ಅವನು, ಅವಳು ಮತ್ತು ಪುಟ್ಟ ಸೆಲ್ಫಿಷ್ ನೆಸ್ !! : heggaddesamachar

ಅಂಕಣ ಬರಹ:: ಸಂದೀಪ್ ಶೆಟ್ಟಿ ಹೆಗ್ಗದ್ದೆ
ಅವಳನ್ನು ಇಷ್ಟ ಪಡೋಕೆ ಶುರು ಮಾಡಿದಾಗಿನಿಂದ ಅವನು ಸ್ವಾರ್ಥಿಯಾಗತೊಡಗಿದ್ದ. ಎಲ್ಲಿಯವರೆಗೆಂದರೆ ಅವನ ಒಳ ಮನಸ್ಸಿನ ಬೇಗುದಿಗೆ ಏನೆಲ್ಲಾ ಕಲ್ಪನೆ ಬರುತ್ತದೋ ಅಲ್ಲಿಯವರೆಗೆ ಬಾಣಲೆಗೆ ಬಿದ್ದ ಹಸಿ ಜೀವದ ಮೀನಿನಂತೆ ಬೆಂದು, ಹೊರಳಿ, ಒದ್ದಾಡಿ ವಿನಾಕಾರಣ ವಿನಾಯತಿಯೇ ಕೊಡದಂತೆ ಪರಿತಪಿಸತೊಡಗಿದ್ದ…
ಆ ಕಡೆ ಅವಳದೋ ಅದೇ ಪಾಡು.! ಸೇಮ್ ಟು ಸೇಮ್… ಒಮ್ಮೆ ಇವನಂತೆ ಅವಳು, ಮತ್ತೊಮ್ಮೆ ಹಿಡಿತವಿಲ್ಲದಂತೆ ತನ್ಮೆಲೆ ತನಗೆ ಅನುಮಾನ ಬರುವಂತೆ ಅವಳು. ವಿಶ್ಲೇಷಣೆ ಸಾಯಲಿ, ವಿನಾಕಾರಣ ವಿಲ ವಿಲ ಹೊರಳಾಟ, ಇಬ್ಬರಲ್ಲೂ ಅದೇ ಗಡ ಗಡ, ಅದೇ ಮುಸಿಸು, ಅದೇ ಒದ್ದಾಟ..!
ಇಷ್ಟೆಲ್ಲಕ್ಕೂ ಕಾರಣ ಪ್ರೀತಿ..! ಒಳ ಮನಸಿನ ಹಸಿ ಸ್ವಾರ್ಥ!!
ಅದೆಲ್ಲಿ ಇಟ್ಟೆ ದೇವ್ರೆ ಪ್ರೇಮಾನಾ!? ಅದ್ಯಾಕೆ ಪ್ರೀತಿಲಿ ಸೃಷ್ಟಿ ಮಾಡಿದೆ ಈ ಅನುಮಾನ!!.
ಇಬ್ಬರಿಗೂ ದೂರಾಗೋಕೆ ಇಷ್ಟವಿಲ್ಲ. ಹಾಗಂತ ಹತ್ತಿರವಿದ್ದಾಗ ಅರೆ ಘಳಿಗೆ ಮುದ್ದಿಸಿ, ಮುದ್ದಾಗಿದ್ದರೂ, ಮತ್ತರೆಕ್ಷಣದಲ್ಲೇ ಅದೇನೋ ಪೊಸಿಸಿವ್ ನೆಸ್…
ಸುತ್ತೋದು, ಹರಟೋದು, ಕಾಮಿಸೋದು, ಪ್ರೇಮಿಸೋದು ಏನೇ ಇದ್ದರೂ ನನ್ನ ಜೊತೆಯೇ ಇರಬೇಕು ಎನ್ನುವ ಅವನ ಹಠಕ್ಕೂ, ಮಾತಾಡೋದು, ಮುದ್ದಾಡೋದು, ನೋಡೋದು, ಹೊಗಳೋದು, ಕಾಯೋದು, ಸಾಂಗತ್ಯ ಬೀರೋದು, ಚುಂಬಿಸೋದು, ಕೊಡಿಸೋದು ಇಂತೆಲ್ಲವೂ ನನ್ನ ಸಂಗಡವೇ ಇರಬೇಕು ಎನ್ನುವ ಅವಳ ಹಠಕ್ಕೂ, ಇಬ್ಬರದೂ ಒಂದೇ ವ್ಯಕ್ತಿತ್ವದ ಸಾಮಿಪ್ಯ ಎನಿಸಿದರೂ, ಬದುಕಿನ ರೂಪು ರೇಷೆಗೆ ಅದು ಟ್ಯಾಲಿಯಾಗೋದೇ ಇಲ್ಲ ಬಿಡಿ.
ಏನ್ಭೇಕು ನಮಗೆ!?, ನಾವ್ಯಾಕೆ ಹೀಗೆ!?, ಎನ್ನುವ ಮನಸಿನ ಪ್ರಶ್ನೆ ಬಳಿಯಲ್ಲೇ ತೇಲಿದರೂ, ಆ ಗೊಡವೆಗೆ ತಮ್ಮನ್ನ ದೂಡಿಕೊಳ್ಳದ ಯುವ ಪ್ರೇಮಿಗಳು ತಾವೇ ಏನೋ ತೋಚಿದಂತೆ ಹಠ ಸಾಧನೆಗೆ ಬೀಳುತ್ತಿದ್ದಾರೆ. ತನ್ಮಯತೆಯಲ್ಲಿ ಕುಳಿತು ಯೋಚಿಸಿ ಚೆನ್ನಾಗಿ ಬಾಳುವ ಯೋಚನೆ ಬಿಟ್ಟು, ನಿದ್ದೆಗೆಟ್ಟು ಬದುಕಲು ಏನೇನು ಬೇಕೋ ಎಲ್ಲವನ್ನೂ ಮಾಡುತ್ತಿರುತ್ತಾರೆ. ಕ್ಷಮೆಗೆ ಪ್ರಾಶಸ್ತ್ಯವೇ ನೀಡದೆ ಕ್ಷಮಿಸುವ ಗುಣವನ್ನೂ ಗೌಣವಾಗಿಸಿಕೊಂಡಿರುತ್ತಾರೆ.
ಪ್ರಾರಂಭದಲ್ಲಿ ಚಿನ್ನ, ರನ್ನ ಎಲ್ಲವೂ ಅಮೃತದಂತಿದ್ದರೂ, ದಿನಗಳು ಉರುಳ್ತಾ, ಉರುಳ್ತಾ ಬೇರೇನೋ ಹಬೆಯಾಡುತ್ತಾ!, ಇರಿಟೇಷನ್ ಎನ್ನುವ ನೆಲೆಗೆ ಎರಡೂ ಹೃದಯದ ಮನಸುಗಳು ಇಳಿಯುತ್ತಿರೋದು ಇಂದಿನ ದಿನಮಾನಸದ ಅಪ್ಡೇಟ್ ಶಾಪವೇ ಆಗಿದೆ.
ಪ್ರೇಮಿಸೋರೆಲ್ಲ ಅಪ್ಪಟ ಪ್ರೇಮಿಯಂತಲೇ ಹೇಳೋಕೆ ಸಾಧ್ಯವಿಲ್ಲ. ಪ್ರೇಮದಲ್ಲಿ ಕಾಮವೂ ಹೊಕ್ಕಿರುವ ಸಾಧ್ಯತೆ ಹೆಚ್ವಿರುತ್ತದೆ. ಕಾಮಕ್ಕೆ ಪ್ರೇಮವನ್ನ ಇನ್ನಷ್ಟು ಗಟ್ಟಿ ಮಾಡುವ ತಾಕತ್ತೂ ಕೂಡ ಇರುತ್ತದೆ. ಹಾಗಂತ ಕಾಮವೇ ಅತಿಯಾದರೆ, ಪ್ರೇಮಕ್ಕೆ ಬೆಲೆ, ಪ್ರೀತಿಸುವ ನೆಲೆ ಬೇರೆಯ ಮಾರ್ಗವನ್ನೇ ಹಿಡಿಯಬಹುದು!.
ಇತ್ತೀಚೆಗಂತು, ಸೋಷಿಯಲ್ ಮಿಡಿಯಾ ಟ್ರೆಂಡ್ ಗನುಸಾರ ಪ್ರೀತಿಸುವ ವ್ಯಾಮೋಹ ಟೀನೇಜರ್ಸ್ ಗಳಲ್ಲಿ ಜಾಸ್ತಿಯಾಗಿದೆ. ಹಿಂದಿನ ಓಲೆಗಳ, ಪ್ರೇಮ ಪತ್ರಗಳ ಪುರಾಣ ಇಲ್ಲದಾಗಿದೆ. ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಿನೇ ಲವ್ ಆಗುವ ಕಾಲಕ್ಕೆ ನಮ್ಮ ಕಾಲ್ನಡಿಗೆ ಸಾಗಿದೆ. ಸ್ಕ್ರೀನ್ ಮೇಲೆ ಎಂಥಾ ಚಂದದ ಲವರ್ ಇವರು ಅಂದುಕೊಂಡಿದ್ದಕ್ಕೂ, ತೆರೆ ಹಿಂದೆ ಆ ಜೋಡಿಗಳು ಅನುಭವಿಸುತ್ತಿರುವ ನೋವಿಗೂ ಬೆಲೆಯೇ ಇಲ್ಲದಾಗಿದೆ. ಮನುಷ್ಯನ ಸಂಪರ್ಕ ಹೆಚ್ವಿದಂತೆ, ಸೆಲ್ಪಿಶ್ ನೆಸ್ ಕೂಡ ಜಾಸ್ತಿಯಾಯ್ತೇನೋ ಅಂತ ನನಗನಿಸುತ್ತದೆ.
ಇದ್ದರೆ ಒಂದು, ಇಲ್ಲದಿರೆ ಇನ್ನೊಂದಕ್ಕೆ ಹುಡುಕುವ ಫಾಸ್ಟ್ ಯುಗದಲ್ಲಿ ನಾವು ಸಾಗುತ್ತಿರುವ ರೀತಿಯೇ ಮಾರಕ. ಅವನಿಗಾಗಿ ಅವಳು ಎನ್ನುವ ತತ್ವಾದರ್ಶ ಈಗೀಗ ಕಾಣುವುದೇ ವಿರಳ ಎನ್ನಬಹುದು. ಹಾಗೂ ಅಪ್ಪಟ ಪ್ರೀತಿಲಿ ಎರಡು ಹೃದಯಗಳು ನಲಿಯುತ್ತಿದ್ದರೂ, ಜೊತೆಯಾಗಿ ಬಾಳೋಕೆ ಅವರನ್ನ ಬಿಡುವ ಹೃದಯ ವೈಶಾಲ್ಯ ಇರುವವರೂ ಕೂಡ ಕಡಿಮೆಯೇ ಎನ್ನಬಹುದು.
ಒಂದಿನದ ಪ್ರೀತಿ ಕಾಮಕ್ಕೆ ಶರಣಾದರೆ, ಬಾಳೋಣ, ಮುಂದೆ ಹಾಗಿರೋಣ-ಹೀಗೆ ಬದುಕೋಣ ಎನ್ನುವ ಪ್ರೀತಿಗಳೆಲ್ಲ ಲಿವಿಂಗ್ ರಿಲೇಷನ್ ಶಿಪ್ ಗೆ ಚಾಚಿಕೊಂಡಿದೆ. ಯಾರಲ್ಲಿಯೂ ಈಗಿಂದಲೇ ಹೊಸ ಬದುಕನ್ನ ಶುರುಮಾಡೋಣ ಎನ್ನುವ ಇರಾದೆಯೇ ಇಲ್ಲದಾಗಿದೆ. ಒಂದುಕಡೆ ಹೆದರಿ ಪ್ರೀತಿಸುವ ಜೀವಗಳು, ಇನ್ನೊಂದು ಕಡೆ ಪ್ರೀತಿಸಿ ಸೆಲ್ಪಿಷ್ ನೆಸ್ ಎನ್ನುವ ರಾಕ್ಷಸಿ ಪ್ರವೃತ್ತಿಯ ಮನಸಿಗೆ ಹೆದರುವ ಜೋಡಿಗಳು!.. ತಮ್ಮ ಹರೆಯದ ಬದುಕಿನ ಸವಿಯನ್ನೇ ಕಳೆದುಕೊಳ್ಳುತ್ತಿವೆ. ಹೀಗೆ ಏನೇ ಹೇಳಿದರೂ ಸರಿ ಹೊಂದದ ಅವನು ಮತ್ತು ಅವಳ ಬದುಕಿಗೆ ಏನೆನ್ನಬೇಕೋ ತಿಳಿಯೆ…