News (ಸುದ್ದಿ)

ಉಡುಪಿ ಜಿಲ್ಲೆಯಲ್ಲಿ ಇಂದು 15 ಕೊರೋನಾ ಪಾಸಿಟಿವ್ : heggaddesamachar

Spread the love

ಉಡುಪಿ ಜಿಲ್ಲೆಯಲ್ಲಿ ಮೇ.29 ಶುಕ್ರವಾರ ಬಿಡುಗಡೆಗೊಂಡ ಹೆಲ್ತ್ ಬುಲೆಟಿನ್‌ನಲ್ಲಿ ಜಿಲ್ಲೆಯಲ್ಲಿ ಮತ್ತೆ 15 ಕೋವಿಡ್ ಪ್ರಕರಣಗಳನ್ನು ದೃಢಪಡಿಸಲಾಗಿದೆ. ಎಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 164ಪ್ರಕರಣಗಳು ದಾಖಲಾದಂತಾಗಿದೆ.


15 ಪ್ರಕರಣಗಳಲ್ಲಿ 9 ಗಂಡು, 4 ಹೆಣ್ಣು, 2ಜನ ಮಕ್ಕಳಿಗೆ ಕೋವಿಡ್ ಪಾಸಿಟಿವ್ ಇರುವುದು ಕಂಡು ಬಂದಿದೆ. ಇವರೆಲ್ಲರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಎಲ್ಲಾ ಕೊರೋನಾ ಸೋಂಕು ಪೀಡಿತರು ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್‌ನಲ್ಲಿದ್ದವರಾಗಿದ್ದು ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ವಿಶೇಷವೆಂದರೆ ಉಡುಪಿ ಜಿಲ್ಲೆಯಲ್ಲಿ ಬೆರಳೆಣಿಕೆಯ ಪ್ರಕರಣಗಳನ್ನು ಹೊರತು ಪಡಿಸಿದರೆ ಇದುವರೆಗೆ ಪತ್ತೆಯಾಗಿರುವ ಹೆಚ್ಚಿನ ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರಲ್ಲೇ ಪತ್ತೆಯಾಗಿದೆ. ಬಹುತೇಕ ಮಹಾರಾಷ್ಟ್ರದಲ್ಲಿ ಸೋಕು ಸಾರ್ವಜನಿಕವಾಗಿ ಹರಡಿರುವ ಶಂಕೆ ಇದೀಗ ಹೆಚ್ಚಲಾರಂಭಿಸಿದೆ. ಇಂದು ರಾಯಚೂರು ಜಲ್ಲೆಯಲ್ಲಿ 62 ಪ್ರಕರಣಗಳು ಹಾಗೂ ಯಾದಗಿರಿಯಲ್ಲಿ 59 ಕಲಬುರ್ಗಿಯಲ್ಲಿ 15 ಪ್ರಕರಣಗಳು ಪತ್ತೆಯಾಗಿದ್ದು ಇವೆಲ್ಲವೂ ಮಹಾರಾಷ್ಟ್ರದಿಂದ ಬಂದವರಲ್ಲೇ ಪತ್ತೆಯಾಗಿದೆ!!
ಎಲ್ಲರಿಗೂ ಅಪಾಯ ಕಾದಿದೆ !!


ಮೇ28ರಿಂದ ಸರಕಾರ ಕೋವಿಡ್ ಲಕ್ಷಣ ಇಲ್ಲದೇ ಇರುವವರನ್ನು 7 ದಿನಗಳ ಕ್ವಾರಂಟೈನ್ ಮುಗಿಸಿ ಮತ್ತೆ 7ದಿನಗಳ ಹೋಂ ಕ್ವಾರಂಟೈನ್‌ಗೆ ಎಲ್ಲರನ್ನು ಮನೆಗೆ ಕಳುಹಿಸಿದೆ. ಹೀಗೆ ಕಳುಹಿಸಿದ ಯಾರಿಗೂ ಗಂಟಲು ದ್ರವ ಪರೀಕ್ಷೆ (ಕೋವಿಡ್ ಟೆಸ್ಟ್) ಆಗಿಲ್ಲ ಎಂಬುದನ್ನು ಸಾರ್ವಜನಿಕರು ಗಮನದಲ್ಲಿಟ್ಟುಕೊಳ್ಳಬೇಕು. 14 ದಿನಗಳ ಕ್ವಾರಂಟೈನ್‌ನಲ್ಲಿದ್ದವರಿಗೆ ಹೆಚ್ಚಾಗಿ 12ನೇ ದಿನಕ್ಕೆ ಗಂಟಲು ದ್ರವ ತೆಗೆದು ಕೋವಿಡ್ ಪರೀಕ್ಷೆಗೆ ಕಳುಹಿಸುತ್ತಿದ್ದರು. ಕೊರೋನಾ ಕೆಲವರಲ್ಲಿ 12 ದಿನಗಳ ನಂತರವೂ ಪತ್ತೆಯಾದ ಸಾಕಷ್ಟು ಉದಾಹರಣೆಗಳಿವೆ. ಇದನ್ನು ಗಮನಿಸುವಾಗ ನಮಗೆ ನಿಜಕ್ಕೂ ಅಪಾಯ ಕಾದಿದೆ ಎಂದು ಹೇಳಬಹುದಾಗಿದೆ.


ಎಲ್ಲರೂ ಎಚ್ಚರ ವಹಿಸಬೇಕು : 7 ದಿನಗಳ ಕ್ವಾರಂಟೈನ್ ಮುಗಿಸಿ ಹೋಂ ಕ್ವಾರಂಟೈನ್‌ಗೆ ಬಂದ ನಿಮ್ಮ ಆಸುಪಾಸಿನ ಮನೆಯಲ್ಲಿರುವ ವ್ಯಕ್ತಿಗಳ ಮೇಲೆ ನೀವೇ ಕಣ್ಣಿಡಬೇಕಾಗಿದೆ. ಕ್ವಾರಂಟೈನ್‌ನಲ್ಲಿರುವವರು ಮನೆಯಿಂದ ಸಾರ್ವಜನಿಕವಾಗಿ ಹೊರಬಂದಲ್ಲಿ ತಕ್ಷಣ ಕಂದಾಯ ಅಧಿಕಾರಿಗಳಿಗೆ, ಆರೋಗ್ಯ ಇಲಾಖಾಧಿಕಾರಿಗಳಿಗೆ ಅಥವಾ ಪೊಲೀಸರಿಗೆ ದೂರು ಕೊಡಬೇಕು. ಹೋಂ ಕ್ವಾರಂಟೈನ್‌ಗೆ ಬಂದಿರುವವರ ಮೇಲೆ ಯಾರೂ ನಂಬಿಕೆ ಇಡಬೇಡಿ. ಅವರು ಸುಳ್ಳು ಹೇಳಿ ಬೀದಿ ಸುತ್ತುವ ಸಾಧ್ಯತೆ ಇದೆ. ಆತ ಒಳ್ಳೆಯವನೇ ಇರಲಿ. ಶ್ರೀಮಂತನಿರಲಿ, ಗಣ್ಯ ವ್ಯಕ್ತಿ ಇರಲಿ, ರಾಜಕೀಯವಾಗಿ ಪ್ರಭಾವಶಾಲಿ ವ್ಯಕ್ತಿಯೇ ಆಗಿರಲಿ. ಈ ಕೊರೋನಾಕ್ಕೆ ಒಳ್ಳೆಯ ವ್ಯಕ್ತಿ, ಶ್ರೀಮಂತ, ಹಣವಂತ ಎಲ್ಲರೂ ಒಂದೇ. ನೆನಪಿಡಿ.. ವೈದ್ಯರೊಬ್ಬರ ಪ್ರಕಾರ 7 ದಿನಗಳ ಸರಕಾರಿ ಕ್ವಾರಂಟೈನ್ ಮುಗಿಸಿ ಹೋಂ ಕ್ವಾರಂಟೈನ್‌ಗೆ ಬಿಟ್ಟು ಕಳುಹಿಸಿದ್ದರಿಂದ ಕೊರೋನಾ ಸಾರ್ವಜನಿಕವಾಗಿ ಹರಡುವ ಸಾದ್ಯತೆ ಹೆಚ್ಚಿದೆ.

ಇಂತಹ ಸಂದರ್ಭ ನಾವೆಲ್ಲರೂ ಎಚ್ಚರ ವಹಿಸಬೇಕಾಗಿದೆ. ಪ್ರತಿಯೊಬ್ಬರು ಹೋಂ ಕ್ವಾರಂಟೈನ್‌ಲ್ಲಿರುವವರ ಮೇಲೆ ಕಣ್ಣಿಡಬೇಕು. ಹೊರ ಬಂದರೆ ಅವನ ಮೇಲೆ ನಿರ್ಧಾಕ್ಷಿಣ್ಯವಾಗಿ ಕೇಸು ದಾಖಲಿಸಬೇಕು. ಇಲ್ಲಾಂದ್ರೆ ಕೊರೋನಾ ಸಾರ್ವಜನಿಕವಾಗಿ ಹರಡಿ ಆಸ್ಪತ್ರೆಗಳಲ್ಲಿ ಬೆಡ್‌ಗಳು ಖಾಲಿ ಇಲ್ಲದೆ, ಪರೀಕ್ಷೆಗೆ ವೈದ್ಯರು ಸಿಗದೆ ಕೊನೆಯಲ್ಲಿ ಪಡಬಾರದ ಯಾತನೆ ಅನುಭವಿಸಬೇಕಾದೀತು. ಪ್ರತಿಯೊಬ್ಬರ ಮನೆಯಲ್ಲೂ ಚಿಕ್ಕ ಚಿಕ್ಕ ಮಕ್ಕಳು, ವಯೋ ವೃದ್ಧರು, ಅನಾರೋಗ್ಯಕ್ಕೆ ತುತ್ತಾದವರು ಇರುತ್ತಾರೆ. ಕ್ವಾರಂಟೈನ್‌ನಲ್ಲಿರುವವರು ಕೂಡ ನಮ್ಮಿಂದ ಯಾರಿಗೂ ತೊಂದರೆಯಾಗದಿರಲಿ ಎಂದು ನಿರ್ಧಾರ ತಳೆದು ಕಡ್ಡಾಯವಾಗಿ ಮನೆಯಲ್ಲೇ ಇರಬೇಕು. ನೆನಪಿಡಿ… ಇಷ್ಟು ದಿನಗಳಿಗಿಂತ ನಮ್ಮ ಮುಂದಿನ ದಿನಗಳೇ ನಮಗೆ ಸವಾಲಿನ ದಿನಗಳು ಎಂಬುದನ್ನು ಮರೆಯಬೇಡಿ. ಉಡುಪಿ ಜಿಲ್ಲೆಯಲ್ಲಿ ಈಗಾಗಲೆ 164 ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಹೊರ ರಾಜ್ಯಗಳಿಂದ ಬಂದವರು. ಹೊರರಾಜ್ಯಗಳಿಂದ ಬಂದವರಿಗೆ, ಅದರಲ್ಲೂ ಮಹರಾಷ್ಟ್ರದಿಂದ ಬಂದವರಲ್ಲಿ ಹೆಚ್ಚು ಕೊರೋನ ಪಾಸಿಟಿವ್ ಕಂಡು ಬಂದಿದೆ.

Leave a Reply

Your email address will not be published. Required fields are marked *