇ ಹೇಳಬಹುದು. ಸಂಸ್ಕರಿಸಿದ ಉಪ್ಪಿಗೂ ನೈಸರ್ಗಿಕ ಉಪ್ಪಿಗೂ ತುಂಬಾ ವ್ಯತಾಸವಿದ್ದು ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ .ಉಪ್ಪಿನ ಋಣತೀರಿಸಲು ಸಾಧ್ಯವೇ ಎಂಬ ಭಾವನಾತ್ಮಕ ಬಂಧವೂ ಜನಪದಗಳು ಉಪ್ಪಿನ ಮಹತ್ವವನ್ನು ತಿಳಿಸುತ್ತದೆ.


    ಭಾಯಂದರನ  ಉಪ್ಪು ತಯಾರಿಕ ಪ್ರದೇಶಕ್ಕೆ ಬೇಟಿನೀಡಿದಾಗ ಬೃಹತ್ ಗಾತ್ರದ ಬಣವೆಗಳು ಗಮನ ಸೆಳೆದವು. ನಮ್ಮ ಊರಿನಲ್ಲಿ ಅಕ್ಕಿ ಭತ್ತದ ರಾಶಿಹಾಕಿದಂತೆ ಉಪ್ಪು ಸಂಗ್ರಹಿಸಿದ ಬಳಿಕ ಅದನ್ನು ಗುಪ್ಪೆ ಹಾಕಿ ಬಿಸಿಲು ಇಬ್ಬನಿ ಮತ್ತು ದೂಳಿನಿಂದ ರಕ್ಷಿಸಲು ಅದರ ಮೇಲೆ ಹುಲ್ಲು, ಪ್ಲಾಸ್ಟಿಕ್ ಪರದೆ ಹಾಸುತ್ತಾರೆ. ಎಕರೆಗಟ್ಟಲೇ ಭೂಮಿಯಲ್ಲಿ ಹಿಮದ ರಾಶಿಯಂತೆ ಅಲ್ಲಲ್ಲಿ ಚದುರಿದ ಪುಟ್ಟ ಪುಟ್ಟ ಗುಪ್ಪೆಗಳು ಹಾಗೂ ಭಾರಿಗಾತ್ರದ ಉಪ್ಪಿನ ಗೋಪುರಗಳನ್ನು ತಯಾರಿಕಾ ಕೇಂದ್ರದಲ್ಲಿ ‌ನೋಡಬಹುದು.ಭಾರತದಲ್ಲಿ ಅತ್ಯಂತ ಹೆಚ್ಚು ಉಪ್ಪು ಉತ್ಪಾದನಾ ರಾಜ್ಯವಾದ ಗುಜರಾತ್ ಹಾಗೂ ಸಣ್ಣ ಪುಟ್ಟ ಉಪ್ಪಿನ ಆಗರಗಳ ಉಪ್ಪಿನ ಸಂಗ್ರಹದ ಆದಾರದ ಮೇಲೆ ಸರಕಾರಿ ಅಧಿಕಾರಿಗಳು ನಡೆಸಿದ ಸಮೀಕ್ಷೆಯಲ್ಲಿ  ಕಳೆದೆರಡು ವರ್ಷಗಳಲ್ಲಿ ಅತಿಯಾಗಿ ಸುರಿದ ಮಳೆ ಮತ್ತು ಕೋವಿಡ್ ಲಾಕ್ ಡೌನ್ನಿಂದಾಗಿ ಉಪ್ಪಿನ ಉತ್ಪಾದನೆ ಕುಂಠಿತ ಗೊಂಡಿದ್ದು ಮುಂದಿನ ವರ್ಷ ಭಾರತೀಯ ಮಾರುಕಟ್ಟೆಗಳಲ್ಲಿ ಉಪ್ಪಿನ ಕೊರತೆಯುಂಟಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. 2019 ರಲ್ಲಿ ನವೆಂಬರ್ ವರೆಗೂ ಬಿಟ್ಟು ಬಿಟ್ಟು ಮಳೆ ಬರುತ್ತಿದ್ದು ನಂತರ ಉಪ್ಪು ಸಂಗ್ರಹವಾಗುತ್ತಿರುವ  ಸಮಯದಲ್ಲಿ ಕೋವಿಡ್ ಲಾಕ್ ಡೌನ್ ನಿಂದಾಗಿ ಉಪ್ಪಿನ  ಸಂಗ್ರಹದ ಕೆಲಸ ನಿಗದಿತ ಸಮಯಕ್ಕಿಂತ ಮೊದಲು ಸ್ಥಗಿತಗೊಂಡಿದೆ. ಲಾಕ್ ಡೌನ್ ಸಡಿಲಗೊಳ್ಳುವಾಗ ಪುನಃ ‌ಮಳೆಯ ತೊಂದರೆ ಆದ್ದರಿಂದ ಉಪ್ಪಿನ ಉತ್ಪಾದನೆ ಶೇಕಡಾ 35 ರಷ್ಟು ಕುಸಿದಿದೆ ಎನ್ನುತ್ತಾರೆ ಉಪ್ಪಿನ ಉತ್ಪಾದನಾ ಸಂಘ ಥಾಣೆ ಘಟಕದ ಅಧ್ಯಕ್ಷರು.ಮುಂದಿನ ವರ್ಷ ದೇಶದಲ್ಲಿ ಉಪ್ಪಿನ ಕೊರತೆ ಆಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.


   ಉಪ್ಪು ತಯಾರಾಗುವ ಪರಿ  =ನವೆಂಬರ್ ತಿಂಗಳ ಲ್ಲಿ ಉಪ್ಪು ತಯಾರಿಕೆಯ ವಿಸ್ತಾರವಾದ ಮಡಿಯಲ್ಲಿ ಕೆಸರು, ಕೊಳವೆಯನ್ನು ಸ್ವಚ್ಛಗೊಳಿಸಿ ಡಿಸೆಂಬರ್ ಮೊದಲ ವಾರದಲ್ಲಿ ಉಪ್ಪು ನೀರನ್ನು ಮಡಿಗಳಿಗೆ ಹಾಯಿಸಲಾಗುತ್ತದೆ. ಈ ನೀರು 30 ದಿನಗಳ ನಂತರ ಆವಿಯಾಗಿ   ಉಪ್ಪಿನ ಪದರ ಮೇಲ್ಗಡೆ ತರೆ ಬಂದ ಹಾಗೆ ಕಾಣಿಸಿಕೊಂಡು ಮಾರ್ಚ್ ನಿಂದ ಮೇ ತಿಂಗಳ ‌ವರೆಗೂ‌ ಅಂದರೆ ಮಳೆ ಬರುವ ತನಕ ಉಪ್ಪನ್ನು ಹಂತ ಹಂತವಾಗಿ ತೆಗೆಯಲಾಗುತ್ತದೆ.  ಇಂತಹ ಬಯಲು ಪ್ರದೇಶದಲ್ಲಿ ತಯಾರಿಸುವ  ಉಪ್ಪಿನ ಪ್ರಮಾಣ ಆಯಾ ವರ್ಷದ ಮಳೆ ಹಾಗೂ ಬಿಸಿಲಿನ ಮೇಲೆ ಅವಲಂಬನೆಯಾಗಿರು ರುತ್ತದೆ ನೀರಿನ ಉಬ್ಬರ ಇಳಿತ ದಡ ದಾಟಿ ಒಳಗೆ ನುಗ್ಗುವ ತೆರೆಗಳು ಉಪ್ಪಿನ ಶೇಖರಣೆಯ ಪದರವನ್ನು ತಗ್ಗು ಪ್ರದೇಶಗಳೆಡೆಗೆ ತಳ್ಳುವೂದು ಇದೆ. ಹೀಗೆ ತಯಾರಿಸಿದ ಉಪ್ಪನ್ನು ಶುದ್ಧೀಕರಿಸಿ ಪ್ಯಾಕಿಂಗ್ ಮಾಡಲಾಗುತ್ತದೆ. ಬೇಕಾದಷ್ಟು ಸಾಂದ್ರತೆ ಏರಿಕೆಯಾದ‌ ಮೇಲೆ‌ ಮರು ಸಂಸ್ಕರಿಸಲಾಗುತ್ತದೆ. ನೈಸರ್ಗಿಕವಾಗಿ ತಯಾರಾಗುವ ಉಪ್ಪು ಗುಣಮಟ್ಟದ ಸ್ವಾದ ಹೊಂದಿರುತ್ತದೆ ಎನ್ನುತ್ತಾರೆ ಭಾಯಂದರ್ ಉಪ್ಪಿನ ತಯಾರಿಕಾ ಆಗರದ‌  ಮೇನೆಜರ್.ಈ ಆಗರದಲ್ಲಿ ದೃಷ್ಟಿ ಹಾಯಿಸಿದಪ್ಟು ದೂರ ಉಪ್ಪಿನ ರಾಶಿ ಗೋಚರಿಸುತ್ತದೆ ಉಪ್ಪಿನ್ನು ಗೋದಾಮಿಗೆ ಸಾಗಿಸಿ ಸಂಸ್ಕರಿಸಿ ಪ್ಯಾಕಿಂಗ್ ಮಾಡಲಾಗುತ್ತದೆ. ಉಪ್ಪಿಗೆ ಶುಭ್ರಬಿಳಿ ಬಣ್ಣ ಬರಲು ಬ್ಲಿಚ್  ಮಾಡಲಾಗುತ್ತದೆ.


  ಪಕ್ಷಿನೋಟಕ್ಕೆ ಕೃಷಿ ಭೂಮಿಯಂತೆ ಕಾಣುವ ವಿಶಾಲ ಪ್ರದೇಶದಲ್ಲಿ ಉಪ್ಪು ತಯಾರಾಗುವ ರೀತಿ ನೋಡುವಾಗ ಈ ಪ್ರಕೃತಿಗೆ ಒಮ್ಮೆ ನಮಿಸಲೇ ಬೇಕೆನಿಸುತ್ತದೆ. ಉಪ್ಪಿನ ತಯಾರಿಕೆಯಲ್ಲಿ ಬಳಸುವುದು ಕೇವಲ ನೀರು ಸಂಪೂರ್ಣ ನೈಸರ್ಗಿಕ ಪದ್ಧತಿಯಲ್ಲಿ ಸೂರ್ಯನ ಶಾಖವನ್ನು ಬಳಸಿ ತಯಾರಿಸಲಾಗುವ ಈ ಉಪ್ಪನ ತಯಾರಿಕೆಗೆ ತಗಲುವ ಸಮಯ ಸರಾಸರಿ ಮೂರರಿಂದ ನಾಲ್ಕು ತಿಂಗಳು .ಹೆಚ್ಚು ಉಪ್ಪಿನಾಂಶವನ್ನು ಹೊಂದಿರುವ ಸಮುದ್ರ ನೀರನ್ನು ನೇರವಾಗಿ ಇಲ್ಲಿನ ಬಯಲು ಪ್ರದೇಶದಲ್ಲಿ ಕಟ್ಟೆಕಟ್ಟಿ ಸಂಗ್ರಹಿಸಿದ ನೀರಿನ ಮಟ್ಟ ಋತುವಿಗೆ ಅನುಗುಣವಾಗಿ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಬಂದರು ಆಗಾಗ ದ್ರಾವಣದ ವಾಹಕತೆಯ ನ್ನು ‌ಗಮನಿಸುತ್ತಾ ನೀರನ್ನು ಬೇಕಾದಷ್ಟು ಪ್ರಮಾಣದಲ್ಲಿ 15 ರಿಂದ 20 ದಿನಗಳಿಗೊಮ್ಮೆ ಅಲುಗಿಸ ಬೇಕಾಗುತ್ತದೆ. ಸೂರ್ಯನ ಕಿರಣ ಮತ್ತು ಉಪ್ಪು ನೀರಿನ ಹಾಯಿಸುವಿಕೆ ಮತ್ತು ಉಪ್ಪು ಸಂಗ್ರಹಣೆಗೆ ವಹಿಸುವ ಕಾಳಜಿ ಉಪ್ಪು ಉತ್ಪಾದನೆಗೆ ಬೇಕಾಗುವ ಮುಖ್ಯ ಕಾಯಕ.ಉಪ್ಪು ನೀರು ಬಿರುಬಿಸಿಲಿಗೆ ಒಣಗಿ ತಯಾರಾದ ಉಪ್ಪನ್ನು ಸಮಯಕ್ಕೆ ಸರಿಯಾಗಿ ಈ ಬಣವೆಗಳಿಂದ ಸಾಗಿಸಲೇ ಬೇಕು.ಎಲ್ಲಿಯಾದರೂ ಅಕಾಲಿಕ ಮಳೆ ಬಂದರಂತೂ ಕ್ಷಣಮಾತ್ರದಲ್ಲಿ ಅಳೆತ್ತರದ ಉಪ್ಪಿನ ರಾಶಿ ನೀರಾಗಿ ಹರಿದು ತನ್ನ ಮೊದಲ ಸ್ಥಾನಕ್ಕೆ ಅಂದರೆ ನೀರಿನಿಂದಲೇ ಜನನ ನೀರಿನಿಂದಲೇ ಮರಣ ಎನ್ನುವುದನ್ನು ಡೃಢಪಡಿಸುತ್ತದೆ.
 ಗುಜರಾತ್, ತಮಿಳು ನಾಡು, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಆಂದ್ರಪ್ರದೇಶದಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಉತ್ಪಾದಿಸಲಾಗುತ್ತದೆ. ಆದರೆ ಮುಂಬಯಿ ಮೂಲದ ಸಂಶೋಧಕರು‌ ನಡೆಸಿದ ಸಂಶೋಧನೆಯಲ್ಲಿ ದೇಶದಲ್ಲಿ ತಯಾರಿಸುತ್ತಿರುವ ಹೆಚ್ಚಿನ ಉಪ್ಪಿನಲ್ಲಿ ಪ್ಲಾಸ್ಟಿಕ್ ಅಂಶ ಸೇರಿ ಕೊಂಡಿರುವ ಸಂಗತಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್ ಅಂಶಗಳು ಉಪ್ಪಿನ ಕಣದಲ್ಲಿ ಸೇರಿದೆ. ಮುಂಬಯಿ ಐ.ಐ.ಟಿ ಪರಿಸರವಿಜ್ಞಾನ ಕೇಂದ್ರ ತಂಡದ ಅಧ್ಯಯನದಲ್ಲಿ ಉಪ್ಪಿನ ಮೈಕ್ರೊಪ್ಲಾಸ್ಟಿಕ್ ಅಂಶ ಪತ್ತೆಯಾಗಿದೆ. ಸಮುದ್ರದಲ್ಲಿ  ಲೆಕ್ಕಕ್ಕಿಂತ ಹೆಚ್ಚು ತಾಜ್ಯಗಳು ಸೇರುವುದರಿಂದ ‌ಮೈಕ್ರೊಪ್ಲಾಸ್ಟಿಕ್ ಉತ್ಪಾದನೆ ಆಗುತ್ತದೆ ಎನ್ನಲಾಗುತ್ತದೆ.


  ಉಪ್ಪಿಗೆ ಉಪ್ಪೆ ಸಾಟಿ= ಉಪ್ಪಿನ ಬದಲಿಗೆ ಬೇರೆನ್ನನ್ನು  ಉಪಯೋಗಿ ಸರಿದೂಗಿಸಲಾಸಾಧ್ಯವಾಗದೆ ಇರುವ ವಸ್ತು ಉಪ್ಪು. ಆಹಾರ ಪದಾರ್ಥ ಯಾವುದೇ ಇರಲಿ ಅದರಲ್ಲಿ ಉಪ್ಪು ಬೇಕೆ ಬೇಕು .ಸ್ವತಂತ್ರ ಪೂರ್ವ ದಲ್ಲಿ ಭಾರತದಲ್ಲಿ ಜನ ಸಾಮಾನ್ಯರು ಬಳಸುತ್ತಿದ್ದ ಉಪ್ಪಿನ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ನಂತರ ಮಹಾತ್ಮ ಗಾಂಧಿಯವರ ನಾಯಕತ್ವದಲ್ಲಿ ಚಳುವಳಿ ಉಪ್ಪಿನ ಸತ್ಯಾಗ್ರಹ ಯಾತ್ರೆ ನಂತರ ಉಪ್ಪಿನ ಮೇಲಿನ ತೆರಿಗೆ ವಿನಾಯಿತಿ ಮಾಡಲಾಯಿತು.


  ಉಪ್ಪು ವಸ್ತುಗಳನ್ನು ಕೆಡದಂತೆ ಸಂರಕ್ಷಿಸುವ ರಾಸಾಯನಿಕ ಉಪ್ಪಿನಲ್ಲಿ ಇದೆ. ಉಪ್ಪಿನಲ್ಲಿ ಹುದುಗಿಸಿ ಒಣಗಿಸಿದ ಮೀನು ಹಾಳಾಗದಂತೆ ಬಹುಕಾಲ ಉಪಯೋಗಿಸಲಾಗುತ್ತದೆ. ಹಲಸಿನ ಸೊಳೆ,ಮಾವಿನ ಕಾಯಿ, ಕಳಲೆ,ವಿವಿಧ ಬಗೆಯ ಹುಳಿಗಳು ಕೆಡದಂತೆ ಇಡಲು ಉಪ್ಪನ್ನು  ಬಳಸಲಾಗುತ್ತದೆ  ಉಪ್ಪಿನ ಕಾಯಿ ತಯಾರಿಕೆಯಲ್ಲಿ ಉಪ್ಪಿನ ಹಿರಿದಾದ ಪಾತ್ರವಿದೆ. ಕೆಲ ಆಯುರ್ವೇದ ಚಿಕಿತ್ಸೆಗಳಲ್ಲಿ ಉಪ್ಪಿನ ಬಳಕೆ ಇದೆ. ಚರ್ಮ, ಕೂದಲು, ಉಗುರುಗಳ ಸೌಂದರ್ಯ ‌ಹೆಚ್ಚಿಸಲು ಉಪ್ಪನ್ನು ಬಳಸಲಾಗುತ್ತದೆ. ಹಲ್ಲಿನ ಬಿಳುಪು ಹೆಚ್ಚಿಸಲು, ಫೆಶಿಯಲ್ ಗಳಲ್ಲೂ ಇದನ್ನು ಬಳಸಿ ಮುಖದ ರಂದ್ರ ಸ್ವಚ್ಛ ಗೊಳಿಸಲು ಬಳಸಲಾಗುತ್ತದೆ. ಹರಳು ಉಪ್ಪಿನಲ್ಲಿ ನೈಸರ್ಗಿಕ ಖನಿಜಜಾಂಶ ಹೆಚ್ಚಿದ್ದು ಚರ್ಮವನ್ನು ವೃದು ಗೊಳಿಸುತ್ತದೆ. ಹಾಗಾಗಿ ಹರುಳುಪ್ಪು ಸ್ಕ್ರಬಗಾಗಿ ಬಳಸಲಾಗುತ್ತದೆ.  ಹೊಸ ಹೊಸ ಆವಿಷ್ಕಾರಗಳು ಎಷ್ಟೇ ಬಂದರು ಸಂಪ್ರದಾಯಕವಾದ ನೈಸರ್ಗಿಕ ಸಂಪನ್ಮೂಲ ಉಪ್ಪು ತಯಾರಕ ವಿಧಾನ ಚಿರಸ್ಥಾಯಿ.

Leave a Reply

Your email address will not be published. Required fields are marked *